ವೀರಶೈವ ಲಿಂಗಾಯತ ಪಂಚಮಸಾಲಿ ರಾಜ್ಯಾಧ್ಯಕ್ಷರಾಗಿ ಜಿ.ಪಿ.ಪಾಟೀಲ್ ಆಯ್ಕೆ: ಪ್ರತಿಧ್ವನಿಸಿದ 2ಎ ಮೀಸಲಾತಿ ಆಗ್ರಹ
ಎರಡು ಪೀಠ ಮತ್ತು ಪದಾಧಿಕಾರಿಗಳು ಒಂದೇ ಉದ್ದೇಶಕ್ಕಾಗಿ ಶ್ರಮಿಸಲಿದ್ದಾರೆ. ಮೀಸಲಾತಿ ವಿಚಾರದಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಬೆಂಗಳೂರು: ನಗರದಲ್ಲಿ ಬುಧವಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಗೌರವಾಧ್ಯಕ್ಷರಾಗಿ ಬಾವಿ ಬೆಟ್ಟಪ್ಪ, ರಾಜ್ಯಾಧ್ಯಕ್ಷರಾಗಿ ಜಿ.ಪಿ.ಪಾಟೀಲ್, ಕಾರ್ಯಾಧ್ಯಕ್ಷರಾಗಿ ಸೋಮನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ಸೋಮಶೇಖರ ಕೋತಂಬರಿ ಆಯ್ಕೆಯಾದರು. ಸಭೆಯಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಶಾಸಕ ಅರುಣ್ ಕುಮಾರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಮರುಗೇಶ್ ನಿರಾಣಿ, ಸಮಾಜದ ಪ್ರಮುಖರು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದೇವೆ. 2ಎ ಮೀಸಲಾತಿಗಾಗಿ ಕೂಡಲಸಂಗಮ ಗುರುಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರದ ವಚನಾನಂದ ಸ್ವಾಮೀಜಿ ಹೋರಾಟ ಮಾಡಿದ್ದಾರೆ. ಒಂದೇ ಪೀಠದಿಂದ ಎಲ್ಲಾ ಕಡೆ ಹೋಗುವುದಕ್ಕೆ ಆಗುವುದಿಲ್ಲ. ಹಾಗಾಗಿ ಎರಡು ಪೀಠಗಳು ಆಗಿವೆ. ಅವರ ಗುರಿ, ನಮ್ಮ ಗುರಿಗಳು ಒಂದೇ ಎಂದು ಸ್ಪಷ್ಟಪಡಿಸಿದರು.
ಮೀಸಲಾತಿಗೆ ಯಾರೇ ಪ್ರತ್ಯೇಕವಾಗಿ ಕೊಟ್ಟಿದ್ದರೂ ಒಂದೇ. ಮೀಸಲಾತಿ ವಿಚಾರದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಕಾನೂನುಬದ್ಧವಾಗಿ ಮೀಸಲಾತಿ ಘೋಷಣೆ ಮಾಡಬೇಕೆಂಬುದು ನಮ್ಮ ಆಶಯ. ನಾನು ಬೇರೆಯವರ ಬಗ್ಗೆ ಮಾತಾಡುವುದಿಲಲ್ಲ. ನಾನು ಮುರುಗೇಶ್ ನಿರಾಣಿಯಾಗಿ ಮಾತ್ರವೇ ಮಾತಾಡುತ್ತೇನೆ. ಎರಡು ಪೀಠ ಮತ್ತು ಪದಾಧಿಕಾರಿಗಳು ಒಂದೇ ಉದ್ದೇಶಕ್ಕಾಗಿ ಶ್ರಮಿಸಲಿದ್ದಾರೆ. ಮೀಸಲಾತಿ ವಿಚಾರದಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ. ನಾನು ಸರ್ಕಾರದ ಭಾಗವಾಗಿ ಕಾನೂನುಬದ್ಧವಾಗಿ ಮೀಸಲಾತಿ ಘೋಷಣೆ ಮಾಡಬೇಕೆಂದು ಒತ್ತಾಯಿಸುತ್ತಿದ್ದೇನೆ. ಹೊರಗೆ ಇರುವವರು ಬೇರೆ ರೀತಿ ಹೋರಾಟ ಮಾಡುತ್ತಿರಬಹುದು. ಆದರೆ ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಮುಖ್ಯಮಂತ್ರಿಗೆ ಪಂಚಮಸಾಲಿ ಸಮುದಾಯದ ಬಗ್ಗೆ ಅಪಾರ ವಿಶ್ವಾಸ ಇದೆ. ಆಯೋಗದ ವರದಿ ಕೊಟ್ಟ ಬಳಿಕ ಸಂಪುಟದಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದರು.
ಇಂದಿನ ಪದಾಧಿಕಾರಿಗಳ ಆಯ್ಕೆ ಸಭೆಗೆ ವಿಜಯಾನಂದ ಕಾಶಪ್ಪನವರ್ ಯಾಕೆ ಬಂದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಶ್ನೆಗೆ ನಾನು ಹೇಗೆ ಉತ್ತರಿಸಲು ಸಾಧ್ಯ? ಸಭೆಗೆ ನನ್ನನ್ನು ಕರೆದಿದ್ದರು. ಸಮಾಜದ ಪ್ರತಿನಿಧಿಯಾಗಿ ನಾನು ಪಾಲ್ಗೊಂಡಿದ್ದೇನೆ ಎಂದು ಹೇಳಿದರು.
ನಾಯಕತ್ವ ಬದಲಾವಣೆಯಿಲ್ಲ 2023ರವರೆಗೂ ಬಸವರಾಜ ಬೊಮ್ಮಾಯಿ ಅವರೇ ಕರ್ನಾಟಕದ ಮುಖ್ಯಮಂತ್ರಿ ಆಗಿರುತ್ತಾರೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲ. ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಅವರ ಆಡಳಿತ ವೈಖರಿಯ ಬಗ್ಗೆ ನಮಗೂ ಸಂತೃಪ್ತಿಯಿದೆ. ಮುಂದಿನ ಅವಧಿಗೂ ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ ಎಂದು ವಿವರಿಸಿದರು.
ನನ್ನ ವಿರುದ್ಧ ಮುಖ್ಯಮಂತ್ರಿ ಹೈಕಮಾಂಡ್ಗೆ ದೂರು ನೀಡಲು ಸಾಧ್ಯವೇ ಇಲ್ಲ. ನಾನು ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಒಂದೇ ತಾಯಿಯ ಮಕ್ಕಳಂತೆ ಇದ್ದೇವೆ. ಒಂದೇ ಕಾಲೇಜಿನಲ್ಲಿ ಓದಿದ್ದೇವೆ. ಅವರ ಜೊತೆತೆ ಮೂವತ್ತು ವರ್ಷಗಳಿಂದ ಉತ್ತಮ ಬಾಂಧವ್ಯ ಇದೆ. ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು. 8 ತಿಂಗಳಿಂದ ನಾನು ದೆಹಲಿ, ಬಾಂಬೆ, ನಾಗಪುರ, ಅಹಮದಾಬಾದ್ ಕಡೆ ಹೋಗಿಲ್ಲ. ರಾಷ್ಟ್ರೀಯ ನಾಯಕರು, ಸಂಘ ಪರಿವಾರದ ಹಿರಿಯ ನಾಯಕರನ್ನು ಭೇಟಿ ಮಾಡಿಲ್ಲ ಎಂದು ನಿರಾಣಿ ತಿಳಿಸಿದರು.
ಸಚಿವ ಸಂಪುಟ ಪುನಾರಚನೆ ವಿಚಾರದಲ್ಲಿ ಮುಖ್ಯಮಂತ್ರಿಗೆ ಪರಮಾಧಿಕಾರವಿದೆ. ಸಚಿವ ಸ್ಥಾನ ಕೊಡುವುದು ಅಥವಾ ಬಿಡುವುದು ಮುಖ್ಯಮಂತ್ರಿ ವಿವೇಚಾನೆಗೆ ಬಿಟ್ಟ ವಿಚಾರ. ಅವರು ತಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದರಾಗಿರುತ್ತೇವೆ ಎಂದರು.
ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜ್ಯ ಪದಾಧಿಕಾರಿಗಳನ್ನು ಬದಲಿಸುವ ಅಧಿಕಾರ ಕೇವಲ ರಾಷ್ಟ್ರೀಯ ನಾಯಕರಿಗೆ ಮಾತ್ರವೇ ಇದೆ. ಅಂತಹ ಅಧಿಕೃತ ಘೋಷಣೆ ಏನೂ ಇಲ್ಲ. ಹಾಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಲಿಗೆ ಚಕ್ರ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಎರಡೂವರೆ ವರ್ಷ ಅವಧಿ ಪೂರೈಸಿದ್ದಾರೆ. ಪಕ್ಷದಲ್ಲಿ ಅಧ್ಯಕ್ಷರ ಅವಧಿ ಇರುವುದು ಮೂರು ವರ್ಷ ಮಾತ್ರ. ರಾಜಕೀಯ ಮಾತ್ರ ಅಲ್ಲ, ಬೇರೆ ಕಾರಣಗಳಿಂದ ನಾನು ತಪ್ಪು ಹೆಜ್ಜೆ ಇಟ್ಟಾಗಲೂ ಬೊಮ್ಮಾಯಿ ತಿಳಿ ಹೇಳುತ್ತಿದ್ದಾರೆ. ನನಗೆ ಬೊಮ್ಮಾಯಿ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಬೊಮ್ಮಾಯಿಗೆ ನನ್ನ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ದೂರುಗಳು ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಇವತ್ತು ನನಗೆ ಅನ್ನಿಸಿದ್ದನ್ನು ನಾನು ಹೇಳುತ್ತಿದ್ದೇನೆ, ಉಳಿದವರು ಏನು ಹೇಳಿದ್ದಾರೋ ಗೊತ್ತಿಲ್ಲ ಎಂದರು.
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ: ಸರ್ಕಾರಕ್ಕೆ ಲೈಫ್ಲೈನ್ ನೀಡಿದ್ದೇವೆ ಎಂದ ವಚನಾನಂದ ಸ್ವಾಮೀಜಿ ಇದನ್ನೂ ಓದಿ: ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸಭೆ: ಸರ್ಕಾರದ ಮೇಲೆ ಒತ್ತಡ ಹೇರಲು ಮೂರು ನಿರ್ಣಯ
Published On - 8:01 pm, Wed, 19 January 22