ಅಧಿವೇಶನದ ಮೊದಲ ದಿನವೇ ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ: ಸಾಧಕ-ಬಾಧಕಗಳ ಬಗ್ಗೆ ಸುದೀರ್ಘ ಸಮಾಲೋಚನೆ

ಕರ್ನಾಟಕ ವಿಧಾನ ಮಂಡಲ ಅಧಿವೇಶನದ ಮೊದಲ ದಿನ ಕಸ್ತೂರಿ ರಂಗನ್ ವರದಿ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಪ್ರಸ್ತಾಪ ಮಂಡಿಸಿದ ಸಿಎಂ ಡಿ.ಕೆ. ಶಿವಕುಮಾರ್, ಈ ವಿಷಯದಲ್ಲಿ ಯಾವುದೇ ರಾಜಕಾರಣ ಮಾಡುವ ಅಗತ್ಯವಿಲ್ಲ ಎಂದಿದ್ದರೆ, ಯಲ್ಲಿ ಭಾಗವಹಿಸಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರಕ್ಕೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.

ಅಧಿವೇಶನದ ಮೊದಲ ದಿನವೇ ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ: ಸಾಧಕ-ಬಾಧಕಗಳ ಬಗ್ಗೆ ಸುದೀರ್ಘ ಸಮಾಲೋಚನೆ
ವಿಧಾನಸಭೆ ಅಧಿವೇಶನ
Image Credit source: PTI
Edited By:

Updated on: Sep 21, 2026 | 7:04 PM

ಬೆಂಗಳೂರು, ಸೆಪ್ಟೆಂಬರ್​​ 21: ಕರ್ನಾಟಕ ವಿಧಾನ ಮಂಡಲ ಅಧಿವೇಶನದ ಮೊದಲ ದಿನವೇ ಕಸ್ತೂರಿ ರಂಗನ್ ವರದಿ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಆಡಳಿತ ಹಾಗೂ ವಿಪಕ್ಷಗಳ ಶಾಸಕರು ದಿನವಿಡೀ ಈ ವರದಿಯಿಂದ ರಾಜ್ಯಕ್ಕೆ ಆಗುವ ಡ್ಯಾಮೇಜ್ ಬಗ್ಗೆ ಸದನದಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಪ್ರಸ್ತಾಪ ಮಂಡಿಸಿದ ಸಿಎಂ ಡಿ.ಕೆ. ಶಿವಕುಮಾರ್, ಈ ವಿಷಯದಲ್ಲಿ ಯಾವುದೇ ರಾಜಕಾರಣ ಮಾಡುವ ಅಗತ್ಯವಿಲ್ಲ. ನಾವೂ ರಾಜಕಾರಣ ಮಾಡುವುದಿಲ್ಲ ಎಂದರು. ಮಲೆನಾಡು ಹಾಗೂ ಪಶ್ಚಿಮ ಘಟ್ಟ ವ್ಯಾಪ್ತಿಯ ರೈತರು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆ. ವಿಪಕ್ಷಗಳು ಸೂಕ್ತ ಸಲಹೆಗಳನ್ನು ನೀಡಲಿ, ಎಲ್ಲರೂ ಸೇರಿ ರಾಜ್ಯದ ಹಿತದೃಷ್ಟಿಯಿಂದ ಸರ್ವಪಕ್ಷ ನಿಯೋಗ ಕೊಂಡೊಯ್ಯೋಣ ಎಂದು ಸದನದಲ್ಲಿ ಪ್ರಸ್ತಾಪಿಸಿದರು.

ರಾಜ್ಯ ಸರ್ಕಾರಕ್ಕೆ ಆರ್​​. ಅಶೋಕ್​​ ಸಲಹೆ

ಇನ್ನು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಸರ್ಕಾರಕ್ಕೆ ಮೂರು ಪ್ರಮುಖ ಸಲಹೆಗಳನ್ನು ನೀಡಿದರು. ಕೇರಳ ರಾಜ್ಯದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಭೌತಿಕ ಸರ್ವೆ ನಡೆಸಿ ನೈಜ ವರದಿಯನ್ನು ಸಿದ್ಧಪಡಿಸಬೇಕು. ಕಸ್ತೂರಿ ರಂಗನ್ ವರದಿ ಜಾರಿಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಬಲವಾದ ಕಾನೂನು ಹೋರಾಟ ನಡೆಸಲು ತಜ್ಞ ವಕೀಲರ ತಂಡವನ್ನು ರಚಿಸಬೇಕು ಮತ್ತು ಕೇಂದ್ರ ಸರ್ಕಾರದ ಏಳನೇ ಅಧಿಸೂಚನೆ ತಿರಸ್ಕರಿಸಲು ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ ತೆರಳಲು ವಿಪಕ್ಷಗಳು ಸಿದ್ಧವಿರುವುದಾಗಿ ತಿಳಿಸಿದರು.

🔴LIVE | Karnataka Assembly Special Session Day 1: ವಿಧಾನಸಭಾ ವಿಶೇಷ ಅಧಿವೇಶನ ನೇರಪ್ರಸಾರ | #tv9d

ಇದನ್ನೂ ಓದಿ: ವಿಧಾನ ಮಂಡಲ ವಿಶೇಷ ಅಧಿವೇಶನ: ಮೊದಲ ದಿನವೇ ಪರಿಷತ್​​ನಲ್ಲಿ ‘ವಂದೇ ಮಾತರಂ’ ಕದನ

ಕಸ್ತೂರಿ ರಂಗನ್ ವರದಿಗೆ ಪಕ್ಷಾತೀತವಾಗಿ ತೀವ್ರ ಆಕ್ರೋಶ

ಕಸ್ತೂರಿ ರಂಗನ್ ವರದಿ ಅನ್ವಯ ರಾಜ್ಯದ ಹತ್ತು ಜಿಲ್ಲೆಗಳ 1,500ಕ್ಕೂ ಹೆಚ್ಚು ಗ್ರಾಮಗಳು ಮತ್ತು 20,668 ಚದರ ಕಿಲೋಮೀಟರ್‌ಗೂ ಹೆಚ್ಚಿನ ಭೂಪ್ರದೇಶ ಪರಿಸರ ಸೂಕ್ಷ್ಮ ವಲಯದ (ESA) ವ್ಯಾಪ್ತಿಗೆ ಬರಲಿದೆ. ಇದರಿಂದ ಆ ಭಾಗದಲ್ಲಿ ಕೃಷಿ ಚಟುವಟಿಕೆಗಳು, ರಸ್ತೆ, ವಿದ್ಯುತ್‌ನಂತಹ ಮೂಲಭೂತ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕರ ದೈನಂದಿನ ಜೀವನದ ಮೇಲೆ ಭಾರಿ ಹೊಡೆತ ಬೀಳಲಿದೆ. ಕೇಂದ್ರದ ಏಳನೇ ಅಧಿಸೂಚನೆ ಜಾರಿಯಾದರೆ ಮಲೆನಾಡು ಭಾಗ ಸಂಪೂರ್ಣವಾಗಿ ಸ್ತಬ್ಧವಾಗುವ ಭೀತಿ ಎದುರಾಗಿದ್ದು, ಈ ಬಗ್ಗೆ ಸದನದಲ್ಲಿ ಪಕ್ಷಾತೀತವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಡಿಕೆಶಿ- ವಿಜಯೇಂದ್ರ ನಡುವೆ ವಾಕ್ಸಮರ

ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ರಾಜ್ಯದ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ವಿಜಯೇಂದ್ರ ಆರೋಪ ಮಾಡಿದ ಪರಿಣಾಮ ಸಿಎಂ ಡಿಕೆಶಿ ಮತ್ತು ಅವರ ನಡುವೆ ಮಾತಿನ ಸಮರ ನಡೆಯಿತು. ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಸಚಿವರು, ಶಾಸಕರು ರಾಜಕಾರಣ ಮಾಡ್ತಿದ್ದಾರೆ. ಜನರನ್ನು ಬೀದಿಗೆ ತರುವ ಕೆಲಸ ಮಾಡ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು. ವಿಜಯೇಂದ್ರ ಆರೋಪಕ್ಕೆ ಕೌಂಟರ್ ನೀಡಿದ ಸಿಎಂ ಡಿಕೆಶಿ, ಯಾರೂ ನಿಮ್ಮಂತೆ ಆಡಳಿತ ಪಕ್ಷದವರು ರಾಜಕೀಯ ಮಾಡ್ತಿದ್ದಾರೆ ಎಂದು ಹೇಳಲಿಲ್ಲ. ಯಾರು ಯಾರನ್ನೂ ಎತ್ತಿ ಕಟ್ಟಿಲ್ಲ. ಆದರೆ ಈಗ ನೀವೇ ಎತ್ತಿ ಕಟ್ತಿದ್ದೀರಿ, ಪಾಲಿಟಿಕ್ಸ್ ಮಾಡ್ತಿದ್ದೀರಿ ಎಂದು ಕೌಂಟರ್​​ ಕೊಟ್ಟರು. ಈ ನಡುವೆ ನಾಳೆಯ ಕಲಾಪದಲ್ಲೂ ಕಸ್ತೂರಿ ರಂಗನ್ ವರದಿ ಮೇಲಿನ ಚರ್ಚೆ ಮುಂದುವರಿಯಲಿದೆ. ಮಧ್ಯಾಹ್ನದವರೆಗೂ ಚರ್ಚೆ ನಡೆಸಲು ನಿರ್ಧರಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us