‘ಅಗ್ನಿವೀರರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಿ’: ಸಿಎಂ ಡಿಕೆಶಿಗೆ ಪತ್ರ ಬರೆದು ಸಿ.ಟಿ. ರವಿ ಮನವಿ

ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸಿ ಮರಳುವ ಅಗ್ನಿವೀರರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮುಖ್ಯಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಹಲವು ರಾಜ್ಯಗಳು ಕೈಗೊಂಡಿರುವ ಮಾದರಿಗಳನ್ನು ಅಧ್ಯಯನ ಮಾಡಿ ಕರ್ನಾಟಕ ಸರ್ಕಾರವೂ ಅಗ್ನಿವೀರರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ, ಸೂಕ್ತ ಪ್ರಮಾಣದ ಮೀಸಲಾತಿ ಕಲ್ಪಿಸುವ ಕುರಿತು ಅಧಿಕೃತ ನೀತಿ ರೂಪಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಅಗ್ನಿವೀರರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಿ: ಸಿಎಂ ಡಿಕೆಶಿಗೆ ಪತ್ರ ಬರೆದು ಸಿ.ಟಿ. ರವಿ ಮನವಿ
ಸಿಎಂ ಡಿಕೆಶಿಗೆ ಪತ್ರ ಬರೆದ ಸಿ.ಟಿ. ರವಿ
Image Credit source: PTI and CT Ravi Facebook Page
Edited By:

Updated on: Oct 12, 2026 | 6:22 PM

ಬೆಂಗಳೂರು, ಅಕ್ಟೋಬರ್​​ 12: ಗಡಿಯಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿ ದೇಶದ ರಕ್ಷಣೆಗಾಗಿ ತಮ್ಮ ಯೌವನದ ಅಮೂಲ್ಯ ಸಮಯವನ್ನು ಸಮರ್ಪಿಸುವ ಅಗ್ನಿವೀರರ ಭವಿಷ್ಯಕ್ಕೆ ಭದ್ರತೆಯನ್ನ ಒದಗಿಸಿ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸುವಂತೆ ಮತ್ತು ಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನಿಗದಿ ಜೊತೆಗೆ ಪ್ರತಿ ತಿಂಗಳ 5ರೊಳಗೆ ಸಂಬಳ ಪಾವತಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರಿಗೆ ಪತ್ರ ಬರೆದಿದ್ದಾರೆ.

ಸಿಎಂಗೆ ಸಿಟಿ ರವಿ ಬರೆದ ಪತ್ರದಲ್ಲೇನಿದೆ?

ಕೇಂದ್ರ ಸರ್ಕಾರ 2022ರಲ್ಲಿ, ಜಾರಿಗೆ ತಂದ ಅಗ್ನಿಪಥ ಯೋಜನೆಯಡಿ ಸೇನೆಗೆ ಆಯ್ಕೆಯಾದ ಯುವಕರು ನಾಲ್ಕು ವರ್ಷಗಳ ಕಾಲ ದೇಶದ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ, ಸೇವೆ ಪೂರ್ಣಗೊಳಿಸಿದ ಅಗ್ನಿವೀರರ ಪೈಕಿ ಶೇ.25ರಷ್ಟು ಮಂದಿಯನ್ನು ಸೇನೆಯಲ್ಲಿ ಮುಂದುವರಿಸಲಾಗುತ್ತದೆ, ಉಳಿದ ಶೇ.75ರಷ್ಟು ಯುವಕರು ಸೇವೆ ಮುಗಿಸಿ ನಾಗರಿಕ ಜೀವನಕ್ಕೆ ಮರಳಬೇಕಾಗುತ್ತದೆ. ಇಂತಹ ಯುವಕರ ಮುಂದಿನ ಉದ್ಯೋಗ ಮತ್ತು ಬದುಕಿನ ಭದ್ರತೆಯ ಬಗ್ಗೆ ಸರ್ಕಾರಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ, 2027ರ ಆರಂಭದಲ್ಲಿ, ಕರ್ನಾಟಕದ ಸಾವಿರಾರು ಅಗ್ನಿವೀರರು ತಮ್ಮ ಸೇವೆ ಪೂರ್ಣಗೊಳಿಸಿ ರಾಜ್ಯಕ್ಕೆ ಮರಳಲಿದ್ದಾರೆ. ಹೀಗಾಗಿ ಹಲವು ರಾಜ್ಯಗಳು ಕೈಗೊಂಡಿರುವ ಮಾದರಿಗಳನ್ನು ಅಧ್ಯಯನ ಮಾಡಿ ಕರ್ನಾಟಕ ಸರ್ಕಾರವೂ ಅಗ್ನಿವೀರರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ, ಸೂಕ್ತ ಪ್ರಮಾಣದ ಮೀಸಲಾತಿ ಕಲ್ಪಿಸುವ ಕುರಿತು ಅಧಿಕೃತ ನೀತಿ ರೂಪಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ‘ಪ್ರಜಾಪ್ರಭುತ್ವದ ಕಗ್ಗೊಲೆ, ಕೇಂದ್ರದ್ದು ಸರ್ವಾಧಿಕಾರಿ ಧೋರಣೆ’: ದೆಹಲಿಯಲ್ಲಿ ಬಿಜೆಪಿ ವಿರುದ್ಧ ಅಬ್ಬರಿಸಿದ ರಾಜ್ಯ ಕಾಂಗ್ರೆಸ್​​ ನಾಯಕರು

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಅನುಷ್ಠಾನದಲ್ಲಿ, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಮಹತ್ತ್ವದ ಪಾತ್ರ ವಹಿಸುತ್ತಿದ್ದಾರೆ. ಉತ್ತಮ ವಿದ್ಯಾರ್ಹತೆ ಮತ್ತು ತಾಂತ್ರಿಕ ಪರಿಣತಿ ಹೊಂದಿರುವ ಸಾವಿರಾರು ನೌಕರರು ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದರೂ ಅವರಿಗೆ ಸಕಾಲದಲ್ಲಿ ವೇತನ ಪಾವತಿಯಾಗದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಹಲವು ಇಲಾಖೆಗಳ ನೌಕರರಿಗೆ 3-5 ತಿಂಗಳವರೆಗೆ ಸಂಬಳ ಬಾಕಿ ಉಳಿದಿರುವ ವರದಿಗಳು ಸರ್ಕಾರದ ಕಾರ್ಯನಿವಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಇ-ಪಂಚಾಯಿತಿ, ಜಲ್ ಜೀವನ್ ಮಿಷನ್‌, ಸ್ವಚ್ಛ ಭಾರತ್ ಮಿಷನ್ ಸೇರಿದಂತೆ ಹಲವು ಯೋಜನೆಗಳ, ಅನುಷ್ಠಾನಕ್ಕೆ ಗುತ್ತಿಗೆ ನೌಕರರ ಶ್ರಮ ಅನಿವಾರ್ಯ. ಆದರೆ, ಯೋಜನೆಗಳ ಯಶಸ್ಸಿಗೆ ಅವರ ದುಡಿಮೆ ಬೇಕಿರುವ ಸರ್ಕಾರಕ್ಕೆ, ಅವರ ಸಂಬಳವನ್ನು ಸಕಾಲದಲ್ಲಿ ಪಾವತಿಸುವ ಜವಾಬ್ದಾರಿ ಮಾತ್ರ ನೆನಪಾಗದಿರುವುದು ದುರದೃಷ್ಟಕರ ಎಂದು ಸಿ.ಟಿ. ರವಿ ಹೇಳಿದ್ದಾರೆ.

ಈ ವಿಚಾರದಲ್ಲಿ ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಏಕರೂಪದ ವೇತನ ಪಾವತಿ ಮಾರ್ಗಸೂಚಿಯನ್ನು ರೂಪಿಸಬೇಕು. ಬಾಕಿ ಉಳಿದಿರುವ ವೇತನವನ್ನು ತಕ್ಷಣ ಬಿಡುಗಡೆ ಮಾಡುವುದರ ಜೊತೆಗೆ, ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ಅನುದಾನ ಮತ್ತು ಹಣಕಾಸು ನಿರ್ವಹಣೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ವೇತನ ಪಾವತಿಯಾಗುವುದನ್ನು ಖಚಿತಪಡಿಸಬೇಕು ಎಂದವರು ಮನವಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:21 pm, Mon, 12 October 26

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us