
ಬೆಂಗಳೂರು, (ಮೇ 24): ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡಿರುವ ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (nitin nabin )ಇಡೀ ದಿನ ವಿವಿಧ ಸಂಘಟನಾ ಸಭೆ ನಡೆಸಿದ್ದಾರೆ. ಸಂಘಟನೆಯ ಕುರಿತು ರಾಜ್ಯ ಬಿಜೆಪಿ ನಾಯಕರಿಗೆ ಪಾಠ ಮಾಡಿರುವ ನಬಿನ್, ಸಂಘಟನೆ ಇಲ್ಲದೇ ಮನೆಯಲ್ಲಿ ಕುಳಿತರೆ ಸರ್ಕಾರ ತರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ. ಹೌದು…ಇಂದು (ಮೇ 24)ಭಾನುವಾರ ನಗರದ ಪಕ್ಷದ ಕಚೇರಿಯಲ್ಲಿ ರಾಜ್ಯ ನಾಯಕರ ಜೊತೆ ಸಂಘಟನಾ ಸಭೆ ನಡೆಸಿ ಒಗ್ಗಟ್ಟಿನ ಮಂತ್ರ ಪಠಿಸಿದ್ದು, ಪಶ್ಚಿಮ ಬಂಗಾಳ ಮಾದರಿಯಲ್ಲಿ ಸಂಘಟನೆ, ಹೋರಾಟ ನಡೆಸುವಂತೆ ಸೂಚನೆ ನೀಡಿದ್ದಾರೆ. ನೀವು ಪಕ್ಷ ಸಂಘಟನೆಯಲ್ಲಿ ಬಹಳ ಹಿಂದೆ ಇದ್ದೀರಿ. ಚುನಾವಣೆ ಬಂತು ಅಂತಾ ಬರೀ ಹೇಳಿದರೆ ಸಾಲದು. ಅದಕ್ಕೆ ತಕ್ಕಂತೆ ಸಂಘಟನಾ ಕೆಲಸ ಆಗಬೇಕು. ಈಗಿನ ಪಕ್ಷ ಸಂಘಟನೆ ಇಟ್ಟುಕೊಂಡು ಚುನಾವಣೆ ಗೆಲ್ಲವುದು ಸಾಧ್ಯವಿಲ್ಲ. ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಹೋಗಿ. ಅದಕ್ಕೆ ಬೇಕಾದ ಸಹಕಾರ ಏನಿದೆಯೋ ಅದನ್ನು ನಾವು ಮಾಡುತ್ತೇವೆ ಎಂದು ಖಡಕ್ ಆಗಿ ಹೇಳಿದ್ದಾರೆ.
ನಿತಿನ್ ನಬಿನ್ ನೇತೃತ್ವದಲ್ಲಿ ನಡೆದ ಸಂಘಟನಾ ಸಭೆಯಲ್ಲಿ ರಾಜ್ಯದ ನಾಯಕರಿಗೆ ಹತ್ತು ಹಲವು ಸಂದೇಶಗಳನ್ನು ರವಾನಿಸುವ ಸೂಚನೆಗಳನ್ನು ನೀಡಿದ್ದಾರೆ.ರಾಜ್ಯ ಬಿಜೆಪಿ ಸಂಘಟನೆ ಸಂಬಂಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಇನ್ನು ಮುಂದೆ ಗ್ರೌಂಡ್ ಮಟ್ಟದಲ್ಲಿ ಹೋರಾಟ ನಡೆಸುವಂತೆ ತಾಕೀತು ಮಾಡಿದ್ದಾರೆ. ಸದ್ಯದ ರಾಜ್ಯ ನಾಯಕರ ಹೋರಾಟ, ಸಂಘಟನೆ ಬಗ್ಗೆ ಪರೋಕ್ಷವಾಗಿ ಅತೃಪ್ತಿ ಹೊರಹಾಕಿದ ನಬಿನ್, ಇನ್ಮುಂದೆ ಶಾಸಕರು, ನಾಯಕರು ತಳಮಟ್ಟಕ್ಕೆ ಹೋಗಿ ಸರ್ಕಾರದ ವೈಫಲ್ಯಗಳ ಬಗ್ಗೆ ಆಂದೋಲನ ನಡೆಸಬೇಕು ಎಂದು ತಾಕೀತು ಮಾಡಿದ್ದಾರೆ.
ಒಂದೂವರೆ ಗಂಟೆ ಕಾಲ ನಡೆದ ಭಾಷಣ ಮತ್ತು ಸಂವಾದ ರೂಪದ ಸಭೆಯಲ್ಲಿ ಶಾಸಕರು, ರಾಜ್ಯ ಉಪಾಧ್ಯಕ್ಷರು, ಜಿಲ್ಲಾಧ್ಯಕ್ಷರಲ್ಲಿ ಒಬ್ಬೊಬ್ಬರಿಂದ ಕಾರ್ಯಚಟುವಟಿಕೆಗಳ ಮಾಹಿತಿಯನ್ನು ನಿತಿನ್ ನಬಿನ್ ಪಡೆದುಕೊಂಡಿದ್ದಾರೆ. ಇನ್ನು ಇದೇ ವೇಳೆ ರಾಜ್ಯ ಪದಾಧಿಕಾರಿಗಳಿಗೆ ಒಂದೊಂದು ಜಿಲ್ಲೆಯ ಉಸ್ತುವಾರಿ ಕೊಟ್ಟಿಲ್ಲ ಎಂಬ ಮಾಹಿತಿ ತಿಳಿದು ಅಚ್ಚರಿಗೊಂಡು ಸಭೆಯಲ್ಲಿ ಅಚ್ಚರಿಯಿಂದ ರಾಜ್ಯಾಧ್ಯಕ್ಷ ವಿಜಯೇಂದ್ರ ಕಡೆ ತಿರುಗಿ ನೋಡಿದ್ದಾರೆ. ಬಳಿಕ ಎಲ್ಲಾ ರಾಜ್ಯ ಪದಾಧಿಕಾರಿಗಳೂ ತಲಾ ಒಂದು ಜಿಲ್ಲೆ ಉಸ್ತುವಾರಿ ನೋಡಬೇಕು ಎಂದು ಸೂಚಿಸಿದ್ದಾರೆ. ಶಾಸಕರು ತಮ್ಮ ಗೆಲುವನ್ನು ಖಾತ್ರಿಪಡಿಸಿಕೊಳ್ಳಲು ಜನರನ್ನು ಸಂಪರ್ಕಿಸುತ್ತಿದ್ದರೆ ಸಾಲದು. ಪಕ್ಷಕ್ಕೆ ನೀವು ಏನು ಮಾಡಿದ್ದೀರಿ? ಸಂಘಟನೆ ಬಲಗೊಳಿಸಲು ಏನು ಮಾಡಿದ್ದೀರಿ ಎನ್ನುವುದು ಮುಖ್ಯ ಎಂದಿದ್ದಾರೆ. ಸಂಘಟನಾ ಸಭೆಯ ಬಳಿಕ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ನಡೆಸಿದ ನಿತಿನ್ ನಬಿನ್ ಸಂಘಟನಾ ವಿಚಾರದಲ್ಲಿ ರಾಜ್ಯ ಬಿಜೆಪಿ ಹಿಂದೆ ಇದೆ ಎಂಬುದನ್ನು ನೇರವಾಗಿ ಹೇಳಿದ್ದಾರೆ.
ಜಿಲ್ಲಾಧ್ಯಕ್ಷರ ಕರ್ತವ್ಯಗಳು, ಶಾಸಕರು ಕೆಲಸ ಮಾಡಬೇಕಾದ ರೀತಿ, ರಾಜ್ಯ ಪದಾಧಿಕಾರಿಗಳು ನಿರ್ವಹಿಸಬೇಕಾದ ಜವಾಬ್ದಾರಿ, ಬೂತ್ ಮಟ್ಟದವರೆಗೆ ಪಕ್ಷ ಸಂಘಟಿತವಾಗಿ ಕೆಲಸ ಮಾಡಬೇಕಾದ ರೀತಿ. ಪ್ರಧಾನಮಂತ್ರಿಗಳ ಮನ್ ಕಿ ಬಾತ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಬೇಕಾದ ರೀತಿ. ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ಸಂಘಟನೆ ಗೆಲುವಿಗಾಗಿ ದೀರ್ಘ ಕಾಲ ನಡೆಸಿದ ಸಿದ್ಧತೆ ಅಸ್ಸಾಂ ಮತ್ತು ಪುದುಚೇರಿಯಲ್ಲಿ ಸರ್ಕಾರದ ಸಾಧನೆ ಮತ್ತು ಸಂಘಟನೆಯ ಜಂಟಿ ಪರಿಣಾಮ.ಪಶ್ಚಿಮ ಬಂಗಾಳದಲ್ಲಿ ಐದು ವರ್ಷಗಳಿಂದ ಸವಾಲುಗಳನ್ನು ಎದುರಿಸಿ ಮಾಡಿದ ಸಂಘಟನೆ. ತಮಿಳುನಾಡು ಮತ್ತು ಕೇರಳದಲ್ಲಿ ಎದುರಿಸಿದ ಸವಾಲುಗಳು. ಕರ್ನಾಟಕದಲ್ಲಿ ಮುಂದಿನ ಕಾರ್ಯ ಯೋಜನೆ. ಇದಿಷ್ಟೇ ಅಲ್ಲದೇ ಎಸ್ ಐಆರ್, ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಟ್ರೆಂಡ್ ಸೇರಿದಂತೆ ಕೆಲವು ಮಹತ್ವದ ಅಂಶಗಳನ್ನು ಕೂಡಾ ಸಭೆಯಲ್ಲಿ ನಿತಿನ್ ನಬಿನ್ ಎಚ್ಚರಿಕೆಯ ರೀತಿಯಲ್ಲೇ ಉಲ್ಲೇಖಿಸಿದ್ದಾರೆ.
ಇನ್ನು ಯಲಹಂಕ ಸಮೀಪದ ಸಿಂಗನಾಯಕನಹಳ್ಳಿಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಪ್ರಶಿಕ್ಷಣ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ನಿತಿನ್ ನಬಿನ್, ರಾಜ್ಯ ಬಿಜೆಪಿ ಎಸ್ ಐಆರ್ ನಿರ್ವಹಣಾ ತಂಡದ ಸಭೆಯನ್ನೂ ನಡೆಸಿ ನಿರ್ದೇಶನಗಳನ್ನೂ ನೀಡಿದ್ದಾರೆ.
ಎಸ್ಐಆರ್ನ್ನು ಚುನಾವಣೆ ರೀತಿಯಲ್ಲಿ ಪರಿಗಣಿಸಿ ಕೆಲಸ ಮಾಡಿ. ಅರ್ಹ ಮತದಾರರು ಡಿಲೀಟ್ ಆಗದಂತೆ, ಅನರ್ಹರು ಮತದಾರರ ಪಟ್ಟಿಯಲ್ಲಿ ಇರದಂತೆ ನಿಗಾವಹಿಸಿ. ಎಸ್ಐಆರ್ನ್ನು ಚುನಾವಣೆ ರೀತಿಯಾಗಿ ತೆಗೆದುಕೊಂಡು ಕೆಲಸ ಮಾಡಿದರೆ, ಜಿಬಿಎ ಚುನಾವಣೆಯನ್ನು ಗೆಲ್ಲಬಹುದು. ಜಿಬಿಎ ಚುನಾವಣೆ ಗೆದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸುಲಭವಾಗಲಿದೆ. ಈ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು 2028ರ ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.