ಬಿಟ್ ಕಾಯಿನ್ ಪ್ರಕರಣದ ಆರೋಪಿಗಳ ವಿರುದ್ದ ಕೋಕಾ ಅಸ್ತ್ರ ಬಳಕೆ; ಏನಿದು ಕಾಯ್ದೆ?
ಬಿಟ್ ಕಾಯಿನ್ ಹಗರಣದಲ್ಲಿ ಮತ್ತೆ ಲಾಕ್ ಆಗಿ ಎಸ್ಐಟಿ ವಶದಲ್ಲಿರುವ ಕಿಂಗ್ ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ಸಂಕಷ್ಟ ತಪ್ಪಿದ್ದಲ್ಲ ಎನ್ನಲಾಗುತ್ತಿದೆ. ಶ್ರೀಕಿ ಜೊತೆ ಕೈಜೋಡಿಸಿ ಬಿಟ್ ಕಾಯಿನ್ ಕಳ್ಳಾಟದಲ್ಲಿ ಭಾಗಿಯಾಗಿದ್ದ ಕೆಲ ಪೊಲೀಸರಿಗೂ ಇದೀಗ ನಡುಕ ಶುರುವಾಗಿದೆ. ಸದ್ಯ ಇದೀಗ ಬಿಟ್ ಕಾಯಿನ್ ನಂಟು ಹೊಂದಿರುವವರ ಮೇಲೆ ಕೋಕಾ ಅಸ್ತ್ರ ಬಳಕೆ ಮಾಡಲಾಗಿದೆ.
ಬೆಂಗಳೂರು, ಮೇ.25: ಬಿಟ್ ಕಾಯಿನ್(Bitcoin)ಹಗರಣದದಲ್ಲಿ ಸಿಐಡಿಯ ಎಸ್ಐಟಿ(SIT) ಅಧಿಕಾರಿಗಳು ದಿಟ್ಟ ಹೆಜ್ಜೆಯಟ್ಟಿದ್ದಾರೆ. 2017ರಲ್ಲಿ ತುಮಕೂರು ಸೆನ್ ಠಾಣೆಯಲ್ಲಿ ದಾಖಲಾಗಿದ್ದ ಬಿಟ್ ಕಾಯಿನ್ ಪ್ರಕರಣದಲ್ಲಿ ಶ್ರೀಕಿ ಅಂಡ್ ಟೀಮ್ ಮೇಲೆ ಕೋಕಾ(Karnataka Control of Organised Crimes Act ) ಕಾಯಿದೆ ಜಾರಿ ಮಾಡಲಾಗುತ್ತಿದೆ. ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ಕೇಸ್ ದಾಖಲಾಗಲಿದೆ.
ಏನಿದು ಕಾಯ್ದೆ?
ಈ ಕಾಯ್ದೆಯಲ್ಲಿ ಕನಿಷ್ಠ ಒಂದು ವರ್ಷ ಅಪರಾಧಿಗಳಿಗೆ ಜಾಮೀನು ಸಿಗುವುದಿಲ್ಲ. ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವವರ ವಿರುದ್ಧ ಈ ಕಾಯ್ದೆ ಜಾರಿಯಾಗುತ್ತದೆ. ಪ್ರಕರಣದ ಕಿಂಗ್ ಪಿನ್ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿಯನ್ನು ಎಸ್ಐಟಿ ಅಧಿಕಾರಿಗಳು ಈಗಾಗಲೇ ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ರೌಡಿಶೀಟರ್ ಕೊಲೆ ಪ್ರಕರಣ: ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಜಾರಿ
ಶ್ರೀಕಿಯ ಕ್ರೈಂ ಪಾರ್ಟ್ನರ್ ರಾಬೀನ್ ಖಂಡೇವಾಲ ಕೂಡ ಬಂಧನ
ಬಹುಕೋಟಿ ಬಿಟ್ ಕಾಯಿನ್ ಹಗರಣ ಪ್ರಕರಣ ಸಂಬಂಧ ಮತ್ತೊರ್ವನ ಪ್ರಮುಖ ಆರೋಪಿ ರಾಬಿನ್ ಖಾಂಡೆವಾಲ್ ಬಂಧನ ವಾಗಿದೆ. ರಾಜಸ್ಥಾನದಲ್ಲಿ ಆರೋಪಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಎಸ್ಐಟಿ ಪೊಲೀಸರು, ಬಳಿಕ ಬೆಂಗಳೂರಿನಿಂದ ಆರೋಪಿ ಇರುವ ಜಾಗಕ್ಕೆ ತೆರಳಿ, ಆರೋಪಿಯನ್ನ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಸದ್ಯ ಬಿಟ್ ಕಾಯಿನ್ ಹಗರಣ ಸಂಬಂಧ ವಿಚಾರಣೆ ನಡೆಸಲಿರುವ ಎಸ್ಐಟಿ, ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಎಸ್ಐಟಿ ವಶಕ್ಕೆ ಪಡೆಯಲು ಸಿದ್ದತೆಯಲ್ಲಿದ್ದಾರೆ. ವಶಕ್ಕೆ ಪಡೆದು ಎಸ್ಐಟಿಯಿಂದ ರಾಬಿನ್ ಖಾಂಡೆವಾಲ್ ನನ್ನ ತೀವ್ರ ವಿಚಾರಣೆಗೆ ಒಳಪಡಿಸಲಿದೆ.
ಶ್ರೀಕಿ ಮೇಲಿರುವ ಎಲ್ಲಾ ಕೇಸ್ಗಳನ್ನ ಕೋಕಾ ಅಡಿಯಲ್ಲಿ ಸೇರಿಸಲು ಎಸ್ಐಟಿ ಚಿಂತನೆ
ಕಿಂಗ್ ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಿಟ್ ಕಾಯಿನ್ ಪ್ರಕರಣಗಳೆಲ್ಲವನ್ನು ಎಸ್ಐಟಿ ಕೋಕಾ ಆಕ್ಟ್ ಜಾರಿಗೊಳಿಸಲು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಕೋಕಾ ಆಕ್ಟ್ ಅಡಿಗೆ ಶ್ರೀಕಿಯ ಎಲ್ಲಾ ಪ್ರಕರಣಗಳು ಬಂದಿದ್ದೇ ಆದ್ರೆ, ಕೃತ್ಯದಲ್ಲಿ ಭಾಗಿಯಾಗಿರುವ ಗಂಭೀರ ಆರೋಪ ಹೊತ್ತಿರುವ ಕೆಲ ಪೊಲೀಸ್ ಅಧಿಕಾರಿಳಿಗೂ ನಡುಕ ಶುರುವಾಗಿದೆ. ಕೋಕಾ ಕಾಯ್ದೆ ಹೇಳುವಂತೆ ಆರೋಪಿಗೆ ಸಹಕಾರ ನೀಡಿದ ಮತ್ತು ಕೃತ್ಯದಲ್ಲಿ ಆರೋಪಿ ಜತೆಗೆ ಕೈ ಜೋಡಿಸಿದವರಿಗೂ ಕಾಯ್ದೆ ಅಡಿ ಶಿಕ್ಷೆ ಆಗಲಿದ್ದು, ಇದೇ ಕಾರಣಕ್ಕೆ ಆರೋಪಕ್ಕೆ ಗುರಿಯಾದ ಪೊಲೀಸರಿಗೂ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ