ಟಿವಿ9 ವರದಿಯ ಇಂಪ್ಯಾಕ್ಟ್: ಮಾವಿನ ಹಣ್ಣು ತಿಂದು ಮೃತಪಟ್ಟ ಅಕ್ಕ-ತಂಗಿಯ ಮೂವರು ಸಹೋದರಿಯರನ್ನು ದತ್ತು ಪಡೆದ ಶಾಸಕ ಪ್ರಭು ಚೌಹಾಣ್

ಮಾವಿನ ಹಣ್ಣು ಸೇವಿಸಿ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದ ಇಬ್ಬರು ಸಹೋದರಿಯರು ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ‘ಟಿವಿ9’ ಬಿತ್ತರಿಸಿದ ವಿಶೇಷ ವರದಿ ಪರಿಣಾಮ ಬೀರಿದೆ. ಮೃತ ಬಾಲಕಿಯರ ಕುಟುಂಬದ ದಯನೀಯ ಸ್ಥಿತಿಗೆ ಸ್ಪಂದಿಸಿರುವ ಔರಾದ್ ಶಾಸಕ ಪ್ರಭು ಚೌಹಾಣ್, ಸಂತ್ರಸ್ತ ಕುಟುಂಬದ ಉಳಿದ ಮೂರು ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡಿದ್ದಾರೆ.

ಟಿವಿ9 ವರದಿಯ ಇಂಪ್ಯಾಕ್ಟ್: ಮಾವಿನ ಹಣ್ಣು ತಿಂದು ಮೃತಪಟ್ಟ ಅಕ್ಕ-ತಂಗಿಯ ಮೂವರು ಸಹೋದರಿಯರನ್ನು ದತ್ತು ಪಡೆದ ಶಾಸಕ ಪ್ರಭು ಚೌಹಾಣ್
ಮೃತ ಬಾಲಕಿಯರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಶಾಸಕ ಪ್ರಭು ಚೌಹಾಣ್
Image Credit source: tv9
Edited By:

Updated on: Jun 16, 2026 | 10:36 AM

ಬೀದರ್, ಜೂನ್ 16: ಮಾವಿನ ಹಣ್ಣು ಸೇವಿಸಿದ ಬಳಿಕ ಒಂದೇ ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಹಠಾತ್ ಮೃತಪಟ್ಟ ಹೃದಯವಿದ್ರಾವಕ ಘಟನೆಗೆ ಸಂಬಂಧಿಸಿದಂತೆ ‘ಟಿವಿ9’ ಕನ್ನಡ ಬಿತ್ತರಿಸಿದ ವರದಿ ದೊಡ್ಡ ಮಟ್ಟದ ಪ್ರಭಾವ ಬೀರಿದೆ. ವರದಿಗೆ ತಕ್ಷಣವೇ ಸ್ಪಂದಿಸಿರುವ ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌಹಾಣ್, ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಸಂತ್ರಸ್ತ ಕುಟುಂಬದ ಮನೆಗೆ ಖುದ್ದಾಗಿ ಭೇಟಿ ನೀಡಿದ್ದಾರೆ. ಅಲ್ಲದೆ, ತಂಗಿಯರನ್ನು ಕಳೆದುಕೊಂಡು ಕಣ್ಣೀರಲ್ಲಿ ಮುಳುಗಿರುವ ಕುಟುಂಬದ ಉಳಿದ ಮೂವರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಮುಖ್ಯಾಂಶಗಳು

  • ಟಿವಿ9 ಕನ್ನಡ ವಿಶೇಷ ವರದಿಯ ಇಂಪ್ಯಾಕ್ಟ್
  • ಮೂವರು ಹೆಣ್ಣು ಮಕ್ಕಳನ್ನು ದತ್ತು ಪಡೆದ ಶಾಸಕ
  • ಶಿಕ್ಷಣ, ಮದುವೆ ಹಾಗೂ ಉಚಿತ ಮನೆ ಭರವಸೆ

ಘಟನೆಯ ಹಿನ್ನೆಲೆ

ಔರಾದ್ ತಾಲೂಕಿನ ಶೆಂಬೆಳ್ಳಿ ಗ್ರಾಮದ ಒಂದೇ ಕುಟುಂಬದ ಆರು ಜನ ಸದಸ್ಯರು ಜೂನ್ 7 ರಂದು ಮಾವಿನ ಹಣ್ಣು ಸೇವಿಸಿದ ಬಳಿಕ ತೀವ್ರವಾಗಿ ಅಸ್ವಸ್ಥರಾಗಿದ್ದರು. ತಾಯಿ ಇಂದುಮತಿ ಸೇರಿದಂತೆ ಐವರು ಹೆಣ್ಣು ಮಕ್ಕಳು ತೀವ್ರ ವಾಂತಿ-ಭೇದಿಯಿಂದ ನರಳಾಡಿದ್ದರು. ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ದಾಖಲಿಸಲಾಗಿತ್ತಾದರೂ, ಜೂನ್ 8 ರಂದು ಚಿಕಿತ್ಸೆ ಫಲಕಾರಿಯಾಗದೆ ಸಹೋದರಿಯರಾದ ಭವಾನಿ (17) ಮತ್ತು ಸಂಧ್ಯಾರಾಣಿ (14) ಸಾವನ್ನಪ್ಪಿದ್ದರು. ಮತ್ತೊಬ್ಬ ಸಹೋದರಿ ವಿಜಯಶ್ರೀ ಇಂದಿಗೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತದ ಕುರಿತು ಹೈದರಾಬಾದ್‌ನ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬದ ನೆರವಿಗೆ ಧಾವಿಸಿದ ಶಾಸಕರು

ದುರಂತ ಸಂಭವಿಸಿದ ಬಳಿಕ ದಯನೀಯ ಸ್ಥಿತಿಯಲ್ಲಿದ್ದ ಆ ಬಡ ಕುಟುಂಬದ ಬಗ್ಗೆ ‘ಟಿವಿ9’ ಕನ್ನಡ ಸವಿಸ್ತಾರವಾದ ವರದಿಯನ್ನು ಪ್ರಸಾರ ಮಾಡಿ ಸರ್ಕಾರದ ಗಮನ ಸೆಳೆದಿತ್ತು. ವರದಿಯನ್ನು ನೋಡಿ ತಕ್ಷಣವೇ ಶಾಸಕ ಪ್ರಭು ಚೌಹಾಣ್, ಶೆಂಬೆಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಷ್ಟೇ ಅಲ್ಲದೆ, ಕುಟುಂಬದ ಉಳಿದ ಮೂವರು ಹೆಣ್ಣು ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಖರ್ಚು ಹಾಗೂ ಅವರ ಮದುವೆಯ ಜವಾಬ್ದಾರಿಯನ್ನು ತಾವೇ ವೈಯಕ್ತಿಕವಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದರ ಜೊತೆಗೆ, ಇದೇ ವರ್ಷದಲ್ಲಿ ಸರ್ಕಾರದ ವತಿಯಿಂದ ಆ ಕುಟುಂಬಕ್ಕೆ ಒಂದು ಸುಸಜ್ಜಿತವಾದ ನೂತನ ಮನೆಯನ್ನು ನಿರ್ಮಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದ್ದು, ಶಾಸಕರ ಈ ಮಾನವೀಯ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು: ತಾಯಿ ಸೇರಿ ಐವರು ಆಸ್ಪತ್ರೆಗೆ ದಾಖಲು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us