ಹೊಸ ವರ್ಷಾಚರಣೆಗೆ ಬೆಂಗಳೂರು ಸುತ್ತಮುತ್ತ ಜಿಲ್ಲೆಗಳಲ್ಲಿ ಯಾವೆಲ್ಲಾ ಪ್ರವಾಸಿ ಕೇಂದ್ರ ಬಂದ್; ಯಾವುವು ಮುಕ್ತ ಮುಕ್ತ ಮುಕ್ತ
ಬೆಂಗಳೂರಿನ ಸುತ್ತಮುತ್ತಲಿನ ಕೆಲವು ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಹೊಸ ವರ್ಷಾಚರಣೆಗೆ ಟ್ರಿಪ್ ಪ್ಲ್ಯಾನ್ ಮಾಡುವ ಮುನ್ನ ಈ ಸುದ್ದಿ ಒಮ್ಮೆ ಓದಿ.
ಬೆಂಗಳೂರು: ಹೊಸ ವರ್ಷಕ್ಕೆ ಕೌಂಟ್ಡೌನ್ ಶುರುವಾಗಿದೆ. ಜನರೆಲ್ಲಾ ಹೊಸ ವರ್ಷವನ್ನು ಸ್ವಾಗತಿಸೋಕೆ ಸಜ್ಜಾಗುತ್ತಿದ್ದಾರೆ. ಸರ್ಕಾರ ನೈಟ್ ಕರ್ಫ್ಯೂ ವಿಧಿಸಿದ್ದು, ಮೋಜು ಮಸ್ತಿ ಮಾಡೋರಿಗೆ ಬಿಸಿ ತಟ್ಟಿದೆ. ಈ ನಡುವೆ ಕೆಲವರು ಹೊಸ ವರ್ಷದ ಮೊದಲ ದಿನ, ಒಂಡೇ ಟ್ರಿಪ್ಗೆ ಪ್ಲ್ಯಾನ್ ಮಾಡ್ಕೊಂಡಿರ್ತಾರೆ. ಆದ್ರೆ, ಬೆಂಗಳೂರಿನ ಸುತ್ತಮುತ್ತಲಿನ ಕೆಲವು ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಹೊಸ ವರ್ಷಾಚರಣೆಗೆ ಟ್ರಿಪ್ ಪ್ಲ್ಯಾನ್ ಮಾಡುವ ಮುನ್ನ ಈ ಸುದ್ದಿ ಒಮ್ಮೆ ಓದಿ.
ಪ್ರವಾಸಿಗರಿಗೆ ಬಂದ್ ಆಯ್ತು ನಂದಿ ಗಿರಿಧಾಮ ಪ್ರವಾಸಿಗರ ನೆಚ್ಚಿನ ತಾಣ.. ಒಂಡೇ ಟ್ರಿಪ್ಗೆ ಹೇಳಿ ಮಾಡಿಸಿದ ಜಾಗ ಅಂದ್ರೆ ನಂದಿ ಬೆಟ್ಟ. ಅದ್ರಲ್ಲೂ, ವರ್ಷದ ಮೊದಲನೇ ದಿನ ಸ್ನೇಹಿತರು, ಕುಟುಂಬಸ್ಥರ ಜತೆಗೆಲ್ಲ ಸಾವಿರಾರು ಜನರು, ನಂದಿಬೆಟ್ಟಕ್ಕೆ ಬರ್ತಿದ್ರು. ಚುಮು ಚುಮು ಚಳಿ, ಬೆಳ್ಳಿ ಮೋಡಗಳನ್ನ ಕಾಲಡಿ ನೋಡುತ್ತಾ ಎಂಜಾಯ್ ಮಾಡ್ತಿದ್ರು. ಆದ್ರೀಗ, ಕೊರೊನಾ ಭೀತಿಯಿಂದ ಅದಕ್ಕೂ ಸಂಚಕಾರ ಬಿದ್ದಿದೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿನ್ನೆ ಸಂಜೆ ಆರು ಗಂಟೆಯಿಂದಲೇ, ನಂದಿ ಗಿರಿಧಾಮದ ರಸ್ತೆಯನ್ನ ಬಂದ್ ಮಾಡಿದೆ. ಜನವರಿ 2ನೇ ತಾರೀಖು, ಬೆಳಗ್ಗೆ 6 ಗಂಟೆ ತನಕ ಪ್ರವಾಸಿಗರಿಗೆ ನಿಷೇಧ ಹೇರಿದ್ದಾರೆ.
ಸ್ಕಂದಗಿರಿ ಚನ್ನಗಿರಿ ಬ್ರಹ್ಮಗಿರಿ ಸಂಜೆ ಮೇಲೆ ಬಂದ್ ನಂದಿಗಿರಿ ಧಾಮ ಬಂದ್ ಆಗಿರೋದ್ರಿಂದ ಸುತ್ತಲಿನ, ಸ್ಕಂದಗಿರಿ ಚನ್ನಗಿರಿ ಬ್ರಹ್ಮಗಿರಿ ಆವುಲಬೆಟ್ಟದತ್ತ ಜನ ನುಗ್ಗುವ ಮುನ್ಸೂಚನೆ ಇದೆ. ಇದ್ರಿಂದ ಎಚ್ಚೇತ್ತಿರುವ ಚಿಕ್ಕಬಳ್ಲಾಪುರ ಜಿಲ್ಲಾ ಅರಣ್ಯ ಇಲಾಖೆ, ಸ್ಕಂದಗಿರಿಯಲ್ಲಿ ರಾತ್ರಿ ಚಾರಣಕ್ಕೆ ನಿರ್ಬಂಧವಿದಿಸಿದ್ದು ಬೆಳಗ್ಗೆಯಷ್ಟೇ ಅವಕಾಶ ಕೊಟ್ಟಿದೆ. ಆವುಲಬೆಟ್ಟಕ್ಕೂ ಪ್ರವೇಶ ನಿರ್ಬಂಧಿಸಿದ್ದು, ಪೊಲೀಸರು ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಗಸ್ತು ವ್ಯವಸ್ಥೆ ಮಾಡಿದೆ. ಸ್ಕಂದಗಿರಿ, ಚನ್ನಗಿರಿಗೂ ಸಂಜೆ ನಂತರ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಸಲನ್ ಮಾಹಿತಿ ನೀಡಿದ್ದಾರೆ.
ಪ್ರವಾಸಿಗರ ಆಕರ್ಷಕ ಕೇಂದ್ರ ಬೀಚ್‌ಗಳಿಗೂ ನಿರ್ಬಂಧ ಜನರನ್ನು ಹೆಚ್ಚು ಆಕರ್ಷಿಸುವ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬೀಚ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸಂಜೆ 7 ಗಂಟೆ ನಂತರ ಬೀಚ್‌ಗಳಿಗೆ ಪ್ರವೇಶ ನಿರ್ಬಂಧ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಐತಿಹಾಸಿಕ ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಜಾತ್ರೆ ರದ್ದು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಜಾತ್ರೆ ಜ.6ರಿಂದ ನಡೆಯಬೇಕಿತ್ತು. ಆದ್ರೆ ಕೊವಿಡ್ ಮಾರ್ಗಸೂಚಿಯಂತೆ ಐತಿಹಾಸಿಕ ಜಾತ್ರೆ ರದ್ದು ಮಾಡಲಾಗಿದೆ. ಸಂಪ್ರದಾಯದಂತೆ ಪೂಜಾ ವಿಧಿವಿಧಾನಗಳು ಮಾತ್ರ ನಡೆಯುತ್ತೆ ಎಂದು ಪಾವಗಡ ತಹಶೀಲ್ದಾರ್ ಕೆ.ಆರ್.ನಾಗರಾಜ್ ಮಾಹಿತಿ ನೀಡಿದ್ದಾರೆ.
ಕೋಟಿಲಿಂಗೇಶ್ವರ ದೇವಾಲಯಕ್ಕೆ ನಾಳೆ ಭಕ್ತರಿಗೆ ನಿರ್ಬಂಧ ಒಮಿಕ್ರಾನ್ ಆತಂಕ, ಹೊಸವರ್ಷ ಹಿನ್ನೆಲೆ ಕೋಲಾರದ ಕೋಟಿಲಿಂಗೇಶ್ವರ ದೇವಾಲಯಕ್ಕೆ ನಾಳೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ ಎಂದು ಕೋಲಾರ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದ್ದಾರೆ. ಉಳಿದಂತೆ ಅಂತರಗಂಗೆ, ಚಿಕ್ಕತಿರುಪತಿ, ಬಂಗಾರತಿರುಪತಿ ದೇವಾಲಯಗಳಿಗೆ ನಿರ್ಬಂಧವಿಲ್ಲ.
ಪ್ರವಾಸಿ ತಾಣಗಳಲ್ಲಿ ಹೊಸವರ್ಷ ಸಂಭ್ರಮಾಚರಣೆಗೆ ಬ್ರೇಕ್ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಪ್ರವಾಸಿ ತಾಣಗಳಾದ ಮೇಲುಕೋಟೆ, ಕೊರೆ ತೊಣ್ಣೂರು, ಕುಂತಿ ಬೆಟ್ಟ ಹಾಗೂ ಕೆಆರ್‌ಎಸ್ ಹಿನ್ನೀರು, ವೇಣುಗೋಪಾಲಸ್ವಾಮಿ ಬೆಟ್ಟಕ್ಕೆ ನಿರ್ಬಂಧ ಹೇರಲಾಗಿದ್ದು ಇಂದು, ನಾಳೆ ಎರಡು ದಿನ ಪ್ರವೇಶ ಇರುವುದಿಲ್ಲ ಎಂದು ಪಾಂಡವಪುರದಲ್ಲಿ ತಹಶೀಲ್ದಾರ್ ಪ್ರಮೋದ್ ಪಾಟೀಲ್ ತಿಳಿಸಿದ್ದಾರೆ.
ಕೊರೊನಾ ಆತಂಕ ಹಿನ್ನೆಲೆ ಘಾಟಿ ಸುಬ್ರಹ್ಮಣ್ಯ ಜಾತ್ರೆ ರದ್ದು ಕೊರೊನಾ ಆತಂಕ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಜಾತ್ರೆ ರದ್ದು ಮಾಡಲಾಗಿದೆ. ಜನವರಿ 8ರಂದು ನಡೆಯಬೇಕಿದ್ದ ಬ್ರಹ್ಮರಥೋತ್ಸವ ರದ್ದು ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ಚಿಕ್ಕರಥದಲ್ಲಿ ರಥೋತ್ಸವಕ್ಕೆ ಚಿಂತಿಸಿದ್ದು ಒಳಾಂಗಣದಲ್ಲಿ ರಥೋತ್ಸವಕ್ಕೆ ಭಕ್ತರ ಪ್ರವೇಶ ನಿರ್ಬಂಧ ಹೇರಲಾಗಿದೆ. ಅರ್ಚಕರು, ದೇವಾಲಯದ ಆಡಳಿತ ಮಂಡಳಿ ಮಾತ್ರ ಭಾಗಿಯಾಗಲಿದ್ದಾರೆ ಎಂದು ಟಿವಿ9ಗೆ ಬೆಂಗಳೂರು ಗ್ರಾಮಾಂತರ ಡಿಸಿ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.
ನಿರ್ಬಂಧವಿಲ್ಲದ ಪ್ರವಾಸಿ ತಾಣಗಳು ಇನ್ನು ಮತ್ತೊಂದೆಡೆ ವಿಜಯನಗರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ನಿರ್ಬಂಧವಿಲ್ಲ. ಆದರೆ ಹೊಸ ವರ್ಷಾಚರಣೆ ಮಾಡುವಂತಿಲ್ಲ ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದ್ದಾರೆ. ವಿಜಯನಗರದಲ್ಲಿ ಪ್ರವಾಸಿ ತಾಣಗಳು ತೆರೆದಿರುತ್ತವೆ. ಆದ್ರೆ ಆಚರಣೆ ಮಾಡುವಂತಿಲ್ಲ. ಹೋಟೆಲ್, ಸಾರ್ವಜನಿಕ ಸ್ಥಳದಲ್ಲಿ ಸಂಭ್ರಮಾಚರಣೆ ಇಲ್ಲ. ನೈಟ್ ಕರ್ಫ್ಯೂ ವೇಳೆ ಯಾರೂ ಹೊರಗೆ ಓಡಾಡುವಂತಿಲ್ಲ ಎಂದು ಅನಿರುದ್ಧ್ ಶ್ರವಣ್ ವಾರ್ನಿಂಗ್ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಯಾವುದೇ ಪ್ರವಾಸಿತಾಣ ಬಂದ್ ಇಲ್ಲ ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳು ಎಂದಿನಂತೆ ಓಪನ್ ಆಗಿರಲಿದೆ. ತುಮಕೂರು ತಾಲೂಕಿನ ಪ್ರವಾಸಿತಾಣ ದೇವರಾಯನದುರ್ಗ, ನಾಮದಚಿಲುಮೆ ಎಂದಿನಂತೆ ಓಪನ್ ಆಗಿರಲಿದೆ. ಆದರೆ ರಾತ್ರಿ ವೇಳೆ ಯಾವುದೇ ಪಾರ್ಟಿಗಳಿಗೆ ಅವಕಾಶವಿಲ್ಲ. ಜಿಲ್ಲಾದ್ಯಂತ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು ತುಮಕೂರು ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಮಾತ್ರ ಜಾರಿಯಲ್ಲಿರುತ್ತೆ ಎಂದು ತುಮಕೂರು ಎಎಸ್‌ಪಿ ಉದೇಶ್ ಮಾಹಿತಿ ನೀಡಿದ್ದಾರೆ.
ಪ್ರವಾಸಿ ತಾಣ ವಿಧುರಾಶ್ವತ್ಥಕ್ಕಿಲ್ಲ ನಿರ್ಬಂಧ ಹೊಸ ವರ್ಷದಂದು ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಪ್ರವಾಸಿ ತಾಣ ವಿಧುರಾಶ್ವತ್ಥಕ್ಕಿಲ್ಲ ನಿರ್ಬಂಧ. ಅಮರನಾರಾಯಣಸ್ವಾಮಿ ಹಾಗೂ ಹುತಾತ್ಮರ ಸ್ಮಾರಕ ಇರುವ ವಿಧುರಾಶ್ವತ್ಥ ಕ್ಷೇತ್ರ ಓಪನ್ ಆಗಿರಲಿದೆ. ದೇವಸ್ಥಾನದಲ್ಲಿ ಎಂದಿನಂತೆ ಪೂಜೆ ಪುನಸ್ಕಾರಗಳು ನಡೆಯಲಿವೆ.
ಹೊಸವರ್ಷಕ್ಕೆ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯ ಓಪನ್ ನಾಳೆ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಹೊಸವರ್ಷಕ್ಕೆ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯ ಓಪನ್ ಮಾಡಲು ಅನುಮತಿ ಸಿಕ್ಕಿದೆ. ಎಂದಿನಂತೆ ಪೂಜೆ ಪುನಸ್ಕಾರ ಜೊತೆಗೆ ಸಾರ್ವಜನಿಕರಿಗೆ ದರ್ಶನಕ್ಕೂ ಅನುಮತಿ ನೀಡಲಾಗಿದೆ. ದರ್ಶನಕ್ಕೆ ಬರುವ ಭಕ್ತರಿಗೆ ಎರಡು ಡೋಸ್ ಲಸಿಕೆ ಕಡ್ಡಾಯ. ಲಸಿಕೆ ಪಡೆಯದವರಿಗೆ ಸ್ಥಳದಲ್ಲೇ ಕೊರೊನಾ ಲಸಿಕೆ ಹಾಕಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
Published On - 9:58 am, Fri, 31 December 21