
ಬೆಂಗಳೂರು, ಆಗಸ್ಟ್27: ಬಮೂಲ್ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಲ್ಲಿ 1,600ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿದ ಪ್ರಕರಣದ ಬೆನ್ನಲ್ಲೇ, ಕೆಎಂಎಫ್‌ನ (KMF) ನಂದಿನಿ ಪಶು ಆಹಾರ ಖರೀದಿಸಲು ರೈತರ ಮೇಲೆ ಒತ್ತಡ ಹೇರಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪಶು ಆಹಾರ ಖರೀದಿಸದ ರೈತರಿಂದ ಹಾಲು ಸ್ವೀಕರಿಸದೆ ಒತ್ತಡ ತಂತ್ರ ಅನುಸರಿಸಲಾಗುತ್ತಿತ್ತು ಎಂದು ಕೆಲ ರೈತರು ಆರೋಪಿಸಿದ್ದಾರೆ. ಕಳಪೆ ಗುಣಮಟ್ಟದ ಪಶು ಆಹಾರದ ಬಗ್ಗೆ ‘ಟಿವಿ9’ ವರದಿ ಮಾಡಿ ಗಮನ ಸೆಳೆದಿತ್ತು. ಅದಾದ ಬೆನ್ನಲ್ಲೇ ಕೆಎಂಎಫ್‌ನ ನಾಲ್ವರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಕಳಪೆ ಗುಣಮಟ್ಟದ ಕಚ್ಚಾ ವಸ್ತುಗಳ ಬಳಕೆ ಮತ್ತು ಅವ್ಯವಹಾರದ ಆರೋಪಗಳು ಈ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬಂದಿದ್ದವು.
ಕೆಎಂಎಫ್ ಅಡಿ ಕಾರ್ಯನಿರ್ವಹಿಸುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ರೈತರಿಗೆ ನಂದಿನಿ ಪಶು ಆಹಾರ ಖರೀದಿಸುವಂತೆ ಒತ್ತಡ ಹೇರಲಾಗುತ್ತಿತ್ತು ಎಂಬ ಆರೋಪ ಇದೀಗ ಮುನ್ನೆಲೆಗೆ ಬಂದಿದೆ. ಪಶು ಆಹಾರ ಖರೀದಿಸುವುದರಿಂದ ಸೊಸೈಟಿಗಳಿಗೆ ಕಮಿಷನ್ ದೊರೆಯುತ್ತಿತ್ತು. ಹೀಗಾಗಿ ಹಾಲು ಉತ್ಪಾದಕರ ಮೇಲೆ ಆಹಾರ ಖರೀದಿಸುವಂತೆ ಒತ್ತಡ ಹೇರಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ನಂದಿನಿ ಪಶು ಆಹಾರ ಖರೀದಿಸಲು ನಿರಾಕರಿಸಿದರೆ, ಅಂತಹ ರೈತರಿಂದ ಹಾಲು ಸ್ವೀಕರಿಸದಿರುವ ಮೂಲಕ ಒತ್ತಡ ಹೇರುತ್ತಿದ್ದರು ಎಂಬ ಗಂಭೀರ ಆರೋಪವನ್ನೂ ರೈತರು ಮಾಡಿದ್ದಾರೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಆನೇಕಲ್, ನೆಲಮಂಗಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಶುಗಳ ಸಾವಿಗೆ ಕಳಪೆ ಗುಣಮಟ್ಟದ ಪಶು ಆಹಾರ ಕಾರಣ ಎಂಬ ಆರೋಪ ಕೇಳಿಬಂದಿದೆ. ಆಹಾರ ಸೇವಿಸಿದ ಬಳಿಕ ಹಲವು ಪಶುಗಳು ಅನಾರೋಗ್ಯಕ್ಕೆ ತುತ್ತಾಗಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈ ನಡುವೆ ಕೆಎಂಎಫ್‌ನ ರಾಜಾನುಕುಂಟೆ ಪಶು ಆಹಾರ ಘಟಕದಿಂದ ಪೂರೈಕೆಯಾಗಿದ್ದ ಸುಮಾರು 89 ಸಾವಿರ ಮೆಟ್ರಿಕ್ ಟನ್ ಪಶು ಆಹಾರವನ್ನು ವಾಪಸ್ ಪಡೆಯಲಾಗಿದೆ ಎಂದು ವರದಿಯಾಗಿದೆ.
ಕಳಪೆ ಗುಣಮಟ್ಟದ ಆಹಾರ ಉತ್ಪಾದನೆಗೆ ಕಾರಣವಾದ ಅಂಶಗಳು ಹಾಗೂ ಘಟಕದಲ್ಲಿ ನಡೆದಿರುವುದಾಗಿ ಆರೋಪಿಸಲಾದ ಅವ್ಯವಹಾರಗಳ ಕುರಿತು ಕೆಎಂಎಫ್ ಆಂತರಿಕ ತನಿಖೆ ಮುಂದುವರಿಸಿದೆ. ಪ್ರಕರಣದಲ್ಲಿ ಈಗಾಗಲೇ ನಾಲ್ವರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.
ಇದನ್ನೂ ಓದಿ: ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ಟಿವಿ9 ವರದಿ ಬಳಿಕ ನಾಲ್ವರು ಅಧಿಕಾರಿಗಳ ಅಮಾನತು
ಪಶು ಆಹಾರ ಖರೀದಿಸಲು ರೈತರ ಮೇಲೆ ಒತ್ತಡ ಹೇರಲಾಗಿತ್ತೇ? ಕಳಪೆ ಆಹಾರದ ಪೂರೈಕೆಯಿಂದಲೇ ಪಶುಗಳ ಸಾವು ಸಂಭವಿಸಿತೇ? ಈ ಆರೋಪಗಳ ಹಿಂದೆ ಯಾರು ಇದ್ದಾರೆ ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ. ನಾಲ್ವರು ಅಧಿಕಾರಿಗಳ ಅಮಾನತಿಗೆ ಮಾತ್ರ ಕೆಎಂಎಫ್‌ನ ಕ್ರಮ ಸೀಮಿತವಾಗುತ್ತದೆಯೇ ಅಥವಾ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ