ಪರಪ್ಪನ ಅಗ್ರಹಾರ ಜೈಲು ಭೂಸ್ವಾಧೀನಕ್ಕೆ ಹೈಕೋರ್ಟ್ ಅಸ್ತು! ಬಫರ್ ಝೋನ್‌ಗೆ ಗ್ರೀನ್ ಸಿಗ್ನಲ್

ಪರಪ್ಪನ ಅಗ್ರಹಾರ ಜೈಲು ವಿಸ್ತರಣೆ ಮತ್ತು ಭದ್ರತೆಗಾಗಿ 19 ಎಕರೆ ಭೂಸ್ವಾಧೀನ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಕೈದಿಗಳಿಗೆ ಸುರಕ್ಷಿತ ವಸತಿ, ಆರೋಗ್ಯ ರಕ್ಷಣೆ, ಶಿಕ್ಷಣ ಹಾಗೂ ವೃತ್ತಿಪರ ತರಬೇತಿ ನೀಡುವ ಮೂಲಕ ಸುಧಾರಣೆ ತರಲು ಇದು ಅವಶ್ಯಕ. ಸೆರೆವಾಸ ಕೇವಲ ಶಿಕ್ಷೆಯಾಗಿರದೆ, ಉತ್ತಮ ಸಮಾಜ ನಿರ್ಮಾಣದತ್ತ ಹೆಜ್ಜೆ ಇಡಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪರಪ್ಪನ ಅಗ್ರಹಾರ ಜೈಲು ಭೂಸ್ವಾಧೀನಕ್ಕೆ ಹೈಕೋರ್ಟ್ ಅಸ್ತು! ಬಫರ್ ಝೋನ್‌ಗೆ ಗ್ರೀನ್ ಸಿಗ್ನಲ್
ಪರಪ್ಪನ ಅಗ್ರಹಾರ, ಹೈಕೋರ್ಟ್
Edited By:

Updated on: Oct 29, 2026 | 10:26 PM

ಬೆಂಗಳೂರು, ಅಕ್ಟೋಬರ್​​ 29: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಸ್ತರಣೆ ಮತ್ತು ಭದ್ರತೆಯ ದೃಷ್ಟಿಯಿಂದ ಜೈಲಿನ ಸುತ್ತಮುತ್ತಲಿನ 19 ಎಕರೆ 18 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಬೆಂಗಳೂರು ದಕ್ಷಿಣ ತಾಲೂಕು, ನಾಗನಾಥಪುರದಲ್ಲಿ ಕೈಗೊಂಡಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿದ ವಿಚಾರದಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ.

ಜೈಲಿನ ವಿಸ್ತರಣೆ, ಭದ್ರತೆಗಾಗಿ ಭೂಸ್ವಾಧೀನ ಎತ್ತಿ ಹಿಡಿದ ಹೈಕೋರ್ಟ್

ನ್ಯಾಯಮೂರ್ತಿ ಡಿಕೆ ಸಿಂಗ್ ಮತ್ತು ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರನ್ನೊಳಗೊಂಡ ಪೀಠ ಈ ಮಹತ್ವದ ತೀರ್ಪು ನೀಡಿದೆ. ವಿಚಾರಣೆ ವೇಳೆ ‘ಕೈದಿಗಳಿಗೆ ಸುರಕ್ಷಿತ ವಸತಿ, ಆರೋಗ್ಯ ರಕ್ಷಣೆ, ಶಿಕ್ಷಣ, ವೃತ್ತಿಪರ ತರಬೇತಿ ಹಾಗೂ ಮಾನಸಿಕ ಬೆಂಬಲ ಒದಗಿಸಲು ಸೂಕ್ತ ವಾತಾವರಣ ನಿರ್ಮಿಸುವುದು ಅಗತ್ಯ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸೆರೆವಾಸ ಕೇವಲ ದಂಡನೆಯದ್ದಾಗಿರದೇ ಸುಧಾರಣೆ ಉದ್ದೇಶದ್ದಾಗಿದೆ

ಸೆರೆ ವಾಸವೆಂದರೆ ಕೇವಲ ದಂಡನೆಗೆ ಸೀಮಿತವಾಗಿರದೆ, ಕೈದಿಗಳ ಸುಧಾರಣೆ ಉದ್ದೇಶದ್ದಾಗಿದೆ. ಈ ಉದ್ದೇಶವನ್ನು ಸಾಧಿಸಲು ಸಾಕಷ್ಟು ಸ್ಥಳಾವಕಾಶ ಮತ್ತು ಅಗತ್ಯ ಮೂಲಸೌಕರ್ಯಗಳು ಇರಬೇಕು. ಸೂಕ್ತ ಸ್ಥಳಾವಕಾಶ ಹಾಗೂ ಮೂಲಸೌಕರ್ಯಗಳಿಲ್ಲದೆ ಕೈದಿಗಳ ಸುಧಾರಣೆಯ ಉದ್ದೇಶವನ್ನು ಪರಿಣಾಮಕಾರಿಯಾಗಿ ಸಾಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಆ ಮೂಲಕ ಪರಪ್ಪನ ಅಗ್ರಹಾರ ಜೈಲಿನ ವಿಸ್ತರಣೆ ಮತ್ತು ಭದ್ರತೆಯ ದೃಷ್ಟಿಯಿಂದ ನಾಗನಾಥಪುರದಲ್ಲಿ 19 ಎಕರೆ 18 ಗುಂಟೆ ಭೂಸ್ವಾಧೀನಪಡಿಸಿಕೊಳ್ಳುವ ಕ್ರಮವನ್ನು ನ್ಯಾಯಾಲಯ ಎತ್ತಿಹಿಡಿದಿದೆ.

ಏನಿದು ಪ್ರಕರಣ?

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸುತ್ತಲೂ 200 ಮೀಟರ್‌ ಸುರಕ್ಷಿತ ವಲಯ (ಬಫರ್ ಝೋನ್) ನಿರ್ಮಿಸುವ ಮೂಲಕ ಜೈಲಿನ ಭದ್ರತೆಯನ್ನು ಬಲಪಡಿಸಲು ಹಾಗೂ ವಿಸ್ತರಣೆಗೆ ಅಗತ್ಯವಾದ ಜಾಗ ಒದಗಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿತ್ತು. ಈ ಉದ್ದೇಶಕ್ಕಾಗಿ ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ನಾಗನಾಥಪುರ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಿಗೆ ಸೇರಿದ ಒಟ್ಟು 19 ಎಕರೆ 18 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿತ್ತು. ಈ ಸಂಬಂಧ 2012ರಲ್ಲಿ ಪ್ರಾಥಮಿಕ ಅಧಿಸೂಚನೆ ಹಾಗೂ 2013ರಲ್ಲಿ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು.

ಇದನ್ನೂ ಓದಿ: ಸಂಗಾತಿಗೆ ಮಾನಸಿಕ ಅಸ್ವಸ್ಥತೆ ಇದೆ ಎಂಬ ಆಧಾರರಹಿತ ಆರೋಪವೂ ಕ್ರೌರ್ಯ: ಕರ್ನಾಟಕ ಹೈಕೋರ್ಟ್

ಇನ್ನು ಸರ್ಕಾರದ ಈ ಭೂಸ್ವಾಧೀನ ಕ್ರಮವನ್ನು ಪ್ರಶ್ನಿಸಿ ಸಂಬಂಧಪಟ್ಟ ಜಮೀನುಗಳ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠವು, ವಿಶೇಷ ಭೂಸ್ವಾಧೀನಾಧಿಕಾರಿಗಳು ಸಲ್ಲಿಸಿದ್ದ ವರದಿಯನ್ನು ಸರ್ಕಾರ ಸಮರ್ಪಕವಾಗಿ ಪರಿಶೀಲನೆಗೆ ಒಳಪಡಿಸಿಲ್ಲ ಎಂಬ ತಾಂತ್ರಿಕ ಅಂಶವನ್ನು ಆಧರಿಸಿ, 2025ರ ಮೇ 2ರಂದು ಭೂಸ್ವಾಧೀನಕ್ಕೆ ಸಂಬಂಧಿಸಿದ ಅಂತಿಮ ಅಧಿಸೂಚನೆಯನ್ನು ರದ್ದುಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿದ ರಾಜ್ಯ ಸರ್ಕಾರವು, ಪ್ರಕರಣದ ಮರುಪರಿಶೀಲನೆಗಾಗಿ ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
Loading...
Unable to load recommendations.
Follow Us