ಸರ್ಕಾರಿ ವೆಬ್ಸೈಟ್ನ್ನು ಬಿಡದ ಹ್ಯಾಕರ್ಸ್: ಕಾವೇರಿ 2.0 ಸಾಫ್ಟ್‌ವೇರ್ ಹ್ಯಾಕ್, ಡಾಟಾ ಕಳವು
ಬೆಂಗಳೂರಿನ ಆಸ್ತಿ ನೋಂದಣಿ ವ್ಯವಸ್ಥೆಯಾದ ಕಾವೇರಿ 2.0 ಸಾಫ್ಟ್‌ವೇರ್ ಅನ್ನು ಹ್ಯಾಕ್ ಮಾಡಲಾಗಿದೆ. ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರು ದೂರು ದಾಖಲಿಸಿದ್ದು, ಕೇಂದ್ರ CEN ಪೊಲೀಸ್ ಠಾಣೆಯಲ್ಲಿ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹ್ಯಾಕರ್‌ಗಳು ವ್ಯವಸ್ಥೆಯಿಂದ ಡೇಟಾ ಕದ್ದಿದ್ದು, ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾರೆ.

ಬೆಂಗಳೂರು, ಫೆಬ್ರವರಿ 09: ಆಸ್ತಿ ನೋಂದಣಿ ಪ್ರಕ್ರಿಯೆ ಸರಳಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇತ್ತೀಚೆಗೆ ಕಾವೇರಿ 2.0 ಸಾಫ್ಟ್ವೇರ್ನ್ನು ಪರಿಚಯಿಸಿತ್ತು. ಇದೀಗ ಇದೇ ಕಾವೇರಿ 2.0 ಸಾಫ್ಟ್ವೇರ್ನ್ನು (Kaveri 2.0 Software) ಹ್ಯಾಕರ್ಸ್ ಹ್ಯಾಕ್ ಮಾಡಿದ್ದಾರೆ. ಸದ್ಯ ಈ ಬಗ್ಗೆ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ (ಐಜಿಆರ್) ಕೆಎ ದಯಾನಂದ್ ದೂರು ನೀಡಿದ್ದಾರೆ. ಕೇಂದ್ರ CEN ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ಸರ್ವರ್ ಸಮಸ್ಯೆಯಿಂದ ಕೆಲ ದಿನಗಳಿಂದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಸ್ಥಗಿತವಾಗಿತ್ತು. ಹಾಗಾಗಿ ಐಜಿಆರ್ ಕೆಎ ದಯಾನಂದ್, ಪರಿಶೀಲನೆ ಮಾಡಿದಾಗ ಅಪರಿಚಿತರು ಕಾವೇರಿ 2.0 ಸಾಫ್ಟ್‌ವೇರ್ ಹ್ಯಾಕ್ ಮಾಡಿರುವುದಲ್ಲದೇ, ವೈಬ್ ಸೈಟ್ ಪ್ರವೇಶಿಸಿ ದತ್ತಾಂಶ ಕಳವು ಮಾಡಿ ನಕಲಿ ಖಾತೆಗಳನ್ನು ತೆರೆದಿರುವುದು ಪತ್ತೆ ಆಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾವೇರಿ 2.0 ಜಾರಿ, ಆಸ್ತಿ ನೋಂದಾಣಿ ಸರಳ: ಇದು ಹೇಗೆ ಕಾರ್ಯನಿರ್ವಹಿಸುತ್ತೆ? ಇದರ ಅನುಕೂಲಗಳೇನು?
ಸದ್ಯ ಈ ಘಟನೆಯೂ ಸರ್ಕಾರಿ ವ್ಯವಸ್ಥೆಗಳಲ್ಲಿನ ಸೈಬರ್ ಸುರಕ್ಷತೆಯ ದೋಷಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯಗಳನ್ನು ತಡೆಗಟ್ಟಲು ಬಲವಾದ ಕಾನೂನು ಕ್ರಮಗಳ ಅಗತ್ಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ.
ಕರ್ನಾಟಕದಾದ್ಯಂತ ಆಸ್ತಿ ನೋಂದಣಿ ಸುಲಭವಾಗಿಸಲು ರಾಜ್ಯ ಸರ್ಕಾರ ಇತ್ತೀಚೆಗೆ ಕಾವೇರಿ 2.0 ಸಾಫ್ಟ್ವೇರ್ನ್ನು ಜಾರಿ ಮಾಡಿತ್ತು. ಈ ತಂತ್ರಾಂಶದ ಮೂಲಕ ಸಾರ್ವಜನಿಕರು ತಮ್ಮ ಆಸ್ತಿ ವಿವರ ಮತ್ತು ಮೂಲ ದಾಖಲೆಗಳನ್ನು ಆನ್ಲೈನ್ ಮೂಲಕ ನೇರವಾಗಿ ಉಪನೋಂದಾಣಿಧಿಕಾರಿಗೆ ಕಳುಹಿಸಬಹುದಾಗಿದೆ.
ಇದನ್ನೂ ಓದಿ: ನೋಂದಣಿ ಇಲಾಖೆಯಲ್ಲಿ ಕೆಲವು ಬದಲಾವಣೆ: ದಾಖಲೆಗಳ ನೋಂದಣಿಗೆ ಕಾವೇರಿ-2 ಜಾರಿ
ಅಧಿಕಾರಿಗಳು ಪರಿಶೀಲಿಸಿದ ನೋಂದಾಣಿಗೆ ತಗಲುವ ವೆಚ್ಚವನ್ನು ಖಜಾನೆಗೆ ಆನ್ಲೈನ್ ಮೂಲಕ ಪಾವತಿಸಿ ನಮಗೆ ಬೇಕಾದ ದಿನಾಂಕ, ಸಮಯವನ್ನು ನಿಗದಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ನಿಗದಿತ ದಿನಾಂಕದಂದು ಕೆಲವೇ ನಿಮಿಷದಲ್ಲಿ ಭಾವಚಿತ್ರ, ಸಹಿ, ಹೆಬ್ಬೆಟ್ಟಿನ ಗುರುತು ತೆಗೆದುಕೊಂಡು ನೋಂದಾಣಿ ಮಾಡಿಕೊಡಲಾಗುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:29 pm, Sun, 9 February 25