
ಬೆಂಗಳೂರು, ಮೇ 27: ಎಬೋಲಾ ವೈರಸ್ ಶಂಕಿತ ಪ್ರಕರಣವೊಂದು ಬೆಂಗಳೂರಲ್ಲಿ ಪತ್ತೆಯಾಗಿರೋದು ಭಾರಿ ಆತಂಕಕ್ಕೆ ಕಾರಣವಾಗಿತ್ತು. ಆದರೆ ಉಗಾಂಡಾ ಮೂಲದ ಮಹಿಳೆಯ ಎಬೋಲಾ ಪರೀಕ್ಷೆಯ ರಿಪೋರ್ಟ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೈಸೇರಿದ್ದು, ವರದಿ ನೆಗೆಟಿವ್ ಬಂದಿದೆ. ಹೀಗಾಗಿ ರಾಜ್ಯಕ್ಕೂ ಎಬೋಲಾ ಮಾರಿ ಕಾಲಿಟ್ಟಿತಾ ಎಂಬ ಆತಂಕದಲ್ಲಿದ್ದ ಇಲಾಖೆ ನಿಟ್ಟುಸಿರು ಬಿಟ್ಟಿದೆ.
ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣದ ಪ್ರಯೋಗಾಲಯ ತಪಾಸಣಾ ವರದಿ ಈಗ ಬಂದಿದ್ದು, ಸಂಪೂರ್ಣವಾಗಿ ‘ನೆಗೆಟಿವ್’ ಆಗಿದೆ. ಆ ವ್ಯಕ್ತಿಗೆ ಯಾವುದೇ ಸೋಂಕು ತಗುಲಿಲ್ಲ ಎಂದು ಆರೋಗ್ಯ ಇಲಾಖೆಯ ತಜ್ಞ ವೈದ್ಯರು ಖಚಿತಪಡಿಸಿದ್ದಾರೆ.
ಶಂಕೆ ವ್ಯಕ್ತವಾದ ತಕ್ಷಣವೇ ಇಲಾಖೆಯು ಸಾರ್ವಜನಿಕ ಆರೋಗ್ಯ ಮಾರ್ಗಸೂಚಿಗಳ ಅನ್ವಯ ಅತ್ಯಂತ ಕಟ್ಟುನಿಟ್ಟಾದ…
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 27, 2026
ಉಗಾಂಡಾ ದೇಶದ ಕ್ಯಾಂಪಾಲಾ ಮೂಲದ ನಾಗಿರೆ ಲತಿಫಾ (28) ಎಂಬ ಮಹಿಳೆ ಕಳೆದ ಮೇ 23ರಂದು ಬೆಂಗಳೂರಿಗೆ ಆಗಮಿಸಿದ್ದರು. ಇಲ್ಲಿನ ‘ರಾಯಲ್ ಏಸ್ ಬೂಟಿಕ್’ ಹೋಟೆಲ್‌ನ ರೂಮ್ ನಂಬರ್ 303ರಲ್ಲಿ ತಂಗಿದ್ದ ಆಕೆಗೆ ಎಬೋಲಾ ಮಾದರಿಯ ಆರೋಗ್ಯ ಸಮಸ್ಯೆಗಳು ಇರುವುದು ಗೊತ್ತಾಗುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆ, ತಕ್ಷಣವೇ ಆದೇಶ ಹೊರಡಿಸಿ ಆಂಬುಲೆನ್ಸ್ ಮೂಲಕ ಅವರನ್ನು ಐಸೋಲೇಷನ್ಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿತ್ತು. ಜೊತೆಗೆ ಶಂಕಿತ ಮಹಿಳೆಯಿಂದ ರಕ್ತ ಹಾಗೂ ಇತರ ಅಗತ್ಯ ಮಾದರಿಗಳನ್ನು ಸಂಗ್ರಹಿಸಿ, ಈ ಸ್ಯಾಂಪಲ್‌ಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪುಣೆಯ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಆ ವರದಿ ಈಗ ನೆಗೆಟಿವ್ ಬಂದಿರೋದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕಕ್ಕೆ ಕಾಲಿಟ್ಟಿತಾ ಎಬೋಲಾ? ಉಗಾಂಡಾದಿಂದ ಬೆಂಗಳೂರಿಗೆ ಬಂದ ಮಹಿಳೆಯಲ್ಲಿ ವೈರಸ್ ಪತ್ತೆ ಶಂಕೆ
ಉಗಾಂಡಾದ ಕ್ಯಾಂಪಾಲಾ ಮೂಲದ ನಾಗಿರೆ ಲತಿಫಾ ಅವರ ಆರೋಗ್ಯ ಈಗ ಸ್ಥಿರವಾಗಿದ್ದು, ಹೀಗಾಗಿ ಐಸೋಲೇಷನ್ನಲ್ಲಿ ಇಡಲಾಗಿದ್ದ ಅವರನ್ನು ಆಸ್ಪತ್ರೆಯಿಂದ ಹೋಟೆಲ್ಗೆ ಸ್ಥಳಾಂತರ ಮಾಡಲಾಗಿದೆ. ಆದರೂ 21 ದಿನಗಳ ಕಾಲ ನಾಗಿರೆ ಲತಿಫಾ ಕ್ವಾರಂಟೈನ್ ಆಗಬೇಕಿದ್ದು, ಈ ಅವಧಿಯಲ್ಲಿ ಆರೋಗ್ಯ ಇಲಾಖೆ ನಿರಂತರವಾಗಿ ಮಾನಿಟರ್ ಮಾಡಲಿದೆ. ಮತ್ತೆ ರೋಗ ಲಕ್ಷಣ ಕಂಡುಬರದಿದ್ದರೆ ಕ್ಯಾರಂಟೈನ್ನಿಂದ ಬಿಡುಗಡೆ ಮಾಡಲಾಗುತ್ತದೆ. ಒಂದುವೇಳೆ ರೋಗಲಕ್ಷಣ ಕಂಡುಬಂದ್ರೆ 2ನೇ ಹಂತದಲ್ಲಿ ಪುಣೆಯ NIV ಲ್ಯಾಬ್ನಲ್ಲಿ ಸ್ಯಾಂಪಲ್ ಪರಿಶೀಲನೆ ನಡೆಯಲಿದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:28 pm, Wed, 27 May 26