ಬುರ್ಖಾ ಧರಿಸಿ ಸ್ನೇಹಿತನೊಂದಿಗೆ ಪಾರ್ಕ್ನಲ್ಲಿ ಕುಳಿತ ಯುವತಿ: ಐವರು ಯುವಕರಿಂದ ನಿಂದನೆ, ಹಲ್ಲೆ ಆರೋಪ
ಬೆಂಗಳೂರಿನ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯ ಪಾರ್ಕ್ವೊಂದರಲ್ಲಿ ನಡೆದ ನೈತಿಕ ಪೊಲೀಸ್ಗಿರಿ ವಿಚಾರವಾಗಿ ಅಪ್ರಾಪ್ತ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಯುವತಿಯನ್ನು ನಿಂದಿಸಿ, ಯುವಕನ ಮೇಲೆ ಹಲ್ಲೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು, ಏಪ್ರಿಲ್ 11: ನಗರದಲ್ಲಿ ನೈತಿಕ ಪೊಲೀಸ್ಗಿರಿ (moral policing) ನಡೆಸಿದ್ದ ಓರ್ವ ಅಪ್ರಾಪ್ತ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ (arrest). ಮಹೀಮ್, ಅಫ್ರೀದಿ, ವಾಸೀಂ, ಅಂಜುಂ ಹಾಗೂ ಅಪ್ರಾಪ್ತ ಬಂಧಿತರು. ಓರ್ವ ಯುವತಿ ಬುರ್ಖಾ ಧರಿಸಿ ಸ್ನೇಹಿತನ ಜತೆ ಬೈಕ್ನಲ್ಲಿ ಕೂತಿದ್ದಳು. ಈ ವೇಳೆ ಬಂದ ಐವರು ಮುಸ್ಲಿಂ ಯುವಕರು ಆಕೆಯನ್ನ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆಗೆ ಯತ್ನಿಸಿದೆ. ಯುವತಿ ದೂರಿನ ಮೇರೆಗೆ ಸದ್ಯ ಚಂದ್ರಾಲೇಔಟ್ ಠಾಣೆ ಪೊಲೀಸರಿಂದ ಐವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಶನಿವಾರ ಸಂಜೆ ಸುವರ್ಣ ಲೇಔಟ್ ಪಾರ್ಕ್ನಲ್ಲಿ ಘಟನೆ ನಡೆದಿದೆ. ಬುರ್ಖಾ ಧರಿಸಿ ಹಿಂದೂ ಯುವಕನ ಜೊತೆ ಯಾಕೆ ಕೂತಿದ್ದೀಯಾ? ನಿಮ್ಮ ಮನೆಯವರ ಮೊಬೈಲ್ ನಂಬರ್ ಕೊಡು ಎಂದು ಮುಸ್ಲಿಂ ಯುವಕರ ಗುಂಪು ಕ್ಯಾತೆ ತೆಗೆದಿದೆ.
ಇದನ್ನೂ ಓದಿ: ಹಾವೇರಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್; ಗ್ಯಾಂಗ್ ರೇಪ್ ಆರೋಪ
ಈ ವೇಳೆ ನನ್ನ ಕ್ಲಾಸ್ಮೇಟ್ ಜತೆ ಮಾತಾಡ್ತಿದ್ದೀನಿ ಎಂದಿದ್ದಾಳೆ. ನಮ್ಮ ಮನೆಯವರ ನಂಬರ್ ನಿಮಗ್ಯಾಕೆ ಕೊಡಬೇಕು ಎಂದು ಪ್ರಶ್ನಿಸಿದ್ದಾಳೆ. ಇದೇ ವೇಳೆ ಯುವತಿ ಜೊತೆಗಿದ್ದ ಯುವಕನ ಮೇಲೆ ಯುವಕರ ಗುಂಪು ಹಲ್ಲೆಗೆ ಯತ್ನಿಸಿದೆ. ಅಲ್ಲದೇ ಯುವಕ ಯುವತಿ ಬೈಕ್ನಲ್ಲಿ ಕೂತು ಮಾತನಾಡುತ್ತಿರುವ ವಿಡಿಯೋವನ್ನು ಆರೋಪಿಗಳು ವೈರಲ್ ಮಾಡಿದ್ದಾರೆ.
ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಹೇಳಿದ್ದಿಷ್ಟು
ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಹೇಳಿಕೆ ನೀಡಿದ್ದು, ಮೊನ್ನೆ ಪಾರ್ಕ್ ಎದುರುಗಡೆ ಒಂದು ಹುಡುಗ, ಹುಡುಗಿ ಬೈಕ್ ಮೇಲೆ ಕೂತಿರ್ತಾರೆ. ಅದನ್ನ ಒಂದಷ್ಟು ಜನ ಪ್ರಶ್ನೆ ಮಾಡುತ್ತಾರೆ. ಇಲ್ಲಿ ಏಕೆ ಬಂದಿದೀಯಾ, ಮನೆಯಲ್ಲಿ ಹೇಳಿ ಬಂದಿದ್ದೀಯಾ ಅಂತಾ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಯುವತಿಯಿಂದ ದೂರು ಪಡೆಯಲಾಗಿದೆ. ನಾಲ್ವರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾದಲ್ಲಿ ಜೋಡಿಯ ರೋಮ್ಯಾನ್ಸ್ ವಿಡಿಯೋ ವೈರಲ್: ಛೀ, ಥೂ ಎಂದ ನೆಟ್ಟಿಗರು
ಹಲ್ಲೆ ಮಾಡಿರುವ ಬಗ್ಗೆ ಕೂಡ ಆರೋಪವಿದೆ. ಎಲ್ಲರೂ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವವರಾಗಿದ್ದಾರೆ. ಆರೋಪಿಗಳು ಗ್ಯಾರೆಜ್, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಅವರು ಕೂತಿದ್ದು ತಪ್ಪು, ಹೊಡೆದಿದ್ದು ತಪ್ಪು ಎಂದ ಸ್ಥಳೀಯ ವ್ಯಕ್ತಿ
ಘಟನೆ ಕುರಿತಾಗಿ ಸ್ಥಳೀಯ ವ್ಯಕ್ತಿ ಶಾಬಾಜ್ ಖಾನ್ ಎಂಬುವವರು ಪ್ರತಿಕ್ರಿಯಿಸಿದ್ದು, ಹುಡುಗ ಹುಡಗಿ ಬಂದು ಕೂತಿದ್ದಾರೆ. ಅವರ ಅಪ್ಪ ಅಮ್ಮನಿಗೆ ಹೇಳಬಹುದಾಗಿತ್ತು. ಅವರು ಕೂತಿದ್ದು ತಪ್ಪು, ಹೊಡೆದಿದ್ದು ತಪ್ಪು. ಇದು ಸೆನ್ಸಿಟಿವ್ ವಿಚಾರ, ಹಿಂದೂ ಮುಸ್ಲಿಂ ಕೇಸ್. ಪಬ್ಲಿಕ್ ಏರಿಯಾದಲ್ಲಿ ಬಂದು ಕೂರಬಾರದಾಗಿತ್ತು. ಯಾರೋ ಒಬ್ಬ ಮಾಡೋದು ಎಲ್ಲರಿಗೂ ಸಮಸ್ಯೆ ಆಗಬಾರದು. ಪೊಲೀಸರಿಗೆ ಮಾಹಿತಿ ನೀಡಿದರೆ ಅವರೇ ಬರ್ತಾರೆ. ಅವರು ಸ್ಟೂಡೆಂಟ್, ಜಾಬ್ ಮಾಡ್ತಿದ್ರು ಅಂತಾರೆ. ಆ ಹುಡುಗಿ ಹುಡುಗರೆಲ್ಲ ಒಂದೇ ಏರಿಯಾದವರು ಎಂದು ಹೇಳಿದ್ದಾರೆ.
ಸ್ಥಳೀಯ ನಿವಾಸಿ ಹೇಳಿದ್ದೇನು?
ಮತ್ತೋರ್ವ ಸ್ಥಳೀಯ ನಿವಾಸಿ ಅಭಿಷೇಕ್ ಎಂಬುವವರು ಮಾತನಾಡಿ, ಹುಡುಗ-ಹುಡುಗಿ ಬಂದು ಕೂತಿರ್ತಾರೆ, ಹೇಳಿದರೂ ಹೋಗಲ್ಲ. ಬೀಟ್ ಪೊಲೀಸರು ಕೂಡ ಬರ್ತಿರ್ತಾರೆ, ಆದರೂ ಮತ್ತೆ ಹುಡುಗ ಹುಡುಗಿಯರು ಬರ್ತಾರೆ. ಕುಡಿದು ಬಾಟಲ್ಗಳನ್ನ ಬೀಸಾಕಿ ಹೋಗುತ್ತಾರೆ. ಮೊನ್ನೆ ನಡೆದ ಘಟನೆಯನ್ನ ರೀಲ್ಸ್ನಲ್ಲಿ ನೋಡಿದೆ ಎಂದಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:17 pm, Fri, 11 April 25