ಉಚಿತ ಯೋಜನೆಯಿಂದ ಕಂಗೆಟ್ಟಿತಾ ಸರ್ಕಾರ?; 4 ಸಾರಿಗೆ ಸಂಸ್ಥೆಗಳಿಗೆ 2000 ಕೋಟಿ ಸಾಲ ಪಡೆಯಲು ಒಪ್ಪಿಗೆ

| Updated By: ಸುಷ್ಮಾ ಚಕ್ರೆ

Updated on: Dec 31, 2024 | 9:57 PM

ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಸಾಲ ಪಡೆಯಲು ಸರ್ಕಾರದ ಗ್ಯಾರಂಟಿ ವಿಧಿಸಲಾಗಿದೆ. ನಾಲ್ಕು ಸಾರಿಗೆ ನಿಗಮಗಳ ಭವಿಷ್ಯ ನಿಧಿ ಬಾಕಿ ಇದೆ. ನಾಲ್ಕು ಸಾರಿಗೆ ನಿಗಮಗಳು ಇಂಧನ ಬಾಕಿ ಹೊಣೆಗಾರಿಕೆ ಉಳಿಸಿಕೊಂಡಿವೆ. ಹೀಗಾಗಿ ಬಾಕಿ ಹಣ ಪಾವತಿಗೆ ನಾಲ್ಕು ಸಾರಿಗೆ ನಿಗಮಗಳಿಗೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಸರ್ಕಾರದ ಅನುಮೋದನೆ ಸಿಕ್ಕಿದೆ. ಆದರೆ, ಸಾಲ ಪಡೆಯಲು ಆರ್ಥಿಕ‌ ಇಲಾಖೆ ಷರತ್ತು ಹಾಕಿದೆ. ಆ ಷರತ್ತುಗಳ ಬಗ್ಗೆಯೂ ಮಾಹಿತಿ ಇಲ್ಲಿದೆ.

ಉಚಿತ ಯೋಜನೆಯಿಂದ ಕಂಗೆಟ್ಟಿತಾ ಸರ್ಕಾರ?; 4 ಸಾರಿಗೆ ಸಂಸ್ಥೆಗಳಿಗೆ 2000 ಕೋಟಿ ಸಾಲ ಪಡೆಯಲು ಒಪ್ಪಿಗೆ
Cm Siddaramaiah In Bmtc
Follow us on

ಬೆಂಗಳೂರು: ಉಚಿತ ಯೋಜನೆಯಿಂದ ಕಂಗೆಟ್ಟಿತಾ ರಾಜ್ಯ ಸರ್ಕಾರ? ಎಂಬ ಪ್ರಶ್ನೆಯೊಂದು ಎದ್ದಿದೆ. ಶಕ್ತಿ ಯೋಜನೆಯ ಪರಿಣಾಮವಾಗಿ ಸಾಲ ಪಡೆಯಲು ಸಾರಿಗೆ ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಬೃಹತ್ ಬಾಕಿ ಉಳಿಸಿಕೊಂಡ ಪರಿಣಾಮವಾಗಿ ಸಾರಿಗೆ ಇಲಾಖೆಗೆ ಸಾಲ ಮಾಡುವುದೊಂದೇ ದಾರಿ ಉಳಿದಿದೆ. ಸಾಲ ಪಡೆಯುವುದಕ್ಕೆ ಆರ್ಥಿಕ‌ ಇಲಾಖೆ ಅನುಮತಿ ನೀಡಿದೆ. ನಾಲ್ಕು ಸಾರಿಗೆ ನಿಗಮಗಳಿಗೆ ಒಟ್ಟು 2,000 ಕೋಟಿ ರೂ. ಸಾಲ ಪಡೆಯಲು ಅನುಮತಿ ನೀಡಲಾಗಿದೆ.

ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ಭವಿಷ್ಯ ನಿಧಿ ಬಾಕಿ ಇದೆ. ಸಾರಿಗೆ ನಿಗಮ ಇಂಧನ ಬಾಕಿ ಹೊಣೆಗಾರಿಕೆಯನ್ನು ಉಳಿಸಿಕೊಂಡಿದೆ. ಹೀಗಾಗಿ, ಬಾಕಿ ಹಣ ಪಾವತಿಗೆ 4 ಸಾರಿಗೆ ನಿಗಮಗಳಿಗೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಸರ್ಕಾರ ಅನುಮೋದನೆ ನೀಡಿದೆ. ಸಾಲ ಪಡೆಯಲು ಸರ್ಕಾರದಿಂದ ಷರತ್ತುಬದ್ಧ ಖಾತರಿ ವಿಧಿಸಲಾಗಿದೆ. ಒಟ್ಟು 2000 ಕೋಟಿ ರೂ. ಹಣವನ್ನು 4 ಸಾರಿಗೆ ನಿಗಮಗಳು ಬಾಕಿ ಉಳಿಸಿಕೊಂಡಿವೆ.

ಇದನ್ನೂ ಓದಿ: ಸಾರಿಗೆ ಇಲಾಖೆಗೆ ನೀಡಬೇಕಿದ್ದ 414 ಕೋಟಿ ರೂ. ಬಾಕಿ ಉಳಿಸಿಕೊಂಡ ಸರ್ಕಾರ

ಸಾಲ ಪಡೆಯಲು ಅನುಮತಿ ಕೋರಿ ಸಾರಿಗೆ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯಲ್ಲಿ ಹಲವು ಅಂಶಗಳನ್ನು ಸಾರಿಗೆ ಇಲಾಖೆ ಉಲ್ಲೇಖಿಸಿದೆ. ಶಕ್ತಿ ಯೋಜನೆಯ ಅನುಷ್ಠಾನದಿಂದಾಗಿ ಸಂಸ್ಥೆಗಳ ಆದಾಯ ಗಳಿಕೆಯಲ್ಲಿ ಹೆಚ್ಚಳ ಉಂಟಾಗಿದೆ. ಆದರೆ ನಿಗಮಗಳ ನಗದು ಒಳಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ನಿಗಮಗಳು ಕಳೆದ ಹಲವಾರು ವರ್ಷಗಳಿಂದ ನಷ್ಟವನ್ನು ಅನುಭವಿಸುತ್ತಿವೆ. ನಗದು ಹರಿವಿನಲ್ಲಿ ಕೊರತೆ ಉಂಟಾಗಿರುತ್ತದೆ. ನಾಲ್ಕು ನಿಗಮಗಳಲ್ಲಿ ಭವಿಷ್ಯ ನಿಧಿ, ನಿವೃತ್ತಿ ನೌಕರರ ಉಪಧನ, ರಜೆ ನಗದೀಕರಣ, ಇಂಧನ ಸರಬರಾಜುದಾರರ ಬಾಕಿ ಉಳಿದಿದೆ. ಅಪಘಾತ ಪರಿಹಾರ ಪ್ರಕರಣಗಳು, ನಿವೃತ್ತರಿಗೆ ಪರಿಷ್ಕೃತ ಉಪಧನ‌, ಸಾಲವೂ ಸೇರಿದಂತೆ ನವೆಂಬರ್ 2024ರ ಅಂತ್ಯಕ್ಕೆ ಒಟ್ಟು 6330.25 ಕೋಟಿ ರೂ. ಬಾಕಿ ಇದೆ.

ನವೆಂಬರ್ ಅಂತ್ಯಕ್ಕೆ ಬಾಕಿ ಇರುವ ಎಲ್ಲಾ ಹೊಣೆಗಾರಿಕೆ ಪಾವತಿ ಮಾಡಲು ಒಟ್ಟು 5527.46 ಕೋಟಿ ರೂ.ಗಳ ಅವಶ್ಯಕತೆ ಇದೆ. ಮುಖ್ಯವಾಗಿ ಭವಿಷ್ಯ ನಿಧಿ ಬಾಕಿ ಮೊತ್ತ 2901.53 ಕೋಟಿ ರೂ. ಇದೆ. ಇಂಧನದ ಬಾಕಿ ಮೊತ್ತ 827.37 ಕೋಟಿ ರೂ. ಸೇರಿ ಒಟ್ಟು 3728.90 ಕೋಟಿ ರೂ.ಗಳ ಸಾಲದ ಅವಶ್ಯಕತೆ ಇರುತ್ತದೆ. ಸದರಿ ಸಾಲದ ಮರುಪಾವತಿಗೆ ಅಸಲು ಮತ್ತು ಬಡ್ಡಿ ಮೊತ್ತವನ್ನು ಸರ್ಕಾರವು ಭರಿಸುವಂತೆ ಕೋರಿದೆ. ಸಾರಿಗೆ ಇಲಾಖೆ ಪ್ರಸ್ತಾವನೆಯನ್ನು ಆರ್ಥಿಕ‌ ಇಲಾಖೆ ಅನುಮೋದಿಸಿದೆ. 2000 ಕೋಟಿ ರೂ. ಸಾಲ ಪಡೆಯಲು ಆರ್ಥಿಕ‌ ಇಲಾಖೆ ಅನುಮತಿ ನೀಡಿದೆ.

ಇದನ್ನೂ ಓದಿ: ಕರ್ನಾಟಕ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ ಖಾಲಿ ಖಾಲಿ, ಸಿಬ್ಬಂದಿಗೂ ಕೊರತೆ

ಕ.ರಾ.ರ.ಸಾ.ನಿಗಮ – 623.80 ಕೋಟಿ ರೂ., ಬೆಂ.ಮ.ಸಾ.ಸಂಸ್ಥೆ – 589.20 ಕೋಟಿ ರೂ., ವಾ.ಕ.ರ.ಸಾ.ಸಂಸ್ಥೆ – 646.00 ಕೋಟಿ ರೂ., ಕ.ಕ.ರ.ಸಾ.ನಿಗಮ – 141.00 ಕೋಟಿ ರೂ. ಸಾಲ ಪಡೆಯಲು ಸರ್ಕಾರ ಅನುಮತಿ ನೀಡಿದೆ. ಆದರೆ, ಸಾಲ ಪಡೆಯಲು ಆರ್ಥಿಕ‌ ಇಲಾಖೆ ಷರತ್ತು ಹಾಕಿದೆ. ಆ ಷರತ್ತುಗಳು ಹೀಗಿವೆ.

– ಸದರಿ ಸಾಲದ ಮೊತ್ತವನ್ನು ಸಾರಿಗೆ ಸಂಸ್ಥೆಗಳಿಂದ ಮರುಪಾವತಿಸಬೇಕು.

– ಸದರಿ ಮೊತ್ತವನ್ನು ಆದ್ಯತೆಯ ಮೇರೆಗೆ ಇಂಧನ ಬಾಕಿ ಪಾವತಿಸಲು ಬಳಸಿಕೊಳ್ಳಬೇಕು.

– ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಕ್ರೋಢೀಕೃತ ಟೆಂಡರ್‌ನ್ನು ಕರೆಯಬೇಕು.

– ಈ ಕುರಿತು ಬಳಕೆ ಪ್ರಮಾಣ ಪತ್ರ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಆರ್ಥಿಕ ಇಲಾಖೆ ಷರತ್ತು ಹಾಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ