
ಬೆಂಗಳೂರು, ಮೇ.02: ಪ್ರಧಾನಿ ಮೋದಿ ಸಾವಿನ ಕುರಿತು ಕಾಗವಾಡ ಶಾಸಕ ರಾಜು ಕಾಗೆ(Raju Kage) ಹೇಳಿಕೆ ವಿಚಾರ ಇದೀಗ ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನಲೆ ನರೇಂದ್ರ ಮೋದಿ(Narendra Modi) ಅವರ ಆಯಸ್ಸು ವೃದ್ಧಿಗಾಗಿ ‘ಇಂದು(ಮೇ.02) ಸಂಜೆ 6 ಗಂಟೆಗೆ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲೂ ಬಿಜೆಪಿ(BJP) ಮಹಿಳಾ ಮೋರ್ಚಾ ವತಿಯಿಂದ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಇದರ ಜೊತೆಗೆ ನಾಳೆ(ಮೇ.03) ರಾಜು ಕಾಗೆ ವಿರುದ್ಧ ರಡನೇ ಹಂತದ ಚುನಾವಣೆ ನಡೆಯುವ ಎಲ್ಲಾ 14 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಲಿದೆ.
‘ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗೋದೇ ಇಲ್ವಾ? ಎಂಬ ಶಾಸಕ ರಾಜು ಕಾಗೆ ಹೇಳಿಕೆಗೆ ‘ರಾಹುಲ್ ಗಾಂಧಿ ಮನಸ್ಥಿತಿ ಕಾಗೆ ಬಾಯಲ್ಲಿ ಅಪಶಕುನ ನುಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ. ‘ಸಾವುಗಳನ್ನು ಆಧರಿಸಿ ಅಧಿಕಾರಗಳನ್ನು ಗಳಿಸಿದ ಕಾಂಗ್ರೆಸ್ಸಿಗರು, ಅಮೂಲ್ಯ ಜೀವಗಳ ಸಾವುಗಳಿಗಾಗಿ ಚಡಪಡಿಸುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಹೀನ ಸಂಸ್ಕೃತಿಯ ದ್ಯೋತಕವಾಗಿದೆ. ಮೋದಿಯವರ ಸಾವು ಕಾಂಗ್ರೆಸ್ ಏಕೆ ಬಯಸುತ್ತದೆ?, ಆರ್ಟಿಕಲ್ 370 ರದ್ದುಗೊಳಿಸಿ, ದೇಶದ ಕಿರೀಟ ಕಾಶ್ಮೀರ ಉಳಿಸಿದ್ದಕ್ಕಾಗಿಯೇ?, ಐದು ಶತಮಾನಗಳ ಭಾರತೀಯರ ಕನಸು ಈಡೇರಿಸಲು ರಾಮ ಮಂದಿರ ನಿರ್ಮಾಣ ಮಾಡಿದ ಕಾರಣಕ್ಕಾಗಿಯೇ? ಅಥವಾ ದೇಶವನ್ನು ಮುಕ್ಕಿ ತಿನ್ನುತ್ತಿದ್ದ ಭಯೋತ್ಪಾದಕತೆಯನ್ನು ಬೇರು ಸಮೇತ ಕಿತ್ತೊಗೆದು ದೇಶ ರಕ್ಷಿಸಿದ ಕಾರಣಕ್ಕಾಗಿಯೇ? ಇಲ್ಲವೆ ದಕ್ಷ ಹಾಗೂ ಪಾರದರ್ಶಕ ಆಡಳಿತ ನೀಡಿ ಕಪ್ಪು ಚುಕ್ಕೆ ಇಲ್ಲದೆ ಪರಿಶುಭ್ರ ಆಡಳಿತ ನೀಡಿ ಜನರಿಂದ ಸೈ ಅನಿಸಿಕೊಂಡ ಕಾರಣಕ್ಕಾಗಿಯೇ? ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗುವುದಿಲ್ಲವೇ: ಕಾಂಗ್ರೆಸ್ ಶಾಸಕ ರಾಜು ಕಾಗೆ
ಭಾರತೀಯ ಜನತಾ ಪಾರ್ಟಿ ವ್ಯಕ್ತಿ ಆಧಾರಿತವಾಗಿ ಬೆಳೆದುದ್ದಲ್ಲ, ಸಿದ್ಧಾಂತ, ತತ್ವಗಳನ್ನು ಆಧರಿಸಿ ರಾಷ್ಟ್ರ ಭಕ್ತ ಕಾರ್ಯಕರ್ತರ ಪರಿಶ್ರಮದ ಫಲವಾಗಿ ಬೆಳೆದು ನಿಂತಿರುವ ಬೃಹತ್ ರಾಜಕೀಯ ವೃಕ್ಷ. ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಅವರಂತಹ ಸಾಲು ಸಾಲು ನಾಯಕರನ್ನು ದೇಶಕ್ಕೆ ಸಮರ್ಪಣೆ ಮಾಡಿದ ಪಕ್ಷ , ಈ ನಿಟ್ಟಿನಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಗಟ್ಟಿಯಾಗಿ ಪಡಿಮೂಡಿದೆ. ದೇಶ ಮೆಚ್ಚಿದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜೀ, ಸಮರ್ಥ ಆಡಳಿತಗಾರನಾಗಿ ದೇಶವನ್ನು ಬಲಿಷ್ಠ ಗೊಳಿಸಿದ ಮಹಾನ್ ನೇತಾರ’ ಎನ್ನುವ ಕಾರಣಕ್ಕಾಗಿ ಈ ದೇಶದ ಜನ ಮತ್ತೊಮ್ಮೆ ಅವರ ನಾಯಕತ್ವವನ್ನು ಬಯಸಿ ಪ್ರಧಾನಿಯನ್ನಾಗಿಸಲು ಸಂಕಲ್ಪ ತೊಟ್ಟಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್ಸಿಗರ ಬಾಯಲ್ಲಿ ಹತಾಶೆ, ಅಪಶಕುನದ ಮಾತುಗಳಲ್ಲದೇ ಇನ್ನೇನು ಬರಲು ಸಾಧ್ಯ?, ಕೊಳಕು ಮನಸ್ಸುಗಳು ಮಾತ್ರ ವಿಕೃತಿಯ ಮಾತನಾಡಲು ಸಾಧ್ಯ, ಅಂತದ್ದೇ ಸಾಲಿಗೆ ಸೇರಿರುವ ಶಾಸಕ (ರಾಜು )ಕಾಗೆ ಬಾಯಿಂದ ಮೋದಿಯವರ ಕುರಿತು ಕಾಂಗ್ರೆಸ್ಸಿಗರು ಅಪಶಕುನವನ್ನು ಉಗುಳಿಸಿದ್ದಾರೆ ಎಂದು ಟ್ವೀಟ್ ಮೂಲಕ ಶಾಸಕ ರಾಜು ಕಾಗೆ ಹೇಳಿಕೆಗೆ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ತುಮಕೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಮಂಜುಳಾ ಸಿ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ ಕಾಂಗ್ರೆಸ್ ಶಾಸಕ ರಾಜು ಕಾಗವಾಡ ನಾಲಿಗೆ ಹರಿಬಿಟ್ಟಿದ್ದಾರೆ. ಪ್ರಧಾನಿ ಮೋದಿ ಅವರ ಸಾವನ್ನು ಕಾಗವಾಡ ಬಯಸಿದ್ದು, ಇದು ಕೇವಲ ರಾಜು ಕಾಗವಾಡ ಅವರ ಮನಸ್ಸಿನಲ್ಲಿ ಇದ್ದ ಭಾವನೆ ಅಲ್ಲ, ರಾಹುಲ್ ಗಾಂಧಿ ಅವರ ಬಯಕೆ ಕೂಡ ಅದೇ ಆಗಿದೆ. ಪ್ರಧಾನಿ ಮೋದಿ ದೀರ್ಘಾಯುಷ್ಯಕ್ಕಾಗಿ ಇಂದು ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ಕುಂಕುಮಾರ್ಚನೆ ಮಾಡಲು ಮಂಜುಳಾ ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ:ವಿವಾದಾತ್ಮಕ ಹೇಳಿಕೆ; ಕಾಂಗ್ರೆಸ್ ಶಾಸಕ ರಾಜು ಕಾಗೆಗೆ ನೋಟಿಸ್ ನೀಡಿದ ಚುನಾವಣಾ ಅಧಿಕಾರಿಗಳು
ಇದೇ ವೇಳೆ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರ, ‘ಇಂಥಹ ಘಟನೆ ನಡೆಯಬಾರದು, ಈ ಘಟನೆಯನ್ನು ಬಿಜೆಪಿ ಖಂಡಿಸುತ್ತದೆ. ಚುನಾವಣೆಗೆ ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಪ್ರಕರಣ ದಾಖಲಿಸಿದೆ. ಆದರೆ, ವೀಕ್ ಸೆಕ್ಸನ್ ಹಾಕಿ ಬಚಾವ್ ಮಾಡುವ ಪ್ರಯತ್ನವೂ ಮಾಡಿದೆ. ಕಾಂಗ್ರೆಸ್ ಸರ್ಕಾರದ ದ್ವಿಮುಖ ನೀತಿ ಇಲ್ಲಿ ಬಯಲಾಗಿದೆ. ಪ್ರಜ್ವಲ್ ರೇವಣ್ಣರನ್ನು ವಿದೇಶಕ್ಕೆ ಹೋಗಲು ಬಿಟ್ಟು ಕಾಂಗ್ರೆಸ್ ಸರ್ಕಾರ ತಪ್ಪೇಸಗಿದೆ. ಹಾವೇರಿಯಲ್ಲಿ ಅಲ್ಪ ಸಂಖ್ಯಾತ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆದಾಗ ನಾವು ಪ್ರಕರಣ ಎಸ್ಐಟಿ ಗೆ ವಹಿಸುವಂತೆ ಒತ್ತಾಯ ಮಾಡಿದ್ವಿ, ಯಾಕೆ ಎಸ್ಐಟಿಗೆ ನೀಡಲಿಲ್ಲ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಮಾತನಾಡಿ, ‘ಕಾಂಗ್ರೆಸ್ ನಾಯಕರಿಗೆ ಹತಾಶೆ ಆವರಿಸಿ, ನೈತಿಕವಾಗಿ ಅವರು ಬರಗೆಟ್ಟಿದ್ದಾರೆ. ಹೀಗಾಗಿ ಮೋದಿ ವಿರುದ್ಧ ಅಪಭ್ರಂಶ ಪದಗಳ ಬಳಕೆ ಮಾಡುತ್ತಿದ್ದಾರೆ. ಮೋದಿಯವರನ್ನು ನಿಂದಿಸಿದಂತೆಲ್ಲಾ ಮೋದಿ ಇನ್ನೂ ಬಲವಾಗುತ್ತಾರೆ. ಇತ್ತ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ. ಬಿಜೆಪಿ ಈ ಸಲ 400 ಸ್ಥಾನ ಗೆಲ್ಲುವುದು ಅವರಿಗೆ ಸಹಿಸಲು ಆಗುತ್ತಿಲ್ಲ. ಮೋದಿಯವರ ಹೆಸರು ಹೇಳಿದಷ್ಟೂ ಅವರ ಆಯುಷ್ಯ ವೃದ್ಧಿಸುತ್ತದೆ. ಮೋದಿಯವರಂತಹ ನಾಯಕ ನಮಗೆ ಸಿಕ್ಕಿರುವುದು ನಮ್ಮ ಪುಣ್ಯ ಅಂತ ಜನರೇ ಹೇಳುತ್ತಿದ್ದಾರೆ. ಜನರೇ ಕಾಂಗ್ರೆಸ್ ನವರಿಗೆ ತಕ್ಕ ಉತ್ತರ ಕೊಡುತ್ತಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ