
ಬೆಂಗಳೂರು, ನವೆಂಬರ್ 03: ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ ಆರೋಪ ಕೇಳಿಬಂದ ಬೆನ್ನಲ್ಲೇ ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಬೃಹತ್ ಅಭಿಯಾನ ಆರಂಭಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಅಭಿಯಾನದ ಬಗ್ಗೆ ತಮಿಳುನಾಡು ಐಪಿಎಸ್ ಅಧಿಕಾರಿ ಅವಹೇಳನಕಾರಿಯಾಗಿ ಟೀಕೆ ಮಾಡಿರೋದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಂಪನಿಗಳಿಗೆ ತೆರಳಿ ಕನ್ನಡಿಗರಿಗೆ ಉದ್ಯೋಗದಲ್ಲಿ ಎಷ್ಟು ಆದ್ಯತೆ ನೀಡಲಾಗಿದೆ ಎಂಬ ಮಾಹಿತಿ ಸಂಗ್ರಹಿಸುತ್ತಿರುವ ಕರವೇ ಬಗ್ಗೆ ವ್ಯಂಗ್ಯವಾಡಿರುವ ತಮಿಳುನಾಡು ಐಪಿಎಸ್ ಅಧಿಕಾರಿ ಬಿ.ಎಸ್.ಧನುಷ್ ಕುಮಾರ್, ಉದ್ಯೋಗ ಮಾಡುತ್ತಿರುವವರ ಕೆಲಸಕ್ಕೆ ಅಡ್ಡಿಪಡಿಸುತ್ತಿರುವ ನಿರುದ್ಯೋಗಿಗಳು ಎಂದಿದ್ದಾರೆ.
ಕನ್ನಡಿಗರ ಉದ್ಯೋಗದ ಪರವಾಗಿ ನಡೆಯುತ್ತಿರುವ ಅಭಿಯಾನದ ಬಗ್ಗೆ ವೆಲ್ಲೂರು ಸಬ್ ಡಿವಿಷನ್ ಎಸಿಪಿಯ ಈ ಹೇಳಿಕೆಯೀಗ ರಾಜ್ಯದ ಜನತೆತನ್ನು ಮತ್ತಷ್ಟು ಕೆರಳಿಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಿದ್ದರೆ ಕನ್ನಡಿಗರ ಉದ್ಯೋಗದ ಹಕ್ಕಿನ ಬಗ್ಗೆ ಧ್ವನಿ ಎತ್ತುವುದೇ ತಪ್ಪಾ? ಎಂಬ ಪ್ರಶ್ನೆಗಳು ಸಹ ವ್ಯಕ್ತವಾಗಿವೆ. ಓರ್ವ ಸರ್ಕಾರಿ ಅಧಿಕಾರಿ ಇಂತಹ ಹೇಳಿಕೆಗಳನ್ನು ನೀಡಬಹುದೇ ಎಂದು ಕನ್ನಡಿಗರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರ ಅವಗಣನೆ ಆರೋಪ: ಮತ್ತೆ ಮುನ್ನೆಲೆಗೆ ಬಂದ ಉದ್ಯೋಗ ಮೀಸಲಾತಿ ಕಾನೂನು
ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಬೃಹತ್ ಅಭಿಯಾನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಕರೆ ನೀಡಿದ್ದಾರೆ. ನವೆಂಬರ್ 1ರಿಂದ 1 ತಿಂಗಳ ಕಾಲ ಐಟಿ-ಬಿಟಿ ಕಂಪನಿಗಳಿಗೆ ನಿಯೋಗ ಭೇಟಿ ನೀಡಲಿದ್ದು, ಕಂಪನಿ ಮುಖ್ಯಸ್ಥರು ಮತ್ತು ಮಾನವ ಸಂಪನ್ಮೂಲ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಪ್ರತಿ ತಂಡದಲ್ಲಿ ಕರವೇ ಸಂಘಟನೆಯ 10 ಮುಖಂಡರು ಇರಲಿದ್ದು, ಐಟಿ-ಬಿಟಿ ಕಂಪನಿಗಳಲ್ಲಿ ಎಷ್ಟು ಕನ್ನಡಿಗರು ಇದ್ದಾರೆಂದು ಮಾಹಿತಿ ಸಂಗ್ರಹಿಸಲಿದ್ದಾರೆ. ಬೇರೆ ಬೇರೆ ಭಾಷೆಯವರು ಎಷ್ಟು ಜನರಿದ್ದಾರೆ ಎಂದೂ ಮಾಹಿತಿ ಕಲೆಹಾಕಲಿದ್ದಾರೆ. ಸಂಗ್ರಹಿಸಿದ ಎಲ್ಲ ವಿವರಗಳನ್ನು ಅಂತಿಮವಾಗಿ ಸಿಎಂ ಡಿಕೆ ಶಿವಕುಮಾರ್ ಅವರಿಗೆ ನೀಡುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.