
ಬೆಂಗಳೂರು, ಸೆಪ್ಟೆಂಬರ್ 27: ಬಡ ಹಾಗೂ ಕಷ್ಟದಲ್ಲಿರುವ ರೋಗಿಗಳನ್ನು ಗುರಿಯಾಗಿಸಿಕೊಂಡು ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಕನ್ಸ್ಯೂಮಬಲ್ಸ್‌ಗಳ ಮೇಲೆ ಶೇ 60 ರಿಂದ 90 ಪಟ್ಟು ಹೆಚ್ಚು ದರ ನಿಗದಿಪಡಿಸಿ ಭಾರಿ ಸುಲಿಗೆ ಮಾಡುತ್ತಿದ್ದ 254 ಔಷಧ ತಯಾರಿಕಾ ಕಂಪನಿಗಳ ಅಕ್ರಮ ಜಾಲವನ್ನು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಇಲಾಖೆ ಬಯಲಿಗೆಳೆದಿದೆ. ಕಡಿಮೆ ವೆಚ್ಚದಲ್ಲಿ ಔಷಧಗಳನ್ನು ಸಿದ್ಧಪಡಿಸಿ ಅಥವಾ ಆಸ್ಪತ್ರೆಗಳಿಗೆ ಪೂರೈಕೆ ಮಾಡಿ, ರೋಗಿಗಳಿಗೆ ಮಾತ್ರ ಅತ್ಯಂತ ದುಬಾರಿ ಬೆಲೆಯಲ್ಲಿ ಮಾರಲಾಗುತ್ತಿತ್ತು. ಈ ಸುಲಿಗೆ ಕೋರ ಕಂಪನಿಗಳ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿರುವ ಕರ್ನಾಟಕ ಎಫ್‌ಡಿಎ ಆಯುಕ್ತ ಕೆ ಶ್ರೀನಿವಾಸ್ , ತಕ್ಷಣವೇ ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ.
ಔಷಧ ತಯಾರಿಕಾ ಹಾಗೂ ಪೂರೈಕೆ ವೆಚ್ಚಕ್ಕೂ, ಆಸ್ಪತ್ರೆಗಳು ವಿಧಿಸುವ ಎಮ್ಆರ್ಪಿ ಬೆಲೆಗೂ ಅಸಹಜ ಅಂತರವಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಅತಿಯಾದ ಲಾಭ ಗಳಿಸುತ್ತಿರುವ 254 ಔಷಧ ಕಂಪನಿಗಳ ದರ ಏರಿಕೆಯ ಸಮಗ್ರ ಪಟ್ಟಿಯನ್ನು ಎನ್‌ಪಿಪಿಎಗೆ ಸಲ್ಲಿಸಲಾಗಿದೆ. ಡ್ರಗ್ಸ್ ಪ್ರೈಸೆಸ್ ಕಂಟ್ರೋಲ್ ಆರ್ಡರ್ (DPCO), 2013ರ ನಿಯಮಗಳ ಅಡಿಯಲ್ಲಿ ತುರ್ತಾಗಿ ಈ ದರಗಳನ್ನು ನಿಯಂತ್ರಣಕ್ಕೆ ತರಬೇಕು. ಆಸ್ಪತ್ರೆಗಳಲ್ಲಿ ವಿಧಿಸುವ ಅತಿಯಾದ ಟ್ರೇಡ್ ಮಾರ್ಜಿನ್ (ಲಾಭದ ಶೇಕಡಾವಾರು) ಪ್ರಮಾಣಕ್ಕೆ ತಕ್ಷಣವೇ ಗರಿಷ್ಠ ಮಿತಿ ನಿಗದಿಪಡಿಸಬೇಕು. ಔಷಧಗಳು, ಮೆಡಿಕಲ್ ಡಿವೈಸ್‌ಗಳು ಹಾಗೂ ಕನ್ಸ್ಯೂಮಬಲ್ಸ್‌ಗಳ ಉತ್ಪಾದನಾ/ಲ್ಯಾಂಡಿಂಗ್ ವೆಚ್ಚಕ್ಕೆ ಸೂಕ್ತ ಪ್ರಮಾಣದ ಬೆಲೆ ನಿಗದಿಪಡಿಸಿ ಬಡ ರೋಗಿಗಳ ಸುಲಿಗೆ ತಪ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:32 am, Sun, 27 September 26