
ಬೆಂಗಳೂರು, ಜುಲೈ 20: ಬೆಂಗಳೂರು (Bengaluru) ನಗರದ ಸ್ವಚ್ಛತಾ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಮಹತ್ವದ ಯೋಜನೆ ರೂಪಿಸಿದೆ. ಇದರಡಿ ಬೆಂಗಳೂರಿನ ಸುಮಾರು 18 ಸಾವಿರ ಪೌರಕಾರ್ಮಿಕರನ್ನು ಕರ್ನಾಟಕದ ಆರು ನಗರಗಳಿಗೆ ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲು ನಿರ್ಧರಿಸಲಾಗಿದೆ. ‘ಸ್ವಚ್ಛ ಭಾರತ್ ಮಿಷನ್ (ನಗರ) 2.0’ ಯೋಜನೆಯಡಿ ಹಂತ ಹಂತವಾಗಿ ಈ ಕಾರ್ಯಕ್ರಮ ಜಾರಿಯಾಗಲಿದ್ದು, ಇದೇ ತಿಂಗಳಿಂದ ಪ್ರವಾಸ ಆರಂಭವಾಗುವ ನಿರೀಕ್ಷೆಯಿದೆ.
ಮೊದಲ ಹಂತದಲ್ಲಿ ಮೈಸೂರು, ದಾವಣಗೆರೆ ಮತ್ತು ಹೊಸಪೇಟೆ ಸೇರಿದಂತೆ ಘನತ್ಯಾಜ್ಯದ ಉತ್ತಮ ನಿರ್ವಹಣೆಗೆ ಹೆಸರಾಗಿರುವ ನಗರಗಳಿಗೆ ಪೌರಕಾರ್ಮಿಕರನ್ನು ಕರೆದುಕೊಂಡು ಹೋಗಲಾಗುತ್ತದೆ. ಬಳಿಕ ಉಳಿದ ನಗರಗಳಿಗೂ ಅಧ್ಯಯನ ಪ್ರವಾಸ ಆಯೋಜಿಸಲಾಗುತ್ತದೆ. ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸಾಧನೆ ಮಾಡಿದ ನಗರಗಳ ತ್ಯಾಜ್ಯ ವಿಂಗಡಣೆ, ಮರುಬಳಕೆ, ಸ್ವಚ್ಛತೆ ನಿರ್ವಹಣೆ, ಸುರಕ್ಷತಾ ಕ್ರಮಗಳು ಹಾಗೂ ನಾಗರಿಕರ ಸಹಭಾಗಿತ್ವದ ಮಾದರಿಗಳನ್ನು ಪರಿಚಯಿಸುವುದು ಯೋಜನೆಯ ಉದ್ದೇಶವಾಗಿದೆ.
ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಸುಮಾರು 1.96 ಕೋಟಿ ರೂ. ಅಂದಾಜು ವೆಚ್ಚದ ಟೆಂಡರ್ ಆಹ್ವಾನಿಸಿದ್ದು, ಆಯ್ಕೆಯಾಗುವ ಸಂಸ್ಥೆ ಪ್ರವಾಸದ ಸಂಪೂರ್ಣ ಯೋಜನೆ, ಸಾರಿಗೆ ಹಾಗೂ ಇತರೆ ವ್ಯವಸ್ಥೆಗಳನ್ನು ನಿರ್ವಹಿಸಲಿದೆ. ಮೊದಲ ಹಂತದ ಕಾರ್ಯಕ್ರಮವು ಸುಮಾರು ಆರು ತಿಂಗಳ ಅವಧಿಯಲ್ಲಿ ನಡೆಯಲಿದೆ.
ಆದರೆ, ಈ ಯೋಜನೆಗೆ ಪೌರಕಾರ್ಮಿಕರ ಸಂಘದ ಒಂದು ವಲಯ ಆಕ್ಷೇಪ ವ್ಯಕ್ತಪಡಿಸಿದೆ. ‘ಬೆಂಗಳೂರಿನಷ್ಟು ದೊಡ್ಡ ನಗರಕ್ಕೆ ಅಧ್ಯಯನ ಪ್ರವಾಸಕ್ಕಿಂತ ಹೆಚ್ಚುವರಿ ಸಿಬ್ಬಂದಿಯ ಅಗತ್ಯವಿದೆ. ಪ್ರತಿದಿನ 5,000 ಟನ್‌ಗಿಂತ ಹೆಚ್ಚು ತ್ಯಾಜ್ಯ ಉತ್ಪತ್ತಿಯಾಗುವ ನಗರದಲ್ಲಿ ಎಲ್ಲರನ್ನೂ ಪ್ರವಾಸಕ್ಕೆ ಕಳುಹಿಸುವ ಬದಲು, ಪ್ರತಿ ವಾರ್ಡ್‌ನಿಂದ ಕೆಲವರನ್ನು ಮಾತ್ರ ಕಳುಹಿಸಿ ಅವರು ಕಲಿತ ವಿಷಯವನ್ನು ಇತರರೊಂದಿಗೆ ಹಂಚಿಕೊಳ್ಳುವ ವ್ಯವಸ್ಥೆ ಮಾಡಿದರೆ ಸಾಕು’ ಎಂದು ಗ್ರೇಟರ್ ಬೆಂಗಳೂರು ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪಿ.ಎನ್. ಮುತ್ತ್ಯಾಲಪ್ಪ ಅಭಿಪ್ರಾಯಪಟ್ಟಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ