ಉಚ್ಚಾಟನೆ ಬಳಿಕ ಯತ್ನಾಳ್ ಮತ್ತೆ ಆ್ಯಕ್ಟೀವ್: ರಹಸ್ಯ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು?
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಛಾಟನೆ ಬಳಿಕ ಅವರ ಮುಂದಿನ ಹೆಜ್ಜೆ ಯಾವ ರೀತಿ ಆಗಿರುತ್ತೆ ಎನ್ನುವುದೇ ಕಮಲ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಉಚ್ಚಾಟನೆ ಬಳಿಕ ನಿನ್ನೆ(ಮಾರ್ಚ್ 27) ಇಡೀ ಸೈಲೆಂಟ್ ಆಗಿದ್ದ ಯತ್ನಾಳ್, ಇದೀಗ ಆ್ಯಕ್ಟೀವ್ ಆಗಿದ್ದಾರೆ. ಕಲಬುರಗಿಯ ಚಿಂಚೋಳಿಯ ಗೆಸ್ಟ್ಹೌಸ್ನಲ್ಲಿ ತಂಗಿದ್ದ ಯತ್ನಾಳ್, ಹೈದ್ರಾಬಾದ್ನಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿ ತಮ್ಮ ಆಪ್ತರ ಜೊತೆ ಸಭೆ ಮಾಡಿ ಮಹತ್ವದ ಚರ್ಚೆ ಮಾಡಿದ್ದಾರೆ. ಹಾಗಾದ್ರೆ, ಬಿಜೆಪಿ ರೆಬೆಲ್ ನಾಯಕರ ಸಭೆಯಲ್ಲಿ ಏನೆಲ್ಲಾ ಮಾತುಕತೆ ಆಯ್ತು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಮಾರ್ಚ್ 28): ಬಸನಗೌಡ ಪಾಟೀಲ್ ಯತ್ನಾಳ್ (Basangouda patil yatnal) ಅವರನ್ನು ಬಿಜೆಪಿಯಿಂದ (BJP) 6 ವರ್ಷ ಉಚ್ಚಾಟನೆ ಮಾಡಿರುವುದು ಸ್ವಪಕ್ಷದಲ್ಲೇ ಪರ, ವಿರೋಧ ಚರ್ಚೆಯಾಗುತ್ತಿದೆ. ಮತ್ತೊಂದ್ಕಡೆ, ಯತ್ನಾಳ್ ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಯಾವ ಹೆಜ್ಜೆ ಇಡುತ್ತಾರೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ. ಇದರ ಮಧ್ಯೆ ಇಂದು(ಮಾರ್ಚ್ 28) ಬೆಂಗಳೂರಿನ ಯುಬಿ ಸಿಟಿಯಲ್ಲಿರುವ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ನಿವಾಸದಲ್ಲಿ ಯತ್ನಾಳ್ ಟೀಂ ಸಭೆ ಮಾಡಿದೆ. ಸಭೆಯಲ್ಲಿ ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಪ್ರತಾಪ್ ಸಿಂಹ ಭಾಗಿಯಾಗಿದ್ದು, ಸಭೆಯಲ್ಲಿ ಪ್ರಮಖ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದ್ದು, ಎಲ್ಲರೂ ಸೇರಿಕೊಂಡು ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಸಭೆಯಲ್ಲಿ ತೀರ್ಮಾನವಾಗಿದೆ.
ಸಭೆಯಲ್ಲಿ ಏನೇನು ಚರ್ಚೆ ಆಯ್ತು?
ಯತ್ನಾಳ್ ಅವರು ಈಗ ಸ್ವತಂತ್ರ ಶಾಸಕರಾಗಿರುವುದರಿಂದ ತಮ್ಮದೇ ಆದ ರಾಜಕೀಯ ಪಕ್ಷ ಸ್ಥಾಪಿಸುತ್ತಾರೆ ಎಂಬ ವದಂತಿ ಹಬ್ಬಿದ್ದರೂ ಅದನ್ನು ಅವರ ಆಪ್ತರು ಬಲವಾಗಿ ಅಲ್ಲಗಳೆದಿದ್ದಾರೆ. ರಾಜ್ಯ ರಾಜಕಾರಣದ ಅತಿರಥ ಮಹಾರಥರು ಸ್ವಂತ ರಾಜಕೀಯ ಪಕ್ಷ ಸ್ಥಾಪಿಸಿ ಮುಂದೇನು ಮಾಡಿದರು ಎಂಬುದು ಗೊತ್ತಿರುವ ಸಂಗತಿಯೇ. ಹೀಗಾಗಿ, ಆ ಸಾಹಸಕ್ಕೆ ಕೈಹಾಕುವುದಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ, ಶತಾಯಗತಾಯ ಯತ್ನಾಳ್ ಅವರ ಉಚ್ಚಾಟನೆ ಆದೇಶ ವಾಪಸ್ ಪಡೆಯುವಂತೆ ವರಿಷ್ಠರ ಮೇಲೆ ಒತ್ತಡ ಹೇರುವ ಬಗ್ಗೆಯೇ ಮುಖಂಡರು ಇಂದಿನ ಸಭೆಯಲ್ಲಿ ಚರ್ಚಿಸಿದ್ದಾರೆ.
ಈ ನಿಟ್ಟಿನಲ್ಲಿ ಯತ್ನಾಳ್ ಪರವಾಗಿ ಅವರ ಬಣದ ಮುಖಂಡರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನವಾಗಿದ್ದು, ಯಾವಾಗ ದೆಹಲಿಗೆ ತೆರಳುವುದು ಎನ್ನುವುದು ಮಾತ್ರ ನಿರ್ಧಾರವಾಗಿಲ್ಲ.
ಇದನ್ನೂ ಓದಿ: ಯತ್ನಾಳ್ ಬೆನ್ನಿಗೆ ನಿಂತ ಪಂಚಮಸಾಲಿ ಸಮುದಾಯ: ಬೆಜೆಪಿ ಹೈಕಮಾಂಡ್ಗೆ ಏ.10 ಡೆಡ್ಲೈನ್!
ಸಭೆ ಬಳಿಕ ಕುಮಾರ್ ಬಂಗಾರಪ್ಪ ಹೇಳಿದ್ದಿಷ್ಟು
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್ ಬಂಗಾರಪ್ಪ, ಬಿಜೆಪಿಯಿಂದ ಶಾಸಕ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದು ಅನೇಕ ಹಿಂದೂ ಸಂಘಟನೆಗಳು, ಅಭಿಮಾನಿಗಳಿಗೆ ನೋವು ತಂದಿದೆ. ಹಾಗಂತ ನಾವು ಬಿಜೆಪಿ ಹೈಕಮಾಂಡ್ ನಿರ್ಧಾರದ ವಿರುದ್ಧ ಇಲ್ಲ. ಯತ್ನಾಳ್ ಉಚ್ಚಾಟನೆ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ನಾವು ಬಿಜೆಪಿ ತೊರೆಯುವುದಾಗಲಿ, ಹೊಸ ಪಕ್ಷ ಕಟ್ಟುವುದಾಗಲಿ ಇಲ್ಲ. ಈ ಬಗ್ಗೆ ಈಗಾಗಲೇ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪಕ್ಷದಲ್ಲಿ ಸಾಕಷ್ಟು ಸುಧಾರಣೆ ಆಗಬೇಕು ಎನ್ನುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಹೈಕಮಾಂಡ್ನವರು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತಾರೆ. ಯತ್ನಾಳ್ ಉಚ್ಚಾಟನೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಹೈಕಮಾಂಡ್ಗೆ ಮನವಿ ಮಾಡುತ್ತೇವೆ. ಯತ್ನಾಳ್ರನ್ನು ಮತ್ತೆ ಬಿಜೆಪಿಗೆ ಕರೆತರುವ ಕೆಲಸ ಮಾಡುತ್ತೇವೆ. ಈ ನಿಟ್ಟಿನಲ್ಲಿ ವೈಯಕ್ತಿಕ, ಸಾಮೂಹಿಕವಾಗಿ ಪ್ರಯತ್ನ ಮಾಡುತ್ತೇವೆ. ನಮ್ಮ ಹಿಂದಿನ ಹೋರಾಟ ಮುಂದುವರಿಸಿಕೊಂಡು ಹೋಗುತ್ತೇವೆ. ನಮ್ಮ ನಿಲುವಿನಲ್ಲಿ ನೂರಕ್ಕೆ ನೂರರಷ್ಟು ನಾವು ಬದ್ಧವಾಗಿರುತ್ತೇವೆ. ಯತ್ನಾಳ್ರವರು ಚೆನ್ನಾಗಿದ್ದಾರೆ, ಇಡೀ ಕರ್ನಾಟಕ ಅವರ ಜತೆಯಿದೆ. ಯುಗಾದಿ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬದಲಾಗುತ್ತಾರೆ. ನಂತರ ರಾಜ್ಯಗಳಲ್ಲೂ ಬಿಜೆಪಿ ಅಧ್ಯಕ್ಷರ ಬದಲಾವಣೆ ಆಗಲಿದೆ ಎಂದರು. ಈ ಮೂಲಕ ಪರೋಕ್ಷವಾಗಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರು ಬದಲಾಗುತ್ತಾರೆ ಎಂದರು.
ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಆಗಿದೆ. ತಪ್ಪಾಗಿದೆ ಎಂದು ಅದನ್ನು ತಿದ್ದಿಕೊಂಡು ನಾವು ಮುಂದೆ ಹೋಗುತ್ತೇವೆ. ನಮ್ಮ ಹೋರಾಟಕ್ಕೆ ಕಹಿ ಘಟನೆ ಅಂದ್ರೆ ಯತ್ನಾಳ್ ಉಚ್ಚಾಟನೆ. ನಿಜವಾಗಿಯೂ ಇದು ನಮಗೆ ದೊಡ್ಡ ಹಿನ್ನಡೆ. ಎಲ್ಲೋ ತಪ್ಪು ಮಾಹಿತಿಯಿಂದ ಯತ್ನಾಳ್ ಉಚ್ಚಾಟನೆ ಆಗಿರಬಹುದು. ಆದ್ರೆ, ನಾವೆಲ್ಲರೂ ಹೋಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇವೆ. ಇಡೀ ಕರ್ನಾಟಕ ಯತ್ನಾಳ್ ಪರವಿದೆ, ಯಾವುದೇ ಸಮಸ್ಯೆ ಆಗಿಲ್ಲ ಇದು ಬಿಎಸ್ವೈ ವಿರುದ್ಧವೂ ಅಲ್ಲ, ಯಾರೊಬ್ಬರ ಪರ ಹೋರಾಟವಲ್ಲ. ರಾಜ್ಯದಲ್ಲಿ ಪಕ್ಷ ಸಂಘಟನೆಗಾಗಿ ನಮ್ಮ ಹೋರಾಟ ಎಂದು ಹೇಳಿದರು.
ಒಟ್ಟಿನಲ್ಲಿ ಉಚ್ಚಾಟನೆ ಬಳಿಕ ಮತ್ತೆ ಆ್ಯಕ್ಟೀವ್ ಆಗಿರುವ ಯತ್ನಾಳ್ ಟೀಂ, ಮಹತ್ವದ ಸಭೆ ನಡೆಸಿದ್ದು,. ಮುಂದೆ ಅದ್ಯಾವ ಹೆಜ್ಜೆ ಇಡುತ್ತಾರೆ ಎನ್ನುವುದೇ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.