ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾ ಮರುನಾಮಕರಣ; ಹೊಸ ಹೆಸರು ಸತ್ಯವನ್ನು ಬದಲಾಯಿಸುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಭಾರತ

India | China: ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾ ತನ್ನ ಹೆಸರಿಟ್ಟ ಬೆನ್ನಲ್ಲೇ ಭಾರತ ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದೆ. ಅಲ್ಲದೇ ಹೊಸ ಹೆಸರನ್ನಿಟ್ಟ ತಕ್ಷಣ ಸತ್ಯ ಬದಲಾಗುವುದಿಲ್ಲ ಎಂದು ಹೇಳಿದೆ.

ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾ ಮರುನಾಮಕರಣ; ಹೊಸ ಹೆಸರು ಸತ್ಯವನ್ನು ಬದಲಾಯಿಸುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಭಾರತ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on:Dec 31, 2021 | 9:30 AM

ಚೀನಾವು ಅರುಣಾಚಲ ಪ್ರದೇಶದ ಜಾಂಗ್ನಾನ್​ನ ಕೆಲವು ಸ್ಥಳಗಳ ಮರುನಾಮಕರಣ ಮಾಡಿದ್ದನ್ನು ಭಾರತ ಬಲವಾಗಿ ತಿರಸ್ಕರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತ ಅರುಣಾಚಲ ಪ್ರದೇಶ ರಾಜ್ಯವು ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗವಾಗಿದೆ. ಚೀನಾ ಹೊಸ ಹೆಸರನ್ನು ನೀಡಿದ ತಕ್ಷಣ ಸತ್ಯ ಬದಲಾಗುವುದಿಲ್ಲ ಎಂದು ಹೇಳಿದೆ. ಚೀನಾವು ಇತ್ತೀಚೆಗೆ ದಕ್ಷಿಣ ಟಿಬೆಟ್ ಎಂದು ಹೇಳಿಕೊಳ್ಳುವ ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ತನ್ನ ಹೆಸರುಗಳನ್ನು ಇಟ್ಟಿತ್ತು. ಚೀನಾದ ಈ ನಡೆಗೆ ಭಾರತ ಖಾರವಾಗಿ ಪ್ರತಿಕ್ರಿಯಿಸಿದೆ. ‘‘ನಾವು ಇಂತಹದನ್ನು ಈ ಮೊದಲೇ ನೋಡಿದ್ದೇವೆ. ಚೀನಾವು ಅರುಣಾಚಲ ಪ್ರದೇಶದಲ್ಲಿ ಸ್ಥಳಗಳ ಮರುನಾಮಕರಣಕ್ಕೆ ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. 2017 ರ ಏಪ್ರಿಲ್​ನಲ್ಲಿಯೂ ಚೀನಾ ಅಂತಹ ಪ್ರಯತ್ನ ನಡೆಸಿತ್ತು’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ‘‘ಅರುಣಾಚಲ ಪ್ರದೇಶವು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ. ಅರುಣಾಚಲ ಪ್ರದೇಶದ ಸ್ಥಳಗಳಿಗೆ ನೂತನ ಹೆಸರುಗಳನ್ನು ಇಡುವುದರಿಂದ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ’’ ಎಂದು ಬಾಗ್ಚಿ ಹೇಳಿದ್ದಾರೆ. 

ಚೀನಾ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ಮಾಡಿರುವಂತೆ, ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಬುಧವಾರದಂದು ಅರುಣಾಚಲ ಪ್ರದೇಶದ 15 ಸ್ಥಳಗಳ ಹೆಸರು ಬದಲಾಯಿಸಿತ್ತು. ಚೀನಾದ ಅಕ್ಷರಗಳು, ಟಿಬೆಟಿಯನ್ ಮತ್ತು ರೋಮನ್ ವರ್ಣಮಾಲೆಯಲ್ಲಿ ಹೊಸ ಹೆಸರುಗಳನ್ನು ಇಡಲಾಗಿತ್ತು. ಇದು ಸ್ಟೇಟ್ ಕೌನ್ಸಿಲ್, ಚೀನಾ ಕ್ಯಾಬಿನೆಟ್ ನೀಡಿದ ಭೌಗೋಳಿಕ ಹೆಸರುಗಳ ಮೇಲಿನ ನಿಯಮಗಳಿಗೆ ಅನುಸಾರವಾಗಿದೆ ಎಂದು ಅದರ ವರದಿಯಲ್ಲಿ ತಿಳಿಸಲಾಗಿತ್ತು.

ನಿಖರವಾದ ರೇಖಾಂಶ ಮತ್ತು ಅಕ್ಷಾಂಶವನ್ನು ನೀಡಲಾದ 15 ಸ್ಥಳಗಳಲ್ಲಿ, ಎಂಟು ವಸತಿ ಪ್ರದೇಶಗಳು, ನಾಲ್ಕು ಪರ್ವತಗಳು, ಎರಡು ನದಿಗಳು ಮತ್ತು ಒಂದು ಮೌಂಟೇನ್ ಪಾಸ್ ಸೇರಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಇದು ಚೀನಾ ಅರುಣಾಚಲ ಪ್ರದೇಶದಲ್ಲಿ ಕೆಲವು ಸ್ಥಳಗಳಿಗೆ ಹೊಸ ಹೆಸರು ನೀಡಿದ ಎರಡನೇ ಘಟನೆಯಾಗಿದೆ. 2017ರಲ್ಲಿ ಆರು ಸ್ಥಳಗಳಿಗೆ ಇದೇ ಮಾದರಿಯಲ್ಲಿ ಹೊಸ ಹೆರನ್ನಿಟ್ಟಿದ್ದ ಚೀನಾ, ಅವು ದಕ್ಷಿಣ ಟಿಬೆಟ್​ನ ಭಾಗ ಎಂದು ಹೇಳಿಕೊಂಡಿತ್ತು.

ಕಳೆದ ವರ್ಷ ಮೇ ತಿಂಗಳಲ್ಲಿ ಆರಂಭವಾದ ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿನ ಮಧ್ಯೆ ಚೀನಾ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಮರುನಾಮಕರಣ ಮಾಡಿದೆ. ಯಾವುದೇ ಘಟನೆಗಳನ್ನು ಎದುರಿಸಲು ಭಾರತವು ಯೋಜನೆಗಳನ್ನು ಸಿದ್ಧಪಡಿಸಿದೆ ಎಂದು ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಇದನ್ನೂ ಓದಿ:

ಗುರುತು ಕೂಡ ಸಿಗದಂತೆ ಪತ್ತೆಯಾಗ್ತಿವೆ ಮೃತದೇಹಗಳು; ಶವಗಳ ತಾಣವಾಗ್ತಿದೆ ಮಾರನಹಳ್ಳಿ ಹೆದ್ದಾರಿ, ಏನಿದರ ರಹಸ್ಯ?

ಒಬ್ಬ ಗೃಹಿಣಿ ತಮ್ಮನ್ನು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಮುಚ್ಚಿಹೋಗಲಿದ್ದ ಹಾಲಿನ ಡೈರಿಯನ್ನು ಉಳಿಸಿದ ಕತೆಯಿದು!

Published On - 9:27 am, Fri, 31 December 21