ಬೆಂಗಳೂರು ಪೊಲೀಸ್ ಆಯುಕ್ತರನ್ನೇ ಬಿಡದ ಸೈಬರ್ ಖದೀಮರು: ಬಿ ದಯಾನಂದ ಹೆಸ್ರಲ್ಲಿ ಫೇಕ್ ಅಕೌಂಟ್ ಓಪನ್
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರ ಹೆಸರಿನಲ್ಲಿ ಖದೀಮರು ನಕಲಿ ಫೇಸ್ಬುಕ್ ಖಾತೆ ತೆರೆದಿರುವಂತಹ ಘಟನೆ ನಡೆದಿದೆ. ಹಿಂದಿ ಭಾಷೆಯಲ್ಲಿ ಖಾತೆಯನ್ನು ತೆರೆಯಲಾಗಿದ್ದು, ಹಲವರಿಗೆ ರಿಕ್ವೆಸ್ಟ್ ಕಳುಹಿಸಲಾಗಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು, ಏಪ್ರಿಲ್ 11: ಸರ್ಕಾರಿ ಅಧಿಕಾರಿಗಳಂತೆ ನಟಿಸಿ ನಿಮ್ಮನ್ನು ಯಾಮಾರಿಸಬಹುದು. ಹಾಗಾಗಿ ಎಚ್ಚರವಾಗಿರುವಂತೆ ಇತ್ತೀಚೆಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ (B Dayananda) ಅವರು ಹೆಚ್ಚುತ್ತಿರುವ ಸೈಬರ್ ಅಪರಾಧದ (Cyber crime) ಬಗ್ಗೆ ಕಿವಿಮಾತು ಹೇಳಿದ್ದರು. ಆದರೆ ಇದೀಗ ಸೈಬರ್ ಖದೀಮರು ಅವರನ್ನು ಬಿಟ್ಟಿಲ್ಲ. ಫೇಸ್ಬುಕ್ನಲ್ಲಿ ಬಿ.ದಯಾನಂದ ಹೆಸರಿನಲ್ಲಿ ಫೇಕ್ ಅಕೌಂಟ್ ಓಪನ್ ಮಾಡಿರುವ ವಂಚಕರು ಜನರಿಗೆ ರಿಕ್ವೆಸ್ಟ್ ಕಳಿಸುತ್ತಿರುವ ಘಟನೆಯೊಂದು ನಡೆದಿದೆ.
ಹೌದು! ಸೈಬರ್ ಖದೀಮರು ಬೆಂಗಳೂರು ಪೊಲೀಸ್ ಆಯುಕ್ತರನ್ನು ಬಿಟ್ಟಿಲ್ಲ. ಫೇಸ್ಬುಕ್ನಲ್ಲಿ ಬಿ.ದಯಾನಂದ ಹೆಸರಿನಲ್ಲಿ ನಕಲಿ ಖಾತೆ ತೆರಿದ್ದಾರೆ. ಹಿಂದಿ ಭಾಷೆಯಲ್ಲಿ ಅಕೌಂಟ್ ಓಪನ್ ಮಾಡಿರುವ ಖದೀಮರು ಜನರಿಗೆ ರಿಕ್ವೆಸ್ಟ್ ಕಳಿಸುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿದೆ.
ಬಿ.ದಯಾನಂದ್ ಹೆಸರಲ್ಲಿ ನಕಲಿ ವಾಟ್ಸ್‌ಆ್ಯಪ್ ಖಾತೆ
ಇತ್ತೀಚೆಗೆ ಕೂಡ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಹೆಸರಿನಲ್ಲೇ ನಕಲಿ ವಾಟ್ಸ್‌ಆ್ಯಪ್ ಖಾತೆ ತೆರೆದಿದ್ದ ಖದೀಮರು ವಂಚನೆಗೆ ಮುಂದಾಗಿದ್ದರು. ನಕಲಿ ವಾಟ್ಸ್‌ಆ್ಯಪ್ ಖಾತೆ ತೆರೆದಿದ್ದ ಖದೀಮರು ಪೊಲೀಸ್ ಕಮಿಷನರ್ ಪೋಟೋವನ್ನು ವಾಟ್ಸ್ ಆ್ಯಪ್ ಡಿಪಿಗೆ ಹಾಕಿದ್ದರು.
ಇದನ್ನೂ ಓದಿ: ಶಿವಮೊಗ್ಗ ಈದ್ಗಾ ಮೈದಾನ ವಿವಾದ ಕೊನೆಗೂ ಸುಖಾಂತ್ಯ: ನಿರ್ಬಂಧ ತೆರವು, ಸಾರ್ವಜನಿಕರಿಗೆ ಮುಕ್ತ ಪ್ರವೇಶ
ಬಳಿಕ ನಾನು ಬಿ.ದಯಾನಂದ್, ಬೆಂಗಳೂರು ಪೊಲೀಸ್ ಕಮಿಷನರ್ ಎಂದು ಆಪ್ತರಿಗೆ, ಸಾರ್ವಜನಿಕರಿಗೆ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಜನರಿಗೆ ಮೆಸೇಜ್ ಕಳುಹಿಸಲಾಗಿತ್ತು. ಆ ಮೂಲಕ ಕಮಿಷನರ್ ಹೆಸರಲ್ಲಿ ಹಣ ವಸೂಲಿಗೆ ಮುಂದಾಗಿದ್ದರು ಎಂದು ಶಂಕಿಸಲಾಗಿತ್ತು. ಬಳಿಕ ಈ ವಿಚಾರ ಸೈಬರ್ ಕ್ರೈಂ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ನಕಲಿ ಖಾತೆಯನ್ನು ಡಿ-ಆಕ್ಟಿವೇಟ್ ಮಾಡಲಾಗಿತ್ತು. ಸೈಬರ್ ಕ್ರೈಂ ಪೊಲೀಸರಿಂದ ಆರೋಪಿಗಾಗಿ ಶೋಧ ನಡೆದಿತ್ತು.
ಕರ್ನಾಟಕದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಆಯುಕ್ತ ಬಿ ದಯಾನಂದ ಹೇಳಿದ್ದರು. ಸರ್ಕಾರಿ ಅಧಿಕಾರಿಗಳಂತೆ ನಟಿಸಿ ನಿಮ್ಮನ್ನು ಯಾಮಾರಿಸಬಹುದು. ಹಣಕ್ಕೆ ಬೇಡಿಕೆ ಇಡಬಹುದು. ಹಾಗಾಗಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಪಿಂಕ್ ಐ ಪ್ರಕರಣ: ಏನಿದು? ಏನೇನು ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ
ಡಿಜಿಟಲ್ ಅರೆಸ್ಟ್ ಎಂಬ ಪರಿಕಲ್ಪನೆಯೂ ಭಾರತೀಯ ಕಾನೂನು ಅಥವಾ ಸಂವಿಧಾನದಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ಆಯುಕ್ತ ದಯಾನಂದ ಸ್ಪಷ್ಟಪಡಿಸಿದರು. ಪೊಲೀಸ್ ಕ್ರಮಗಳನ್ನು ಕಾನೂನುಗಳಿಂದ ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ. ನೋಟಿಸ್ ಅಥವಾ ದೈಹಿಕವಾಗಿ ಮಾತ್ರ ಬಂಧಿಸಿಲಾಗುತ್ತದೆ. ನಂತರ 24 ಗಂಟೆಗಳ ಒಳಗೆ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು.
ವರದಿ: ಪ್ರದೀಪ್ ಚಿಕ್ಕಾಟೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.