
ಬೆಂಗಳೂರು, ಅಕ್ಟೋಬರ್ 07: ಕರ್ನಾಟಕ ಲೋಕಸೇವಾ ಆಯೋಗದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಸದಸ್ಯೆ ಬಿ.ವಿ.ಗೀತಾರನ್ನು ಅಕ್ಟೋಬರ್ 19ರ ವರೆಗೆ ಇಡಿ ಕಸ್ಟಡಿಗೆ ನೀಡಿ ಬೆಂಗಳೂರಿನ 4ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ. ತನಿಖೆಗೆ ಸಹಕಾರ ನೀಡುವಂತೆ ಇಬ್ಬರಿಗೂ ಜಡ್ಜ್ ತಿಳಿಸಿದ್ದು, ಸುಮ್ಮನೆ ಮೆಡಿಕಲ್ ರಿಪೋರ್ಟ್ ತಗೊಂಡು ಬರಬಾರದು ಎಂದು ಹೇಳಿದ್ದಾರೆ. ಜೊತೆಗೆ ಕಸ್ಟಡಿಯಲ್ಲಿದ್ದಾಗ ಆರೋಗ್ಯ ತಪಾಸಣೆ ನಡೆಸಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಜಡ್ಜ್ ಸೂಚಿಸಿದ್ದಾರೆ.
ಪ್ರಕರಣದ ತನಿಖೆ ವಿಚಾರದಲ್ಲಿ ಕೇಂದ್ರದ ತನಿಖಾ ತಂಡ, ರಾಜ್ಯದ ತನಿಖಾ ತಂಡದ ನಡುವೆ ಪೈಪೋಟಿ ನಡೆಯುತ್ತಿದೆ. KPSC ನೇಮಕಾತಿ ಅಕ್ರಮ ಸಂಬಂಧ ಯಾವುದೇ ಹಣ ರಿಕವರಿ ಆಗಿಲ್ಲ. ನಮ್ಮ ಕಕ್ಷಿದಾರರು ಎಲ್ಲೂ ಹೋಗಿಲ್ಲ, ಇಲ್ಲೇ ಇರುತ್ತಾರೆ. ತನಿಖೆಗೆ ಸಹಕಾರ ನೀಡುತ್ತಾರೆ, ಹಾಗಾಗಿ ಕಸ್ಟಡಿಗೆ ನೀಡುವುದು ಬೇಡ ಎಂದು ಶಿವಶಂಕರಪ್ಪ ಪರ ವಕೀಲರು ವಾದಿಸಿದ್ದರು. ಜೊತೆಗೆ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: ಪ್ರಮುಖ ಆರೋಪಿಗಳ ಪಾತ್ರ ತನಿಖೆ ವೇಳೆ ಬಟಾಬಯಲು
ತನಿಖೆಗೆ ಸಹಕರಿಸದೆ ನೆಪ ಹೇಳಿ ಜಾಮೀನು ಕೇಳುತ್ತಿದ್ದಾರೆ. ಸರಿಯಾಗಿ ತನಿಖೆಗೆ ಸಹಕಾರ ನೀಡಿದ್ರೆ ಕಸ್ಟಡಿಗೆ ಕೇಳುತ್ತಿರಲಿಲ್ಲ.ಬ್ಯಾಂಕ್ಗೆ ಹಣ ಡೆಪಾಸಿಟ್ ಮಾಡಿರುವುದು ಶಿವಶಂಕರಪ್ಪ ಸಹಾಯಕ. ಜೊತೆಗೆ ಗೀತಾ ಪುತ್ರಿ ಬ್ಯಾಂಕ್ಗೆ ಹಣ ಡೆಪಾಸಿಟ್ ಮಾಡಿರುವ ದಾಖಲೆಯೂ ಲಭ್ಯವಾಗಿದೆ.ಬ್ಯಾಂಕ್ಗೆ ಹಣ ಡೆಪಾಸಿಟ್ ಮಾಡಿ ಅಕ್ನಾಲೆಡ್ಜ್ಮೆಂಟ್ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಪರ ವಕೀಲ ಮಧುರಾವ್ ವಾದಿಸಿದ್ದರು. ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಅಲ್ಲದೆ ಉತ್ತರ ಪತ್ರಿಕೆಯನ್ನೂ ನೀಡಿದ್ದಾರೆ. ವಿನುತಾ ಹಾಲಪ್ಪ, ನಂದೀಶ್ ಉಲ್ಕುಕಟ್ಟೆ OMR ಶೀಟ್ ತಿದ್ದಲಾಗಿದೆ. ಆ ಸಂಬಂಧ ಈಗಾಗಲೇ ಅವರ ಹೇಳಿಕೆ ಪಡೆಯಲಾಗಿದೆ. 2026ರ ಜ.8ರಂದು ಅಭ್ಯರ್ಥಿಗಳಿಗೆ ಸರಿಯಾದ ಉತ್ತರ ನೀಡಲಾಗಿದ್ದು, ಅಭ್ಯರ್ಥಿಗಳ ಅಂತಿಮ ಆಯ್ಕೆಗೆ ಮುನ್ನ ವಿನುತಾ ಮತ್ತು ಆಕೆಯ ತಂದೆ ಸಂಪರ್ಕಿಸಿ ಹೋಟೆಲ್ನಲ್ಲಿ ಭೇಟಿಯಾಗಿ ಶಿವಶಂಕರಪ್ಪ ಲಂಚದ ಹಣ ಪಡೆದಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯ ಶಿವಶಂಕರಪ್ಪ ನಿವಾಸದಲ್ಲಿಯೂ ಭೇಟಿ ನಡೆದಿದೆ. ವಿನುತಾ ಹಾಲಪ್ಪರಿಂದ 50 ಲಕ್ಷ ಲಂಚಕ್ಕೆ ಡಿಮ್ಯಾಂಡ್ ಮಾಡಲಾಗಿದ್ದು, ಮೊದಲ ಹಂತದಲ್ಲಿ ಶಿವಶಂಕರಪ್ಪ 10 ಲಕ್ಷ ಪಡೆದಿದ್ದರು.
ಪರೀಕ್ಷೆಗೂ ಮುನ್ನ ಅಭ್ಯರ್ಥಿಗಳನ್ನು ರೆಸಾರ್ಟ್, ಹೋಟೆಲ್ನಲ್ಲಿರಿಸಿದ್ದರು. ಆ ವೇಳೆ ಅಭ್ಯರ್ಥಿಗಳ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಎಕ್ಸಾಂ ದಿನ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಡ್ರಾಪ್ ಮಾಡಿದ್ದಾರೆ. 80 ಲಕ್ಷ ಹಣಕ್ಕೆ ಬೇಡಿಯಿಟ್ಟು ಮೊದಲ ಕಂತಿನಲ್ಲಿ 40 ಲಕ್ಷ ಪಡೆದಿದ್ದಾರೆ. ಕೆಲಸ ಸಿಗುವುದು ನಿಶ್ಚಿತವಾದ ಮೇಲೆ 40 ಲಕ್ಷ ನೀಡುವಂತೆ ಹೇಳಿದ್ದಾರೆ ಎಂದು ಸಂತ್ರಸ್ತ ಅಭ್ಯರ್ಥಿಗಳ ಪಟ್ಟಿ ಸಮೇತ ಕೋರ್ಟ್ಗೆ ಇಡಿ ಪರ ವಕೀಲರು ಮಾಹಿತಿ ನೀಡಿದ್ದಾರೆ. ಕನ್ನಡ ಮತ್ತು ಜನರಲ್ ಸೈನ್ಸ್ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದ್ದು, ಆರೋಪಿಗಳ ವಿರುದ್ಧ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಟೆಕ್ನಿಕಲ್ ಎವಿಡೆನ್ಸ್ ಲಭ್ಯವಾಗಿದೆ. ಕೆಪಿಎಸ್‌ಸಿ ಕಚೇರಿ ಮೇಲೆ ದಾಳಿ ವೇಳೆ ಮಹತ್ವದ ಸಾಕ್ಷ್ಯಗಳು ಸಿಕ್ಕಿದ್ದು, ಅಭ್ಯರ್ಥಿಗಳು ನೀಡಿದ್ದ ಬ್ಲಾಂಕ್ ಚೆಕ್ ಮತ್ತು ಪ್ರಾಮಿಸರಿ ನೋಟ್ ಪತ್ತೆಯಾಗಿವೆ. ಎಲ್ಲಾ ಅಂಶಗಳನ್ನು ಆಧರಿಸಿ ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ನೀಡಬೇಕು ಎಂದು ಮಧುರಾವ್ ವಾದಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಆರೋಪಿಗಳನ್ನು ಅಕ್ಟೋಬರ್ 19ರ ವರೆಗೆ ಇಡಿ ಕಸ್ಟಡಿಗೆ ನೀಡಿದ್ದು, ಅಂದು ಮಧ್ಯಾಹ್ನ 3ಕ್ಕೆ ಕೋರ್ಟ್ಗೆ ಹಾಜರುಪಡಿಸಲು ಜಡ್ಜ್ ಸೂಚಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:19 pm, Wed, 7 October 26