Omicron: ಲಸಿಕೆ ಪಡೆಯದವರಿಗೆ ಸರ್ಕಾರಿ ಸೇವೆ ಕಟ್: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಕಠಿಣ ಎಚ್ಚರಿಕೆ
ಲಸಿಕೆ ಪಡೆಯದವರಿಗೆ ಸರ್ಕಾರಿ ಸೇವೆಗಳನ್ನು ಹಂತಹಂತವಾಗಿ ಕಡಿತ ಮಾಡುತ್ತೇವೆ. ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು: ಕರ್ನಾಟಕದಲ್ಲಿ ಒಮಿಕ್ರಾನ್ (Omicron) ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಹಿರಿಯ ಅಧಿಕಾರಿಗಳು, ಕಾರ್ಯಪಡೆ ಸದಸ್ಯರು ಮತ್ತು ತಜ್ಞರ ತುರ್ತುಸಭೆ ನಡೆಸಿದರು. ಸಭೆಯ ನಂತರ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ‘ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹೆಚ್ಚು ನಿಗಾ ಇಡಲಾಗಿದೆ. ನಗರದಲ್ಲಿ ಕೊವಿಡ್ ಟೆಸ್ಟ್ ಸಂಖ್ಯೆ ಹೆಚ್ಚಿಸುತ್ತೇವೆ. ಮಾಡುತ್ತೇವೆ. ಹೊರಗಿನಿಂದ ಬಂದವರನ್ನು ಪತ್ತೆಹಚ್ಚುವ ಕೆಲಸಕ್ಕೆ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದರು.
ನಗರದಲ್ಲಿ ಬೆಳಕಿಗೆ ಬಂದಿರುವ ಒಮಿಕ್ರಾನ್ ಸೋಂಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಂಕಿತರ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆಹೆಚ್ಚಲು ಕ್ರಮಕೈಗೊಳ್ಳಲಾಗಿದೆ. ಈವರೆಗೆ 200 ಜನ ಸಂಪರ್ಕಿತರನ್ನು ಪತ್ತೆ ಮಾಡಿದ್ದೇವೆ. ಐವರ ಜಿನೋಮಿಕ್ ಸೀಕ್ವೆನ್ಸ್ ವರದಿಗಾಗಿ ಕಾಯುತ್ತಿದ್ದೇವೆ. ಅಪಾರ್ಟ್‌ಮೆಂಟ್ ನಿವಾಸಿಗಳ ಜೊತೆಯೂ ಚರ್ಚಿಸುತ್ತೇವೆ. ಬೆಂಗಳೂರಿನಲ್ಲಿ ಕಡ್ಡಾಯವಾಗಿ ಟೆಸ್ಟಿಂಗ್, ಲಸಿಕೆ ನೀಡಲಾಗುವುದು. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ನಗರದ ನಾಗರಿಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು. ಲಸಿಕೆ ಪಡೆಯದಿದ್ದರೆ ಹಂತಹಂತವಾಗಿ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ನುಡಿದರು. ಎರಡೂ ಡೋಸ್ ಪಡೆಯುವುದನ್ನು ಕಡ್ಡಾಯಗೊಳಿಸಲಾಗುವುದು. ಶಾಲಾ ಮಕ್ಕಳ ಪೋಷಕರಿಗೆ, ಸಿನಿಮಾಗೆ ಹೋಗುವವರಿಗೆ, ಮಾಲ್ ಹೋಗುವವರಿಗೆ ಡಬಲ್ ಡೋಸ್ ಲಸಿಕೆ ಕಡ್ಡಾಯ. ಲಸಿಕೆ ಪಡೆಯದವರಿಗೆ ಸರ್ಕಾರಿ ಸೇವೆಗಳನ್ನು ಹಂತಹಂತವಾಗಿ ಸೇವೆಗಳನ್ನು ಕಡಿತ ಮಾಡುತ್ತೇವೆ. ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಒಮಿಕ್ರಾನ್ ನಿಗ್ರಹಕ್ಕೆ ನೂತನ ನಿಯಮಾವಳಿ ಕರ್ನಾಟಕದಲ್ಲಿ ಒಮಿಕ್ರಾನ್ ಪತ್ತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆದಿದ್ದ ಮಹತ್ವದ ಸಭೆ ಮುಕ್ತಾಯವಾಗಿದೆ. ಸಭೆಯ ಬಳಿಕೆ ನೂತನ ನಿಯಮಾವಳಿಗಳ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಪೋಷಕರು 2 ಡೋಸ್ ಲಸಿಕೆ ಪಡೆದಿದ್ದರೆ ಮಾತ್ರ ಮಕ್ಕಳಿಗೆ ಶಾಲೆ ಪ್ರವೇಶ ನೀಡಲಾಗುವುದು ಎಂದು ಪ್ರಕಟಿಸಿದರು. ಸರ್ಕಾರ ಮಾಡಿಕೊಳ್ಳುತ್ತಿರುವ ಸಿದ್ಧತೆ ಮತ್ತು ಹೊಸ ನಿಯಮಾವಳಿಗಳ ಬಗ್ಗೆ ಸಚಿವರು ಮಾಹಿತಿ ನೀಡಿದರು.
ಇನ್ನು ಮುಂದೆ ಶಾಲಾ-ಕಾಲೇಜುಗಳಲ್ಲಿ ಸಮಾರಂಭಕ್ಕೆ ಅವಕಾಶವಿಲ್ಲ ಸಿನಿಮಾ ಹಾಲ್, ಮಾಲ್‌ನಲ್ಲಿ, ಶಾಲೆಗಳಲ್ಲಿ ಕೆಲಸ ಮಾಡುವವರು ಮತ್ತು ಮಕ್ಕಳ ಪೋಷಕರು 2 ಡೋಸ್ ಕಡ್ಡಾಯವಾಗಿ ಪಡೆಿದರಬೇಕು. ಮದುವೆಗಳಲ್ಲಿ 500ರೊಳಗೆ ಮಾತ್ರ ಜನ ಸೇರಬೇಕು. ಪ್ರತಿನಿತ್ಯ 1 ಲಕ್ಷ ಕೊವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ 2ನೇ ಅಲೆ ವೇಳೆ ಸಿದ್ಧಗೊಂಡಿದ್ದ ಕೊವಿಡ್ ಬೆಡ್, ಐಸಿಯು ಬೆಡ್‌ಗಳನ್ನು ಮತ್ತೆ ಸಿದ್ಧಪಡಿಸಲು ಸೂಚಿಸಲಾಗಿದೆ. ಆಕ್ಸಿಜನ್ ಪ್ಲ್ಯಾಂಟ್ ಸಿದ್ಧಪಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ. ರಾಜ್ಯದಲ್ಲಿ ಮತ್ತೆ ಕಂಟ್ರೋಲ್ ರೂಂ ಆರಂಭಿಸಲಾಗುವುದು. ಅದಕ್ಕೆ ಬೇಕಾದ ಸಿಬ್ಬಂದಿ ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಔಷಧಿಗಳನ್ನು ಮುಂಚಿತವಾಗಿಯೇ ಖರೀದಿಸುವಂತೆ ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಕೊವಿಡ್ ಉಸ್ತುವಾರಿಗಾಗಿ ಶಿಲ್ಪಾ ನಾಗರಾಜ್ ಅವರನ್ನು ಸರ್ವೆಲೈನ್ಸ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕೊವಿಡ್ ಟೆಸ್ಟ್‌ಗೆ ₹ 500 ದರ ನಿಗದಿ ಮಾಡಲಾಗಿದೆ. ಅಬೇಟ್ ಟೆಸ್ಟ್‌ಗೆ ₹ 3 ಸಾವಿರ ನಿಗದಿ ಮಾಡಲಾಗಿದೆ. ಮೊದಲೇ ಸಮಯದ ವೇಳಾಪಟ್ಟಿ ನಿಗದಿ ಮಾಡಿರುತ್ತೇವೆ. ಏರ್‌ಪೋರ್ಟ್‌ನಲ್ಲಿಯೂ ಕಟ್ಟುನಿಟ್ಟಾಗಿ ಕೊವಿಡ್ ಟೆಸ್ಟ್ ನಡೆಸಲಾಗುವುದು. ನೆಗೆಟಿವ್ ವರದಿ ಬಂದ ನಂತರ ಏರ್‌ಪೋರ್ಟ್‌ನಿಂದ ಹೊರಕ್ಕೆ ಕಳಿಸಲಾಗುವುದು. ಬೆಳಗಾವಿ ಸುವರ್ಣಸೌಧದಲ್ಲಿಯೇ ಅಧಿವೇಶನ ನಡೆಯುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಒಮಿಕ್ರಾನ್ ಸೋಂಕಿತನ ಪ್ರಾಥಮಿಕ ಸಂಪರ್ಕಿತರಿಗೆ ಕೊರೊನಾ ಪಾಸಿಟಿವ್; ಮನೆಗಳನ್ನು ಮೈಕ್ರೋ ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಿದ ಬಿಬಿಎಂಪಿ ಇದನ್ನೂ ಓದಿ: Omicron: ಒಮಿಕ್ರಾನ್ ನಿರ್ವಹಣೆ: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ
Published On - 4:31 pm, Fri, 3 December 21