ಬದಲಾವಣೆ ಆಟಕ್ಕೆ ಬ್ರೇಕ್: ಯಥಾಸ್ಥಿತಿ ಮಂತ್ರ ಜಪಿಸಿದ ಹೈಕಮಾಂಡ್ನ ತಂತ್ರವೇನು?
ಕರ್ನಾಟಕ ಕಾಂಗ್ರೆಸ್ನಲ್ಲಿ ರಾಜಕೀಯ ಮೇಲಾಟಗಳು ಒಳಗೊಳಗೆ ಶುರುವಾಗಿದ್ದವು. ಸಂಪುಟ ಸರ್ಜರಿ, ಕೆಪಿಸಿಸಿ ಕುರ್ಚಿ ಚರ್ಚೆ ನಿರಂತರವಾಗಿದ್ದವು. ಅದರಲ್ಲೂ ಸಿದ್ದರಾಮಯ್ಯ, ಡಿಕೆ ಹಾಗೇ ಒಂದಿಷ್ಟು ಸಚಿವರು ದೆಹಲಿಗೆ ಹಾರಿದ್ದೇ ತಡ, ಈ ಚರ್ಚೆಗೆ ಮತ್ತಷ್ಟು ರೆಕ್ಕೆ, ಪುಕ್ಕ ಬಂದಿದ್ದು ಉಂಟು. ಆದ್ರೆ, ಹೈಕಮಾಂಡ್ ಬದಲಾವಣೆ ಆಟಕ್ಕೆ ಬ್ರೇಕ್ ಹಾಕಿದೆ ಎಂದು ತಿಳಿದುಬಂದಿದೆ. ಹಾಗಾದ್ರೆ ಕಾಂಗ್ರೆಸ್ ಹೈಕಮಾಂಡ್ ಇಟ್ಟ ಎಚ್ಚರಿಕೆ ಹೆಜ್ಜೆಯ ಅಸಲಿಯತ್ತು ಏನು ಎನ್ನುವುದು ಈ ಕೆಳಗಿನಂತಿದೆ ನೋಡಿ.

ಬೆಂಗಳೂರು, (ಏಪ್ರಿಲ್ 04): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ರಾಜ್ಯ ಕಾಂಗ್ರೆಸ್ ಹಲವು ಘಟಾನುಘಟಿ ನಾಯಕರು ದೆಹಲಿಯಲ್ಲಿ(Delhi) ಬೀಡುಬಿಟ್ಟಿದ್ದಾರೆ. ಸಚಿವರಾದ ದಿನೇಶ್ ಗುಂಡೂರಾವ್, ರಾಜಣ್ಣ, ಈಶ್ವರ್ ಖಂಡ್ರೆ, ಎಚ್ಕೆ ಪಾಟೀಲ್ ಸೇರಿದಂತೆ ಹಲವು ಶಾಸಕರು, ಪರಿಷತ್ ಸದಸ್ಯರು ದೆಹಲಿಯಲ್ಲಿ ಠಿಕಾಣಿ ಹೂಡಿದ್ದು, ರಾಜ್ಯ ಕಾಂಗ್ರೆಸ್ನಲ್ಲಿ ಏನಾದರೂ ಬದಲಾವಣೆ ಬೆಳವಣಿಗೆಗಳು ನಡೆದಿವೆಯಾ ಎನ್ನುವಂತಿವೆ. ಆದ್ರೆ, ಸದ್ಯಕ್ಕೆ ಹೈಕಮಾಂಡ್ (Congress high command) ಯಾವುದೇ ಬದಲಾವಣೆಗೆ ಮನಸ್ಸು ಮಾಡಿಲ್ಲ ಎನ್ನುವದು ತಿಳಿದುಬಂದಿದೆ. ಕೆಲ ದಿನಗಳಿಂದ ಸಚಿವರಾದ ರಾಜಣ್ಣ, ಸತೀಶ್ ಜಾರಕಿಹೊಳಿ, ಪರಮೇಶ್ವರ್, ಮಹದೇವಪ್ಪ ಸೇರಿದಂತೆ ಇತರೆ ನಾಯಕರ ರಹಸ್ಯ ಸಭೆ ಹಲವು ಚರ್ಚೆಗೆ ಗ್ರಾಸವಾಗಿದ್ದವು. ಬೆಳವಣಿಗೆಗಳು ಹೀಗಿರುವಾಗ ಖುದ್ದು ಕಾಂಗ್ರೆಸ್ ಹೈಕಮಾಂಡೇ ಬದಲಾವಣೆಯ ವೇಗಕ್ಕೆ ಕೊಂಚ ಸ್ಪೀಡ್ ಬ್ರೇಕ್ ಹಾಕಿದ್ದು, ಯಥಾಸ್ಥಿತಿ ಮಂತ್ರ ಜಪಿಸಿ, ಎಚ್ಚರಿಕೆಯ ಹೆಜ್ಜೆ ಇಟ್ಟಿದೆ.
ಬದಲಾವಣೆ ಆಟಕ್ಕೆ ‘ಹೈ’ ಬ್ರೇಕ್!
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಿಕ್ಕೆ ಬಂದು ಮುಂದಿನ ತಿಂಗಳು ಮೇ 20ಕ್ಕೆ ಎರಡು ವರ್ಷ ತುಂಬಲಿದೆ. ಈ ಸಂಭ್ರಮದಲ್ಲಿ ಯಾವ ಗೊಂದಲ ಆಗುವುದು ಬೇಡ ಎನ್ನುವುದು ಹೈಕಮಾಂಡ್ನ ಒಂದು ಆಲೋಚನೆ. ಇದರ ಜತೆಗೆ ಯಾವಾಗ ಬೇಕಾದರೂ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಹೀಗಿರುವಾಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿದ್ರೆ, ಸಂಪುಟ ಸರ್ಜರಿ ಆದ್ರೆ ನಾಯಕರಲ್ಲಿ ಅಸಮಾಧಾನ ಹೆಚ್ಚಾಗಬಹುದು. ಇದರ ಪರಿಣಾಮ ZP-TP ಚುನಾವಣೆ ಮೇಲೂ ಬೀಳಬಹುದು. ಒಂದು ವೇಳೆ ವ್ಯತಿರಿಕ್ತ ಫಲಿತಾಂಶ ಬಂದ್ರೆ ಪಕ್ಷಕ್ಕೆ ಹಿನ್ನಡೆ ಆಗುತ್ತೆ ಎನ್ನುವುದು ವರಿಷ್ಠರು ಮುಂದಾಲೋಚನೆಯಾಗಿದೆ. ಹೀಗಾಗಿ ಸದ್ಯಕ್ಕೆ ಯಾವುದೇ ಬದಲಾವಣೆ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ರಾಹುಲ್ ಗಾಂಧಿ, ಸಿದ್ದರಾಮಯ್ಯ 30 ನಿಮಿಷ ಮಾತುಕತೆ: ಹನಿಟ್ರ್ಯಾಪ್ ಬಗ್ಗೆ ಸುದೀರ್ಘ ಚರ್ಚೆ
ಹೈಕಮಾಂಡ್ ಎಚ್ಚರಿಕೆ ಹೆಜ್ಜೆ ನಡುವೆಯೂ ಸಿಎಂ ಸಿದ್ದರಾಮಯ್ಯ ಮಾತ್ರ ನಿರಂತರವಾಗಿ ವರಿಷ್ಠರನ್ನ ಬೇಟಿ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್ ಮೀಟ್ ಮಾಡಿದ್ದಲ್ಲದೇ, ಇಂದು(ಏಪ್ರಿಲ್ 04) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಅವರನ್ನೂ ಸಹ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಪಕ್ಷದ ಬೆಳವಣಿಗೆ, ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆ ಬಗ್ಗೆ ಸಮಾಲೋಚನೆ ಮಾಡಿರುವ ಬಗ್ಗೆ ಮಾಹಿತಿ ಇದೆ..
ಡಿಕೆ ಶಿವಕುಮಾರ್ ಪಕ್ಷ ಏನ್ ಹೇಳುತ್ತೋ ಅದನ್ನ ಕೇಳುತ್ತೇನೆ ಅಂದ್ರೆ ಇತ್ತ ಸಚಿವ ಸತೀಶ್ ಜಾರಕಿಹೊಳಿ ಮಾತು ಬದಲಾವಣೆ ಆಗಬೇಕು ಅನ್ನುವಂತಿದೆ. ಈಶ್ವರ್ ಖಂಡ್ರೆ ಆಗಲಿ ಯಾರೇ ಆಗಲಿ ನಮ್ಮ ಸಪೋರ್ಟ್ ಇದ್ದೇ ಇರುತ್ತೆ ಅಂತ ಬಾಂಬ್ ಸಿಡಿಸಿದ್ದಾರೆ.. ರಾಜಣ್ಣ ಪುತ್ರ ರಾಜೇಂದ್ರ ಕೂಡ ಮಾತನಾಡಿ, ನಮ್ಮ ತಂದೆಗೆ ಅವಕಾಶ ಕೊಟ್ರೆ ಪಕ್ಷ ಕಟ್ಟುತ್ತಾರೆ ಎಂದು ಪರೋಕ್ಷವಾಗಿ ಬ್ಯಾಟ್ ಬೀಸಿದ್ದಾರೆ.
ಬದಲಾವಣೆ ಪರ್ವಕ್ಕೆ ಬ್ರೇಕ್ ಹಾಕಿದ್ದರ ನಡುವೆ ರಾಜ್ಯ ನಾಯಕರು ಪರಿಷತ್ ಸ್ಥಾನಕ್ಕಾಗಿ 2 ರಿಂದ 3 ಹೆಸರುಗಳ ಪಟ್ಟಿ ನೀಡಿದ್ದಾರೆ. ರಾಜ್ಯ ನಾಯಕರು ಕೊಟ್ಟ ಪಟ್ಟಿಯಲ್ಲಿ, ಪ್ರಯಾರಿಟಿ ಹೆಸರು ಗುರುತಿಸಲು ಹೈಕಮಾಂಡ್ ಸೂಚನೆ ಕೊಟ್ಟಿದ್ದು, ಸಂಸತ್ ಅಧಿವೇಶನ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಾರ್ಟ್ ಲಿಸ್ಟ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಅದೇನೇ ಹೇಳಿ ಕಾಂಗ್ರೆಸ್ನಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗುತ್ತೆ ಎನ್ನುವ ಸದ್ದು ಕೊಂಚ ಮಟ್ಟಿಗೆ ಕಡಿಮೆ ಆಗಿದೆ. ಆದ್ರೆ ಒಂದಿಷ್ಟು ನಾಯಕರ ಮಾತು ಕೇಳ್ತಿದ್ರೆ,, ಬದಲಾವಣೆಗೆ ಪಟ್ಟು ಹಿಡಿದಂತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.