ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆಯನ್ನು (Text Book Revision) ಕರ್ನಾಟಕ ಸರ್ಕಾರ ಪ್ರಬಲವಾಗಿ ಸಮರ್ಥಿಸಿಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಹಿರಿಯ ಮತ್ರು ಪ್ರಭಾವಿ ಸಚಿವ ಎನಿಸಿರುವ ಆರ್.ಅಶೋಕ್ (Revenue Minister R Ashok) ಗುರುವಾರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಪಠ್ಯ ಪರಿಷ್ಕರಣೆ ಕುರಿತ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಹಿಂದಿನ ಸರ್ಕಾರಗಳು ಕೆಲವು ಪಠ್ಯಗಳನ್ನು ತೆಗೆದುಹಾಕಿವೆ. ಅವರಿಗೆ ರಾಮ, ಈಶ್ವರ ಹೆಸರು ಕೇಳಲು ಇಷ್ಟ ಇರಲಿಲ್ಲ. ಅವರಿಗೆ ಬೇಕು ಬೇಕಾದಂತೆ ಪಠ್ಯಗಳನ್ನು ಸೇರಿಸುತ್ತಿದ್ದರು. ನಮ್ಮ ಸರ್ಕಾರ ಇದ್ದಾಗ ಕುವೆಂಪು ಅವರ 8 ಪದ್ಯ / ಗದ್ಯ ಸೇರಿಸಿದ್ದೆವು. ಹಿಡನ್ ಅಜೆಂಡಾ ಇರುವ ಕೆಲ ಸಾಹಿತಿಗಳು ಹಿಂದೂ ಮಲಗಿದರೆ ದೇಶ ಮಲಗುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ (Siddaramiah) ಅವಧಿಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯಾದಾಗ ಈ ಸಾಹಿತಿಗಳು ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಗೆ ಭಾರತವೆಂದರೆ ಕಷ್ಟ. ನಮ್ಮ ಸಿದ್ದರಾಮಯ್ಯನವರಿಗೆ ಟಿಪ್ಪು ಎಂದರೆ ಮೈಮೇಲೆ ಬಂದುಬಿಡುತ್ತೆ. ಟಿಪ್ಪು ಸುಲ್ತಾನನ್ನು ವೈಭವೀಕರಿಸುತ್ತಿದ್ದ ಕೆಲವರು ಮೈಸೂರು ರಾಜವಂಶಸ್ಥರ ಕೊಡುಗೆಗಳನ್ನು ಕಡೆಗಣಿಸುತ್ತಿದ್ದರು. ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಅನೇಕ ಜನರನ್ನು ಮತಾಂತರ ಮಾಡಿದ್ದ ಎಂದು ಹೇಳಿದರು.
ಕುವೆಂಪು ಅವರ 8 ಗದ್ಯ / ಪದ್ಯದ ಬದಲು ಹಂಸಲೇಖ ಅವರ ಬಣ್ಣದ ಬುಗುರಿ ಪದ್ಯ ಸೇರಿಸಲಾಯಿತು. ಈಗ ಕಾಂಗ್ರೆಸ್ನವರು ಕುವೆಂಪು ಬಗ್ಗೆ ನಮ್ಮ ಸರ್ಕಾರ ತಾರತಮ್ಯ ಮಾಡಿದೆ ಎಂದು ಹೇಳುತ್ತಿದ್ದಾರೆ. ಈಗ ನಮ್ಮ ಸರ್ಕಾರ ಕುವೆಂಪು ಅವರ 10 ಗದ್ಯ / ಪದ್ಯಗಳನ್ನು ಪಠ್ಯದಲ್ಲಿ ಹೇಳಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಪಠ್ಯ ಬದಲಾವಣೆ ಮಾಡಿದಾಗ ಈ ಸಾಹಿತಿಗಳು ಏಕೆ ಧ್ವನಿ ಎತ್ತಲಿಲ್ಲ? ಈಗ ಏಕೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಬೆಂಗಳೂರು ಪರಿಚಯಿಸುವ ಪಾಠದಲ್ಲಿ ಕೆಂಪೇಗೌಡರ ಉಲ್ಲೇಖವೇ ಇರಲಿಲ್ಲ. ನಾಡಿನ ಅಭಿಮಾನದ ಗೀತೆಗಳಾಗಿದ್ದ ‘ಚೆಲುವ ಕನ್ನಡ ನಾಡಿದು’, ‘ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ’ ಪದ್ಯಗಳನ್ನು ತೆಗೆಯಲಾಗಿತ್ತು ಎಂದು ವಿವರಿಸಿದರು.
ಮೈಸೂರು ಮನೆತನದ ಅಧಿದೇವತೆಯ ವಿವರಗಳನ್ನು ತೆಗೆಯಲಾಗಿತ್ತು. ಟಿಪ್ಪು ಸುಲ್ತಾನನ ವರ್ಣನೆಗೆ ಹೆಚ್ಚು ಸ್ಥಳ ಮೀಸಲಿಟ್ಟು, ಮೈಸೂರು ಒಡೆಯರನ್ನು ಕಡೆಗಣಿಸಲಾಗಿದೆ. ಮಥುರಾ, ಶ್ರೀಕೃಷ್ಣ ಮಂದಿರ, ಸೋಮನಾಥ ದೇವಾಲಯಗಳಿಗೆ ಸಂಬಂಧಿಸಿದ ಅಂಶಗಳನ್ನು ಕೈಬಿಡಲಾಗಿದೆ. ಭಾರತದ ಮಹಾರಾಜರ ಕೊಡುಗೆಗಳನ್ನು ಕಡೆಗಣನೆ ಮಾಡಲಾಗಿದೆ. ಅಲ್ಲಾವುದ್ದೀನ್ ಖಿಲ್ಜಿ ಕಾಲದ ಆಡಳಿತದಲ್ಲಿ ಚಾಲ್ತಿಯಲ್ಲಿ ಗುಲಾಮಗಿರಿಯ ಅಂಶಗಳನ್ನು ಕೈಬಿಡಲಾಗಿದೆ. ‘ಮರೆಯಲಾಗದ ಮಹಾಸಾಮ್ರಾಜ್ಯ ವಿಜಯನಗರ’ ಹೆಸರಿನ ಪಾಠದ ಹಲವು ಅಂಶಗಳಿಗೆ ಕತ್ತರಿ ಹಾಕಲಾಗಿತ್ತು ಎಂದು ಹೇಳಿದರು.
ಮಹಾತ್ಮ ಗಾಂಧಿ ಅವರು ಭಾರತ-ಪಾಕಿಸ್ತಾನ ವಿಭಜನೆ ನಂತರ ಮತೀಯ ಗಲಭೆ ನಿಯಂತ್ರಿಸಲು ಕಲ್ಕತ್ತಾದಲ್ಲಿ ಗೀತೆಯನ್ನು ಪಠಿಸುತ್ತಿದ್ದರು ಎಂಬ ಅಂಶಕ್ಕೆ ಕತ್ತರಿ ಹಾಕಲಾಗಿತ್ತು. ಮತೀಯ ಯುದ್ಧಗಳ ಕುರಿತಾದ ಅಂಶಗಳ ವಿವರಗಳಿಗೆ ಕಡಿವಾಣ ಹಾಕಲಾಗಿತ್ತು. ಶಿವಾಜಿ ಮಹಾರಾಜರ ಉಲ್ಲೇಖವನ್ನು ಕಡಿಮೆ ಮಾಡಿ, ಚಂಗೀಸ್ ಖಾನ್ ಮತ್ತು ತೈಮೂರ್ ದಾಳಿಗಳ ಅಂಶವನ್ನು ತೆಗೆಯಲಾಗಿತ್ತು. ರಜಪೂತರ ಗುಣ ಧರ್ಮಗಳನ್ನು ಕೈ ಬಿಟ್ಟು ಮೊಘಲರಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಟಿಪ್ಪುವಿನ ಬಗ್ಗೆ ಅತಿಯಾದ ವೈಭವೀಕರಣ ಇತ್ತು ಎಂದು ತಿಳಿಸಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:11 pm, Thu, 23 June 22