ಶಾಲಾ ಮಕ್ಕಳಲ್ಲಿ ಬೊಜ್ಜು ಹೆಚ್ಚಳ: ಆರೋಗ್ಯ ಇಲಾಖೆಯಿಂದ ಪೋಷಕರಿಗೆ ಜಂಕ್ ಫುಡ್ ಬಗ್ಗೆ ಎಚ್ಚರಿಕೆ

ಶಾಲಾ ಮಕ್ಕಳಲ್ಲಿ ಅತಿಯಾದ ಜಂಕ್ ಫುಡ್ ಸೇವನೆಯಿಂದ ಬೊಜ್ಜು ಮತ್ತು ಇತರೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಇದನ್ನು ತಡೆಯಲು ಆರೋಗ್ಯ ಇಲಾಖೆಯು ಪೋಷಕರು ಮತ್ತು ಶಾಲೆಗಳಿಗೆ ಜಂಕ್ ಫುಡ್ ಕುರಿತು ಜಾಗೃತಿ ಮೂಡಿಸಲು ಮುಂದಾಗಿದೆ. ಮಕ್ಕಳಿಗೆ ಯಾವ ಆಹಾರ ಸುರಕ್ಷಿತ, ಎಷ್ಟು ಪ್ರಮಾಣದಲ್ಲಿ ಉಪ್ಪು-ಸಕ್ಕರೆ ಸೇವಿಸಬೇಕು ಎಂಬುದರ ಬಗ್ಗೆ ಮಾರ್ಗಸೂಚಿಗಳನ್ನು ನೀಡಲಿದೆ.

ಶಾಲಾ ಮಕ್ಕಳಲ್ಲಿ ಬೊಜ್ಜು ಹೆಚ್ಚಳ: ಆರೋಗ್ಯ ಇಲಾಖೆಯಿಂದ ಪೋಷಕರಿಗೆ ಜಂಕ್ ಫುಡ್ ಬಗ್ಗೆ ಎಚ್ಚರಿಕೆ
ಪ್ರಾತಿನಿಧಿಕ ಚಿತ್ರ
Image Credit source: Getty images
Edited By:

Updated on: Sep 13, 2026 | 10:24 PM

ಬೆಂಗಳೂರು, ಸೆಪ್ಟೆಂಬರ್​​ 13: ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಲ್ಲಿ ಅತಿಯಾದ ಎಣ್ಣೆ ಯುಕ್ತ ಆಹಾರ, ಬೇಕರಿ ಫುಡ್, ಫಾಸ್ಟ್ ಫುಡ್ ಹಾಗೂ ಜಂಕ್ ಫುಡ್​ ಸೇವನೆ ಹೆಚ್ಚುತ್ತಿದ್ದು, ಪರಿಣಾಮ ಮಕ್ಕಳಲ್ಲಿ ಬೊಜ್ಜು, ಮಧುಮೇಹ ಹಾಗೂ ರಕ್ತದೊತ್ತಡದಂತಹ ಗಂಭೀರ ಆರೋಗ್ಯ ಸಮಸ್ಯೆಗಳು ತೀವ್ರವಾಗಿ ಹೆಚ್ಚುತ್ತಿವೆ. ಹೀಗಾಗಿ ಈ ಬೆನ್ನಲ್ಲೇ ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದ್ದು, ಅಪಾಯಕಾರಿ ಜಂಕ್ ಫುಡ್​ಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲು ಮುಂದಾಗಿದೆ.

ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯ; ಎಚ್ಚೆತ್ತ ಆರೋಗ್ಯ ಇಲಾಖೆ

ಜಂಕ್ ಫುಡ್​ ಸೇವನೆಯಿಂದ ಶಾಲಾ ಮಕ್ಕಳಲ್ಲಿ ಬೊಜ್ಜು ಮತ್ತು ಮಧುಮೇಹ ವೇಗವಾಗಿ ಹೆಚ್ಚುತ್ತಿದೆ. ಜೊತೆಗೆ ಅನೇಕ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಅದರಲ್ಲೂ ಶಾಲಾ ಮಕ್ಕಳಲ್ಲಿ ಅತಿಯಾದ ಬೊಜ್ಜು ಕಂಡುಬರುತ್ತಿದ್ದು, ಶಾಲಾ ಮಕ್ಕಳು ಸೇವನೆ ಮಾಡುತ್ತಿರುವ ಆಹಾರದ ಮೇಲೂ ಸಾಕಷ್ಟು ಅನುಮಾನ ಬಂದ ಬಳಿಕ ಆರೋಗ್ಯ ಸಚಿವ ಯುಟಿ ಖಾದರ್ ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟಕ್ಕೆ ಕಡಿವಾಣ ಹಾಕಿದ್ದರು. ಆದರೆ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಇಲಾಖೆ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಜಂಕ್ ಫುಡ್​ಗಳ ಬಗ್ಗೆ ಜಾಗೃತಿಗೆ ಮುಂದಾಗಿದೆ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಸೇಬು ತಿನ್ನುವ ಅಭ್ಯಾಸವಿದ್ದರೆ ನಿಮಗೆ ಈ ವಿಷಯಗಳು ತಿಳಿದಿರಲೇಬೇಕು!

ಶಾಲಾ ಮಕ್ಕಳ ಆರೋಗ್ಯದ ಹಾಗೂ ಭವಿಷ್ಯದ ದೃಷ್ಠಿಯಿಂದ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು, ಮಾರ್ಗಸೂಚಿ ನೀಡಲು ಮುಂದಾಗಿದೆ. ಈ ಬಗ್ಗೆ ರಾಜ್ಯದ ತಜ್ಞ ನ್ಯೂಟ್ರಿಷಿಯನ್‌ ವೈದ್ಯರ ಸಲಹೆ ಮೇರೆಗೆ ಮಕ್ಕಳಿಗೆ ಆಹಾರ ಸೇವನೆ ಹಾಗೂ ಶಾಲೆಗಳ ಸುತ್ತಮುತ್ತ ಜಂಕ್ ಫುಡ್​ ಮಾರಾಟದ ಬಗ್ಗೆ ಮಾರ್ಗಸೂಚಿ ನೀಡಲು ಮುಂದಾಗಿದೆ. ಆಲೂಗೆಡ್ಡೆ ಚಿಪ್ಸ್, ಫ್ರೆಂಚ್ ಫ್ರೈಸ್, ಬರ್ಗರ್, ಪಿಜ್ಜಾ, ಹಾಟ್‌ಡಾಗ್, ಕೋಲ್ಡ್‌ಡ್ರಿಂಕ್ಸ್, ಎನರ್ಜಿ ಡ್ರಿಂಕ್ಸ್, ಚಾಕೊಲೇಟ್, ಡೋನಟ್ಸ್, ಐಸ್‌ಕ್ರೀಮ್, ಕ್ಯಾಂಡಿ, ಪ್ಯಾಕ್ ಮಾಡಿದ ಬಿಸ್ಕತ್ತುಗಳು, ನಮಕೀನ್, ಫ್ರೈಡ್ ಚಿಕನ್, ಟ್ಯಾಕೋಸ್, ರ‍್ಯಾಪ್ಸ್ ಹಾಗೂ ಇನ್‌ಸ್ಟಂಟ್ ನೂಡಲ್ಸ್ ಸೇರಿದಂತೆ ಹಾನಿಕಾರಕ ಆಹಾರಗಳನ್ನು ಶಾಲೆಗಳ ಸುತ್ತಮುತ್ತ ಮಾರಾಟ ಮಾಡುವುದಕ್ಕೆ ಈಗಾಗಲೇ ಕಡಿವಾಣ ಹಾಕಲಾಗಿದ್ದು, ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ.

ಪೋಷಕರಿಗೆ ಲಂಚ್ ಬಾಕ್ಸ್ ಮಾರ್ಗಸೂಚಿ ಮತ್ತು ಜಾಗೃತಿ

ಶಾಲೆಗಳು ಹಾಗೂ ಪೋಷಕರಿಗೆ ವಿಶೇಷ ಮಾರ್ಗಸೂಚಿ ರವಾನಿಸಲು ಇಲಾಖೆ ನಿರ್ಧರಿಸಿದೆ. ಮಕ್ಕಳ ವಯಸ್ಸಿಗೆ ಅನುಗುಣವಾಗಿ ಪ್ರತಿದಿನ ಎಷ್ಟು ಪ್ರಮಾಣದ ಉಪ್ಪು ಮತ್ತು ಸಕ್ಕರೆ ಸೇವನೆ ಇರಬೇಕು, ಯಾವ ವಯಸ್ಸಿನ ಮಕ್ಕಳಿಗೆ ಯಾವ ಆಹಾರಗಳು ಹೆಚ್ಚು ಅಪಾಯಕಾರಿ ಹಾಗೂ ಶಾಲೆಯ ಲಂಚ್ ಬಾಕ್ಸ್‌ನಲ್ಲಿ (ಮಧ್ಯಾಹ್ನದ ಊಟದ ಡಬ್ಬಿ) ಯಾವ ಬಗೆಯ ಪೌಷ್ಟಿಕ ಹಾಗೂ ಆರೋಗ್ಯಕರ ಆಹಾರಗಳನ್ನು ನೀಡಬೇಕು ಎಂಬ ಬಗ್ಗೆ ಇಲಾಖೆ ವಿವರವಾದ ಮಾಹಿತಿ ನೀಡಲಿದೆ.

ಆರೋಗ್ಯ ಇಲಾಖೆ ಕ್ರಮ ಸ್ವಾಗತಿಸಿದ ತಜ್ಞರು: ಬಾಲ್ಯದಲ್ಲೇ ಆರೋಗ್ಯ ರಕ್ಷಣೆಗೆ ಮುನ್ನುಡಿ

ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಮಧುಮೇಹ ಮತ್ತು ಬಿಪಿಯಂತಹ ಕಾಯಿಲೆಗಳಿಗೆ ತುತ್ತಾಗುವುದನ್ನು ತಡೆಯಲು ಆರೋಗ್ಯ ಇಲಾಖೆ ಕೈಗೊಂಡಿರುವ ಈ ಕ್ರಮವನ್ನು ಆಹಾರ ತಜ್ಞರು ಹಾಗೂ ಕ್ಲಿನಿಕಲ್ ಡಯಟಿಷಿಯನ್‌ಗಳು ಸ್ವಾಗತಿಸಿದ್ದಾರೆ. ಸಂಸ್ಕರಿತ, ಕರಿದ ಹಾಗೂ ಸಕ್ಕರೆಭರಿತ ಆಹಾರಗಳಿಂದ ಮಕ್ಕಳನ್ನು ದೂರವಿಟ್ಟು, ಸಮತೋಲಿತ ಪೌಷ್ಟಿಕ ಆಹಾರ ನೀಡುವತ್ತ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕೆಂದು ತಜ್ಞರು ಕಿವಿಮಾತು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us