ಕರ್ನಾಟಕದ 23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ: ಸಂಖ್ಯೆ 124ಕ್ಕೆ ಏರಿಕೆ

ಕರ್ನಾಟಕದಲ್ಲಿ ಮಳೆ ಕೊರತೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, 2026ರ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಅಧಿಕೃತವಾಗಿ ಘೋಷಿತ ಬರಪೀಡಿತ ತಾಲೂಕುಗಳ ಒಟ್ಟು ಸಂಖ್ಯೆ 124ಕ್ಕೆ ಏರಿಕೆಯಾಗಿದೆ. ಇವುಗಳಲ್ಲಿ 21 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ ಎರಡು ತಾಲೂಕುಗಳನ್ನು ಮಧ್ಯಮ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಈ ಘೋಷಣೆ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಆರು ತಿಂಗಳ ಅವಧಿಗೆ ಅನ್ವಯವಾಗಲಿದೆ.

ಕರ್ನಾಟಕದ 23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ: ಸಂಖ್ಯೆ 124ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Sep 17, 2026 | 6:55 PM

ಬೆಂಗಳೂರು, ಸೆಪ್ಟೆಂಬರ್​​ 17: ರಾಜ್ಯದ ಹಲವು ಭಾಗಗಳಲ್ಲಿ ಮುಂದುವರಿದಿರುವ ಮಳೆ ಕೊರತೆ ಹಾಗೂ ಒಣಹವೆ ಪರಿಸ್ಥಿತಿಯ ನಡುವೆ ಕರ್ನಾಟಕ ಸರ್ಕಾರ ಗುರುವಾರ ಮತ್ತೆ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇದರೊಂದಿಗೆ 2026ರ ಮುಂಗಾರು ಹಂಗಾಮಿನಲ್ಲಿ ಈವರೆಗೆ ಬರಪೀಡಿತ ಎಂದು ಅಧಿಸೂಚನೆ ಹೊರಡಿಸಿರುವ ತಾಲೂಕುಗಳ ಸಂಖ್ಯೆ 124ಕ್ಕೆ ಏರಿಕೆಯಾಗಿದೆ. ಮೊದಲ ಹಂತದಲ್ಲಿ ಆಗಸ್ಟ್ 27ರಂದು ಸರ್ಕಾರವು 2026ರ ಮುಂಗಾರು ಹಂಗಾಮಿಗೆ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು.

21 ತೀವ್ರ, 2 ತಾಲೂಕು ಮಧ್ಯಮ ಬರಪೀಡಿತ

ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆ ಮುಂದುವರಿದ ಹಿನ್ನೆಲೆಯಲ್ಲಿ, ಉಳಿದ 139 ತಾಲೂಕುಗಳ ಪರಿಸ್ಥಿತಿಯನ್ನು KSNDMC ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಿತ್ತು. ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರ ನೇತೃತ್ವದ ನೈಸರ್ಗಿಕ ವಿಕೋಪಗಳ ಸಚಿವ ಸಂಪುಟ ಉಪಸಮಿತಿಯ ನಿರ್ದೇಶನದ ಮೇರೆಗೆ, 24 ತಾಲೂಕುಗಳ 214 ಗ್ರಾಮಗಳಲ್ಲಿ ಮೊಬೈಲ್ ಅಪ್ಲಿಕೇಶನ್‌ ಮೂಲಕ ಸ್ಥಳ ಪರಿಶೀಲನೆ ನಡೆಸಲಾಗಿತ್ತು. ಈ ಸ್ಥಳ ಪರಿಶೀಲನೆ ಹಾಗೂ KSNDMC ಸಲ್ಲಿಸಿದ ಸಮಗ್ರ ವರದಿಯ ಆಧಾರದ ಮೇಲೆ ಇದೀಗ 23 ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇವುಗಳಲ್ಲಿ 21 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ ಎರಡು ತಾಲೂಕುಗಳನ್ನು ಮಧ್ಯಮ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಈ ಘೋಷಣೆ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಆರು ತಿಂಗಳ ಅವಧಿಗೆ ಅನ್ವಯವಾಗಲಿದೆ.

ಇದನ್ನೂ ಓದಿ: ಆತುರ ಬೇಡ, ಕೇಂದ್ರದ ನಿಯಮಾನುಸಾರ ಬರ ಪೀಡಿತ ತಾಲೂಕುಗಳ ಘೋಷಣೆ: ಸಿಎಂ ಡಿ.ಕೆ. ಶಿವಕುಮಾರ್

ತೀವ್ರ ಬರಪೀಡಿತ ತಾಲೂಕುಗಳು

ತುಮಕೂರು ಜಿಲ್ಲೆಯ ತಿಪಟೂರು, ಕೊಪ್ಪಳ ಜಿಲ್ಲೆಯ ಕರಟಗಿ, ರಾಯಚೂರು ಜಿಲ್ಲೆಯ ಮಾನ್ವಿ, ಸಿಂಧನೂರು ಮತ್ತು ಸಿರವಾರ, ಕಲಬುರಗಿ ಜಿಲ್ಲೆಯ ಅಫಜಲಪುರ, ಆಳಂದ, ಚಿತ್ತಾಪುರ, ಕಲಬುರಗಿ, ಯಡ್ರಾಮಿ ಮತ್ತು ಶಹಾಬಾದ್, ಬೀದರ್ ಜಿಲ್ಲೆಯ ಭಾಲ್ಕಿ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ಬಬಲೇಶ್ವರ ಮತ್ತು ತಿಕೋಟಾ, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ನವಲಗುಂದ, ಹುಬ್ಬಳ್ಳಿ ನಗರ ಮತ್ತು ಅಣ್ಣಿಗೇರಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕುಗಳನ್ನು ತೀವ್ರ ಬರಪೀಡಿತ ಎಂದು ಘೋಷಿಸಲಾಗಿದೆ.

ಮಧ್ಯಮ ಬರಪೀಡಿತ ತಾಲೂಕುಗಳು

ಕೊಡಗು ಜಿಲ್ಲೆಯ ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕುಗಳನ್ನು ಮಧ್ಯಮ ಬರಪೀಡಿತ ಎಂದು ಘೋಷಿಸಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರಾಗಿರುವ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ (SDRF) ಮಾರ್ಗಸೂಚಿಗಳ ಅನ್ವಯ ಅಗತ್ಯ ಪರಿಹಾರ ಹಾಗೂ ತುರ್ತು ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಅಧಿಕಾರ ನೀಡಿದೆ. ಕೃಷಿ ಆಯುಕ್ತರು, ತೋಟಗಾರಿಕೆ ಇಲಾಖೆ ನಿರ್ದೇಶಕರು ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಜಂಟಿಯಾಗಿ ಬೆಳೆ ನಷ್ಟದ ಸಮೀಕ್ಷೆ ನಡೆಸಿ, ಸಾಧ್ಯವಾದಷ್ಟು ಶೀಘ್ರದಲ್ಲಿ ಪರಿಹಾರ ಅಂದಾಜು ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ. ಸೆಪ್ಟೆಂಬರ್‌ನಲ್ಲಿಯೂ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ, KSNDMC ಪ್ರತಿ ವಾರ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿದೆ ಎಂದು ಸರ್ಕಾರ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:52 pm, Thu, 17 September 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us