RCB IPL Victory Stampede: ಆರ್​ಸಿಬಿ ವಿಜಯ ಸಂಭ್ರಮಾಚರಣೆ ವೇಳೆ ಸಂಭವಿಸಿದ ಘೋರ ದುರಂತಕ್ಕೆ ಕಾರಣವೇನು? ಇಲ್ಲಿದೆ ಟೈಮ್​ ಲೈನ್

Bengaluru RCB victory Celebration Stampede: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ವಿಜಯೋತ್ಸವದ ಸಮಯದಲ್ಲಿ ಬೆಂಗಳೂರಿನಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 10 ಜನರು ಮೃತಪಟ್ಟಿದ್ದಾರೆ. ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದ ಸಾವಿರಾರು ಅಭಿಮಾನಿಗಳ ನಡುವೆ ನೂಕುನುಗ್ಗಲು ಉಂಟಾಗಿ ಈ ದುರಂತ ಸಂಭವಿಸಿದೆ. ಅನೇಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯಿಂದಾಗಿ ಸಂಭ್ರಮದ ವಾತಾವರಣ ದುಃಖದಲ್ಲಿ ಮುಳುಗಿದೆ.

RCB IPL Victory Stampede: ಆರ್​ಸಿಬಿ ವಿಜಯ ಸಂಭ್ರಮಾಚರಣೆ ವೇಳೆ ಸಂಭವಿಸಿದ ಘೋರ ದುರಂತಕ್ಕೆ ಕಾರಣವೇನು? ಇಲ್ಲಿದೆ ಟೈಮ್​ ಲೈನ್
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ

Updated on: Jun 04, 2025 | 8:08 PM

ಬೆಂಗಳೂರು, ಜೂನ್​ 04: 18ನೇ ಆವೃತ್ತಿಯ ಐಪಿಎಲ್ (IPL) ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರರು ನಗರಕ್ಕೆ ಬಂದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣ (Chinnaswamy Stadium) ವಿಜಯ ಸಂಭ್ರಮಚರಣೆ ಮತ್ತು ವಿಧಾನಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾವಿರಾರು ಮಂದಿ ಆರ್​ಸಿಬಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಮತ್ತು ವಿಧಾನಸೌಧ ಎದುರು ಜಮಾಯಿಸಿದ್ದರು. ಈ ವೇಳೆ ಘೋರ ದುರಂತ ಸಂಭವಿಸಿದೆ. ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 10 ಮಂದಿ ಮೃತಟ್ಟಿದ್ದಾರೆ. ಹಾಗಿದ್ದರೆ ಸಂಭ್ರಮಾಚರಣೆ ಸಮಯದಲ್ಲಿ ಏನೆಲ್ಲ ಆಯ್ತು? ದುರಂತಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ.

ರಾಜ್ಯ ಸರ್ಕಾರದ ವತಿಯಿಂದ ಬುಧವಾರ (ಜೂ.04) ಬೆಂಗಳೂರಿನ ವಿಧಾನಸೌಧದಲ್ಲಿ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ ಸಂಭ್ರಮಾಚರಣೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಸಂಬಂಧ ಆರ್​ಸಿಬಿ ಆಟಗಾರರು ಬೆಂಗಳೂರಿಗೆ ಬಂದಿದ್ದಾರೆ. ಆರ್​ಸಿಬಿ ಆಟಗಾರರನ್ನು ಕಣ್ತುಂಬಿಕೊಳ್ಳಲು ವಿಧಾನಸೌಧದ ಎದುರು ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾವಿರಾರು ಜನರು ಸೇರಿದ್ದರು.

ಮಧ್ಯಾಹ್ನ 3:00 ಗಂಟೆಗೆ ಆರ್​ಸಿಬಿ ಆಟಗಾರರು ಬೆಂಗಳೂರಿಗೆ ಆಗಮಿಸಿದರು. ಸಂಜೆ 4:30 ಸುಮಾರಿಗೆ ವಿಧಾನಸೌಧದಲ್ಲಿ ಆರ್​ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಮಂದಿ ಆರ್​ಸಿಬಿ ಅಭಿಮಾನಿಗಳು ವಿಧಾನಸೌಧದ ಎದುರು ಸೇರಿದ್ದರು.

ಇದನ್ನೂ ಓದಿ
ಬೆಂಗಳೂರಲ್ಲಿ ಕಾಲ್ತುಳಿತ; ಕಾಂಗ್ರೆಸ್ ಸರ್ಕಾರದ ವೈಫಲ್ಯವೇ ಕಾರಣವೆಂದ ಬಿಜೆಪಿ
ಐಪಿಎಲ್ ಸಂಭ್ರಮದಲ್ಲಿ ಸೂತಕ; ಯಡವಟ್ಟಾಗಿದ್ದೆಲ್ಲಿ, ಹೊಣೆ ಯಾರು?
ಬಸ್ ಹಿಂದಕ್ಕೆ ಚಲಿಸುತ್ತಿದ್ದಾಗ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ
Stampede: ಕಾಲ್ತುಳಿತದಲ್ಲಿ 10 ಸಾವು, ಆಸ್ಪತ್ರೆ ಎದುರು ಸಂಬಂಧಿಕರ ಆಕ್ರಂದನ

ಸಂಜೆ 4:35ರ ಸುಮಾರಿಗೆ ಆರ್​ಸಿಬಿ ಆಟಗಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಸನ್ಮಾನಿಸಿದರು. ಈ ವೇಳೆ ಮಳೆ ಬಂದಿದ್ದರಿಂದ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟುಕುಗೊಳಿಸಲಾಯಿತು.

ಇದೇ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾವಿರಾರು ಮಂದಿ ಆರ್​ಸಿಬಿ ಅಭಿಮಾನಿಗಳು ಸೇರಿದ್ದರು. ಕ್ರೀಡಾಂಗಣದ ಗೇಟ್ ನಂಬರ್ 5 ಮತ್ತು 6 ರ ಮುಖಾಂತರ ಪ್ರವೇಶಕ್ಕೆ ಅವಕಾಶ ನೀಡುವಂತೆ ಅಭಿಮಾನಿಗಳು ಪಟ್ಟು ಹಿಡಿದರು. ನಂತರ, ಗೇಟ್​ ನಂಬರ್ 6ರ ಮೇಲೆ ಹತ್ತಿ ಕ್ರೀಡಾಂಗಣದ ಒಳಗೆ ನುಗ್ಗುಲು ಯತ್ನಿಸಿದರು. ಈ ವೇಳೆ ಕೆಳೆಗೆ ಬಿದ್ದು ಓರ್ವ ಯುವಕ ಕಾಲು ಮುರಿದುಕೊಂಡನು.

ಗೇಟ್ ನಂ 18ರ ಬಳಿ ಅಭಿಮಾನಿಗಳಿಂದ ನೂಕುನುಗ್ಗಲು ಸಂಭವಿಸಿತು. ನೂಕುನುಗ್ಗಲಿನಿಂದ ಹಲವರು ಗಂಭೀರವಾಗಿ ಗಾಯಗೊಂಡು. ಪೊಲೀಸರು ಅಭಿಮಾನಿಗಳನ್ನು ಚದುರಿಸಲು ಲಾಠಿ ಚಾರ್ಜ್​ ಮಾಡಿದರು. ಅತ್ತ, ಗೇಟ್ ನಂಬರ್ 12 ರಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಯಿತು. ಆಗ, ಕ್ರೀಡಾಂಗಣದ ಸಿಬ್ಬಂದಿ ಗೇಟ್​ ತೆರದು ಅಭಿಮಾನಿಗಳನ್ನು ಒಳಗಡೆ ಬಿಡಲು ಆರಂಭಿಸಿದರು. ಏಕಾಏಕಿ ಅಭಿಮಾನಿಗಳು ಬ್ಯಾರಿಕೇಡ್​​ಗಳನ್ನು ತಳ್ಳಿ ಕ್ರೀಡಾಂಗಣದ ಒಳಗೆ ನುಗ್ಗಲು ಆರಂಭಿಸಿದ್ದರಿಂದ ಕಾಲ್ತುಳಿತ ಸಂಭವಿಸಿತು. ಈ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಕುಸಿದು ಬಿದ್ದರು. ತಕ್ಷಣ ಪೊಲೀಸರು ಮಹಿಳೆಯನ್ನು ಕಾರ್​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು.

ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 10 ಸಾವು

ಈ ಕಾಲ್ತುಳಿತದಲ್ಲಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ವೈದೇಹಿ ಆಸ್ಪತ್ರೆ, ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಲ್ಲಿ ಆರು ಮಂದಿ ಮತ್ತು ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 12 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಸ್ಪತ್ರೆಗಳ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:39 pm, Wed, 4 June 25