
ಬೆಂಗಳೂರು, ಸೆ.10: ಕೇಂದ್ರ ಸರ್ಕಾರದ ‘ನಿರ್ಭಯ ಯೋಜನೆ’ಯಡಿ (Nirbhaya Scheme) ರಾಜ್ಯದ ಎಲ್ಲಾ ಯೆಲ್ಲೋ ಬೋರ್ಡ್ (ವಾಣಿಜ್ಯ) ವಾಹನಗಳಿಗೆ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಆದರೆ, ಈ ನಿಯಮ ಹಾಗೂ ವೆಚ್ಚದಿಂದ ತಪ್ಪಿಸಿಕೊಳ್ಳಲು ರಾಜ್ಯದ ವಾಹನ ಮಾಲೀಕರು ನೆರೆರಾಜ್ಯ ಆಂಧ್ರಪ್ರದೇಶಕ್ಕೆ ತೆರಳಿ ವಾಹನಗಳ ಫಿಟ್‌ನೆಸ್ ಸರ್ಟಿಫಿಕೇಟ್ ಮಾಡಿಸಿಕೊಳ್ಳುತ್ತಿರುವುದು ಸಾರಿಗೆ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಅಕ್ರಮ ಚಟುವಟಿಕೆಗೆ ತಕ್ಷಣವೇ ಬ್ರೇಕ್ ಹಾಕುವಂತೆ ಕೋರಿ ಕರ್ನಾಟಕ ಸಾರಿಗೆ ಇಲಾಖೆಯು ಆಂಧ್ರಪ್ರದೇಶದ ಸಾರಿಗೆ ಆಯುಕ್ತರಿಗೆ ಅಧಿಕೃತ ಪತ್ರ ಬರೆದಿದೆ.
ಕ್ಯಾಬ್ ಅಥವಾ ವಾಣಿಜ್ಯ ವಾಹನಗಳಲ್ಲಿ ಪ್ರಯಾಣಿಸುವಾಗ ಮಹಿಳೆಯರು, ಚಾಲಕರು ಅಥವಾ ಪ್ರಯಾಣಿಕರಿಗೆ ಯಾವುದೇ ಅನಾಹುತ ಅಥವಾ ತುರ್ತು ಪರಿಸ್ಥಿತಿ ಎದುರಾದರೆ, ತಕ್ಷಣವೇ ಆಪತ್ತಿನಿಂದ ರಕ್ಷಿಸಲು ವಾಹನಗಳ ಲೊಕೇಶನ್ ಟ್ರ್ಯಾಕ್ ಮಾಡುವುದು ಕಡ್ಡಾಯವಾಗಿದೆ. ಶೋರೂಮ್‌ನಿಂದ ಹೊರಬರುವಾಗಲೇ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಿಕೊಂಡು ಬರಲಾಗುತ್ತಿದೆ.
ವಾರ್ಷಿಕ ಎಫ್‌ಸಿ ನವೀಕರಣ ಮಾಡುವಾಗ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಇರುವುದು ಕಡ್ಡಾಯ. ಇಲಾಖೆಯಿಂದ ಪ್ರತ್ಯೇಕ ಕಂಟ್ರೋಲ್ ರೂಮ್ ಆರಂಭಿಸಲಾಗಿದ್ದು, ಪ್ರತಿದಿನ 800 ರಿಂದ 1000 ಕರೆಗಳನ್ನು ಸ್ವೀಕರಿಸಿ ಚಾಲಕರ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ ಎಂದು ಈ ನಿಮಯದಲ್ಲಿ ಹೇಳಲಾಗಿದೆ.
“ರಾಜ್ಯದಲ್ಲಿರುವ ಒಟ್ಟು 6 ಲಕ್ಷ ಯೆಲ್ಲೋ ಬೋರ್ಡ್ ವಾಹನಗಳ ಪೈಕಿ ಈಗಾಗಲೇ 3.30 ಲಕ್ಷ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಆದರೆ, ಅನೇಕ ಮಾಲೀಕರು ಈ ನಿಯಮದಿಂದ ತಪ್ಪಿಸಿಕೊಳ್ಳಲು ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದು, ಆ ರಾಜ್ಯದ ಸಾರಿಗೆ ಆಯುಕ್ತರಿಗೆ ಕ್ರಮ ಕೈಗೊಳ್ಳಲು ಪತ್ರ ಬರೆಯಲಾಗಿದೆ. ಜಿಪಿಎಸ್ ಅಳವಡಿಸದ ವಾಹನ ಮಾಲೀಕರ ಮೇಲೆಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು.” ಎಂದು ಸಾರಿಗೆ ಇಲಾಖೆಯ ಅಡಿಷನಲ್ ಕಮಿಷನರ್ ಸಿ. ಮಲ್ಲಿಕಾರ್ಜುನ ಹೇಳಿದ್ದಾರೆ.
ಕರ್ನಾಟಕದಲ್ಲಿ ಹಳೆಯ ಯೆಲ್ಲೋ ಬೋರ್ಡ್ ವಾಹನಗಳಿಗೆ ಎಫ್‌ಸಿ ನವೀಕರಿಸಲು ಜಿಪಿಎಸ್, ಪ್ಯಾನಿಕ್ ಬಟನ್ ಹಾಗೂ ವಾರ್ಷಿಕ ರಿನಿವಲ್ ಸೇರಿ ದೊಡ್ಡ ಪ್ರಮಾಣದ ಖರ್ಚು ಎದುರಾಗುತ್ತಿದೆ. ಕರ್ನಾಟಕದಲ್ಲಿ ಎಫ್‌ಸಿ ಶುಲ್ಕ 800 ರೂ. ಜಿಪಿಎಸ್ + ಪ್ಯಾನಿಕ್ ಬಟನ್ ಅಳವಡಿಕೆಗೆ 13 ಸಾವಿರ ರೂ.ದಿಂದ 16 ಸಾವಿರ ರೂ. ವರೆಗೆ ಇದೆ. ಇನ್ನು ವಾರ್ಷಿಕ ರಿನಿವಲ್ಗೆ 2,200 ರೂ. ಆಗಲಿದೆ. ಒಟ್ಟು ವೆಚ್ಚ 17,000 ದಿಂದ 18,000 ರೂ. ಆಗಲಿದೆ. ಆದರೆ ಕೇವಲ 800 ರೂ. ಪಾವತಿಸಿ, ಯಾವುದೇ ಜಿಪಿಎಸ್ ಅಥವಾ ಪ್ಯಾನಿಕ್ ಬಟನ್ ಇಲ್ಲದೆ ಎಫ್‌ಸಿ ಪ್ರಮಾಣಪತ್ರ ಪಡೆಯಬಹುದಾಗಿದೆ. ಹೀಗಾಗಿ, ಕರ್ನಾಟಕ-ಆಂಧ್ರ ಗಡಿಯಲ್ಲಿರುವ ಆಂಧ್ರಪ್ರದೇಶದ ಪೆನುಕೊಂಡ, ಚಿತ್ತೂರು, ಅನಂತಪುರ ಸೇರಿದಂತೆ ವಿವಿಧ ಆರ್‌ಟಿಒ ಕಚೇರಿಗಳಿಗೆ ತೆರಳಿ ವಾಹನ ಮಾಲೀಕರು ಎಫ್‌ಸಿ ಮಾಡಿಸಿಕೊಳ್ಳುತ್ತಿದ್ದಾರೆ.
ಇನ್ನು ಆಂಧ್ರಪ್ರದೇಶದ ಈ ಆಫರ್ನಿಂದಾಗಿ ಕರ್ನಾಟಕದ ಆರ್‌ಟಿಒ ಕಚೇರಿಗಳಿಗೆ ಬರುವ ಯೆಲ್ಲೋ ಬೋರ್ಡ್ ವಾಹನಗಳ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ. ಹಿಂದೆ ಪ್ರತಿದಿನ ಸರಾಸರಿ 100 ವಾಹನಗಳು ಎಫ್‌ಸಿಗಾಗಿ ಬರುತ್ತವೆ ಎಂದರೆ, ಪ್ರಸ್ತುತ ಕೇವಲ 10 ರಿಂದ 20 ವಾಹನಗಳು ಮಾತ್ರ ಆರ್‌ಟಿಒ ಕಚೇರಿಗಳ ಕಡೆ ಸುಳಿಯುತ್ತಿವೆ. “ಖಾಸಗಿ ಚಾಲಕರಿಗೆ ಇಷ್ಟೊಂದು ಭಾರಿ ಮೊತ್ತದ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆ ಹೊರೆಯಾಗುತ್ತಿದೆ. ಇದೇ ಕಾರಣಕ್ಕೆ ಚಾಲಕರು ಅನಿವಾರ್ಯವಾಗಿ ಗಡಿ ದಾಟಿ ಆಂಧ್ರಪ್ರದೇಶಕ್ಕೆ ಹೋಗಿ ಎಫ್‌ಸಿ ಮಾಡಿಸುತ್ತಿದ್ದಾರೆ.” ಎಂದು ಕರ್ನಾಟಕ ಟೂರ್ಸ್ ಅಂಡ್ ಟ್ರಾವೆಲ್ಸ್ ಅಸೋಸಿಯೇಷನ್ನ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ