ಸಂಪೂರ್ಣ ತಲೆಕೆಳಗಾದ ಲೆಕ್ಕಾಚಾರ: ದಳಪತಿಗಳಿಗೆ ಭರ್ಜರಿ ಶಾಕ್ ಕೊಟ್ಟ ಪರಿಷತ್ ಚುನಾವಣೆ ಫಲಿತಾಂಶ
ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಕೇವಲ 14 ಮತಗಳನ್ನು ಪಡೆದು ಭಾರಿ ಮುಖಭಂಗ ಅನುಭವಿಸಿದ್ದು, ಸ್ವಪಕ್ಷದ ಶಾಸಕರ ಕ್ರಾಸ್ ವೋಟಿಂಗ್ ಹಾಗೂ ಕೊನೆಯ ಕ್ಷಣದ ಬಿಜೆಪಿಯ ನಡೆ ದಳಪತಿಗಳ ಲೆಕ್ಕಾಚಾರವನ್ನು ಸಂಪೂರ್ಣ ಉಲ್ಟಾ ಮಾಡಿದೆ. ಒಂದರಿಂದ ಎರಡು ಅಡ್ಡ ಮತದಾನ ಆಗಬಹುದೆಂಬ ನಿರೀಕ್ಷೆಯಲ್ಲಿದ್ದ ದಳಪತಿಗಳಿಗೆ ಫಲಿತಾಂಶ ಭರ್ಜರಿ ಶಾಕ್ ಕೊಟ್ಟಿದೆ.

ಬೆಂಗಳೂರು, ಜೂನ್ 18: ಅಖಾಡಕ್ಕೆ ಇಳಿಸಿದ್ದ ತನ್ನ ಏಕೈಕ ಅಭ್ಯರ್ಥಿಯನ್ನು ಶತಾಯ ಗತಾಯ ಗೆಲ್ಲಿಸಿಕೊಳ್ಳುವ ಪ್ರಯತ್ನದ ಹೊರತಾಗಿಯೂ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪರಾಭವಗೊಂಡಿದೆ. ಜಾತ್ಯಾತೀತ ಜನತಾದಳ ಪಕ್ಷದಿಂದ ಸ್ಪರ್ಧಿಸಿದ್ದ ಗೋವಿಂದರಾಜು ಅವರಿಗೆ ಕೇವಲ 14 ಮತಗಳು ಬಿದ್ದಿದ್ದು, ಫಲಿತಾಂಶ ದಳಪತಿಗಳಿಗೆ ಬಿಗ್ ಶಾಕ್ ಕೊಟ್ಟಿದೆ. ಜೆಡಿಎಸ್ನ ಹದಿನೆಂಟು ಮತಗಳು ಗೋವಿಂದರಾಜುಗೆ ಬರುವ ನಿರೀಕ್ಷೆಯಲ್ಲಿ ಜೆಡಿಎಸ್ ನಾಯಕರಿದ್ದರು. ಹೀಗಿದ್ದರೂ ಒಂದರಿಂದ ಎರಡು ಅಡ್ಡ ಮತದಾನ ಆಗುವ ಶಂಕೆ ಹಿನ್ನೆಲೆ ಆ ಬಗ್ಗೆಯೂ ಲೆಕ್ಕಾಚಾರವನ್ನು ನಾಯಕರು ಹಾಕಿಕೊಂಡಿದ್ದರು. ಆದರೀಗ ನಿರೀಕ್ಷೆಗೂ ಮೀರಿ ಕ್ರಾಸ್ ವೋಟಿಂಗ್ ನಡೆದಿರೋದು ಪಕ್ಷದಲ್ಲಿಯೇ ಚರ್ಚೆ ಹುಟ್ಟುಹಾಕಿದೆ.
ಪರಿಣಾಮ ಬೀರಿದ ಬಿಜೆಪಿ ನಡೆ
62 ಶಾಸಕರ ಬಲ ಹೊಂದಿರುವ ಬಿಜೆಪಿಯಿಂದ ಕಣದಲ್ಲಿರುವ 2 ಅಭ್ಯರ್ಥಿಗಳಿಗೆ ತಲಾ 28ರಂತೆ 56 ಮತಗಳು ಅಗತ್ಯವಿತ್ತು. ಹೀಗಾಗಿ ಹೆಚ್ಚುವರಿಯಾಗಿ ಉಳಿಯಲಿರುವ 6 ಮತಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿತ್ತು. ತಮ್ಮ 18 ಮತಗಳು, ಬಿಜೆಪಿಯ 6 ಹೆಚ್ಚುವರಿ ಮತ, ಜನಾರ್ದನ ರೆಡ್ಡಿ, ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲ ಸೇರಿ 26ರ ಗಡಿ ತಲುಪಬಹುದೆಂಬ ಲೆಕ್ಕಾಚಾರವನ್ನು ದಳಪತಿಗಳು ಹಾಕಿಕೊಂಡಿದ್ದರು. ಆದರೆ ಸ್ವಪಕ್ಷೀಯರ ಅಡ್ಡಮತದಾನದ ಜೊತೆ ತನ್ನ ಒಂದೊಂದು ಅಭ್ಯರ್ಥಿಗೆ 30 ಮತಗಳ ಚಲಾವಣೆ ಬಗ್ಗೆ ಕೊನೇ ಕ್ಷಣದಲ್ಲಿ ಬಿಜೆಪಿ ನಿರ್ಧರಿಸಿದ್ದು ಕೂಡ ಜೆಡಿಎಸ್ ಮೇಲೆ ಪರಿಣಾಮ ಬೀರಿದೆ.
ಇದನ್ನೂ ಓದಿ: ಪರಿಷತ್ ಚುನಾವಣೆ; ಕೊನೇ ಕ್ಷಣದಲ್ಲಿ ಕೈ ಹಿಡಿದ BJP ರಾಜ್ಯ ನಾಯಕರ ಕಾರ್ಯತಂತ್ರ, ತಪ್ಪಿದ ಭಾರೀ ಮುಖಭಂಗ
ಹೀಗಿದ್ದೂ ತನ್ನ ಹೆಚ್ಚುವರಿ ಮತಗಳನ್ನು ಬಿಜೆಪಿ ಜೆಡಿಎಸ್ಗೆ ಹಾಕಿಸಿತ್ತು. ಪಕ್ಷದ ಸೂಚನೆಯಂತೆ ಶಾಸಕ ದುರ್ಯೋಧನ ಐಹೊಳೆ, ಶಾಸಕ ಕೃಷ್ಣ ನಾಯ್ಕ್, ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೆಡಿಎಸ್ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು. ಆದರೂ ಅಂತಿಮವಾಗಿ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಪರಾಭವಗೊಳ್ಳಬೇಕಾಯಿತು. ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳಿಂದಲೂ ಕ್ರಾಸ್ ವೋಟಿಂಗ್ ಆಗಿರೋದು ಮೈತ್ರಿ ಪಕ್ಷಗಳಿಗೆ ಹೊಸ ಟೆನ್ಷನ್ ತಂದಿಟ್ಟಿದೆ. ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ನಾಯಕರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:05 pm, Thu, 18 June 26




