
ಬೆಂಗಳೂರು, ನವೆಂಬರ್ 29: ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ಕಾಫಿಯೊಂದಿಗೆ ನೀಡಿದ ವಡಾದೊಳಗೆ ಲೋಹದ ಬೋಲ್ಟ್ ಪತ್ತೆಯಾಗಿದ್ದು, ರೈಲಿನಲ್ಲಿ ಉಚಿತವಾಗಿ ಒದಗಿಸುವ ಆಹಾರ ಸೇವೆಯ ಭಾಗವಾಗಿ ಈ ತಿಂಡಿಯನ್ನು ನೀಡಲಾಗಿತ್ತು ಎನ್ನಲಾಗಿದೆ. ಘಟನೆಯಿಂದ ರೈಲಿನಲ್ಲಿ ಪ್ರಯಾಣಿಕರಿವೆ ವಿತರಿಸಲಾಗುವ ಆಹಾರಗಳ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಸಮರ್ಥ್ ಕೊಡ್ಯಾಲ್ ಎಂಬ ಪ್ರಯಾಣಿಕರು ರೈಲು ಸಂಖ್ಯೆ 26752ರಲ್ಲಿ ಪ್ರಯಾಣಿಸುತ್ತಿದ್ದಾಗ ವಡಾದೊಳಗೆ ಬೋಲ್ಟ್ ಕಂಡುಬಂದಿದೆ ಎನ್ನಲಾಗಿದೆ.
ವಡಾದೊಳಗೆ ಸಿಲುಕಿದ್ದ ಬೋಲ್ಟ್‌ನ ಫೋಟೋಗಳನ್ನು ಸಮರ್ಥ್ ಕೊಡ್ಯಾಲ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಆಹಾರದ ಗುಣಮಟ್ಟದಲ್ಲಿನ ಗಂಭೀರ ಲೋಪವನ್ನು ಪ್ರಶ್ನಿಸಿರುವ ಅವರು, ಭಾರತೀಯ ರೈಲ್ವೆ ಮತ್ತು ಅದರ ಆಹಾರ ಪೂರೈಕೆ ಸಂಸ್ಥೆಯಾದ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ (IRCTC) ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆಕಸ್ಮಿಕವಾಗಿ ಈ ಲೋಹದ ವಸ್ತುವನ್ನು ನುಂಗಿದ್ದರೆ ಉಸಿರುಗಟ್ಟುವಿಕೆ ಅಥವಾ ಪ್ರಾಣಕ್ಕೇ ಕುತ್ತಾಗುವ ಸಾಧ್ಯತೆ ಇತ್ತು. ಇನ್ನು ಘಟನೆ ಬಗ್ಗೆ ಭಾರತೀಯ ರೈಲ್ವೆ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಘಟನೆಗೆ ಗಂಭೀರವಾಗಿ ಸ್ಪಂದಿಸಿರುವುದಾಗಿ ತಿಳಿಸಿರುವ IRCTC, ಆಹಾರ ಪೂರೈಕೆಯ ಜವಾಬ್ದಾರಿ ಹೊಂದಿರುವ ಹೊರಗುತ್ತಿಗೆ ಸಂಸ್ಥೆಯ ವಿರುದ್ಧ ಕಠಿಣ ದಂಡನಾತ್ಮಕ ಕ್ರಮ ಕೈಗೊಳ್ಳಲು ಮುಂದಾಗಿದೆ.
ಇದನ್ನೂ ಓದಿ: ಶಬರಿಮಲೆ, ಕ್ರಿಸ್‌ಮಸ್ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ಮಂಗಳೂರು–ಕೊಲ್ಲಂ ನಡುವೆ ವಿಶೇಷ ರೈಲು
ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸಿರುವ IRCTC, ನಿಗದಿತ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (SOPs) ಕಟ್ಟುನಿಟ್ಟಾಗಿ ಪಾಲಿಸುವಂತೆ ಅಡುಗೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳು ಅಡುಗೆ ಘಟಕವನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು ಮತ್ತು ಆಹಾರ ತಯಾರಿಕೆ ಪುನರಾರಂಭಿಸುವ ಮೊದಲು ಎಲ್ಲಾ ಉಪಕರಣಗಳನ್ನು ಸರಿಯಾಗಿ ತಪಾಸಣೆ ಮಾಡಬೇಕು ಎಂದು ನಿರ್ದೇಶನ ನೀಡಿದೆ.
ಇನ್ನು, ಈ ವಿಚಿತ್ರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳ ಸುರಿಮಳೆಗೆ ಕಾರಣವಾಗಿದೆ. ಬೋಲ್ಟ್ ಸಿಲುಕಿರುವ ವಡಾದ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಹಲವು ನೆಟ್ಟಿಗರು ವ್ಯಂಗ್ಯಭರಿತ ಕಾಮೆಂಟ್‌ಗಳನ್ನು ಮಾಡಿದ್ದು, IRCTC ತನ್ನ ಮೆನುವಿಗೆ ಹೊಸ ಖಾದ್ಯವನ್ನು ಸೇರಿಸಿದೆ ಎಂದು ತಮಾಷೆ ಮಾಡಿದ್ದಾರೆ. ಮ್ಮ ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಿಸಲು ಅವರು ಸಹಾಯ ಮಾಡುತ್ತಿದ್ದಾರೆ! ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ಈ ಹೊಸ ಖಾದ್ಯಕ್ಕೆ ‘ಬೋಲ್ಟ್ ವಡಾ’ ಎಂದು ಹೆಸರಿಟ್ಟಿದ್ದಾರೆ. ನ್ನೊಬ್ಬ ನೆಟ್ಟಿಗರು, ಯಮಧರ್ಮರಾಯನ ಸಂಬಂಧಿಕರಿಗೆ ಅಡುಗೆ ಗುತ್ತಿಗೆ ನೀಡಿದರೆ ಹೀಗೆಯೇ ಆಗುವುದು ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.