AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಬ್ಬರು ಮಕ್ಕಳು ಸೇರಿ ಐವರಿಗೆ ಕಚ್ಚಿದ ಬೀದಿನಾಯಿ; ಬಾಲಕಿಯ ಮುಖಕ್ಕೇ ಐದಾರು ಬಾರಿ ಕಚ್ಚಿದ ಶ್ವಾನ

ಬೀದರ್‌ನ ಲಾಲವಾಡಿ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಕಳೆದ 48 ಗಂಟೆಗಳಲ್ಲಿ ಐವರ ಮೇಲೆ, ಇಬ್ಬರು ಮಕ್ಕಳೂ ಸೇರಿದಂತೆ, ದಾಳಿ ನಡೆಸಿವೆ. ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ (ABC) ಸರಿಯಾಗಿ ನಡೆಯದಿರುವುದು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಕ್ರಮ ಕೈಗೊಂಡು ನಾಯಿಗಳನ್ನು ಹಿಡಿದು ಸುರಕ್ಷತೆ ಒದಗಿಸುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.

ಇಬ್ಬರು ಮಕ್ಕಳು ಸೇರಿ ಐವರಿಗೆ ಕಚ್ಚಿದ ಬೀದಿನಾಯಿ; ಬಾಲಕಿಯ ಮುಖಕ್ಕೇ ಐದಾರು ಬಾರಿ ಕಚ್ಚಿದ ಶ್ವಾನ
ಸಾಂದರ್ಭಿಕ ಚಿತ್ರ
ಸುರೇಶ ನಾಯಕ
| Edited By: |

Updated on:Apr 07, 2026 | 5:49 PM

Share

ಬೀದರ್, ಏ.7: ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹೆಚ್ಚಾಗಿ ಮಕ್ಕಳ ಮೇಲೆ ಈ ದಾಳಿಗಳು ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪಗಳು ಕೂಡ ಕೇಳಿ ಬಂದಿದೆ. ಇದೀಗ ಬೀದರ್ ಜಿಲ್ಲೆಯ ಲಾಲವಾಡಿ ಬಡಾವಣೆಯಲ್ಲಿ ಕಳೆದ 48 ಗಂಟೆಗಳಿಂದ ಬೀದಿನಾಯಿಗಳ ಹಾವಳಿ ಮಿತಿಮೀರಿದೆ. ರಸ್ತೆಯಲ್ಲಿ ಸಂಚರಿಸುವವರ ಮೇಲೆ ಮನಸೋಇಚ್ಛೆ ದಾಳಿ ನಡೆಸುತ್ತಿರುವ ನಾಯಿಗಳು, ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಗಾಯಗೊಳಿಸಿವೆ. ಈ ಘಟನೆಯಿಂದಾಗಿ ಬಡಾವಣೆಯ ನಿವಾಸಿಗಳು ಮನೆಯಿಂದ ಹೊರಬರಲು ಹೆದರುವಂತಾಗಿದೆ.

ಬೀದಿ ನಾಯಿಗಳ ನಿಯಂತ್ರಣದ ಬಗ್ಗೆ ನಗರಸಭೆ ಅಥವಾ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. “ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ (ABC) ಸರಿಯಾಗಿ ನಡೆಯುತ್ತಿಲ್ಲ, ಬೀದಿನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ” ಎಂದು ನಿವಾಸಿಗಳು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬಾಕಿ ವೇತನ ಕೇಳಿದ್ದಕ್ಕೆ ‘ಸಿದ್ಧಗಂಗಾ ಟೂರ್ಸ್’ ಮಾಲೀಕರಿಂದ ಚಾಲಕನಿಗೆ ಹಲ್ಲೆ: ಪೊಲೀಸರಿಂದಲೇ ಸಾಕ್ಷ್ಯ ನಾಶದ ಪ್ರಯತ್ನ?

ನಾಯಿ ಕಚ್ಚಿದ ನಂತರ ಬಡಾವಣೆಯ ಜನರು ಕೈಯಲ್ಲಿ ಕೋಲು ಹಿಡಿದುಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದು ನಾಯಿಗಳನ್ನು ಸೆರೆಹಿಡಿಯಬೇಕು ಮತ್ತು ಮಕ್ಕಳ ಮೇಲೆ ದಾಳಿಯಾಗುವುದನ್ನು ತಪ್ಪಿಸಬೇಕು ಎಂದು ಲಾಲವಾಡಿ ಬಡಾವಣೆಯ ಜನರು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:48 pm, Tue, 7 April 26

Follow Us