
ಬೆಂಗಳೂರು, ಸೆಪ್ಟೆಂಬರ್ 17: ಉನ್ನತ ಶಿಕ್ಷಣ ಪಡೆಯಲು ಗ್ರಾಮೀಣ ಭಾಗದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅವಲಂಬಿಸುವುದು ಸರ್ಕಾರಿ ವಿಶ್ವ ವಿದ್ಯಾಲಯಗಳನ್ನ. ಆದರೆ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಬಹುತೇಕ ಯೂನಿವರ್ಸಿಟಿಗಳಲ್ಲಿ ನುರಿತ ಖಾಯಂ ಪ್ರಾಧ್ಯಾಪಕರೇ ಇಲ್ಲದಂತಾಗಿರೋದು ವಿದ್ಯಾರ್ಥಿಗಳ ಕಲಿಕೆ ಕುಂಠಿತವಾಗಿರುವ ಜೊತೆಗೆ, ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ, ನೃಪತುಂಗ ವಿವಿ, ಕೇಂದ್ರ ವಿವಿ ಹಾಗೂ ಮಹಾರಾಣಿ ಕ್ಲಸ್ಟರ್ ವಿವಿ ಸೇರಿದಂತೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಪಾಠ ಹೇಳಿಕೊಡುವ ಗುರುಗಳೇ ಇಲ್ಲದಂತಾಗಿದೆ. ವಿದ್ಯಾರ್ಥಿಗಳಿಗೆ ಕೇವಲ ಅತಿಥಿ ಶಿಕ್ಷಕರಿಂದ ಪಾಠ ಕೇಳುವ ಭಾಗ್ಯ ದೊರೆತಿದೆ. ರಾಜ್ಯದಲ್ಲಿ ಸರಿಸುಮಾರು 4,000ಕ್ಕೂ ಹೆಚ್ಚು ಬೋಧಕರ ಹುದ್ದೆಗಳು ಖಾಲಿ ಇರುವ ಪರಿಣಾಮ, ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಪದವಿ ಕೋರ್ಸ್ ಮುಗಿಸಿ ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಸ್ನಾತಕೋತ್ತರ ಪದವಿಗೆ ದಾಖಲಾತಿ ಪಡೆಯುವ ವಿಧ್ಯಾರ್ಥಿಗಳು ಸಾಕಷ್ಟು ಕನಸುಗಳನ್ನು ಹೊತ್ತು ಬಂದಿರ್ತಾರೆ. ಜ್ಞಾನ ದೇಗುಲ ಎಂದೇ ಕರೆಸಿಕೊಳ್ಳುವ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ಮಟ್ಟದ ಜ್ಞಾನ ಸಿಗುತ್ತೆ ಅನ್ನೋ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ ವಿದ್ಯಾರ್ಥಿಗಳ ನಿರೀಕ್ಷೆಗೆ ತಕ್ಕಂತೆ ಬೋಧನಾ ಸಿಬ್ಬಂದಿ ಪೂರೈಸದ ಸರ್ಕಾರದ ನಡೆ ವಿದ್ಯಾರ್ಥಿಗಳ ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ ಆದಷ್ಟು ಬೇಗ ಪ್ರಾಧ್ಯಾಪಕರ ನೇಮಕಾತಿ ಮಾಡುವಂತೆ ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ: ಗುಡ್ ನ್ಯೂಸ್: ರೇಷನ್ ಕಾರ್ಡ್ ಇ-ಕೆವೈಸಿ ದಿನಾಂಕ ವಿಸ್ತರಣೆ: ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿ ಪರಿಷ್ಕರಣೆ
ಈ ನಡುವೆ ರಾಜ್ಯದ ವಿವಿಗಳಿಗೆ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಭೇಟಿ ನೀಡಿ, ಸ್ಥಿತಿಗತಿಗಳ ಕುರಿತು ಚರ್ಚೆ ನಡೆಸಲು ಮುಂದಾಗಿದ್ದಾರೆ. ಜೊತೆಗೆ ರಾಜ್ಯದ 410 ಪ್ರಥಮ ದರ್ಜೆ ಕಾಲೇಜುಗಳಿಗೆ ಖಾಯಂ ಪ್ರಾಂಶುಪಾಲರು ಇರಲಿಲ್ಲ. ಹೀಗಾಗಿ ಇನ್ನೊಂದು ವಾರದಲ್ಲಿ 320 ಕಾಲೇಜಿಗೆ ಪ್ರಾಂಶುಪಾಲರ ನೇಮಕ ಮಾಡಲು ಇಲಾಖೆ ಮುಂದಾಗಿದೆ. 1 ಸಾವಿರ ಪ್ರೊಫೆಸರ್ಗಳನ್ನು ವಿಶ್ವವಿದ್ಯಾಲಯಕ್ಕೆ, 2 ಸಾವಿರ ಪ್ರಾಧ್ಯಾಪಕರನ್ನು ಕಾಲೇಜುಗಳಿಗೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಇದಕ್ಕೆ ಹಣಕಾಸು ಇಲಾಖೆಯೂ ಒಪ್ಪಿಗೆ ನೀಡಿದ್ದು, ಆದಷ್ಟು ಬೇಗ ಕರ್ನಾಟಕ ಪ್ರರೀಕ್ಷಾ ಪ್ರಾಧಿಕಾರದ ಮೂಲಕ ನೇಮಕ ಮಾಡಲಾಗುವುದು ಎಂದು ಟಿವಿ9ಗೆ ಸಚಿವರು ಭರವಸೆ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:00 pm, Thu, 17 September 26