Karnataka Govt: ತರಾತುರಿ ನೇಮಕ, ನಂತರ ರದ್ದು; 21 ಟ್ರಸ್ಟ್ಗಳಿಗೆ ನೇಮಕಾತಿ ಆದೇಶ ಹಿಂಪಡೆದ ಸರ್ಕಾರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 21 ಟ್ರಸ್ಟ್ಗಳಿಗೆ ಹೊಸ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಹೊರಡಿಸಿದ್ದ ಆದೇಶವನ್ನು ಸರ್ಕಾರ ರದ್ದುಪಡಿಸಿದೆ.
ಬೆಂಗಳೂರು: ಇದ್ದಕ್ಕಿದ್ದಂತೆ ಆದೇಶ ಹೊರಡಿಸಿ ಜನರಿಂದ ಆಕ್ರೋಶ ವ್ಯಕ್ತವಾದ ತಕ್ಷಣ ಅದನ್ನು ಹಿಂದಕ್ಕೆ ಪಡೆಯುವುದು ರಾಜ್ಯ ಸರ್ಕಾರದ ಕಾರ್ಯವೈಖರಿಯ ಭಾಗವೇ ಆದಂತೆ ಇದೆ. ಈ ಹಿಂದೆ ಸರ್ಕಾರಿ ಕಚೇರಿಗಳಲ್ಲಿ ವಿಡಿಯೊ ಚಿತ್ರೀಕರಣ, ಛಾಯಾಗ್ರಹಣ ನಿಷೇಧಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ ನಂತರ ಅದನ್ನು ಹಿಂಪಡೆದಿತ್ತು. ಇದೀಗ ನಿನ್ನೆಯಷ್ಟೇ (ಆಗಸ್ಟ್ 24) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 21 ಟ್ರಸ್ಟ್ಗಳಿಗೆ ಹೊಸ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಹೊರಡಿಸಿದ್ದ ಆದೇಶವನ್ನು ಸರ್ಕಾರ ರದ್ದುಪಡಿಸಿದೆ. ನೇಮಕಾತಿಗೆ ಮೊದಲು ತಮ್ಮನ್ನು ಸಂಪರ್ಕಿಸಿ ಸಹಮತ ಪಡೆದಿರಲಿಲ್ಲ ಎಂದು ಬರಹಗಾರ ನರೇಂದ್ರ ರೈ ದೇರ್ಲ ಆಕ್ಷೇಪಿಸಿದ್ದರು. ‘ವೈಯಕ್ತಿಕ ಕಾರಣದಿಂದ ಸರ್ಕಾರದ ನೇಮಕಾತಿ ಒಪ್ಪಲು ಸಾಧ್ಯವಿಲ್ಲ. ಸರ್ಕಾರವು ಆದೇಶ ಹೊರಡಿಸುವ ಮೊದಲೇ ಸಂಪರ್ಕಿಸಿದ್ದರೆ ಇಂಥ ಮುಜುಗರದ ಸನ್ನಿವೇಶ ಎದುರಾಗುತ್ತಿರಲಿಲ್ಲ’ ಎಂದು ಖೇದ ವ್ಯಕ್ತಪಡಿಸಿದ್ದರು.
ಸರ್ಕಾರವು ಹೊರಡಿಸಿದ್ದ ನೇಮಕಾತಿ ಆದೇಶದ ಅನ್ವಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಇಬ್ಬರು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದರು. ಚಿಕ್ಕಮಗಳೂರಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ನರೇಂದ್ರ ರೈ ದೇರ್ಲ (Narendra Rai Derla), ‘ವೈಯಕ್ತಿಕ ಕಾರಣಗಳಿಂದಾಗಿ ಸಂಬಂಧಿಸಿದ ಜವಾಬ್ದಾರಿಯನ್ನು ನಾನು ಸ್ವೀಕರಿಸುವುದಿಲ್ಲ’ ಎಂದು ಹೇಳಿದ್ದಾರೆ. ಹಾವೇರಿಯ ಗಳಗನಾಥ ಮತ್ತು ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷರಾಗಿ ಚಕ್ರವರ್ತಿ ಸೂಲಿಬೆಲೆ (Chakravarthi Sulibele) ಅವರನ್ನು ನೇಮಕ ಮಾಡಲಾಗಿತ್ತು. ಅವರೂ ಸಹ, ‘ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ಸಮಯ ಕೊಡುವಷ್ಟು ಪುರಸೊತ್ತಿಲ್ಲದಿರುವುದರಿಂದ ಅತ್ಯಂತ ವಿನೀತನಾಗಿಯೇ ಈ ಗೌರವವನ್ನು ಮರಳಿಸಬೇಕಾಗಿ ಬಂದಿದೆ’ ಎಂದು ರಾಜ್ಯ ಸರ್ಕಾರ ನೀಡಿದ್ದ ಹುದ್ದೆಯನ್ನು ನಿರಾಕರಿಸಿದ್ದರು.
ಸೌಜನ್ಯವಿಲ್ಲದ ನೇಮಕಾತಿಗೆ ಆಕ್ಷೇಪ
ನರೇಂದ್ರ ರೈ ದೇರ್ಲ ಅವರ ನಿರ್ಧಾರವನ್ನು ಹಲವು ಸಾಹಿತಿಗಳು, ಹಿರಿಯ ಪತ್ರಕರ್ತರು ಮತ್ತು ಚಿಂತಕರು ಸ್ವಾಗತಿಸಿದ್ದಾರೆ. ಸೌಜನ್ಯವಿಲ್ಲದ ನೇಮಕಾತಿ ಪ್ರಕ್ರಿಯೆಯನ್ನು ಕಟುವಾಗಿ ಖಂಡಿಸಿದ್ದಾರೆ. ದೇರ್ಲ ಅವರ ಪೋಸ್ಟ್ಗೆ ಕಾಮೆಂಟ್ ಬರೆದಿರುವ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ, ‘ನೂರಕ್ಕೆ ನೂರು ಸರಿ. ಅನುಮತಿ ಪಡೆಯದೆ ನೇಮಕ ದಾರ್ಷ್ಟ್ಯವೇ’ ಎಂದು ಹೇಳಿದ್ದಾರೆ. ‘ಆತ್ಮಗೌರವವನ್ನು ಉಳಿಸಿಕೊಂಡು ಬಂದ ವ್ಯಕ್ತಿ ನೀವು. ಅದನ್ನು ಕಾಪಾಡುವ ದೃಷ್ಟಿಯಿಂದ ನಿಮ್ಮ ನಿರ್ಧಾರ ಶ್ಲಾಘನೀಯ’ ಎಂದು ರಾಧಾಕೃಷ್ಣ ರಾವ್ ಹೇಳಿದ್ದಾರೆ. ‘ನಿಮ್ಮ ನಿಲುವು ಸರಿಯಾದುದು. ಯಾವುದೇ ಸರ್ಕಾರವಾಗಲಿ ನೇಮಕಾತಿ ಪೂರ್ವದಲ್ಲಿ ಸಂಬಂಧಿಸಿದವರ ಮೌಖಿಕ ಒಪ್ಪಿಗೆ ಪಡೆಯುವುದು ಸರಿಯಾದ ಕ್ರಮ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಹೇಳಿದ್ದಾರೆ.
ಸದಸ್ಯತ್ವ ಪಟ್ಟಿಯಲ್ಲಿ ಮೃತರ ಹೆಸರು, ಜಾತಿ
ಸರ್ಕಾರವು ತನ್ನ ಆದೇಶದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರ ಹೆಸರು ಮತ್ತು ಜಾತಿಯನ್ನು ನಮೂದಿಸಿರುವುದು ಸಹ ವ್ಯಾಪಕ ಟೀಕೆಗೆ ಗುರಿಯಾಗಿದೆ. ಡಿಸೆಂಬರ್ 2021ರಲ್ಲಿಯೇ ರಾಜೇಶ್ವರಿ ಅವರು ನಿಧನರಾಗಿದ್ದರು. ‘ಆ ಪಟ್ಟಿ ನೋಡಿ ನಮಗೂ ಆಶ್ಚರ್ಯ… ರಾಜೇಶ್ವರಿ ಮೇಡಂ ಹೆಸರು ಬೇರೆ ಸೇರ್ಪಡೆಯಾಗಿದೆ. ಸದಸ್ಯರ ಆಯ್ಕೆ ಪಕ್ಕ ಜಾತಿ ಸೂಚನೆ ಬೇರೆ ಹಾಕಿದ್ದಾರೆ’ ಎಂದು ರವಿರಾಜ್ ಸಾಗರ್ ಎನ್ನುವವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Published On - 1:41 pm, Thu, 25 August 22