
ಬೆಂಗಳೂರು, ಅಕ್ಟೋಬರ್ 26: ಕಲಬುರಗಿ ಜಿಲ್ಲೆಯಲ್ಲಿನ ಅಭಿವೃದ್ಧಿ ಕಾಮಗಾರಿಗಳ ವಿಚಾರವಾಗಿ ಪದೇ ಪದೇ ಕುಟುಕತ್ತಿದ್ದ ವಿಪಕ್ಷ ಬಿಜೆಪಿ ನಾಯಕರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ನಮ್ಮ ಸಾಧನೆಗಳನ್ನು ಮೋದಿಯವರು ಮೆಚ್ಚುತ್ತಿದ್ದಾರೆ. ಆದರೆ ಕರ್ನಾಟಕದ ಬಿಜೆಪಿಯವರು ಮೆಚ್ಚಲು ತಯಾರಿಲ್ಲ. ನನ್ನ ಸಾಧನೆಗಳನ್ನು, ಕೆಲಸಗಳನ್ನು ಪ್ರಶ್ನಿಸುವುದು ಬಿಜೆಪಿ ಸ್ನೇಹಿತರಿಗೆ ನಿತ್ಯದ ಉದ್ಯೋಗದಂತಾಗಿದೆ. ಉತ್ತರ ಸಿಕ್ಕರೂ ಮತ್ತದೇ ಪ್ರಶ್ನೆಗಳನ್ನು ಎತ್ತುವುದು ಅವರ ಹವ್ಯಾಸವಾಗಿದೆ ಎಂದವರು ಕಿಡಿ ಕಾರಿದ್ದಾರೆ.
ಬಿಜೆಪಿಯವರ ಪ್ರಶ್ನೆಗಳಿಗೆ ನಾನು ಉತ್ತರಿಸುವುದಕ್ಕಿಂತ ಕೇಂದ್ರ ಸರ್ಕಾರ ನನ್ನ ಕೆಲಸಗಳ ಬಗ್ಗೆ ಪುರಾವೆಗಳನ್ನು ನೀಡುತ್ತಿದೆ. ಮೋದಿಯವರ ಮನ್ ಕಿ ಬಾತ್ ನಲ್ಲಿ ನಮ್ಮ ಕಾಮ್ ಕಿ ಬಾತ್ ಸದ್ದು ಮಾಡಿವೆ. ಕಲಬುರಗಿಗೆ ಪ್ರಿಯಾಂಕ್ ಖರ್ಗೆ ಮಾಡಿದ್ದೇನು ಎಂದು ಕೇಳುವ ಬಿಜೆಪಿಯವರಿಗೆ ಮೋದಿಯವರ ಮನ್ ಕಿ ಬಾತ್ ಉತ್ತರವಾಗಿದೆ. ಕಲಬುರಗಿ ರೊಟ್ಟಿಗಳ ಬ್ರಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ನಾವು ಕೈಗೊಂಡ ಕ್ರಮಗಳಿಂದ ಕಲಬುರಗಿ ರೊಟ್ಟಿಗಳು ಈಗ ಜಾಗತಿಕ ಮಾರುಕಟ್ಟೆ ಪಡೆದುಕೊಂಡಿದೆ. ಈ ವಿಷಯವನ್ನು ಈ ಹಿಂದೆ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿದ್ದ ಮೋದಿಯವರು ಈಗ ನಮ್ಮ ಜಿಐ ಟ್ಯಾಗ್ ಪಡೆದಿರುವ ಕಲಬುರಗಿಯ ತೊಗರಿಯನ್ನು ಮಾಲ್ಡಿವ್ಸ್ ಗೆ ರಫ್ತು ಮಾಡುತ್ತಿರುವ ಉಪಕ್ರಮವನ್ನು ಪ್ರಸ್ತಾಪಿಸಿದ್ದಾರೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಟೆನ್ಷನ್ ಮಧ್ಯೆ ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿದ ಸಿದ್ದರಾಮಯ್ಯ
ಕಲಬುರಗಿಯ ವೈಶಿಷ್ಟ್ಯಮಯ ತೊಗರಿಯ ಮಾರುಕಟ್ಟೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಮೂಲಕ ಜಿಲ್ಲೆಯ ರೈತರಿಗೆ ಶೇ. 30ರಷ್ಟು ಹೆಚ್ಚು ಧಾರಣೆ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದೇವೆ. ಮಾತ್ರವಲ್ಲದೆ, ಜಿಲ್ಲೆಯಲ್ಲಿ ಬೆಳೆಯುವ ಹೆಸರು, ತೊಗರಿ, ಉದ್ದು, ಹುರುಳಿ ಮುಂತಾದ ಬೆಳೆಗಳನ್ನು ಸ್ಥಳೀಯವಾಗಿ ಮೌಲ್ಯವರ್ಧನೆ ಮಾಡುವ ನಿಟ್ಟಿನಲ್ಲಿ ಎನರ್ಜಿ ಬಾರ್ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ವಿಶಿಷ್ಟ ಕಾರ್ಯಕ್ರಮವೂ ಜಾರಿಯಲ್ಲಿದೆ. ಕಲಬುರಗಿ ಪಲ್ಸ್, ಭೀಮಾ ಪಲ್ಸ್, ಕಲಬುರಗಿ ಖಡಕ್ ರೊಟ್ಟಿ, ಕಮಲಾಪುರ ಕೆಂಪು ಬಾಳೆ ಸೇರಿದಂತೆ ಇಲ್ಲಿನ ರೈತರು ಉತ್ಪಾದಿಸುವ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಗುರುತು ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಈ ಮೂಲಕ ರೈತರು ಮತ್ತು ಕಾರ್ಮಿಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ನಮ್ಮ ಉದ್ದೇಶವಾಗಿದೆ. ಬಿಜೆಪಿಯವರು ನನ್ನನ್ನು ಪ್ರಶ್ನಿಸುವ ಮತ್ತು ಟೀಕಿಸುವ ಮುನ್ನ ಮೋದಿಯವರ ಮನ್ ಕಿ ಬಾತ್ ಕೇಳಲಿ, ನಂತರ ಆತ್ಮಸಾಕ್ಷಿಯಿಂದ ತಮ್ಮ ದಿಲ್ ಕಿ ಬಾತ್ ಆಡಲಿ ಎಂದವರು ವ್ಯಂಗ್ಯವಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:09 pm, Mon, 26 October 26