ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಸಿಹಿ ಸುದ್ದಿ: ಅಕ್ಟೋಬರ್ನಲ್ಲಿ 7ನೇ ವೇತನ ಆಯೋಗ ರಚನೆ
ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಇದೇ ಅಕ್ಟೋಬರ್ ತಿಂಗಳಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಪುಣ್ಯ ಕೋಟಿ ಯೋಜನೆಯಡಿ 11,000 ರೂಪಾಯಿ ನೀಡಿ, ಗೋವುಗಳನ್ನು ದತ್ತು ಪಡೆದು, ಗೋ ಸಂರಕ್ಷಣೆ ಮಾಡುವಂತೆ ಸಿಎಂ ಬೊಮ್ಮಾಯಿ ಮನವಿ ಮಾಡಿದರು.
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಸಿಹಿ ಸುದ್ದಿ ನೀಡಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಇದೇ ಅಕ್ಟೋಬರ್ ತಿಂಗಳಲ್ಲಿ ಏಳನೇ ವೇತನ ಆಯೋಗವನ್ನು(Seventh Pay commission) ರಚಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.
ಸರ್ಕಾರಿ ನೌಕರರು ಹಸುಗಳನ್ನು ದತ್ತುಪಡೆಯಲು ಮುಖ್ಯಮಂತ್ರಿಗಳ ಕರೆ
ಇಂದು ವಿಧಾನ ಸೌಧದ ಔತಣ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಸರ್ಕಾರಿ ನೌಕರರು, ವಿಶೇಷವಾಗಿ ಪತ್ರಾಂಕಿತ ಎ ಮತ್ತು ಬಿ ಗುಂಪಿನ ನೌಕರರು, ಪುಣ್ಯ ಕೋಟಿ ಯೋಜನೆಯಡಿ 11,000 ರೂಪಾಯಿ ನೀಡಿ, ಗೋವುಗಳನ್ನು ದತ್ತು ಪಡೆದು, ಗೋ ಸಂರಕ್ಷಣೆ ಮಾಡುವಂತೆ ಸಿಎಂ ಬೊಮ್ಮಾಯಿ ಮನವಿ ಮಾಡಿದರು. ಪುಣ್ಯ ಕೋಟಿ ಯೋಜನೆ ಕರ್ನಾಟಕದ ರಾಸುಗಳ ರಕ್ಷಣೆಗಾಗಿ ಇದೆ. 1 ಲಕ್ಷಕ್ಕಿಂತ ಹೆಚ್ವು ಹಸುಗಕು ಬೇರೆ ಬೇರೆ ಗೋಶಾಲೆಗಳಲ್ಲಿ ಇವೆ. ವಯಸ್ಸಾದ ಹಸುಗಳನ್ನು ನಾವು ಸಾಕುತ್ತಿದ್ದೇವೆ. ಪ್ರತಿ ಜಿಲ್ಲೆಗೆ ಈ ವರ್ಷ ಹೊಸ ಗೋಶಾಲೆ ಸ್ಥಾಪನೆ ಮಾಡುತ್ತಿದ್ದು ಅದಕ್ಕಾಗಿ 50.ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ ಜನರ ಸಹಭಾಗಿತ್ವ ಕೂಡ ಮುಖ್ಯ. ಆಗ ಅದು ನಿಜವಾಗಿಯೂ ಪಾಲುಗೊಳ್ಳುವಿಕೆಯ ಪ್ರಜಾಪ್ರಭುತ್ವ ವಾಗುತ್ತದೆ. ಈ ಹಿನ್ನೆಲೆಯಲ್ಲಿ ಯೋಜನೆ ರೂಪಿಸಿ ವೆಬ್ ಸೈಟ್ ಸಹ ಅಭಿವೃದ್ಧಿ ಮಾಡಲಾಗಿದೆ. 11 ಸಾವಿರ ರೂ.ಗಳನ್ನು ಒಂದು ವರ್ಷಕ್ಕೆ ನಿಗದಿ ಮಾಡಿದ್ದು, ದತ್ತು ತೆಗೆದುಕೊಳ್ಳುವ ಗೋವಿನ ಚಿತ್ರವೂ ವೆಬ್ ಸೈಟ್ ನಲ್ಲಿ ಮೂಡುತ್ತದೆ. ಗೋವನ್ನು ದತ್ತು ಪಡೆಯಬಹುದು. ನಾನೇ 100 ಹಸುಗಳನ್ನು ದತ್ತು ಪಡೆದಿದ್ದೇನೆ ಹಾಗೂ ಮಂತ್ರಿಗಳೂ ದತ್ತು ಪಡೆಯಲು ವಿನಂತಿಸಿದ್ದೇನೆ ಎಂದರು. ಹಸುಗಳ ಮೇಲೆ ಪ್ರೀತಿ, ಅನುಕಂಪ ಇದ್ದರೆ ಹಾಗೂ ಪುಣ್ಯ ಗಳಿಸಬೇಕೆಂದಿದ್ದರೆ ದತ್ತು ಪಡೆಯಬಹುದು. ಸರ್ಕಾರಿ ನೌಕರರ ವಿಶೇಷವಾಗಿ ವರ್ಗ ಎ ಮತ್ತು ಬಿ ಗುಂಪಿನಲ್ಲಿರುವವರು ಇದನ್ನು ಅಳವಡಿಸಿಕೊಳ್ಳಬೇಕು ಎಂದು ವಿನಂತಿಸಿದರು.
ಇದೇ ವೇಳೆ ಮಾತನಾಡಿದ ಅವರು, ಕಾರ್ಯಾಂಗ ಸರ್ಕಾರದ ಪ್ರಮುಖವಾದ ಒಂದು ಭಾಗ ಮತ್ತು ಅಂಗ. ಬೆಳಗ್ಗೆಯಿಂದ ಸಂಜೆಯವರೆಗೆ ಮಾಡುವ ಕೆಲಸ, ಕರ್ತವ್ಯ ಎನಿಸುತ್ತದೆ. ಬದುಕಿನಲ್ಲಿ ಸೇವೆ ಮಾಡಿ ಸಂತೃಪ್ತಿ ಪಡೆಯುವುದು ಕಾಯಕ. ಸರ್ಕಾರಕ್ಕೆ ತೆರಿಗೆ ಪಾವತಿಸುವ ಪ್ರಜೆಗಳೇ ನಮ್ಮ ಮಾಲೀಕರು. ಆದ ಕಾರಣ, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪ್ರಜೆಗಳ ನೋವು ನಲಿವುಗಳಿಗೆ ಸ್ಪಂದಿಸಿ ಎಂದರು.
ರಾಜ್ಯ ಸರ್ಕಾರದ ವತಿಯಿಂದ ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ ಸರ್ಕಾರಿ ನೌಕರರ ದಿನಾಚರಣೆಯ ಸುಸಂದರ್ಭದಲ್ಲಿ ಆರೋಗ್ಯ ಸಂಜೀವಿನಿ ನಗದು ರಹಿತ ವೈದ್ಯಕೀಯ ಸೇವಾ ಯೋಜನೆಗೆ ಚಾಲನೆ ನೀಡಿ, 30 ನೌಕರರಿಗೆ ತಲಾ ಐವತ್ತು ಸಾವಿರ ರೂಪಾಯಿ ನಗದು ಒಳಗೊಂಡ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿ ಸರ್ಕಾರಿ ಸೇವೆಗೆ ಬರಲು ದೇವರ ಆಶೀರ್ವಾದ ಇರಬೇಕು. ಆದ ಕಾರಣ, ಸರ್ಕಾರಿ ನೌಕರರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಸಂಕಷ್ಟದ ಸಮಯದಲ್ಲಿ ಸರ್ಕಾರಿ ನೌಕರರು ಸ್ವಯಂ ಪ್ರೇರಣೆಯಿಂದ ಕರ್ತವ್ಯ ನಿರ್ವಹಿಸಬೇಕು
ಕೋವಿಡ್, ಪ್ರವಾಹದಂತಹ ಸಂಕಷ್ಟದ ಸಮಯದಲ್ಲಿ ಎಲ್ಲ ಹಂತದ ಸರ್ಕಾರಿ ನೌಕರರು ಸ್ವಯಂಪ್ರೇರಣೆಯಿಂದ ಕರ್ತವ್ಯ ನಿರ್ವಹಿಸಬೇಕು. ಪ್ರವಾಹದ ನಿರ್ವಹಣೆ, ಜನ ಜಾನುವಾರು,ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ, ಬೆಳೆಹಾನಿಯಾಗಿರುವ ಸಂದರ್ಭದಲ್ಲಿ ಸರ್ಕಾರ ಜನರ ಪರವಾಗಿ ನಿಲ್ಲುತ್ತದೆ. ಈ ಸವಾಲಿನ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕಾಗಿದ್ದು, ಸರ್ಕಾರಿ ನೌಕರರು ಇದರಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಒಳ್ಳೆಯ ಆಡಳಿತಗಾರ ಜನರ ಸಂಕಷ್ಟಕ್ಕೆ ಸ್ಪಂದಿಸಿ ಪ್ರತಿಕ್ರಿಯೆ ನೀಡುತ್ತಾನೆ. ಎಲ್ಲ ಸವಾಲುಗಳ ನಡುವೆ, ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಲು ಸರ್ಕಾರಿ ನೌಕರರ ಸಹಕಾರ ಮುಖ್ಯ ಎಂದರು.
ಸೇವೆ ಮುಖಾಂತರ ಸಂತೃಪ್ತಿಯನ್ನು ಕಂಡುಕೊಳ್ಳುವ ಅವಕಾಶ
ವಿಧಾನಸೌಧದ ಕಟ್ಟಡದ ಮೇಲೆ ಸರ್ಕಾರಿ ದೇವರ ಕೆಲಸ ಎಂದು ಬರೆಯಲಾಗಿದೆ. ದೇವರ ಕೆಲಸ ಎಂದರೆ ನಮ್ಮ ಆತ್ಮಸಾಕ್ಷಿಯಾಗಿ ಕೆಲಸವನ್ನು ಮಾಡಿದಾಗ ರಾಜ್ಯ ಸುಭಿಕ್ಷವಾಗುತ್ತದೆ. ಕಾರ್ಯಾಂಗ ಕೆಲಸದಿಂದ ನಾಡಿನ ಅಭಿವೃದ್ಧಿ, ಜನರ ಕಲ್ಯಾಣವಾಗುತ್ತದೆ. ನಾಡಿನ ಭವಿಷ್ಯವನ್ನು ನಿರ್ಣಯ ಮಾಡುವಂತಹ ಪ್ರಮುಖ ಕೆಲಸದಲ್ಲೀದ್ದೀರಿ ಎಂದು ಮರೆಯಬೇಡಿ. ನೀವುಗಳು ನೌಕರರಲ್ಲ, ಸರ್ಕಾರದ ಒಂದು ಪ್ರಮುಖ ಅಂಗ. ಕರ್ತವ್ಯಕ್ಕೂ ಕಾಯಕಕ್ಕೂ ಬಹಳ ವ್ಯತ್ಯಾಸವಿದೆ. ಕರ್ತವ್ಯವನ್ನು ಮೀರಿ, ಜವಾಬ್ದಾರಿಯುತವಾಗಿ ಜನಕಲ್ಯಾಣ ಕಾರ್ಯಕ್ರಮ ಜನರನ್ನು ಮುಟ್ಟುವವರೆಗೆ ಕೆಲಸ ಮಾಡುವುದು ಕಾಯಕ. ಸರ್ಕಾರಿ ನೌಕರರ ದುಡಿಮೆ ಸಮಾಜದ ಒಳಿತಿಗೆ ಕಾರಣವಾದರೆ , ಅದು ಕಾಯಕವಾಗುತ್ತದೆ. ಬಡಜನರಿಗೆ ನಿಮ್ಮ ನಿರ್ಣಯಗಳಿಂದ ಸಹಾಯವಾದರೆ ಅವರು ಹರಸುತ್ತಾರೆ. ಬಡವರಿಗೆ ಬದುಕನ್ನು ನೀಡಿದ ಸಂತೃಪ್ತಿ ನಿಮ್ಮದಾಗುತ್ತದೆ. ಸರ್ಕಾರಿ ನೌಕರರಿಗೆ ಸೇವೆ ಮುಖಾಂತರ ಸಂತೃಪ್ತಿಯನ್ನು ಕಂಡುಕೊಳ್ಳುವ ಅವಕಾಶವಿದೆ ಎಂದರು.
ಜನಕಲ್ಯಾಣದ ಕೆಲಸ ಮಾಡಲು ಒಂದು ಸಕಾರಣ ಸಾಕು
ಖಾಸಗಿ ವಲಯದವರಿಗೆ ಜವಾಬ್ದಾರಿ, ಗುರಿ ಇರುತ್ತದೆ, ಆದರೆ ನಿಮಗೆ ಅದರ ಜೊತೆಗೆ ಅಧಿಕಾರವೂ ಇದೆ. ಜನರಿಗೆ ಒಳ್ಳೆಯದನ್ನು ಮಾಡಬೇಕೆಂಬ ಸಕಾರಾತ್ಮಕತೆಯಿಂದ ನಿಮ್ಮ ಅಧಿಕಾರವನ್ನು ಬಳಸಬೇಕು. ಸರ್ಕಾರಿ ನೌಕರರು ರಾಜ್ಯದ ಅಭಿವೃದ್ದಿಗೆ ಕೊಡುಗೆ ನೀಡಬಹುದಾಗಿದೆ. ಜನಕಲ್ಯಾಣದ ಕೆಲಸ ಮಾಡದಿರಲು ನೂರಾರು ಕಾರಣಗಳಿರಬಹುದು, ಆದರೆ ಕೆಲಸ ಮಾಡಲು ಒಂದು ಸಕಾರಣ ಸಾಕು.ಜನಸಾಮಾನ್ಯರು ನಮ್ಮ ಮಾಲೀಕರು. ಇವರಿಗಾಗಿ ದುಡಿಯುವುದೇ ನಮ್ಮ ಗುರಿಯಾಗಬೇಕು. ಜನರು ಕಚೇರಿಗೆ ಬಂದಾಗ ಗೌರವದಿಂದ ಕಾಣಬೇಕು. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ನಿಮ್ಮ ಕೆಲಸದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಿ
ಕೋವಿಡ್ ನಿಂದ ಇಡೀ ವಿಶ್ವವೇ ನಲುಗಿದ್ದು, ಆರ್ಥಿಕತೆಯ ಹಿನ್ನಡೆಯಾಗಿದೆ. ಪ್ರಧಾನಿ ಮೋದಿಯವರು ತಿಳಿಸಿದಂತೆ ಜೀವ , ಜೀವನ ಉಳಿಯಬೇಕು. ಆರ್ಥಿಕತೆಯ ಸ್ಥಿರತೆಯನ್ನು ಕಾಯ್ದುಕೊಳ್ಳುವಂತಹ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಭಾರತದ ಲಸಿಕಾಕರಣದ ಯಶಸ್ಸು ವಿಶ್ವವನ್ನು ನಿಬ್ಬೆರಗಾಗಿಸಿದೆ. ಸ್ವಚ್ಛ ಭಾರತದ ಜೊತೆಗೆ ಸಶಕ್ತ ಭಾರತದ ನಿರ್ಮಾಣವನ್ನು ಸಾಧ್ಯವಾಗಿಸಿದ್ದಾರೆ. ದೇಶದ ಆರ್ಥಿಕತೆ ಸುಧಾರಣೆಯನ್ನು ಕಾಣುತ್ತಿದೆ. ನಾನು ಮುಖ್ಯಮಂತ್ರಿಯಾದ ತಕ್ಷಣ, 15 ಸಾವಿರ ಕೋಟಿ ತೆರಿಗೆ ಹೆಚ್ಚಿಸಲಾಯಿತು. ಈಗ ಡಿಜಟಲೀಕರಣ ಯುಗವಾಗಿದೆ. ಈ ಆಧುನಿಕ ಕಾಲದಲ್ಲಿ ಜನರಿಗೆ ಸುಲಭವಾಗಿ, ವೇಗದಲ್ಲಿ ಮಾಹಿತಿಗಳು ದೊರೆಯುತ್ತಿದೆ. ಈ ವೇಗಕ್ಕೆ ಸರಿಯಾಗಿ ನೌಕರರು ಕೆಲಸ ಮಾಡಬೇಕು. ಆಡಳಿತ ವ್ಯವಸ್ಥೆ ಮುಂದಿರಬೇಕಾದರೆ ಹೊಸ ತಂತ್ರಜ್ಞಾನವನ್ನು ನಿಮ್ಮ ಕೆಲಸದಲ್ಲಿ ರೂಢಿಸಿಕೊಳ್ಳಬೇಕು. ನಿಮ್ಮ ಕೆಲಸದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಿ ಎಂದು ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.
Published On - 2:36 pm, Tue, 6 September 22