ಪ್ರಧಾನಿ ಮೋದಿ ಭೇಟಿಯಾದ ಸೋಮಣ್ಣ: 30 ನಿಮಿಷಗಳಲ್ಲಿ ಏನೆಲ್ಲಾ ಚರ್ಚೆ? ಇಲ್ಲಿದೆ ವಿವರ
ಸಚಿವ ವಿ.ಸೋಮಣ್ಣ(V Somanna) ಅವರು ನವದೆಹಲಿಯಲ್ಲಿ ಇಂದು(ಮಂಗಳವಾರ) ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಸುದೀರ್ಘ 30 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ. ಈ ವೇಳೆ ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ರೈಲ್ವೆ ಅಭಿವೃದ್ದಿಯ ಕುರಿತಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಧಾನಮಂತ್ರಿಗಳಿಗೆ ವಿವರಿಸಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.
ನವದೆಹಲಿ, ಅ.08: ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಖಾತೆಯ ಸಚಿವ ವಿ.ಸೋಮಣ್ಣ(V Somanna) ಅವರು ನವದೆಹಲಿಯಲ್ಲಿ ಇಂದು(ಮಂಗಳವಾರ) ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಸುದೀರ್ಘ 30 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ದಿಯ ಬಗ್ಗೆ ಚರ್ಚಿಸಿದ್ದು, ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ರೈಲ್ವೆ ಅಭಿವೃದ್ದಿಯ ಕುರಿತಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಸೋಮಣ್ಣ ಅವರು ಪ್ರಧಾನಮಂತ್ರಿಗಳಿಗೆ ವಿವರಿಸಿದ್ದಾರೆ.
30 ನಿಮಿಷಗಳಲ್ಲಿ ಏನೆಲ್ಲಾ ಚರ್ಚೆ?
ಬೆಂಗಳೂರು ಸಬ್ ಅರ್ಬನ್ ರೇಲ್ವೆ, ವರ್ತುಲ್ ರೇಲ್ವೆ ಇತ್ಯಾದಿಗಳ ಬಗ್ಗೆ 2 ಸುತ್ತಿನ ಸಭೆ ನಡೆಸಿರುವ ಬಗ್ಗೆ ಹಾಗೂ ಕಳೆದ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ತುಮಕೂರು-ರಾಯದುರ್ಗ ರೆಲ್ವೆ ಮಾರ್ಗ ಭೂಸ್ವಾಧಿನ ಪ್ರಕ್ರಿಯೆಯನ್ನು ಕೇವಲ 3 ತಿಂಗಳ ಅವಧಿಯಲ್ಲಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ, ರೈಲ್ವೆ ಇಲಾಖೆಗೆ ಸಂಬಂಧಪಟ್ಟ ಪ್ರಗತಿ ಪರಿಶೀಲನಾ ಸಭೆ ನಡೆಸಿ ಶೇ.90 ಕ್ಕಿಂತಲೂ ಮಿಗಲಾಗಿ ಮುಗಿಸಿರುವ ಬಗ್ಗೆ ಪ್ರಧಾನ ಮಂತ್ರಿಗಳಿಗೆ ವಿವರಿಸಿದ್ದಾರೆ. ಅಷ್ಟೇ ಅಲ್ಲ, ರೈಲ್ವೆ ಅಧಿಕಾರಿ ಮತ್ತು ಜಿಲ್ಲಾಡಳಿತದ ಉತ್ತಮ ಕಾರ್ಯವೈಖರಿಯ ಬಗ್ಗೆಯೂ ಪ್ರದಾನ ಮಂತ್ರಿಗಳ ಗಮನ ಸೆಳೆದಿದ್ದು, ಈ ಬಗ್ಗೆ ಮೋದಿ ಅವರು ಅತ್ಯಂತ ಹರ್ಷ ವ್ಯಕ್ತಪಡಿಸಿದ ಕುರಿತು ಕೇಂದ್ರ ಸಚಿವ ಸೋಮಣ್ಣ ತಿಳಿಸಿದ್ದಾರೆ.
ಇದನ್ನೂ ಓದಿ:ತುಮಕೂರು, ಚಿತ್ರದುರ್ಗ, ಪಾವಗಡ, ಬೆಳಗಾವಿ, ಅಂಕೋಲಾ ರೈಲು ಮಾರ್ಗದ ಬಗ್ಗೆ ಚರ್ಚೆ, ಸಚಿವ ವಿ.ಸೋಮಣ್ಣ ಮಾಹಿತಿ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಡಾ. ಶಿವಕುಮಾರ್ ಮಹಾ ಸ್ವಾಮಿಜಿಯವರ ನಾಮಕರಣ ಮಾಡುವಂತೆ ಮನವಿ
ಇದೇ ವೇಳೆ ತುಮಕೂರು ಜಿಲ್ಲೆಯ ಅಭಿವೃದ್ಧಿಯ ಕುರಿತಾಗಿ ಕೆಲವು ವಿಶೇಷ ಪ್ರಸ್ತಾವನೆಗಳನ್ನು ಪ್ರಧಾನ ಮಂತ್ರಿಗಳಿಗೆ ಮುಂದೆ ಮಂಡಿಸಿ, ತಮ್ಮ ಲೋಕಸಭಾ ಕ್ಷೇತ್ರದ ಸರ್ವೋತೋಮುಖ ಅಭಿವೃದ್ದಿಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ತುಮಕೂರು ಜಿಲ್ಲೆಯ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ 87 ಕೋಟಿ ರೂ. ಅನುದಾನ ನೀಡಿದ್ದು, ಈ ರೈಲ್ವೆ ನಿಲ್ದಾಣಕ್ಕೆ ಡಾ. ಶಿವಕುಮಾರ್ ಮಹಾ ಸ್ವಾಮಿಜಿಯವರ ನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ.
ತುಮಕೂರು – ರಾಯದುರ್ಗ ಮತ್ತು ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲ್ವೆ ಮಾರ್ಗವನ್ನು ಜೂನ್ 2027ರಲ್ಲಿ ಲೋಕಾರ್ಪಣೆ ಮಾಡಲು ತುಮಕೂರಿಗೆ ಆಗಮಿಸುವಂತೆ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದರು. ಇದರ ಜೊತೆಗೆ ರೈಲ್ವೆ ಇಲಾಖೆಯಲ್ಲಿನ ಎಲ್ಲಾ ಅಭಿವೃದ್ಧಿಕಾರ್ಯಗಳಿಗೆ ಅತ್ಯಂತ ಸಹಕಾರ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಸಹಕಾರ ಮನೋಭಾವನೆಯನ್ನು ಕೇಂದ್ರ ಸಚಿವ ಸೋಮಣ್ಣನವರು ಪ್ರಧಾನಮಂತ್ರಿಯವರ ಭೇಟಿಯ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Tue, 8 October 24