ಭ್ರೂಣಹತ್ಯೆ ತಡೆಯಲು ಬೆಂಗಳೂರಿಗೆ ಆಂಧ್ರ ಮಾದರಿಯ ಹೊಸ ಯೋಜನೆ: ಗರ್ಭಿಣಿಯರಿಗಾಗಿ ಜಾರಿಗೆ ಬರಲಿದೆ ಸೇವ್ ಮಾಮ್!
ಮಂಡ್ಯದಲ್ಲಿ ನಡೆಯುತ್ತಿದ್ದ ಭ್ರೂಣಹತ್ಯೆ ಪ್ರಕರಣ ರಾಜ್ಯದಾದ್ಯಂತ ದೊಡ್ಡ ಸುದ್ದಿಗೆ ಗ್ರಾಸವಾಗಿತ್ತು. ಹೀಗೆಯೆ ಅನೇಕರು ಹೆಣ್ಣು ಮಗು ಎಂದೇ ಭ್ರೂಣವನ್ನು ತೆಗೆಸಿಹಾಕುತ್ತಿದ್ದ ಪ್ರಕರಣಗಳ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಅನೇಕ ಗರ್ಭಿಣಿಯರ ಡೇಟಾ ಕೂಡಾ ಮಿಸ್ಸಿಂಗ್ ಆಗುತ್ತಿದ್ದವು. ಇದನ್ನು ತಡೆಗಟ್ಟಲು ಇದೀಗ ಆಂಧ್ರ ಪ್ರದೇಶ ಮಾದರಿಯ ಹೊಸ ಯೋಜನೆ ಜಾರಿಗೆ ತರಲಾಗುತ್ತಿದೆ.

ಬೆಂಗಳೂರು, ಆಗಸ್ಟ್ 28: ಅದೆಷ್ಟು ತಿಳಿವಳಿಕೆ, ಜಾಗೃತಿ ಮೂಡಿಸಿದರೂ ಕೂಡಾ ಎಲ್ಲೋ ಒಂದು ಕಡೆ ಭ್ರೂಣಹತ್ಯೆಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಣ್ಣು ಭ್ರೂಣವನ್ನು ಕಾಪಾಡುವ ಸಲುವಾಗಿ ಅನೇಕ ಯೋಜನೆಗಳನ್ನು ಜಾರಿ ತರಲು ಸರ್ಕಾರ ಮುಂದಾಗಿದೆ. ಇದೀಗ ಆಂಧ್ರ ಪ್ರದೇಶ ಮಾದರಿಯನ್ನು ಬೆಂಗಳೂರಿನಲ್ಲಿ (Bengaluru) ಅಳವಡಿಸಲು ಚಿಂತನೆ ನಡೆಸಲಾಗಿದೆ. ಅದೆಷ್ಟೋ ಗರ್ಭಿಣಿಯರ ಡಾಟಾ ಮಿಸ್ಸಿಂಗ್ ಆಗುತ್ತಿವೆ. ಅವರು ಎಲ್ಲಿ ಹೋದರು, ಡೆಲಿವರಿ ಆಯ್ತಾ? ಯಾವ ಮಗು, ತಾಯಿ ಹಾಗೂ ಮಗು ಹೇಗಿದ್ದಾರೆ ಎಂಬ ಮಾಹಿತಿಯೇ ಸಿಗುತ್ತಿಲ್ಲ. ಅನೇಕರು ಗರ್ಭಿಣಿಯರಾಗಿ ತಾಯಿ ಕಾರ್ಡ್ ಮಾಡಿಸುತ್ತಾರೆ. ಅದಾದ ಕೆಲ ತಿಂಗಳ ಬಳಿಕ ರೆಗ್ಯುಲರ್ ಚೆಕ್‌ಅಪ್ ಸೇರಿದಂತೆ ಅನೇಕ ಮಾಹಿತಿ ಸಿಗುತ್ತಿಲ್ಲ. ಅನೇಕರು ಗರ್ಭಪಾತ ಮಾಡಿಸಿಕೊಳ್ಳುತ್ತಿದ್ದರೂ, ಖಾಸಗಿ ಆಸ್ಪತ್ರೆಗೆ ಹೋಗುತ್ತಿರುವ ಪ್ರಕರಣ ಹೆಚ್ಚುತ್ತಿರುವ ಕಾರಣ ಮಾಹಿತಿಗಳ ಕೊರತೆ ಹೆಚ್ಚಾಗುತ್ತಿದೆ. ಇಂಥ ಪ್ರಕರಣಗಳಲ್ಲಿ ಯಾವ ಕೆಟಗರಿಗೆ ಸೇರಿಸಬೇಕು ಎಂಬುದು ಕೂಡಾ ತಿಳಿಯಂದತಾಗಿದೆ.
ಈ ಹಿನ್ನೆಲೆ ‘ಸೇವ್ ಮಾಮ್’ ಎಂಬ ಹೊಸ ಯೋಜನೆ ಬೆಂಗಳೂರಿನಲ್ಲಿ ಆರಂಭ ಮಾಡಲಾಗುತ್ತಿದೆ. ಆಂಧ್ರ ಪ್ರದೇಶದ ಮಾದರಿಯಲ್ಲಿ ಯೋಜನೆ ಜಾರಿಗೊಳಿಸಲು ರೂಪುರೆಷೆ ಸಿದ್ಧಪಡಿಸಲಾಗಿದೆ.
ಹೇಗಿರಲಿದೆ ಸೇವ್ ಮಾಮ್ ಯೋಜನೆ?
ಆನ್‌ಲೈನ್ ಅಪ್ಲಿಕೇಶನ್ ಮೂಲಕ ಡಾಟಾವನ್ನ ಆರೋಗ್ಯ ಇಲಾಖೆಯ ಪೋರ್ಟರ್ಗೆ ಕಳುಹಿಸುವ ಪ್ಲಾನ್ ಇದಾಗಿದೆ. ಅಂದರೆ, ಬೆಂಗಳೂರು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಗರ್ಭಿಣಿಯರನ್ನು ಅಪ್ಲಿಕೇಶನ್ ಮೂಲಕ ಟ್ರಾಕ್ ಮಾಡಲು ಉದ್ದೇಶಿಸಲಾಗಿದೆ. ಗರ್ಭಿಣಿಯರು ಖಾಸಗಿ ಅಥವಾ ಬೇರೆ ಊರಿನ ಆಸಪತ್ರೆಗಳಿಗೆ ಹೋದರೂ ಕೂಡಾ ಅವರ ಟ್ರಾಕಿಂಗ್ ಡೀಟೇಲ್ಸ್ ಸಿಗುವಂತೆ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.
ಮಗು ಹುಟ್ಟಿ 2 ವರ್ಷದ ವರೆಗೂ ಟ್ರಾಕ್
ಗರ್ಭಿಣಿಯಾಗಿನಿಂದ ಮಗು ಹುಟ್ಟಿ ಎರಡು ವರ್ಷದವರೆಗೂ ಮಾಹಿತಿ ಟ್ರಾಕಿಂಗ್ ಮಾಡಲಾಗುತ್ತದೆ . ಆಶಾ ಕಾರ್ಯಕರ್ತೆಯರ ಮೂಲಕ ಈ ಆ್ಯಪ್‌ನಲ್ಲಿ ಸಂಪೂರ್ಣ ಮಾಹಿತಿ ಅಪ್ಲೋಡ್ ಮಾಡಿಸಿ, ಸಂಪೂರ್ಣ ಮಾಹಿತಿಯನ್ನು ಕಲೆಹಾಕಲಾಗುತ್ತದೆ. ಈಗಾಗಲೇ ಪ್ರಾಯೋಗಿಕ ಯೋಜನೆ ಸಿದ್ಧವಾಗಿದ್ದು, ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಯೋಜನೆ ಆರಂಭವಾಗಲಿದೆ.
ಇದನ್ನೂ ಓದಿ: ಗರ್ಭಿಣಿಯರಲ್ಲಿ ಕ್ಯಾಲ್ಸಿಯಂ ಕೊರತೆಯಾದರೆ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತೆ ನೋಡಿ
ಒಟ್ಟಿನಲ್ಲಿ ಗರ್ಭಿಣಿಯರ ಮಾಹಿತಿ ಮಿಸ್ಸಿಂಗ್ ಒಂದು ರೀತಿ ಆತಂಕವನ್ನು ಹುಟ್ಟಿಸಿದೆ. ಈ ಸಮಸ್ಯೆ ಬಗೆಹರಿಸಲು ಹೊಸ ಯೋಜನೆ ಜಾರಿಗೆ ತರಲಾಗುತ್ತಿದ್ದು, ಇದರಿಂದ ಯಾವ ರೀತಿ ಪ್ರಯೋಜನವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.







