ಪೊಲೀಸ್ ಇನ್ಸ್ಪೆಕ್ಟರ್ ಎಂದು ನಂಬಿಸಿ ವಂಚನೆ ಆರೋಪ; ಬೆಸ್ಕಾಂ ಅಧಿಕಾರಿ ಬಂಧನ
ಇತ್ತೀಚೆಗೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬುದ್ದಿವಂತರೇ ಇದರಲ್ಲಿ ಎಡವುತ್ತಿರುವುದು ದುರಂತ. ಆದರೆ, ಇಲ್ಲೊಬ್ಬ ಬೆಸ್ಕಾಂ ಸಹಾಯಕ ಇಂಜಿನಿಯರ್, ತಾನೊಬ್ಬ ಪೊಲೀಸ್ ಅಧಿಕಾರಿ ಎಂದು ರೈತರು ಸೇರಿದಂತೆ ಹಲವರಿಗೆ ಲಕ್ಷಾಂತರ ರೂಪಾಯಿಯನ್ನು ವಂಚನೆ ಮಾಡಿದ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. ಇದೀಗ ಆರೋಪಿಯನ್ನು ಕೂಡ ಬಂಧಿಸಲಾಗಿದೆ.
ಬೆಂಗಳೂರು, ಮೇ.17: ಪೊಲೀಸ್ ಇನ್ಸ್ಪೆಕ್ಟರ್ ಎಂದು ನಂಬಿಸಿ ವಂಚನೆ ಮಾಡಿದ ಆರೋಪದ ಮೇಲೆ ಮಲ್ಲೇಶ್ವರಂ ಬೆಸ್ಕಾಂ ಸಹಾಯಕ ಇಂಜಿನಿಯರ್ ಗಂಗಾಧರ್ ಎಂಬುವವರನ್ನು ಬೆಂಗಳೂರಿನ(Bengaluru) ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಕೆಐಡಿಬಿಯಿಂದ ರೈತರಿಗೆ ಹಣ ಕೊಡಿಸುವ ನೆಪದಲ್ಲಿ ಕಮಿಷನ್ ಎಂದು ಲಕ್ಷಾಂತರ ರೂಪಾಯಿ ಹಣ ಪೀಕುತ್ತಿದ್ದ. ಜೊತೆಗೆ ತನ್ನ KA 09 MF 0656 ಸಂಖ್ಯೆಯ ರೆನಾಲ್ಟ್ ಕ್ವಿಡ್ ಕಾರಿಗೆ ಪೊಲೀಸ್ ಜಾಗೃತದಳದ ಬೋರ್ಡ್ ಅಳವಡಿಕೆ ಮಾಡಿದ್ದ.
ಹಲವು ವರ್ಷಗಳಿಂದ ವಂಚನೆ ಆರೋಪ
ಪೊಲೀಸ್ ಜಾಗೃತದಳದ ಫಲಕ ಅಳವಡಿಸಿದ್ದ ಹಿನ್ನಲೆ ಹೆದ್ದಾರಿ ಟೋಲ್ ಫ್ರೀ ಹಾಗೂ ಪ್ರವಾಸಿ ಸ್ಥಳಗಳಲ್ಲಿ ವಿಐಪಿ ಆದ್ಯತೆ ದೊರಕುತ್ತಿತ್ತು. ಇನ್ನು ಆತನನ್ನು ಪ್ರಶ್ನಿಸಿದರೆ ಪೊಲೀಸ್ ಇನ್ಸ್ಪೆಕ್ಟರ್ ಐಡಿ ತೋರಿಸುತ್ತಿದ್ದ. ಬೆಸ್ಕಾಂ ಇಲಾಖೆ ನೀಡಿದ್ದ ವಾಕಿಟಾಕಿಯನ್ನು ಇಲ್ಲಿ ದುರ್ಬಳಕೆ ಮಾಡಿಕೊಂಡ ಆರೋಪವಿದೆ. ಇತ ಹಲವು ವರ್ಷಗಳಿಂದ ಇದೇ ರೀತಿ ಹಣ ಪಡೆದು ವಂಚಿಸುತ್ತಿದ್ದ ಹಿನ್ನಲೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆತನನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಸರ್ಕಾರಿ ಕೆಲಸ ಕೊಡಿಸುವುದಾಗಿ ಸಿಐಡಿ ಅಧಿಕಾರಿಗಳಿಂದಲೇ 40 ಲಕ್ಷ ರೂ. ವಂಚನೆ: ಕಾಂಗ್ರೆಸ್ನ ಪಾಲು ಎಷ್ಟು ಎಂದ ಬಿಜೆಪಿ
ಬ್ಯಾಂಕ್ನಿಂದ ಡ್ರಾ ಮಾಡಿಕೊಂಡು ಹೋಗುವಾಗ ಕಳ್ಳತನ
ವಿಜಯಪುರ: ತಾಳಿಕೋಟೆ ಪಟ್ಟಣದ ಯೂನಿಯನ್ ಬ್ಯಾಂಕ್ ಬಳಿ ನಿವೃತ್ತ ನೌಕರನ ಗಮನ ಬೇರೆಡೆ ಸೆಳೆದು ಬರೊಬ್ಬರಿ 2.20 ಲಕ್ಷ ರೂ. ಹಣವನ್ನು ಕಳ್ಳರು ದೋಚಿದ್ದಾರೆ. ನಿವೃತ್ತ ನೌಕರ ನಾಗಪ್ಪ ಅಮರಪ್ಪ ಕೆಂಭಾವಿ ಹಣ ಕಳೆದುಕೊಂಡವರು. ಬ್ಯಾಂಕ್ನಲ್ಲಿ ಹಣ ಡ್ರಾ ಮಾಡಿಕೊಳ್ಳುವಾಗ ನಾಗಪ್ಪರನ್ನು ಹಿಂಬಾಲಿಸಿದ್ದ ಖದೀಮರು, ಬ್ಯಾಂಕ್ ಹೊರಗಡೆ ಬಂದು ನಿಂತಾಗ ಗಮನ ಬೇರೆಡೆ ಸೆಳೆದು ಹಣ ಕಿತ್ತುಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಈ ಕುರಿತು ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Fri, 17 May 24