TV9 Kannada News Highlights: ಇ-ಕಾಮರ್ಸ್‌ನಲ್ಲಿ ದತ್ತೂರಿ ಹಣ್ಣು ಮಾರಾಟಕ್ಕೆ ಬ್ರೇಕ್‌; ಈ ಹೊತ್ತಿನ ಪ್ರಮುಖ ಸುದ್ದಿಗಳು

Karnataka News Today Highlights Updates: ಮಾಜಿ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಇಂದು ಬಿಜೆಪಿ ನಾಯಕರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು. ಇನ್ನು ದೆಹಲಿಯಲ್ಲಿ ಶಾಸಕ ಅಭಯ್ ಪಾಟೀಲ್ ಕಾರು ಅಪಘಾತವಾಗಿದೆ. ಇತ್ತ ದೊಡ್ಡಬಳ್ಳಾಪುರದಲ್ಲಿ ಪಾಕ್ ಗ್ಯಾಂಗ್‌ಸ್ಟರ್​​ನೊಂದಿಗೆ ನಂಟು ಹೊಂದಿದ್ದ ಮೆಕ್ಯಾನಿಕ್​​ನನ್ನು ಪೊಲೀಸರು ಬಂಧಿಸಿದ್ದಾರೆ.

TV9 Kannada News Highlights: ಇ-ಕಾಮರ್ಸ್‌ನಲ್ಲಿ ದತ್ತೂರಿ ಹಣ್ಣು ಮಾರಾಟಕ್ಕೆ ಬ್ರೇಕ್‌; ಈ ಹೊತ್ತಿನ ಪ್ರಮುಖ ಸುದ್ದಿಗಳು
ದತ್ತೂರಿ ಹಣ್ಣು
Image Credit source: tv9 kannada
Edited By:

Updated on: Aug 24, 2026 | 11:06 PM

Breaking News Today Highlights Updates in Kannada: ಮಾಜಿ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಇಂದು ಬಿಜೆಪಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರು. ಆಗ ಪೊಲೀಸರು ಅವರನ್ನ ತಡೆದು ವಶಕ್ಕೆ ಪಡೆದರು. ಇಷ್ಟಾದ್ರೂ ವಿಧಾನಸೌಧದ ಹೊರಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಮತ್ತೊಂದೆಡೆ, ದೆಹಲಿಯ ಐಟಿಓ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹಾಗೂ ದೆಹಲಿ ಆಪ್ ಶಾಸಕ ಅನಿಲ್ ಝಾ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ದೊಡ್ಡಬಳ್ಳಾಪುರದಲ್ಲಿ ಇನ್‌ಸ್ಟಾಗ್ರಾಮ್‌ ಮೂಲಕ ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳ ಜೊತೆ ಸಂಪರ್ಕದಲ್ಲಿದ್ದ ಎಸಿ ಮೆಕ್ಯಾನಿಕ್ ಸೈಯದ್ ಅಬೂಬಕರ್‌ನನ್ನು ತನಿಖಾ ಸಂಸ್ಥೆ ಬಂಧಿಸಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

YouTube video player

 

LIVE NEWS & UPDATES

The liveblog has ended.
  • 24 Aug 2026 10:57 PM (IST)

    ಜಿಲ್ಲಾಧಿಕಾರಿ ವಿರುದ್ಧ ಸಿಡಿದೆದ್ದಿರೋದೇಕೆ ಮಾಜಿ ಸಚಿವ ರೇವಣ್ಣ?

    ಹಾಸನ ಜಿಲ್ಲೆಯ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳ ಮೀಸಲಾತಿ ಪಟ್ಟಿಯನ್ನು ಕರಡು ಪ್ರಕಟಿಸದೆ ಏಕಪಕ್ಷೀಯವಾಗಿ ಮತ್ತು ಅವೈಜ್ಞಾನಿಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಗೂ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ತೀವ್ರ ವಾಗ್ದಾಳಿ ಮಾಡಿದ್ದಾರೆ. ಸದ್ಯ ಇದು ಜಿಲ್ಲಾಡಳಿತ ವರ್ಸಸ್ ಜೆಡಿಎಸ್ ನೇರ ಜಟಾಪಟಿಗೆ ಕಾರಣವಾಗಿದೆ.

    DC V/S JDS Clash in Hasana: ಜಿಲ್ಲಾಧಿಕಾರಿ ವಿರುದ್ಧ ಸಿಡಿದೆದ್ದಿರೋದೇಕೆ ಮಾಜಿ ಸಚಿವ ರೇವಣ್ಣ? | #TV9D

  • 24 Aug 2026 10:09 PM (IST)

    ನಾಗೇಂದ್ರ ಅಪರಾಧಿ ಆಗಿದ್ದರೆ ಮಂತ್ರಿ ಆಗಲು ಬರಲ್ಲ: ಶಿವಲಿಂಗಣ್ಣ

    ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚಿಸುವುದನ್ನು ಬಿಟ್ಟು, ವಿಪಕ್ಷ ಬಿಜೆಪಿಯವರು ಕೇವಲ ರಾಜಕೀಯ ಪ್ರತಿಷ್ಠೆಗಾಗಿ ಸದನದ ಕಲಾಪಕ್ಕೆ ಅಡ್ಡಿಪಡಿಸಿ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣವನ್ನು ನಷ್ಟ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಕೆ. ಎಂ. ಶಿವಲಿಂಗೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Shivalingegowda: ನಾಗೇಂದ್ರ ಅಪರಾಧಿ ಆಗಿದ್ದರೆ ಸಂವಿಧಾನದ ಪ್ರಕಾರ ಮಂತ್ರಿ ಆಗಲು ಬರಲ್ಲ ಎಂದ ಶಿವಲಿಂಗಣ್ಣ | #TV9D

  • 24 Aug 2026 09:26 PM (IST)

    ರಾಜ್ಯಪಾಲರಿಗೆ ಸಂಸದ ತೇಜಸ್ವಿ ಸೂರ್ಯ ಪತ್ರ

    ವಿಧಾನಮಂಡಲದಲ್ಲಿ ಇಂದು ಕರ್ನಾಟಕ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ ಅಂಗೀಕಾರವಾದ ಹಿನ್ನೆಲೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಪಾರ್ಕ್‌ಗಳ ಶೇ. 5ರಷ್ಟು ಭೂಮಿ ಪರಭಾರೆಗೆ ರಾಜ್ಯ ಸರ್ಕಾರಕ್ಕೆ ಅವಕಾಶ ಮಾಡಿಕೊಡುವ ಈ ವಿಧೇಯಕವನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸುವಂತೆ ಮನವಿ ಮಾಡಿದ್ದಾರೆ.

     

  • 24 Aug 2026 09:13 PM (IST)

    ಇ-ಕಾಮರ್ಸ್​ನಲ್ಲಿ ವಿಷಕಾರಿ ದತ್ತೂರಿ ಹಣ್ಣು ಮಾರಾಟಕ್ಕೆ ಬ್ರೇಕ್

    ಇ-ಕಾಮರ್ಸ್ ವೇದಿಕೆಗಳಲ್ಲಿ ವಿಷಕಾರಿ ದತ್ತೂರಿ ಹಣ್ಣು ಮತ್ತು ಬೀಜ ಮಾರಾಟಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಆನ್‌ಲೈನ್‌ನಲ್ಲಿ ದತ್ತೂರಿ ಹಣ್ಣು, ಬೀಜ ಮಾರಾಟ ಮಾಡುತ್ತಿದ್ದ ಅಮೆಜಾನ್, ಸ್ವಿಗ್ಗಿ, ಬಿಗ್‌ಬಾಸ್ಕೆಟ್ ಹಾಗೂ ಇನ್‌ಸ್ಟಾಮಾರ್ಟ್‌ನ ಆಹಾರ ಪರವಾನಗಿ ಅಮಾನತು ಮಾಡುವಂತೆ ರಾಜ್ಯ FDAಗೆ ಆದೇಶಿಸಿದೆ.

    TV9 Impact: ಇ-ಕಾಮರ್ಸ್ ನಲ್ಲಿ ವಿಷಕಾರಿ ದತ್ತೂರಿ ಹಣ್ಣು ಮಾರಾಟಕ್ಕೆ ಬ್ರೇಕ್

  • 24 Aug 2026 08:49 PM (IST)

    ಎನ್.ರವಿಕುಮಾರ್​​ಗೆ ಬಂಧನ ವಾರಂಟ್ ಹೊರಡಿಸಿದ ಕೋರ್ಟ್

    ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ವಿಚಾರಣೆಗೆ ಗೈರಾಗಿದ್ದ ಎಂಎಲ್‌ಸಿ ಎನ್. ರವಿಕುಮಾರ್ ವಿರುದ್ಧ ಕೋರ್ಟ್ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿದೆ. ಕಳೆದ ವರ್ಷ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಸಮನ್ಸ್ ಜಾರಿಯಾದರೂ ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ 42ನೇ ಎಸಿಜೆಎಂ ನ್ಯಾಯಾಧೀಶ ಸಂದೀಪ್ ಪಾಟೀಲ್ ವಾರಂಟ್ ಜಾರಿ ಮಾಡಿ ಆದೇಶಿಸಿದ್ದಾರೆ.

  • 24 Aug 2026 08:28 PM (IST)

    ವಿಧಾನಸೌಧದಿಂದ ಲೋಕಭವನಕ್ಕೆ ಬಿಜೆಪಿ ಶಾಸಕರ ಪಾದಯಾತ್ರೆ

    ಕಲಾಪ ಮುಕ್ತಾಯಗೊಳ್ಳುತ್ತಿದ್ದಂತೆ ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಒತ್ತಾಯಿಸಿ ಆರ್. ಅಶೋಕ್ ಮತ್ತು ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಶಾಸಕರು ವಿಧಾನಸೌಧದಿಂದ ರಾಜಭವನದವರೆಗೆ ಪಾದಯಾತ್ರೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಮುಂದಾದರು.

    Demand For B Nagendra’s Resignation: BJP Padayatra From Vidhana Soudha To Lok Bhavan

  • 24 Aug 2026 07:26 PM (IST)

    ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧದ ಪ್ರಕರಣಕ್ಕೆ ತಡೆ

    ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ. ಸಂಬಂಧಿಯ ಹೆಸರಿನಲ್ಲಿ ಗುತ್ತಿಗೆ ಪಡೆದು ಲಾಭ ಮಾಡಿದ ಆರೋಪದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪ್ರೀತಂ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆಗಸ್ಟ್ 28ರವರೆಗೆ ತನಿಖೆಗೆ ಮಧ್ಯಂತರ ತಡೆ ನೀಡಿದೆ.

  • 24 Aug 2026 07:18 PM (IST)

    ಕಾಂಗ್ರೆಸ್ ಸರ್ಕಾರ ಹಿಂಬಾಗಿಲಿನಿಂದ ಓಡಿ ಹೋಗಿದೆ

    ವಿಧಾನಮಂಡಲ ಅಧಿವೇಶನವನ್ನು 3 ದಿನ ಮೊದಲೇ ಮೊಟಕುಗೊಳಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂಬಾಗಿಲಿನಿಂದ ಓಡಿ ಹೋಗಿದೆ, ಇದು ಭ್ರಷ್ಟರಿಂದ ಭ್ರಷ್ಟರಿಗಾಗಿ ನಡೆಯುತ್ತಿರುವ ಸರ್ಕಾರ ಎಂದು ಕಿಡಿಕಾರಿದರು. ದಲಿತರ ಹಣ ಲೂಟಿ ಮಾಡಿದವರ ಬಗ್ಗೆ ಸಿಎಂಗೆ ಭಯವಿದೆ, ಇವರ ಬಣ್ಣ ಬಯಲಾಗುತ್ತದೆ ಎಂದು ಅವರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

     

  • 24 Aug 2026 06:43 PM (IST)

    3 ದಿನಗಳ ಮೊದಲೇ ವಿಧಾನಮಂಡಲ ಅಧಿವೇಶನಕ್ಕೆ ತೆರೆ

    ವಿಧಾನಮಂಡಲ ಅಧಿವೇಶನ 3 ದಿನಗಳ ಮುಂಚಿತವಾಗಿಯೇ ಅಂತ್ಯಗೊಂಡಿದೆ. ಆಗಸ್ಟ್ 27ರವರೆಗೂ ನಿಗದಿಯಾಗಿದ್ದ ವಿಧಾನಮಂಡಲ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ನಿಗದಿತ ಅವಧಿಗಿಂತ ಮೂರು ದಿನಗಳ ಮೊದಲೇ ಅಧಿವೇಶನಕ್ಕೆ ತೆರೆ ಬಿದ್ದಿದ್ದು, ಸದನದ ಕಲಾಪಗಳು ಇಂದಿಗೆ ಮುಕ್ತಾಯಗೊಂಡಿದೆ.

  • 24 Aug 2026 06:28 PM (IST)

    ನಾಳೆ ಕರಾವಳಿಯಲ್ಲಿ ಈದ್ ಮಿಲಾದ್: ಸಾರ್ವತ್ರಿಕ ರಜೆ

    ಆಗಸ್ಟ್​ 24ರಂದು ಕರಾವಳಿಯಲ್ಲಿ ಈದ್ ಮಿಲಾದ್ ಆಚರಣೆ ಹಿನ್ನೆಲೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ರಾಜ್ಯಾದ್ಯಂತ ಆಗಸ್ಟ್ 26ರಂದು ಈದ್ ಮಿಲಾದ್ ಪ್ರಯುಕ್ತ ಸಾರ್ವತ್ರಿಕ ರಜೆ ಇದ್ದರೂ, ಕರಾವಳಿಯಲ್ಲಿ ಒಂದು ದಿನ ಮುಂಚಿತವಾಗಿಯೇ ಅಂದರೆ ನಾಳೆಯೇ ಈದ್ ಮಿಲಾದ್ ಆಚರಿಸಲಾಗುತ್ತಿದೆ. ಹೀಗಾಗಿ ಎರಡು ಜಿಲ್ಲಾಡಳಿತಗಳು ಸರ್ಕಾರಕ್ಕೆ ರಜೆಗಾಗಿ ಮನವಿ ಸಲ್ಲಿಸಿದ್ದವು. ಜಿಲ್ಲಾಡಳಿತಗಳ ಮನವಿ ಪುರಸ್ಕರಿಸಿದ ಸರ್ಕಾರ, ನಾಳೆ ಸಾರ್ವತ್ರಿಕ ರಜೆ ಘೋಷಿಸಿ ಆದೇಶಿಸಿದೆ.

  • 24 Aug 2026 06:18 PM (IST)

    ಶಾಸಕ ಸಮರ್ಥ ಶಾಮನೂರು ಕಾರು ಅಪಘಾತ

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಆರ್ ಹಳ್ಳಿ ಗೇಟ್ ಬಳಿ ದಾವಣಗೆರೆ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಕಾರು ಅಪಘಾತಕ್ಕೀಡಾಗಿದೆ. ಬೆಂಗಳೂರಿನಿಂದ ದಾವಣಗೆರೆಗೆ ತೆರಳುತ್ತಿದ್ದ ವೇಳೆ ಓವರ್‌ಟೇಕ್ ಮಾಡುವಾಗ ಈ ಅವಘಡ ಸಂಭವಿಸಿದೆ. ಅತಿವೇಗದಲ್ಲಿ ಬಂದ ಕಾರು ಪಲ್ಟಿಯಾಗಿದ್ದು, ಹಿಂಬದಿಯಿಂದ ಬರುತ್ತಿದ್ದ ಶಾಸಕ ಸಮರ್ಥ್ ಕಾರು ಪಲ್ಟಿಯಾದ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಸಮರ್ಥ್ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ.

     

  • 24 Aug 2026 05:33 PM (IST)

    IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆಯಲ್ಲಿ ಇಡಿ ದಾಳಿ ಅಂತ್ಯ

    ಕೆಪಿಎಸ್‌ಸಿ ಪಶುವೈದ್ಯರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಉತ್ತರ ಪ್ರದೇಶದ ಲಕ್ನೋ ಸಮೀಪದ ಗ್ರಾಮದಲ್ಲಿರುವ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ನಡೆಸುತ್ತಿದ್ದ ಶೋಧ ಕಾರ್ಯ ಇದೀಗ ಮುಕ್ತಾಯಗೊಂಡಿದೆ.

    EDRaids on GyanendraKumar Residence: IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆಯಲ್ಲಿ ಇಡಿ ದಾಳಿ ಅಂತ್ಯ

  • 24 Aug 2026 05:08 PM (IST)

    ಪ್ರಿಯಾಂಕ್ ಖರ್ಗೆ ಒಬ್ಬ ಅರೆ ಹುಚ್ಚ

    ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಾಗಲಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ಪ್ರಿಯಾಂಕ್ ಖರ್ಗೆ ಒಬ್ಬ ಅರೆ ಹುಚ್ಚ, ನಾನು ಅವರನ್ನು ಪ್ರತಿ ಸಾರಿ ಹೀಗೆಯೇ ಸಂಬೋಧನೆ ಮಾಡುತ್ತೇನೆ, ನನ್ನ ಮೇಲೆ ಏನು ಕೇಸ್ ಹಾಕುತ್ತಾರೋ ಹಾಕಲಿ ಎಂದು ಗುಡುಗಿದರು.’

  • 24 Aug 2026 04:46 PM (IST)

    ಉದ್ಯಾನವನಗಳ ಸಂರಕ್ಷಣೆ ವಿಧೇಯಕ ಅಂಗೀಕಾರ

    ವಿಧಾನಸಭೆಯಲ್ಲಿ ಇಂದು ಉದ್ಯಾನವನಗಳ ಸಂರಕ್ಷಣೆಗೆ ಸಂಬಂಧಿಸಿದ ಮಹತ್ವದ ವಿಧೇಯಕ ಅಂಗೀಕಾರವಾಗಿದೆ. ಡಿಸಿಎಂ ಡಾ. ಜಿ. ಪರಮೇಶ್ವರ್​​ ಕರ್ನಾಟಕ ಸರ್ಕಾರಿ ಉದ್ಯಾನವನಗಳ ಸಂರಕ್ಷಣೆ (ತಿದ್ದುಪಡಿ) ವಿಧೇಯಕವನ್ನು ಸದನದಲ್ಲಿ ಮಂಡಿಸಿದರು. ಈ ವಿಧೇಯಕದ ಬಗ್ಗೆ ಯಾವುದೇ ಚರ್ಚೆ ನಡೆಯದೆ ಅಂಗೀಕಾರಗೊಂಡಿದೆ. ಈ ತಿದ್ದುಪಡಿ ವಿಧೇಯಕದ ಪ್ರಕಾರ, ಉದ್ಯಾನವನದ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ. 5ರಷ್ಟು ಭೂಮಿಯನ್ನು ಮಾರಾಟ, ಗೇಣಿ (ಲೀಸ್), ಕೊಡುಗೆ (ಗಿಫ್ಟ್), ವಿನಿಮಯ, ಅಡಮಾನ ಅಥವಾ ಇನ್ನಿತರ ಯಾವುದೇ ರೀತಿಯಲ್ಲಿ ಪರಭಾರೆ ಮಾಡಲು ರಾಜ್ಯ ಸರ್ಕಾರಕ್ಕೆ ಅನುಮತಿಯನ್ನು ನೀಡಲಾಗುತ್ತದೆ.

  • 24 Aug 2026 04:33 PM (IST)

    ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಭೈರತಿ ಬಸವರಾಜ್​ಗೆ ರಿಲೀಫ್

    ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್​​ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಜಾಮೀನು ರದ್ದುಗೊಳಿಸಬೇಕು ಎಂದು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಈ ಹಿಂದೆ ಸೆಷನ್ಸ್ ಕೋರ್ಟ್ ಭೈರತಿ ಬಸವರಾಜ್​​ಗೆ ಜಾಮೀನು ಮಂಜೂರು ಮಾಡಿತ್ತು, ಈ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿರುವುದರಿಂದ ಭೈರತಿ ಬಸವರಾಜ್​​ ನ್ಯಾಯಾಲಯದಲ್ಲಿ ತಾತ್ಕಾಲಿಕ ಜಯ ಸಿಕ್ಕಂತಾಗಿದೆ.

  • 24 Aug 2026 03:49 PM (IST)

    ಪಾಕಿಸ್ತಾನ ಪರ ಹಾಡು ಬಳಿಸಿ ಪೋಸ್ಟ್​: ಬಂಧನ

    ಟಿಪ್ಪು ಸುಲ್ತಾನ್ ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ಬಳಸಿ ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿ ವಾಟ್ಸಾಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ವೈರಲ್ ಮಾಡಿದ್ದ 23 ವರ್ಷದ ರೋಷನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

  • 24 Aug 2026 03:38 PM (IST)

    ನಾಳೆ ಸ್ವಯಂ ಪ್ರೇರಿತವಾಗಿ ಪುತ್ತೂರು ಬಂದ್​ಗೆ ಕರೆ

    ಪುತ್ತೂರಿನ ದರ್ಬೆಯಲ್ಲಿರುವ ಡಿಜಿಟಲ್ ಸೇವಾ ಕೇಂದ್ರದಲ್ಲಿ ನಡೆದ ಗಲಾಟೆ ಪ್ರಕರಣ ಇದೀಗ ಬಿಗುವಿಗೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ನಾಳೆ ಸ್ವಯಂ ಪ್ರೇರಿತವಾಗಿ ಪುತ್ತೂರು ಬಂದ್‌ಗೆ ಹಿಂದೂ ಜಾಗರಣಾ ವೇದಿಕೆ ಕರೆ ನೀಡಿದೆ. ಪೊಲೀಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿ ಮತ್ತು ಪ್ರಕರಣದ ಹಿಂದೆ ನಿಷೇಧಿತ PFI ಸಂಘಟನೆಯ ಕೈವಾಡ ಇದೆ ಎಂದು ಆರೋಪಿಸಿ ಈ ಬಂದ್‌ಗೆ ಕರೆ ನೀಡಲಾಗಿದ್ದು, ನಗರದಲ್ಲಿ ವರ್ತಕರ ಹಿತರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಬಂದ್ ನಡೆಸಲಾಗುತ್ತಿದೆ ಎಂದು ವೇದಿಕೆ ತಿಳಿಸಿದೆ.

  • 24 Aug 2026 02:26 PM (IST)

    ವಿದ್ಯಾರ್ಥಿನಿಯರ ಸಾವು: ಮದರಸಾ ಶಿಕ್ಷಕಿಯರ ಮೇಲಿನ ಎಫ್‌ಐಆರ್ ರದ್ದತಿಗೆ ಹೈಕೋರ್ಟ್ ನಕಾರ

    ಶ್ರೀರಂಗಪಟ್ಟಣದ ನಾಲೆಯಲ್ಲಿ ಮುಳುಗಿ ಮೈಸೂರಿನ ಮದರಸಾದ ನಾಲ್ವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಶಿಕ್ಷಕಿಯರ ಮೇಲಿನ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ನಜಿಯಾ ಬಾನು ಮತ್ತು ನಜಿಮಾ ಬಾನು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, “ಪೋಷಕರು ನಂಬಿಕೆಯಿಂದ ಮಕ್ಕಳನ್ನು ಕಳುಹಿಸುತ್ತಾರೆ. ಹರಿಯುವ ನೀರಿನ ಬಳಿಗೆ ಪಾತ್ರೆ ತೊಳೆಯಲು ಕಳುಹಿಸಿದ್ದೇಕೆ? ಈ ಸಾವಿಗೆ ಶಿಕ್ಷಕರೇ ಹೊಣೆ ಹೊರಬೇಕು” ಎಂದು ಕಠಿಣವಾಗಿ ಅಭಿಪ್ರಾಯಪಟ್ಟಿದೆ.

  • 24 Aug 2026 01:35 PM (IST)

    ಗೊಲ್ಲ ಅಭಿವೃದ್ಧಿ ನಿಗಮಕ್ಕೆ ನಾಗರಾಜ್ ಯಾದವ್ ಆಗ್ರಹ: ಬಿಜೆಪಿಯಿಂದ ಸಾಥ್

    ವಿಧಾನಪರಿಷತ್‌ನಲ್ಲಿ ಗೊಲ್ಲ ಹಾಗೂ ಹಣಬ ಸಮುದಾಯಕ್ಕೆ ಪ್ರತ್ಯೇಕ ‘ಗೊಲ್ಲ ಅಭಿವೃದ್ಧಿ ನಿಗಮ’ ಘೋಷಿಸುವಂತೆ ಕಾಂಗ್ರೆಸ್‌ನ ನಾಗರಾಜ್ ಯಾದವ್ ಸರ್ಕಾರವನ್ನು ಒತ್ತಾಯಿಸಿದರು. ಇದಕ್ಕೆ ಬಿಜೆಪಿ ಸದಸ್ಯರೂ ಧ್ವನಿಗೂಡಿಸಿ ಘೋಷಣೆ ಕೂಗಿದರು. ಸಚಿವ ಶಿವರಾಜ ತಂಗಡಗಿ ಉತ್ತರಿಸಿ, ಪ್ರಸ್ತುತ ಗೊಲ್ಲ ಸಮುದಾಯವನ್ನು ಅಲೆಮಾರಿ ನಿಗಮದಡಿ ಸೇರಿಸಲಾಗಿದೆ. ಯಾದವ್ ಅವರ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.

  • 24 Aug 2026 12:40 PM (IST)

    ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸಿ ಪೊರಕೆ ಚಳವಳಿ ನಡೆಸಿದ್ದ ರೈತರ ಮೇಲಿನ ಕೇಸ್‌ಗೆ ಹೈಕೋರ್ಟ್ ತಡೆ

    ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸಿ ಪೊರಕೆ ಚಳವಳಿ ಮಾಡಿದ್ದ 6 ರೈತರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಡಿ.ಆರ್. ರವಿಶಂಕರ್, “ರೈತರ ಇಚ್ಛೆಗೆ ವಿರುದ್ಧವಾಗಿ ಭೂಸ್ವಾಧೀನ ಮಾಡಲ್ಲ ಎಂದಿದ್ದ ಸರ್ಕಾರ, ಅಕ್ರಮವಾಗಿ ಸರ್ವೆಗೆ ಮುಂದಾದಾಗ ಪ್ರತಿಭಟನೆ ನಡೆಸಲಾಗಿದೆ. ಆದರೆ, ಸರ್ಕಾರ ಬಾಡಿಗೆ ಚಾಲಕನಿಂದ ದೂರು ಕೊಡಿಸಿದೆ” ಎಂದರು. ವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, “ಸರ್ಕಾರ ಸುಪಾರಿ ದೂರು ಕೊಡಿಸಲು ಶುರು ಮಾಡಿದೆಯಾ?” ಎಂದು ಪ್ರಶ್ನಿಸಿ ತನಿಖೆಗೆ ತಡೆ ನೀಡಿದೆ.

  • 24 Aug 2026 12:27 PM (IST)

    ಟಿಪ್ಪು ಕಟೌಟ್‌ಗೆ ಪಾಕ್ ಹಾಡು ಕೇಸ್: ಆರೋಪಿಗಳ ಬಂಧನಕ್ಕೆ ಎಸ್ಪಿ ವಿಶೇಷ ತಂಡ ರಚನೆ

    ಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್‌ಗೆ ಪಾಕಿಸ್ತಾನ್ ಪರ ಹಾಡು ಬಳಸಿ ವೀಡಿಯೋ ಪೋಸ್ಟ್ ಮಾಡಿದ ಪ್ರಕರಣ ಸಂಬಂಧ, ಎಸ್ಪಿ ನಗರ ಠಾಣೆಗೆ ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.

  • 24 Aug 2026 12:15 PM (IST)

    ವಿಧಾನಸಭೆ ಕಲಾಪ ಪ್ರಸಾರದಲ್ಲಿ ತಾರತಮ್ಯ: ಸ್ಪೀಕರ್‌ಗೆ ಆರ್. ಅಶೋಕ್ ಪತ್ರ

    ವಿಧಾನಸಭೆಯ ಕಾರ್ಯಕಲಾಪಗಳ ವರದಿಯಲ್ಲಿ ವಿಪಕ್ಷ ನಾಯಕರು ಹಾಗೂ ಶಾಸಕರ ಹೇಳಿಕೆಗಳು, ಫೋಟೋ ಮತ್ತು ವೀಡಿಯೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡದೆ ತಾರತಮ್ಯ ಎಸಗಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಈ ಕೂಡಲೇ ವಾರ್ತಾ ಇಲಾಖೆ ಅಧಿಕಾರಿಗಳಿಗೆ ತಾರತಮ್ಯ ಸರಿಪಡಿಸಲು ನಿರ್ದೇಶನ ನೀಡಬೇಕು, ತಪ್ಪಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಪ್ರಸ್ತಾಪಿಸುವುದಾಗಿ ಸ್ಪೀಕರ್‌ಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದಾರೆ.

  • 24 Aug 2026 11:45 AM (IST)

    ‘ಮುಡಾ ಹಗರಣ’ ಘೋಷಣೆಗೆ ಕಲಾಪದಲ್ಲಿ ಕಾಂಗ್ರೆಸ್ ತೀವ್ರ ಆಕ್ಷೇಪ

    ವಿಧಾನಪರಿಷತ್‌ನಲ್ಲಿ ಸಚಿವ ನಾಗೇಂದ್ರ ವಿರುದ್ಧ ಬಿಜೆಪಿ ಸದಸ್ಯರು ಧಿಕ್ಕಾರ ಕೂಗುತ್ತಿದ್ದಾಗ, “ಮುಡಾ ಹಗರಣ ಮಾಡಿದ ಸರ್ಕಾರಕ್ಕೆ ಧಿಕ್ಕಾರ” ಎಂದು ಘೋಷಣೆ ಕೂಗಿದ್ದು ಕಾಂಗ್ರೆಸ್ ನಾಯಕರನ್ನು ಕೆರಳಿಸಿತು. ಇದಕ್ಕೆ ತೀವ್ರ ಆಕ್ಷೇಪ ಎತ್ತಿದ ಸಚಿವ ಮಾಗಡಿ ಬಾಲಕೃಷ್ಣ, “ಎಲ್ಲಿ ಮುಡಾ ಹಗರಣ ಆಗಿದೆ?” ಎಂದು ಪ್ರಶ್ನಿಸಿದರು. ಮಾಗಡಿ ಬಾಲಕೃಷ್ಣ ಅವರ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಸದಸ್ಯರು, ಮುಡಾ ವಿಚಾರ ಪ್ರಸ್ತಾಪಿಸಿದ್ದಕ್ಕೆ ಬಿಜೆಪಿ ವಿರುದ್ಧ ತೀವ್ರ ಕಿಡಿಕಾರಿದರು.

  • 24 Aug 2026 11:41 AM (IST)

    ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಸಚಿವರಿಗೆ ಸಭಾಪತಿ ಸಲೀಂ ಅಹ್ಮದ್ ಎಚ್ಚರಿಕೆ

    ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಪರಿಷತ್‌ನಲ್ಲಿ ವಿಪಕ್ಷಗಳ ಪ್ರತಿಭಟನೆ ಮುಂದುವರಿದಿದ್ದು, ಸಭಾಪತಿ ಸಲೀಂ ಅಹ್ಮದ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. “ನನ್ನ ಸೌಮ್ಯ ಸ್ವಭಾವ ದೌರ್ಬಲ್ಯವಲ್ಲ. ಕಳೆದ 6 ದಿನಗಳಿಂದ ಕಲಾಪ ಹಾಳಾಗುತ್ತಿದ್ದು, ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದ ಅವರು, ಸಮಯಕ್ಕೆ ಸರಿಯಾಗಿ ಬರದ ಗೈರುಹಾಜರ್ ಸಚಿವರಿಗೆ “ಸದನಕ್ಕಾಗಿ ಸಚಿವರೇ ಅರ್ಧ ಗಂಟೆ ಮುಂಚಿತವಾಗಿ ಬಂದು ಕಾಯಬೇಕು” ಎಂದು ಕಲಾಪದ ನಡುವೆಯೇ ಎಚ್ಚರಿಸಿದ್ದಾರೆ.

  • 24 Aug 2026 11:36 AM (IST)

    ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹ: ಅಹೋರಾತ್ರಿ ಧರಣಿ ಘೋಷಿಸಿದ ಆರ್. ಅಶೋಕ್

    ವಾಲ್ಮೀಕಿ ನಿಗಮದ ಹಗರಣದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ, ವಿಧಾನಸಭೆಯಲ್ಲೇ ಅಹೋರಾತ್ರಿ ಧರಣಿ ನಡೆಸುವುದಾಗಿ ವಿಪಕ್ಷ ನಾಯಕ ಆರ್. ಅಶೋಕ್ ಘೋಷಿಸಿದ್ದಾರೆ. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಪಕ್ಷ ಸದಸ್ಯರು, ಸಚಿವರ ರಾಜೀನಾಮೆ ಪಡೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

  • 24 Aug 2026 11:14 AM (IST)

    ಸದನದಲ್ಲಿ ನಿರಂತರ ಪ್ರತಿಭಟನೆ: ನಾಳೆಯೇ ವಿಧಾನಮಂಡಲ ಅಧಿವೇಶನ ಅಂತ್ಯ?

    ವಿಧಾನಮಂಡಲ ಕಲಾಪದಲ್ಲಿ ನಿರಂತರ ಪ್ರತಿಭಟನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಮುಂಗಾರು ಅಧಿವೇಶನವನ್ನು ನಿಗದಿತ ಆಗಸ್ಟ್ 27ರ ಬದಲಿಗೆ ನಾಳೆಯೇ (ಆಗಸ್ಟ್ 25) ಮುಕ್ತಾಯಗೊಳಿಸಲು ಸ್ಪೀಕರ್ ಹಾಗೂ ಸರ್ಕಾರ ಚಿಂತನೆ ನಡೆಸಿವೆ. ಈ ಕುರಿತು ಸರ್ಕಾರದ ಜೊತೆ ಮಾತುಕತೆ ನಡೆಸಿ ಇಂದು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
    YouTube video player

  • 24 Aug 2026 10:45 AM (IST)

    ಇನ್ಸ್ಟಾಗ್ರಾಮ್ ಪೇಜ್ ವಿರುದ್ಧ ಸೌಮೋಟೋ ಕೇಸ್!

    ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ ಈದ್ ಮಿಲಾದ್ ಸಂಬಂಧ ಹಾಕಲಾಗಿದ್ದ 40 ಅಡಿಯ ಟಿಪ್ಪು ಕಟೌಟ್‌ಗೆ ಪಾಕಿಸ್ತಾನದ ‘ಮುಜಾಹಿದ್’ ಹಾಡು ಬಳಸಿ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿತ್ತು. ಇದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಇನ್ಸ್ಟಾ ಪೇಜ್ ವಿರುದ್ಧ ನಗರ ಠಾಣೆಯ PSI ಧನರಾಜ್ ನೀಡಿದ ದೂರಿನಂತೆ ದೇಶವಿರೋಧಿ ಕೃತ್ಯ ಹಾಗೂ ಕೋಮು ಪ್ರಚೋದನೆ (BNS 196, 299) ಅಡಿಯಲ್ಲಿ ಸೌಮೋಟೋ ಎಫ್‌ಐಆರ್ ದಾಖಲಾಗಿದೆ. ಈ ವಿಡಿಯೋ ಶೇರ್ ಮಾಡಿದವರನ್ನೂ ಬಂಧಿಸಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • 24 Aug 2026 10:39 AM (IST)

    ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹ: ವಿಧಾನಸೌಧ ಸುತ್ತಮುತ್ತ ಟ್ರಾಫಿಕ್ ಜಾಮ್

    ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ವಿಧಾನಸೌಧದ ಸುತ್ತಮುತ್ತ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ವಿಶೇಷವಾಗಿ ಶಾಸಕರು ಪ್ರವೇಶಿಸುವ ದ್ವಾರದ ಬಳಿ ವಾಹನ ಸವಾರರು ಹಾಗೂ ಜನಸಾಮಾನ್ಯರು ಪರದಾಡುವಂತಾಗಿದೆ.

  • 24 Aug 2026 10:38 AM (IST)

    H1N1 ಪ್ರಕರಣಗಳ ಏರಿಕೆ: ಜಿಲ್ಲಾಧಿಕಾರಿಗಳ ಜೊತೆ ಸಚಿವ ಖಾದರ್ ಸಭೆ

    ರಾಜ್ಯದಲ್ಲಿ H1N1 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ಆರೋಗ್ಯಸೌಧದಲ್ಲಿ ಪ್ರಮುಖ ಸಭೆ ಆರಂಭವಾಗಿದೆ. ಸಚಿವರು ಎಲ್ಲಾ ಜಿಲ್ಲೆಗಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ (DHO) ಜೊತೆ ವಿಡಿಯೋ ಸಂವಾದ ನಡೆಸಿ ಮುನ್ನೆಚ್ಚರಿಕಾ ಕ್ರಮಗಳ ಪರಿಶೀಲನೆ ನಡೆಸುತ್ತಿದ್ದಾರೆ.

  • 24 Aug 2026 10:38 AM (IST)

    ಅಕ್ರಮ ಪಡಿತರ ಅಕ್ಕಿ, ರಾಗಿ ವಶಕ್ಕೆ ಪಡೆದ ಸಾರ್ವಜನಿಕರು

    ರಾಮನಗರ (ಬೆಂಗಳೂರು ದಕ್ಷಿಣ) ಜಿಲ್ಲೆಯ ಕನಕಪುರದಿಂದ ಮಳವಳ್ಳಿಗೆ ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ 300 ಚೀಲ ಪಡಿತರ ಅಕ್ಕಿ ಮತ್ತು ರಾಗಿಯಿದ್ದ ವಾಹನಗಳನ್ನು ನಗರದ APMC ಮಳಿಗೆ ಬಳಿ ಸಾರ್ವಜನಿಕರು ತಡೆದು, ಆಹಾರ ಇಲಾಖೆಯ అಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.

  • 24 Aug 2026 10:30 AM (IST)

    ಈದ್ ಮಿಲಾದ್ ವೇಳೆ ಪಾಕಿಸ್ತಾನಿ ಹಾಡು ವೈರಲ್

    ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಹಾಕಲಾದ 40 ಅಡಿ ಟಿಪ್ಪು ಸುಲ್ತಾನ್ ಕಟೌಟ್ ವಿಡಿಯೋಗೆ ಪಾಕಿಸ್ತಾನ ಮುಜಾಹಿದ್ ಸಂಬಂಧಿತ ದೇಶವಿರೋಧಿ ಹಾಡು ಬಳಸಿ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಮಾಡಲಾಗಿದೆ. ‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಖಾತೆಯ ಈ ಕೃತ್ಯಕ್ಕೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಗರ ಠಾಣೆ ವ್ಯಾಪ್ತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ವೀಡಿಯೋ ನೋಡಿ

  • 24 Aug 2026 09:02 AM (IST)

    ಡೇವಿಡ್ ಹತ್ಯೆ ಆರೋಪಿ ಅನೋಜ್ ಕಾಲಿಗೆ ಪೊಲೀಸ್ ಗುಂಡೇಟು

    ಆಗಸ್ಟ್ 7ರಂದು ನಡೆದ ಮುದರಂಗಡಿ ಉದ್ಯಮಿ ಡೇವಿಡ್ ಹತ್ಯೆಗೆ ಶೂಟರ್‌ಗಳನ್ನು ಒದಗಿಸಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅನೋಜ್, ಹೆಬ್ರಿ ಬಳಿ ಮೂತ್ರ ವಿಸರ್ಜನೆ ನೆಪದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  • 24 Aug 2026 08:56 AM (IST)

    ಇಡಿ ದಾಳಿ ಸುಳಿವು ಸಿಗುತ್ತಿದ್ದಂತೆ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಎಸ್ಕೇಪ್?

    KPSC ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಇಡಿ ದಾಳಿಯ ಸುಳಿವು ದೊರೆಯುತ್ತಿದ್ದಂತೆಯೇ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ದೆಹಲಿಗೆ ತೆರಳಿ ಪರಾರಿಯಾಗಿದ್ದಾರೆ. ಸದ್ಯ ಅವರ ಮನೆ ಬೀಗ ಒಡೆದ ಇಡಿ ಅಧಿಕಾರಿಗಳು ಸುಮಾರು 9 ಗಂಟೆಗಳ ಕಾಲ ಶೋಧ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Published On - 8:53 am, Mon, 24 August 26

Loading...
Unable to load recommendations.
Follow Us