ಕೆಪಿಎಸ್​​ಸಿ ಹಗರಣ: ಲಕ್ಷಾಂತರ ರೂಪಾಯಿಗಳಿಗೆ ಬಿಕರಿಯಾಗಿತ್ತು ಪ್ರಶ್ನೆ; ಸ್ಫೋಟಕ ಮಾಹಿತಿ ಬಹಿರಂಗ

ಕೆಪಿಎಸ್‍ಸಿ ಪಶುವೈದ್ಯಾಧಿಕಾರಿ ಪರೀಕ್ಷೆಯ ಅಕ್ರಮದ ತನಿಖೆ ತೀವ್ರಗೊಳಿಸಿರುವ ಸಿಐಡಿ, ಪರೀಕ್ಷೆಗೆ ಮುಂಚಿತವಾಗಿ ಲಕ್ಷಾಂತರ ರೂಪಾಯಿಗೆ ಪ್ರಶ್ನೆಪತ್ರಿಕೆ ಮಾರಾಟವಾಗಿದ್ದ ಸ್ಫೋಟಕ ಸತ್ಯ ಹಾಗೂ ಪ್ರಮುಖ ಆರೋಪಿ ಕನ್ನಾಳೆಯ ವಂಚನೆ ಜಾಲವನ್ನು ಬಯಲಿಗೆಳೆದಿದೆ. ಹಗರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಈಗಾಗಲೇ ಬರೋಬ್ಬರಿ 400ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಿದ್ದಾರೆ. ಆರೋಪಿಗಳು, ಅಭ್ಯರ್ಥಿಗಳು ಮತ್ತು ಕೆಪಿಎಸ್​ಸಿ ಸಿಬ್ಬಂದಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಕೆಪಿಎಸ್​​ಸಿ ಹಗರಣ: ಲಕ್ಷಾಂತರ ರೂಪಾಯಿಗಳಿಗೆ ಬಿಕರಿಯಾಗಿತ್ತು ಪ್ರಶ್ನೆ; ಸ್ಫೋಟಕ ಮಾಹಿತಿ ಬಹಿರಂಗ
ಕೆಪಿಎಸ್​​ಸಿ ಹಗರಣ
Image Credit source: Tv9 Kannada
Edited By:

Updated on: Sep 15, 2026 | 5:52 PM

ಬೆಂಗಳೂರು, ಸೆಪ್ಟೆಂಬರ್​​ 15: ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಕೆಪಿಎಸ್​​ಸಿ ಹಗರಣ ಸಂಬಂಧ ಸಿಐಡಿ ತನಿಖೆ ವೇಳೆ ಒಂದೊಂದೇ ಸ್ಫೋಟಕ ವಿಚಾರಗಳು ಬಯಲಾಗ್ತಿವೆ. ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ನೂರಾರು ಜನರ ಕೈ ಸೇರಿತ್ತು. ಪರೀಕ್ಷೆಗೂ 15 ದಿನಗಳ ಮೊದಲು ಎಕ್ಸಾಂ ಕಂಟ್ರೋಲರ್​​ ಜ್ಞಾನೇಂದ್ರ ಕುಮಾರ್​​ ಬಳಿಯಿಂದ ಬಸವರಾಜ್​​ ಕನ್ನಾಳೆ ಪ್ರಶ್ನೆಗಳನ್ನು ಪಡೆದಿದ್ದ. ಆ ಬಳಿಕ ಡೀಲ್​​ ಆದ ಅಭ್ಯರ್ಥಿಗಳನ್ನು ರೆಸಾರ್ಟ್​​ಗೆ ಕನ್ನಾಳೆ ಕರೆದೊಯ್ದಿದ್ದು, ಅವರ ಬಳಿ ಉತ್ತರ ಬರೆಸಿದ್ದ. ಹೀಗೆ ಟ್ರೈನಿಂಗ್​​ ಪಡೆದ ಅಭ್ಯರ್ಥಿಗಳು ಬೇರೆಯವರಿಗೆ 3-5 ಲಕ್ಷ ರೂಪಾಯಿಗಳ ವರೆಗೂ ಪ್ರಶ್ನೆಗಳನ್ನು ಮರು ಮಾರಾಟ ಮಾಡಿದ್ದರು. ಎಕ್ಸಾಂ ಸೆಂಟರ್​​ ಬಳಿಯೂ ಪ್ರಶ್ನೆಗಳ ಬಿಕರಿ ನಡೆದಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.

400ಕ್ಕೂ ಹೆಚ್ಚು ಮಂದಿಯ ವಿಚಾರಣೆ

ಹಗರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಬರೋಬ್ಬರಿ 400ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಿದ್ದಾರೆ. ಆರೋಪಿಗಳು, ಅಭ್ಯರ್ಥಿಗಳು ಮತ್ತು ಕೆಪಿಎಸ್​ಸಿ ಸಿಬ್ಬಂದಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಡೀಲ್​​ ಆದ ಅಭ್ಯರ್ಥಿಗಳಿಗೆ ಬಸವರಾಜ್​​ ಕನ್ನಾಳೆ ಟ್ರೈನಿಂಗ್​​ ನೀಡಿದ್ದ ದೇವನಹಳ್ಳಿಯ ರೆಸಾರ್ಟ್​​ನ ಸಿಸಿಟಿವಿ ಡಿವಿಆರ್​​ನ ಸೀಜ್​​ ಮಾಡಲಾಗಿದೆ. ಜೊತೆಗೆ ಐ ವಿಟ್ನೆಸ್​​ ಆಗಿ ಸೆಕ್ಯೂರಿಟಿ ಗಾರ್ಡ್​​ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಪರೀಕ್ಷೆಗೂ ಮುನ್ನ ಅಭ್ಯರ್ಥಿಗಳನ್ನು ರೆಸಾರ್ಟ್​​ಗೆ ಕರೆತಂದಿದ್ದ ಕ್ಯಾಬ್​​ ಚಾಲಕರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಸಾಲದ್ದಕ್ಕೆ ಕನ್ನಾಳೆ ರೆಸಾರ್ಟ್​​ಗೆ ಓಡಾಡಿದ್ದ ಕಾರನ್ನೂ ಸೀಜ್​​ ಮಾಡಲಾಗಿದೆ.

ಇದನ್ನೂ ಓದಿ: ಕೆಪಿಎಸ್ಸಿ ರದ್ದುಗೊಳಿಸುವ ಕುರಿತು ಸಂಪುಟದಲ್ಲಿ ಚರ್ಚೆ: ಸಚಿವ ಈಶ್ವರ್ ಖಂಡ್ರೆ ಅವರಿಂದಲೇ ಮಾಹಿತಿ ಬಹಿರಂಗ

ಪತ್ನಿ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಐಟಿ ರಿಟರ್ನ್

ಬಹಳ ಕಡಿಮೆ ಸಮಯದಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಕನ್ನಾಳೆ ಸಂಪಾದಿಸಿದ್ದು, ತನ್ನ ಪತ್ನಿಯ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಐಟಿ ರಿಟರ್ನ್​​ ಫೈಲ್​​ ಮಾಡಿದ್ದ. ಈ ಬಗ್ಗೆ ಸಿಐಡಿ ಅಧಿಕಾರಿಗಳು ವಿಚಾರಿಸಿದಾಗ, ಇದೆಲ್ಲ ಹಾಲಿನ ಹಣ ಎಂದಿದ್ದಾನೆ. ತನ್ನ ಬಳಿ ಹಸು, ಎಮ್ಮೆಗಳಿವೆ. ದಿನಕ್ಕೆ 400 ಲೀಟರ್​​ ಹಾಲಿನ ವ್ಯಾಪಾರ ನಡೆಸುತ್ತೇನೆ. ಜೊತೆಗೆ ತನ್ನದು ಟ್ರಾವೆಲ್​​ ಉದ್ಯಮ ಇರುವ ಬಗ್ಗೆಯೂ ಕನ್ನಾಳೆ ಹೇಳಿಕೊಂಡಿದ್ದಾನಂತೆ. ಇನ್ನು ಬಸವರಾಜ್​​ ಕನ್ನಾಳೆ 10 ದಿನ ಪೊಲೀಸ್​​ ಕಸ್ಟಡಿಯಲ್ಲಿದ್ದರೂ ಪ್ರಕರಣಕ್ಕೆ ಬೇಕಾದ ಪ್ರಮುಖ ಸಾಕ್ಷಿಗಳು ಸಿಕ್ಕಿಲ್ಲ. ಇಡಿ ದಾಳಿ ಭಯದಲ್ಲಿ ಶ್ರೀರಂಗಪಟ್ಟಣದ ಕಾವೇರಿ ನದಿ ಬಳಿ ಮೊಬೈಲ್​​, ಪೆನ್​​ಡ್ರೈವ್​​ ಎಸೆದಿದ್ದೇನೆ ಎಂಬ ಬಗ್ಗೆ ಆತ ಹೇಳಿದ್ದಾನೆ. ಈ ಸಂಬಂಧ ಸಿಐಡಿ ಹುಡುಕಾಡಿದಾಗ ಅವನ್ನು ನಾಶಪಡಿಸಿರುವ ಯಾವುದೇ ಸಾಕ್ಷ್ಯ ಸಿಕ್ಕಿಲ್ಲವಂತೆ. ಹೀಗಾಗಿ ಪ್ರಮುಖ ಸಾಕ್ಷ್ಯವನ್ನು ಕನ್ನಾಳೆ ಬಚ್ಚಿಟ್ಟಿರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Loading...
Unable to load recommendations.
Follow Us