
ಬೆಂಗಳೂರು, ಸೆಪ್ಟೆಂಬರ್ 10: ‘ರಾಜ್ಯದ 7 ಕೋಟಿ ಜನರಿಗೆ ಕಾಂಗ್ರೆಸ್ ಸರ್ಕಾರ ಸೇರಿದೆ. ಕರ್ನಾಟಕ ರಾಜ್ಯವನ್ನು ಸಮಗ್ರ ಅಭಿವೃದ್ಧಿ ಮಾಡುವುದೆ ನಮ್ಮ ಗುರಿ. ನಾಡನ್ನು ಪ್ರಗತಿಪಥದತ್ತ ಕೊಂಡೊಯ್ಯಲು ನಿಮ್ಮ ಮುಂದೆ ನಿಂತಿದ್ದೇನೆ. ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಕೊಟ್ಟ ಮಾತಿನಂತೆ ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿಯೋಜನೆ, ಯುವನಿಧಿ ಯೋಜನೆಯನ್ನು ಜಾರಿ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ’ ಎಂದು ಸಿಎಂ ಡಿಕೆ ಶಿವಕುಮಾರ್ ಗುಡುಗಿದರು.
ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಸರ್ಕಾರ ಶತ ದಿನ ಪೂರೈಸಿದೆ. ಸರ್ಕಾರ ಯಶಸ್ವಿಯಾಗಿ 100 ದಿನಗಳ ಆಡಳಿತವನ್ನು ಪೂರೈಸಿದ ಐತಿಹಾಸಿಕ ಮೈಲಿಗಲ್ಲನ್ನು ಸಂಭ್ರಮಿಸಲು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ‘ದೃಢ ಕರ್ನಾಟಕದ ಸಂಕಲ್ಪ, ಶತಕದ ಪಥ, ಪ್ರಗತಿ ರಥ’ ಧ್ಯೇಯ ವಾಕ್ಯದಡಿ ಶತ ದಿನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ‘ನಾವು ಐದು ಗ್ಯಾರಂಟಿಗಳನ್ನು ಕೊಟ್ಟು ಪ್ರತಿಜ್ಞೆ ಮಾಡಿದ್ದೇವೆ. ಗ್ಯಾರಂಟಿಯಿಂದ ನಿಮ್ಮೆಲ್ಲರ ಬದುಕಿನಲ್ಲಿ ಬದಲಾವಣೆ ತಂದಿದೆ. ಇದು ನೂರು ದಿನದ ಸರ್ಕಾರದ ಆಚರಣೆ ಅಲ್ಲ. ನಾನು ಹಾಗೂ ಸಿದ್ದರಾಮಯ್ಯ ನಿಮಗೆ ಭರವಸೆ ಕೊಟ್ಟಿದ್ದೆವು, ನುಡಿದಂತೆ ನಡೆದು ಆತ್ಮವಿಶ್ವಾಸಕ್ಕೆ ದೊಡ್ಡ ಶಕ್ತಿ ತುಂಬಿದ್ದೇವೆ’ ಎಂದರು.
‘ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷಗಳು ಟೀಕೆ ಮಾಡಿದ್ದವು. ಕೇಂದ್ರ ಸರ್ಕಾರ ಕೂಡ ಗ್ಯಾರಂಟಿ ಯೋಜನೆಗಳನ್ನ ಟೀಕಿಸಿತ್ತು. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತೆ ಎಂದಿದ್ದರು. ಈಗ ನಮ್ಮ ಗ್ಯಾರಂಟಿ ಯೋಜನೆಗಳನ್ನು ಕೇಂದ್ರ ಸರ್ಕಾರ, ಬಿಜೆಪಿ ಸರ್ಕಾರದ ರಾಜ್ಯಗಳು ಅನುಸರಿಸುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಯೋಜನೆಗಳ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಗ್ಯಾರಂಟಿ ಯೋಜನೆ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. 5 ಗ್ಯಾರಂಟಿಗಳನ್ನ ಜನರಿಗೆ ತಲುಪಿಸಿದ್ದೇವೆ ಎಂಬ ಆತ್ಮವಿಶ್ವಾಸ ಇದೆ. ಇದಕ್ಕೆಲ್ಲಾ ನೀವು ಕೊಟ್ಟ ಶಕ್ತಿ, ಇದರಿಂದ ಉತ್ತಮ ಕೆಲಸ ಮಾಡುತ್ತಿದ್ದೇವೆ. ನಮ್ಮ ಎಲ್ಲ ಸಚಿವರ ಸಹಕಾರದಿಂದ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ಡಿಕೆಶಿ, ಪರಮೇಶ್ವರ್ರಿಂದ ವಿಶೇಷ ಸ್ವಾಗತ
‘ನಾನೊಬ್ಬನೇ ರಥ ಎಳೆಯುತ್ತಿಲ್ಲ, ಇದು ಜನತೆಯ ಸರ್ಕಾರ. ಪ್ರತಿ ಮನೆಯಲ್ಲೂ ಬದಲಾವಣೆ ರೂಪ ಕೊಡುವುದಕ್ಕೆ ಆಲೋಚನೆ ಮಾಡುತ್ತಿದ್ದೇವೆ. ಶತಕದ ಪಥದಲ್ಲಿ ಕರ್ನಾಟಕ ಹೆಜ್ಜೆ ಹಾಕ್ತಿದೆ. ನನ್ನ ಸಹೋದ್ಯೋಗಿಗಳು, 224 ಶಾಸಕರು 75 ಎಂಎಲ್ಸಿಗಳು ರಾಜ್ಯದ ಎಲ್ಲಾ ಸಂಸದರು ಒಟ್ಟಾಗಿ ದುಡಿಯುವ ಕೆಲಸ ಮಾಡುತ್ತೇವೆ. ಯಾರು ಸಹಕಾರ ಕೊಡುತ್ತಾರೋ ಬಿಡುತ್ತಾರೋ ಗೊತ್ತಿಲ್ಲ, ರಾಜ್ಯದ ಹಿತಸಾಕ್ತಿಗೆ ಕೆಲಸ ಮಾಡುತ್ತೇವೆ’ ಎಂದಿದ್ದಾರೆ.
‘ರಾಮಲಿಂಗಾರೆಡ್ಡಿ ಸಾರಿಗೆ ಸಚಿವರಾಗಿದ್ದಾಗ ಶಕ್ತಿ ಯೋಜನೆ ಜಾರಿ ಮಾಡಲಾಗಿದೆ. ಈಗ ಸುರೇಶ್ಗೆ ಸ್ಮಾರ್ಟ್ ಕಾರ್ಡ್ ಕೊಡುವ ಹೊಣೆ ವಹಿಸಿದ್ದೇವೆ. ಉದ್ಯೋಗದ ಸೃಷ್ಟಿ ಮಾಡುವುದಕ್ಕಾಗಿ ಯುವ ನಿಧಿ ಜಾರಿ ಮಾಡಿದ್ವಿ. ನಮ್ಮ ಯೋಜನೆಗಳನ್ನು ಬಿಜೆಪಿಯವರು ಕಾಪಿ ಮಾಡುತ್ತಿದ್ದಾರೆ. ಕರ್ನಾಟಕ ಮಾಡೆಲ್ ದೇಶದ ಮಾಡೆಲ್ ಆಗಿದೆ’ ಎಂದರು.
‘ನೇಗಿಲ ಯೋಗಿ ಕಾರ್ಯಕ್ರಮದಡಿ ರೈತರ ಭೂಮಿಯನ್ನು ಉಳುವ ಖರ್ಚು ಸರ್ಕಾರವೇ ಭರಿಸಲಿದೆ. ನಗರದ ಯುವಕರಿಗೆ ಗ್ರಾಮೀಣ ಅನುಭವ ಆಗಲು ಹಳ್ಳಿಗಳಿಗೆ ಕಳಿಸಿ 3 ದಿನ ವಾಸ್ತವ್ಯ ಮಾಡಿಸೋದಕ್ಕೆ ಉತ್ತರ ಕರ್ನಾಟಕ ಭಾಗಕ್ಕೆ ಹಲವು ಹೊಸ ಕಾರ್ಯಕ್ರಮ ರೂಪಿಸಿದ್ದೇವೆ. ತೇಗದ ಸಿರಿ ಯೋಜನೆಯಡಿ ಕಾರ್ಯಕ್ರಮ ರೂಪಿಸಿದ್ದೇವೆ. ರಸ್ತೆ ಬದಿಯಲ್ಲಿ ಗಿಡ ಬೆಳೆಸೋದಕ್ಕೆ ಕಾರ್ಯಕ್ರಮ ರೂಪಿಸಿದ್ದೇವೆ, ಇದರಿಂದ ರೈತರಿಗೆ 70% ಹಣ ಸಿಗುತ್ತೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ: ಕೆಆರ್ಎಸ್ ಡ್ಯಾಂಗೆ ಕಲರ್ಫುಲ್ ಲೈಟಿಂಗ್ಸ್
‘ಡಾ.ಪರಮೇಶ್ವರ್ ಅವರಿಗೆ ಮತ್ತೊಂದು ಜವಾಬ್ದಾರಿ ಕೊಟ್ಟಿದ್ದೇವೆ. ಭಾರತ್ ಜೋಡೋ ಸಂಘಗಳ ಸ್ಥಾಪನೆ ಇದು ನನ್ನ ಕನಸು. ನಶೆ ಮುಕ್ತ ಕರ್ನಾಟಕ ಮಾಡೋದಕ್ಕೆ ನಿರ್ಧಾರ ಮಾಡಿದ್ದೇವೆ. ಸಚಿವ ಪ್ರಿಯಾಂಕ್ ಖರ್ಗೆ ಜತೆ ಮಾತಾಡಿದ್ದೇವೆ. ಪ್ರತಿ ಗ್ರಾ.ಪಂ.ನಲ್ಲಿ ಯುವಕ ಯುವತಿಯರು ಒಗ್ಗಟ್ಟಾಗಿ ಸೇರಬೇಕು. 10 ಸಾವಿರ ಭಾರತ್ ಜೋಡೋ ಯುವ ಸಂಘಟನೆ ಮಾಡಿದ್ದೇವೆ. ಯುವಕರಿಗೆ ಉದ್ಯೋಗ ಸೇತು ಹೊಸ ಕಾರ್ಯಕ್ರಮ ರೂಪಿಸಿದ್ದೇವೆ’ ಎಂದು ಅವರು ಹೇಳಿದರು.
‘ನನ್ನ ಬದುಕು ಸಾರ್ಥಕವಾಗುತ್ತಿದೆ. ತುಂಗಭದ್ರ, ಕಾವೇರಿ, ಕೃಷ್ಣ ನದಿ ಜೋಡಣೆಗೆ ಮುಂದಾಗಿದ್ದೇವೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಜೊತೆ ಚರ್ಚೆ ಮಾಡಿದ್ದೇನೆ. ತುಂಗಭದ್ರ ಡ್ಯಾಮ್ನ ಎಲ್ಲಾ ಗೇಟ್ ಬದಲಾವಣೆ ಮಾಡಿದ್ದೇವೆ. ಮೇಕೆದಾಟು ಕರ್ನಾಟಕದ ಯೋಜನೆ ಎಂಬ ತೀರ್ಪು ಬಂದಿದೆ. ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ಗೆ ಜ್ಞಾನ ಇದೆ. ಮುಂದೆ ಎಲ್ಲಾ ಜವಾಬ್ದಾರಿ ಚಲುವರಾಯಸ್ವಾಮಿಗೆ ಕೊಟ್ಟಿದ್ದೇವೆ’ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.