
ಬೆಂಗಳೂರು, ನವೆಂಬರ್ 04: ರಾಜ್ಯ ಸರ್ಕಾರ ಸಾರಿಗೆ ಬಸ್ಗಳ ಟಿಕೆಟ್ ದರ ಏರಿಕೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ವಿಪಕ್ಷಗಳು ಪ್ರತಿಭಟನೆಗೆ ಕರೆ ನೀಡಿದ್ದರೆ, ಸಿಎಂ ಮತ್ತು ಸಚಿವರು ಮಾತ್ರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಡೀಸೆಲ್ ಹಾಕಲೂ ಹಣ ಇರಲಿಲ್ಲ, ತುಂಬಾ ನಷ್ಟ ಆಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಸಾಮಾನ್ಯ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯಿಂದಾಗಿಯೇ ಸಾರಿಗೆ ನಿಗಮಗಳು ದಿವಾಳಿಯಾಗಿವೆ ಎಂಬ ಆರೋಪಗಳಿಗೂ ಸಾರಿಗೆ ಸಚಿವ ಭೈರತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ. ಯಾವೆಲ್ಲ ಕಾರಣಗಳಿಂದ ನಿಗಮಗಳು ಸಂಕಷ್ಟಕ್ಕೆ ಸಿಲುಕಿವೆ ಎಂಬುದನ್ನವರು ವಿವರಿಸಿದ್ದಾರೆ.
ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಸರ್ಕಾರಿ ಸಾರಿಗೆ ಬಸ್ಗಳು ಕರ್ನಾಟಕದಲ್ಲಿದ್ದು, ನಾಲ್ಕೂ ನಿಗಮಗಳಲ್ಲಿ ಒಟ್ಟು 26,125 ಬಸ್ಗಳಿವೆ. 1,03,646 ನೌಕರರು ಕೆಲಸ ಮಾಡುತ್ತಿದ್ದಾರೆ. ವಿಪಕ್ಷಗಳು ಫ್ರೀ ಬಸ್ ಕೊಟ್ಟಿರೋದಕ್ಕೆ ನಿಗಮಗಳಿಗೆ ನಷ್ಟ ಆಗುತ್ತಿದೆ ಎನ್ನುತ್ತಿದ್ದಾರೆ. ಆದರೆ ಉಚಿತವಾಗಿ ಮಹಿಳೆಯರು ಓಡಾಡ್ತಿರೋದಕ್ಕೆ ಸರ್ಕಾರ ನಿಗಮಕ್ಕೆ ಹಣ ಕೊಡ್ತಿದೆ. ಡಿಸೇಲ್ ಬೆಲೆ, ನಿರ್ವಹಣೆ ದರ ಹೆಚ್ಚಾದಾಗ ಟಿಕೆಟ್ ದರ ಏರಿಕೆಯೂ ಅನಿವಾರ್ಯ ಎಂದು ಭೈರತಿ ಸುರೇಶ್ ತಿಳಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ಒಮ್ಮೆ ಮಾತ್ರ ಬಸ್ ಟಿಕೆಟ್ ದರ ಹೆಚ್ಚಿಸಲಾಗಿದೆ. 2025ರಲ್ಲಿ ಮಾತ್ರ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಆದರೆ ಈಗ ಲೀಟರ್ ಡೀಸೆಲ್ ಬೆಲೆ ಒಟ್ಟಾರೆಯಾಗಿ 10.47 ರೂ. ಜಾಸ್ತಿಯಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
ಇನ್ನು ಬಿಎಂಟಿಸಿ ಶೆ.180ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಮನವಿ ಮಾಡಿತ್ತಾದರೆ, ಉಳಿದ ಮೂರು ನಿಗಮಗಳು ಶೇ.90ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಿದ್ದವು. ಅತುಲ್ ತಿವಾರಿ ಕಮಿಟಿ ಕೂಡ ಬಿಎಂಟಿಸಿಗೆ ಶೇ.45ರಷ್ಟು ಮತ್ತು ಉಳಿದ ನಿಗಮಗಳಿಗೆ ಶೇ. 35ರಷ್ಟು ದರ ಏರಿಕೆ ಮಾಡಬಹುದು ಎಂದು ವರದಿ ನೀಡಿತ್ತು. ಆದರೆ ನಾವು ಅಷ್ಟೊಂದು ದರ ಏರಿಕೆ ಮಾಡಲಿಲ್ಲ ಎಂದು ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:27 pm, Wed, 4 November 26