Meenakshi Negi: ಕರ್ನಾಟಕದ ಅರಣ್ಯ ಪಡೆಯ ಮೊದಲ ಮಹಿಳಾ ಮುಖ್ಯಸ್ಥರಾಗಿ ಮೀನಾಕ್ಷಿ ನೇಗಿ ನೇಮಕ
ಮಹಿಳೆಯರು ಈಗ ಹಲವು ಉನ್ನತ ಸ್ಥಾನಗಳನ್ನು ಏರುತ್ತಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಮಹಿಳಾ ಮುಖ್ಯ ಕಾರ್ಯದರ್ಶಿ ಆಗಿದ್ದಾರೆ. ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿಯೂ ಮಹಿಳೆಯರು ಕೆಲಸ ಮಾಡಿದ್ದಾರೆ. ಇಡೀ ಅರಣ್ಯ ಇಲಾಖೆಗೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಹಿರಿಯ ಐಎಫ್ಎಸ್ ಅಧಿಕಾರಿ ಮೀನಾಕ್ಷಿ ನೇಗಿ ಈಗ ಕರ್ನಾಟಕದ ಅರಣ್ಯ ಪಡೆಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಈ ಉನ್ನತ ಹುದ್ದೆಗೇರಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಬೆಂಗಳೂರು: ಕರ್ನಾಟಕದ ಅರಣ್ಯ ಪಡೆಗೆ ಪ್ರಥಮ ಮಹಿಳಾ ಮುಖ್ಯಸ್ಥೆಯಾಗಿ ಐಎಫ್ಎಸ್ ಅಧಿಕಾರಿ ಮೀನಾಕ್ಷಿ ನೇಗಿ ಅವರನ್ನು ನೇಮಕ ಮಾಡಲಾಗಿದೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಮೀನಾಕ್ಷಿ ನೇಗಿಯವರನ್ನು ನೇಮಕ ಮಾಡಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿರಿಯ ಐಎಫ್ಎಸ್ ಅಧಿಕಾರಿಯಾಗಿರುವ ಮೀನಾಕ್ಷಿ ನೇಗಿ ಮೂಲತಃ ಉತ್ತರಾಖಂಡದವರು. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿಯೂ ಆಗಿದ್ದ ಮೀನಾಕ್ಷಿ ಅವರನ್ನು ಆ ಸೇವೆಯಿಂದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಇದೀಗ ಕರ್ನಾಟಕದ ಅರಣ್ಯ ಪಡೆಗಳ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
1989ರ ಬ್ಯಾಚ್ನ ಐಎಫ್ಎಸ್ ಅಧಿಕಾರಿಯಾಗಿರುವ ಮೀನಾಕ್ಷಿ ನೇಗಿ ಆರಂಭದಲ್ಲೇ ಕರ್ನಾಟಕದಲ್ಲಿ ಅಧಿಕಾರ ವಹಿಸಿಕೊಂಡರು. ಕರ್ನಾಟಕ ಕೇಡರ್ನ ಅಧಿಕಾರಿಯಾಗಿ 35 ವರ್ಷಗಳಿಂದ ಅವರು ಸೇವೆ ಸಲ್ಲಿಸುತ್ತಿದ್ದಾರೆ. ದಕ್ಷ ಅಧಿಕಾರಿಯೆಂದು ಹೆಸರು ಮಾಡಿರುವ ಮೀನಾಕ್ಷಿ ನೇಗಿ ಬಳ್ಳಾರಿ, ಚಿಕ್ಕಮಗಳೂರು, ಮಂಡ್ಯದಲ್ಲಿ ಡಿಸಿಎಫ್ ಆಗಿ ಕೆಲಸ ಮಾಡಿದ್ದಾರೆ. ಬಳಿಕ ಕೇಂದ್ರ ಸರ್ಕಾರದ ಸೇವೆಗೆ ನಿಯೋಜನೆಗೊಂಡ ಅವರು ಆಯುಷ್ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದರು. ಕಳೆದ 2 ವರ್ಷಗಳಿಂದ ಅವರು ಕೇಂದ್ರ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

Meenakshi Negi Appointment
ಇದನ್ನೂ ಓದಿ: ಹೊಸ ವರ್ಷ ಸಂದರ್ಭದಲ್ಲಿ 67 ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ ಮಾಡಿದ ಸರ್ಕಾರ
ಇದೀಗ ಮತ್ತೆ ಕರ್ನಾಟಕ ಸರ್ಕಾರದ ಸೇವೆಗೆ ಮರಳಿರುವ ಮೀನಾಕ್ಷಿ ನೇಗಿ ಬಹಳ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಮೀನಾಕ್ಷಿ ನೇಗಿ ಅವರ ಪತಿ ವಿಜಯ ಶರ್ಮಾ ಕೂಡ ಕರ್ನಾಟಕ ಕೇಡರ್ನ ಐಎಫ್ಎಸ್ ಅಧಿಕಾರಿ. ಅವರೀಗ ನಿವೃತ್ತರಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




