ಪ್ರಯಾಣದಲ್ಲೂ ಖಾಸಗಿ ಸಮಯ ಕಳೆಯಲು ಜೋಡಿಗಳಿಗಾಗಿ ಬೆಂಗಳೂರಿನಲ್ಲಿ ಸ್ಮೂಚ್ ಕ್ಯಾಬ್
ಕೆಲ ಪ್ರೇಮಿಗಳು ಕೂಡ ಇತ್ತೀಚಿನ ದಿನಗಳನ್ನು ಕ್ಯಾಬ್‌ನಲ್ಲಿ ಸಂಚರಿಸುವಾಗ ಸುಮ್ಮನೆ ಕೂರುವ ಜಾಯಮಾನದವರಲ್ಲ. ಕೆಲವರು ಮಿತಿಮೀರಿ, ಮೈಮರೆತು ವರ್ತಿಸುವ ಘಟನೆಗಳು ಬೆಂಗಳೂರಿನಲ್ಲಿ ಕಾಮನ್ ಆಗಿಬಿಟ್ಟಿದೆ. ಹಿಂಬದಿ ಸೀಟ್‌ನಲ್ಲಿ ಪ್ರಯಾಣಿಕರಂತೆ ಕೂರುವ ಕೆಲ ಪ್ರೇಮಿಗಳು ಅಸಭ್ಯವಾಗಿ ವರ್ತಿಸುತ್ತಿರುತ್ತಾರೆ. ಇದರಿಂದ ಮುಜುಗರ ಹಾಗೂ ಕಸಿವಿಸಿಗೆ ಒಳಗಾಗುವ ಚಾಲಕರು ಇದನ್ನು ಕಂಡೂ ಕಾಣದಂತೆ ಸುಮ್ಮನಾಗಿಬಿಡುತ್ತಾರೆ. ಇದೀಗ ಇಂತಹ ಜೋಡಿಗಳಿಗಾಗಿಯೇ ಪ್ರತ್ಯೇಕ ಕ್ಯಾಬ್ ಬಂದಿವೆ.

ಬೆಂಗಳೂರು, (ಏಪ್ರಿಲ್ 05): ಪಾರ್ಕ್, ಟ್ರೈನ್, ಬಸ್, ಬಸ್‌ಸ್ಟ್ಯಾಂಡ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೆಲ ಪ್ರೇಮಿಗಳು (Lovers) ಲೋಕದ ಪರಿವೇ ಇಲ್ಲದೆ ಕಿಸ್ಸಿಂಗ್-ರೊಮ್ಯಾನ್ಸ್ ಅಂತ ಅತಿರೇಕವಾಗಿ ವರ್ತಿಸುತ್ತಾರೆ. ಕ್ಯಾಬ್‌ನಲ್ಲೂ (Cab) ಆಗುವ ಇಂತಹ ಘಟನೆಗಳಿಂದ ಬೇಸತ್ತು ಇಲ್ಲೊಬ್ಬ ಡ್ರೈವರ್ ತನ್ನ ಕ್ಯಾಬ್‌ನಲ್ಲಿ ನೋ ರೊಮ್ಯಾನ್ಸ್.. ಇದು ಕ್ಯಾಬ್ ಓಯೋ ಅಲ್ಲ, ನಡುವೆ ಅಂತರವಿರಲಿ ಎಂದು ಹಾಕಿದ್ದ ಬೋರ್ಡ್ ಸಿಕ್ಕಾಪಟೆ ವೈಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಜೋಡಿಗಳ ಪ್ರಯಾಣ ಸಮಯದಲ್ಲೂ ಯಾರ ಕಿರಿಕಿರಿ ಇಲ್ಲದೆ ಖಾಸಗಿ ಸಮಯ ಕಳೆಯಲು ಸ್ಮೂಚ್ ಕ್ಯಾಬ್ (Smooch Cabs) ಆರಂಭಿಸಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು. ಈ ಕ್ಯಾಬ್‌ನಲ್ಲಿ ಯಾರ ಭಯ, ಅಡೆತಡೆಗಳಿಲ್ಲದೇ ಜೋಡಿಗಳು ಉಲ್ಲಾಸದೊಂದಿಗೆ ಪ್ರಯಾಣ ಮಾಡಬಹುದಂತೆ. ಆದ್ರೆ, ಕೆಲವರು ಈ ರೀತಿ ಏಪ್ರಿಲ್ ಫೂಲ್ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನನ ಕ್ಯಾಬ್, ಆಟೋ ಸೇರಿದಂತೆ ಹಲವು ಟ್ಯಾಕ್ಸಿಗಳಲ್ಲಿ ಕೆಲ ಚಾಲಕರು ಇದು ಕ್ಯಾಬ್, ರೊಮ್ಯಾನ್ಸ್‌ಗೆ ಅವಕಾಶವಿಲ್ಲ ಎಂದು ಸೂಚನಾ ಬೋರ್ಡ್ ಹಾಕಿದ ಘಟನೆಗಳು ವೈರಲ್ ಆಗಿತ್ತು. ಹಾಗಂತ ಕಪಲ್ಸ್ ಬೇಸರ ಪಡಬೇಕಿಲ್ಲ. ಕಾರಣ ಇದೀಗ ಜೋಡಿಗಳ ಪ್ರಯಾಣ ಸಮಯದಲ್ಲಿ ತಮ್ಮ ಖಾಸಗಿ ಸಮಯ ಕಳೆಯಲು, ಯಾರ ಕಿರಿಕಿರಿ ಇಲ್ಲದೆ ತಬ್ಬಿಕೊಂಡು ಪ್ರಯಾಣ ಆಸ್ವಾದಿಸಲು ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿ ಹೊಸ ಸ್ಮೂಚ್ ಕ್ಯಾಬ್ ವ್ಯವಸ್ಥೆ ಆರಂಭಿಸಿದೆ. ಪ್ರಣಯ ಹಕ್ಕಿಗಳಿಗೆ ಇದೀಗ ಕ್ಯಾಬ್ ಒಂದು ರೀತಿಯಲ್ಲಿ ಸಂಜೀವಿನಿಯಾಗಲಿದೆ. ಈ ಸ್ಮೂಚ್ ಕ್ಯಾಬ್ ವಿಶೇಷವಾಗಿ ಜೋಡಿ ಹಕ್ಕಿಗಳಿಗೆ. ಆತ್ಯಾಪ್ತರೊಂದಿಗೆ ಯಾವುದೇ ಅಡತಡೆ ಇಲ್ಲದೆ ಕಳೆಯಲು ಬಯಸುತ್ತಾರೋ ಅವರಿಗೆ ಈ ಕ್ಯಾಬ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: Viral: ನೋ ರೊಮ್ಯಾನ್ಸ್, ಇದು ಕ್ಯಾಬ್ ಓಯೋ ಅಲ್ಲ; ವೈರಲ್ ಆಯ್ತು ಕ್ಯಾಬ್‌ನ ವಾರ್ನಿಂಗ್ ಬೋರ್ಡ್
ಕ್ಯಾಬ್‌ನಲ್ಲಿ ಇದೆ ಹಲವು ವಿಶೇಷತೆ
ಈ ಸ್ಮೂಚ್ ಕ್ಯಾಬ್‌ನಲ್ಲಿ ಹಲವು ವಿಶೇಷತೆ ಇದೆ. ಕಾರಣ ಓಲಾ, ಉಬರ್, ರ್ಯಾಪಿಡೋ ರೀತಿ ಕ್ಯಾಬ್ ಹತ್ತಿ ಇಷ್ಟು ಸಮಯದೊಳಗೆ ನಿಗದಿತ ಸ್ಥಳ ಅಥವಾ ಹೋಗಬೇಕಿರುವ ಸ್ಥಳಕ್ಕೆ ತಲುಪುವುದು ಈ ಸ್ಮೂಚ್ ಕ್ಯಾಬ್ ಉದ್ದೇಶವಲ್ಲ. ಯಾರೋ ಕೂಗಾಡಲಿ, ಯಾರೇ ಹೋರಾಡಲಿ ನಿಮ್ಮ ನೆಮ್ಮದಿಗೆ ಭಂಗವಿಲ್ಲ. ಕಾರಣ ಈ ಕ್ಯಾಬ್‌ನಲ್ಲಿ ಗುರಿಗಿಂತ ಜೋಡಿಗಳ ಕಂಫರ್ಟ್ ಮುಖ್ಯ. ಅವರ ಖಾಸಗಿ ಸಮಯ ಮುಖ್ಯ. ಉದಾಹರಣೆಗೆ ಬೆಳಗ್ಗೆ ಮೆಜಸ್ಟಿಕ್‌ನಲ್ಲಿ ಕ್ಯಾಬ್ ಹತ್ತಿದರೆ ಸಂಜೆಯಾದರೂ ಜಯನಗರ ತಲುಪುದು ಡೌಟ್. ಜೋಡಿಗಳ ಅವಶ್ಯಕತೆ, ಅಗತ್ಯಕ್ಕೆ ಅನುಗುಣವಾಗಿ ಕ್ಯಾಬ್ ವೇಗ ಹೆಚ್ಚು ಕಡಿಮೆ ಮಾಡಲಿದೆ.
ಕ್ಯಾಬ್‌ನಲ್ಲಿ ಡು ನಾಟ್ ಡಿಸ್ಟರ್ಬ್ ಪಾಲಿಸಿ
ಸ್ಮೂಚ್ ಕ್ಯಾಬ್‌ನ ಮತ್ತೊಂದು ಪ್ರತ್ಯೇಕತೆ ಎಂದರೆ ಡು ನಾಟ್ ಡಿಸ್ಟರ್ಬ್ ಪಾಲಿಸಿ. ಅಂದರೆ ಈ ಕ್ಯಾಬ್ ಮೂಲಕ ಪ್ರಯಾಣ ಮಾಡುವ ಜೋಡಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಕಾರಿನ ವಿಂಡೋ ಒಳಗೆ ಕರ್ಟನ್ ಬಳಸಲಾಗುತ್ತದೆ. ಇನ್ನು ಹಿಂಬಂದಿಯಲ್ಲಿ ಕುಳಿತ ಜೋಡಿಗಳು ಖಾಸಗಿ ಕ್ಷಣಗಳು ಡ್ರೈವರ್ ಗೆ ಕಾಣದಂತೆ ತಡೆಗೋಡೆ ರೀತಿ ವಿನ್ಯಾಸ ಮಾಡಲಾಗಿರುತ್ತದೆ. ಎಸಿ, ಶಬ್ದಗಳ ಕಿರಿಕಿ ತಪ್ಪಿಸಲು ನಾಯ್ಸಿ ಕ್ಲಿಯರೆನ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕ್ಯಾಬ್‌ನಲ್ಲಿದೆ.
ಈ ಕ್ಯಾಬ್ ಪ್ರಯಾಣದ ದರ ಎಷ್ಟು?
ಜೋಡಿಗಳು ನಾವು ಒಂದು ಬಾರಿ ಈ ಕ್ಯಾಬ್ ಮೂಲಕ ಪ್ರಯಾಣ ಮಾಡಿಬಿಡೋಣ ಎಂದಿದ್ದರೆ ಪ್ರಯತ್ನಿಸಬಹುದು. ಇದರ ಬೆಲೆ ನಿಮ್ಮ ಪ್ರಯಾಣ, ಸ್ಥಳ, ಸಮಯಕ್ಕೆ ಅನುಗುಣವಾಗಿರುತ್ತದೆ. ಸಾಮಾನ್ಯ ಕ್ಯಾಬ್ ದರಕ್ಕಿಂತ ದುಬಾರಿಯಾಗಿರುತ್ತದೆ. ಕಾರಣ ಇಲ್ಲಿ ಕ್ಯಾಬ್ ಹತ್ತಿದ ಬೆನ್ನಲ್ಲೇ ನಿಗದಿತ ಸ್ಥಳ ತಲುಪುದು ಒಂದೇ ಉದ್ದೇಶವಲ್ಲ. ನಿಧಾನವೇ ಪ್ರಧಾನ. ಜೊತೆಗೆ ಜೋಡಿಗಳು ಹೇಳುವಂತೆ ಎಷ್ಟು ಸಮಯ ಬೇಕೋ ಅಷ್ಟು ಸಮಯದಲ್ಲಿ ನಿಗದಿತ ಸ್ಥಳಕ್ಕೆ ಈ ಕ್ಯಾಬ್ ತಲುಪಲಿದೆ.
ಸ್ಮೂಚ್ ಕ್ಯಾಬ್ಗೆ ಭಾರಿ ವಿರೋಧ
ಪ್ರಯಾಣದ ಜೊತೆಗೆ ಪ್ರಣಯವು ಆಗುತ್ತೆ ಎಂದು ಜೋಡಿಗಳು ಈ ಕ್ಯಾಬ್ ಬುಕ್ ಮಾಡುತ್ತಿದ್ದಾರೆ. ಆದರೆ ಈ ಕ್ಯಾಬ್ ಸರ್ವೀಸ್‌ಗೆ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ. ಇದರ ದುರ್ಬಳಕೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹಲವರ ಅಭಿಪ್ರಾಯವಾಗಿದೆ. ಭಾರಿ ವಿರೋಧ ವ್ಯಕ್ತವಾಗುತ್ತಿದ್ದರೂ ಸ್ಮೂಚ್ ಕ್ಯಾಬ್ ಬುಕಿಂಗ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇದೀಗ ಸ್ಟಾರ್ಟ್ ಅಪ್ ಕಂಪನಿ ಮುಂಬೈ ಹಾಗೂ ದೆಹಲಿಯಲ್ಲಿ ಈ ಕ್ಯಾಬ್ ಸರ್ವೀಸ್ ವಿಸ್ತರಿಸಲು ಮುಂದಾಗಿದೆ.
ಏಪ್ರಿಲ್ ಫೂಲ್ ಮಾಡಿದ್ರಾ?
ಇನ್ನು ಜೋಡಿಗಳಿಗೆಂದೇ ಈ ರೀತಿಯ ಕ್ಯಾಬ್ ಸೇವೆ ನೀಡುತ್ತಿದೆ ಎಂದರೆ ನಂಬಲು ಅಸಾಧ್ಯ. ಈ ರೀತಿಯ ಕ್ಯಾಬ್ಗಳಿಗೆಲ್ಲಾ ಅನುಮತಿ ಪಡೆಬೇಕು. ಹೀಗಾಗಿ ಪ್ರಯಾಣದಲ್ಲಿ ಪ್ರಣಯ ಎಂದು ಸ್ಮೂಚ್ ಕ್ಯಾಬ್ ಹೆಸರಿನಲ್ಲಿ ಏಪ್ರಿಲ್ ಫೂಲ್ ಮಾಡಲಾಗಿದೆ ಎನ್ನುವುದು ತಿಳಿದುಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:10 pm, Sat, 5 April 25