ಹಗಲು ದರೋಡೆ: ಬೀದರ್​ನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಕೆಂಪು ಕಲ್ಲು ಗಣಿಗಾರಿಕೆ

ಬೀದರ್ ಜಿಲ್ಲೆಯ ಗಡಿ ಭಾಗಗಳಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. 40ಕ್ಕೂ ಹೆಚ್ಚು ಕಡೆಗಳಲ್ಲಿ ಭೂಮಿಯ ಒಡಲನ್ನು ಬಗೆದು ಕಲ್ಲು ತೆಗೆಯಲಾಗುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಇತರ ಅಧಿಕಾರಿಗಳ ಮೌನ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನು ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿರುವ ಆರೋಪ ಕೇಳಿಬಂದಿದೆ.

ಹಗಲು ದರೋಡೆ: ಬೀದರ್​ನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಕೆಂಪು ಕಲ್ಲು ಗಣಿಗಾರಿಕೆ
ಕೆಂಪು ಕಲ್ಲು ಗಣಿಗಾರಿಕೆ
Image Credit source: tv9 kannada
Edited By:

Updated on: Jun 15, 2026 | 3:57 PM

ಬೀದರ್​​, ಜೂನ್​​ 15: ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ (illegal mining) ಅವ್ಯಾಹತವಾಗಿ ನಡೆಯುತ್ತಿದೆ. ಬೀದರ್‌ (bidar) ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ 40ಕ್ಕೂ ಹೆಚ್ಚು ಸ್ಥಳದಲ್ಲಿ  ಭೂಮಿಯ ಒಡಲನ್ನ ಬಗೆದು ಕೆಂಪು ಕಲ್ಲು ತೆಗೆಯಲಾಗುತ್ತಿದೆ. ಇಷ್ಟೇಲ್ಲಾ ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾತ್ರ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮುಖ್ಯಾಂಶಗಳು

  • ಬೀದರ್‌ನಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಹೆಚ್ಚಳ
  • ಮೌನಕ್ಕೆ ಶರಣಾದ ಅಧಿಕಾರಿಗಳು
  • ಕಾನೂನು ಗಾಳಿಗೆ ತೂರಿ ರಸ್ತೆ ಪಕ್ಕದಲ್ಲೇ ನಡೆಯುತ್ತಿದೆ ಗಣಿಗಾರಿಕೆ

ಬೀದರ್, ಭಾಲ್ಕಿ ತಾಲೂಕಿನಲ್ಲಿಯೇ ಅತೀ ಹೆಚ್ಚು ಗಣಿಗಾರಿಕೆ

ಗಡಿ ಜಿಲ್ಲೆ ಬೀದರ್​ನಲ್ಲಿ ಕೆಂಪು ಕಲ್ಲು ಕೊರೆಯುವ ಧಂದೆ ಜೋರಾಗಿದ್ದು, ಹಾಡಹಗಲೇ ಗಣಿಗಾರಿಕೆ ಮಾಡಲಾಗುತ್ತಿದೆ. ಬೀದರ್ ಹಾಗೂ ಭಾಲ್ಕಿ ತಾಲೂಕಿನಲ್ಲಿಯೇ ಅತೀ ಹೆಚ್ಚು ಗಣಿಗಾರಿಕೆ ನಡೆಯುತ್ತಿದ್ದು, ಈ  ಬಗ್ಗೆ ಯಾರೂ ಕೂಡ ಚಕಾರ ಎತ್ತುತ್ತಿಲ್ಲ. ಬೀದರ್ ತಾಲೂಕಿನ ಸಿರ್ಸಿ, ಔರಾದ್, ಚಟ್ನಳ್ಳಿ, ಅಣದೂರು ವಾಡಿ, ಸಗೋಳ್ಳಗಿ ತಾಂಡಾ ಹಾಗೂ ಭಾಲ್ಕಿ ತಾಲೂಕಿನ ಖಾನಾಪುರ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ಕೆಂಪು ಕಲ್ಲು ಕೊರೆಯುವ ಕೆಲಸ ನಡೆಯುತ್ತಿದೆ. ದೊಡ್ಡ ದೊಡ್ಡ ಮಿಷನ್​​ಗಳನ್ನ ಬಳಸಿಕೊಂಡು ಭೂಮಿಯ ಒಡಲಿನಿಂದ ಕಲ್ಲನ್ನ ಹೆಕ್ಕಿ ತೆಗೆಯುತ್ತಿದ್ದಾರೆ.

ಇದನ್ನೂ ಓದಿ: ಜನರ ಬದುಕಿಗೆ ಮಾರಕವಾದ ಗಣಿಗಾರಿಕೆ ಧೂಳು: ಸರ್ಕಾರ ಸೈಲೆಂಟ್, ಸಿಡಿದೆದ್ದ ರೈತಸಂಘ

ಪೋಲೀಸರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಈ ವಿಚಾರಗೊತ್ತಿದ್ದರು ಕಂಡು ಕಾಣದವರಂತೆ ಕುಳಿತಿದ್ದಾರೆ. ಸರಕಾರದ ನೀತಿ ನಿಯಮಗಳನ್ನ ಗಾಳಿಗೆ ತೂರಿ ಅಕ್ರಮವಾಗಿ ಕಲ್ಲು ಕೊರೆಯುವ ದಂಧೆಯನ್ನ ಯಾರ ಅಂಜಿಕೆ, ಅಳುಕ್ಕಿಲ್ಲದೇ ನಡೆಸಲಾಗುತ್ತಿದೆ. ಗ್ರಾಮದ ಅಕ್ಕಪಕ್ಕದಲ್ಲಿ ಫಲವತ್ತಾದ ಜಮೀನುಗಳಲ್ಲಿ ಅಕ್ರಮ ದಂಧೆ ನಡೆಯುತ್ತಿದ್ದರು ಅಧಿಕಾರಿಗಳು ಮಾತ್ರ ಸುಮ್ಮನೆ ಕುಳಿತ್ತಿದ್ದಾರೆ.

ಒಂದು ಕಲ್ಲಿಗೆ 25 ರೂ. ಮಾರಾಟ

ಜಿಲ್ಲೆಯಲ್ಲಿ ಕಳೆದ ಹತ್ತಾರು ವರ್ಷದಿಂದ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕೆಲವು ರೈತರಿಂದ ಜಮೀನನ್ನ ಖರೀದಿಸಿ ಅಲ್ಲಿಯೂ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ. ಇನ್ನು ಕೆಲವು ರೈತರು ತಮ್ಮ ಹೊಲದಲ್ಲಿಯೇ ಕಲ್ಲು ಕೊರೆಯುವವರನ್ನ ಕರೆದುಕೊಂಡು ಬಂದು ಕಲ್ಲು ತೆಗೆದು 25 ರೂ.ಗೆ ಒಂದರಂತೆ ಮಾರಾಟ ಮಾಡುತ್ತಿದ್ದಾರೆ. ಗಣಿಗಾರಿಕೆ ಮಾಡುವವರು ಅಕ್ಕಪಕ್ಕದ ಪೊಲೀಸ್ ಠಾಣಾ ಅಧಿಕಾರಿಗಳಿಗೆ ತಿಂಗಳಿಗೆ ಹಣ ಕೊಟ್ಟು ಗಣಿಗಾರಿಕೆ ನಡೆಯುವ ಸ್ಥಳಕ್ಕೆ ಭೇಟಿ ನೀಡದಂತೆ ಮಾಡಿದ್ದಾರೆ ಎಂಬುವುದು ಇಲ್ಲಿನ ಜನರ ಮಾತು.

ಅಕ್ರಮ ಗಣಿಗಾರಿಯಿಂದ ಪರಿಸರ ಹಾಳು

ಅಷ್ಟಕ್ಕೂ ಯಾರಾದರು ಅಧಿಕಾರಿಗಳು ಗಣಿ ಬಂದ್ ಮಾಡುವಂತೆ ಒತ್ತಡ ಹಾಕಿದರೆ ಒಂದೆರಡು ದಿನ ಬಂದ್ ಮಾಡಿ ಮತ್ತೆ ಆರಂಭಿಸುತ್ತಾರೆ. ಹೀಗಾಗಿ ಪೊಲೀಸರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಪೊಲ್ಯೂಷನ್ ಕಂಟ್ರೋಲ್ ಬೋರ್ಟ್​​ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಜೊತೆಗೆ ಇಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಯಿಂದ ಪರಿಸರ ಹಾಳಾಗುತ್ತಿದ್ದು, ಈ ಬಗ್ಗೆ ಮಾತ್ರ ಯಾರೊಬ್ಬರು ತುಟಿಕ್ ಪಿಟಿಕ್ ಅನ್ನುತ್ತಿಲ್ಲ. ಫಲವತ್ತಾದ ಜಮೀನಿನಲ್ಲಿ ಯಾವುದೆ ರೀತಿಯ ಗಣಿಗಾರಿಕೆ ಮಾಡಬಾರದು, ಊರು ಪ್ರವಾಸಿ ಸ್ಥಳ ಹಾಗೂ ರಸ್ತೆಯ ಅಕ್ಕಪಕ್ಕದಲ್ಲಿ ಗಣಿಗಾರಿಕೆ ಮಾಡಲೇಬಾರದು ಎನ್ನುವುದು ಸಹ ಕಾನೂನಿನಲ್ಲಿದೆ. ಆದರೆ ಸರಕಾರ ನಿಯಮಗಳನ್ನ ಉಲ್ಲಂಘಿಸಿ ಈ ದಂಧೆ ಮಾಡುತ್ತಿದ್ದಾರೆಂದು ಜನರ ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ಜನಾರ್ದನ ರೆಡ್ಡಿಗೆ ಮತ್ತೆ ‘ಗಣಿ’ ಉರುಳು? ಮಾಜಿ ಸಚಿವನಿಂದ 884 ಕೋಟಿ ನಷ್ಟ ವಸೂಲಿ?

ಬೀದರ್ ಜಿಲ್ಲೆ ಗಡಿನಾಡು ಆಗಿದ್ದರಿಂದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ. ಆದ್ದರಿಂದಲೇ ಇಂತಹ ಅಕ್ರಮ ದಂಧೆಗಳು ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಬಳ್ಳಾರಿ ಜಿಲ್ಲೆಗಾದ ಪರಿಸ್ಥಿತಿ ಬೀದರ್ ಜಿಲ್ಲೆಗೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us