ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಮೊದಲ ಬಾರಿಗೆ ಬ್ಯಾಂಕ್ ಚುಕ್ಕಾಣಿ ಹಿಡಿದ ಬಿಜೆಪಿ
ಮೂವರು ಅನರ್ಹಗೊಂಡಿದ್ದರಿಂದ 6 ಜನ ನಿರ್ದೇಶಕರು ಉಳಿದುಕೊಂಡಿದ್ದರು. ಆದರೆ ಇಂದು ಕಲಬುರಗಿ ನಗರದ ಡಿಸಿಸಿ ಬ್ಯಾಂಕ್ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಕೇವಲ 4 ಮತಗಳು ಚಲಾವಣೆಯಾಗಿವೆ. ಆ ಮೂಲಕ 7ಜನರ ಬೆಂಬಲ ಹೊಂದಿದ್ದ ಬಿಜೆಪಿ ಬೆಂಬಲಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ 9 ಮತಗಳು ಚಲಾವಣೆಗೊಂಡಿವೆ.
ಕಲಬುರಗಿ: ಕಳೆದ ಕೆಲ ದಿನಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಗೆ ಇಂದು ತೆರೆಬಿದ್ದಿದೆ. ಮೊದಲ ಬಾರಿಗೆ ಬಿಜೆಪಿ ಬೆಂಬಲಿತರು ಬ್ಯಾಂಕ್ನ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಬಹುಮತವಿದ್ದರು ಕೂಡ ಬ್ಯಾಂಕ್ನ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ವಿಫಲವಾಗಿದೆ.
ಮತ್ತೊಂದೆಡೆ ಹಾಲಿ 6 ನಿರ್ದೇಶಕರ ಪೈಕಿ ಇಬ್ಬರು ಇಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಗುಪ್ತ ಮತದಾನದಲ್ಲಿ ಬಿಜೆಪಿ ಬೆಂಬಲಿಗರಿಗೆ ಮತ ಚಲಾಯಿಸಿದ್ದು ಇದು ಅನೇಕ ಚರ್ಚೆಗೆ ಕಾರಣವಾಗಿದೆ. ಸದ್ಯ ಇದ್ದ 6 ಜನರ ಪೈಕಿ ಕೈಗೆ ಕೈಕೊಟ್ಟು ಕಮಲ ಹಿಡಿದವರು ಯಾರು ಎನ್ನುವ ಪ್ರಶ್ನೆ ಮೂಡಿಸಿದೆ. ಕಾಂಗ್ರೆಸ್ ಬೆಂಬಲಿಗರ ಜೊತೆಯೇ ಅನೇಕ ದಿನಗಳಿಂದ ಇದ್ದು, ಅವರ ಜೊತೆಯೇ ಓಡಾಡಿ ಇದೀಗ ಅವರಿಗೆ ಕೈಕೊಟ್ಟವರು ಯಾರು ಎನ್ನುವುದನ್ನು ತಿಳಿಯಲು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಮತ್ತು ಕಾಂಗ್ರೆಸ್ ಮುಖಂಡರು ಹರಸಾಹಸ ಪಡುವಂತಾಗಿದೆ.
ಕೈಗೆ ಕೈ ಕೊಟ್ಟವರಾರು? ಕಲಬುರಗಿ ಡಿಸಿಸಿ ಬ್ಯಾಂಕ್ಗೆ ಕಳೆದ 2020 ರ ನವೆಂಬರ್ 29 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಜನರು ನಿರ್ದೇಶಕರಾಗಿ ಆಯ್ಕೆಯಾಗಿದ್ದರು. 16 ನಿರ್ದೇಶಕ ಬಲದ ಬ್ಯಾಂಕ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಲು 9 ಮ್ಯಾಜಿಕ್ ಸಂಖ್ಯೆಯಾಗಿತ್ತು.
ಕಾಂಗ್ರೆಸ್ ಬೆಂಬಲಿತ 9 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದರಿಂದ ಸುಲಭವಾಗಿ ಬ್ಯಾಂಕ್ನ ಚುಕ್ಕಾಣಿ ಹಿಡಿಯುವ ಕನಸು ಕಂಡಿದ್ದರು. ಆದರೆ ಡಿಸಿಸಿ ಬ್ಯಾಂಕ್ನ ಚುಕ್ಕಾಣಿ ಹಿಡಿಯಲು ತಂತ್ರ ರೂಪಿಸಿದ್ದ ಬಿಜೆಪಿ ಬೆಂಬಲಿಗರು ರಾಜ್ಯದಲ್ಲಿ ತಮ್ಮ ಸರ್ಕಾರ ಇರುವುದನ್ನು ಬಳಸಿಕೊಂಡು ಅಧಿಕಾರ ಹಿಡಿಯುವ ತಂತ್ರ ರೂಪಿಸಿದ್ದರು.
ಕಳೆದ ಡಿಸೆಂಬರ್ 11ರಂದು ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ಘೋಷಿಸಲಾಗಿತ್ತು. ಆದರೆ ಗ್ರಾಮ ಪಂಚಾಯತಿ ಚುನಾವಣೆಯ ನೆಪವನ್ನು ಹೇಳಿ ಅದನ್ನು ಮುಂದೂಡಿಸುವಲ್ಲಿ ಮೊದಲ ಹಂತದಲ್ಲಿಯೇ ಬಿಜೆಪಿ ನಾಯಕರು ಯಶಸ್ವಿಯಾಗಿದ್ದರು.
ಮತ್ತೊಂದಡೆ 9 ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಪೈಕಿ, ಮೂವರನ್ನು ಅನರ್ಹಗೊಳಿಸಿ, ರಾಯಚೂರಿನಲ್ಲಿರುವ ಸಹಕಾರಿ ಸಂಘಗಳ ಜಂಟಿ ನಿಬಂಧಕರು ಆದೇಶ ಹೊರಡಿಸಿದ್ದಾರೆ. ವಿಶೇಷವೆಂದರೆ ಕಳೆದ ನವೆಂಬರ್ 25 ರಂದೇ ಆದೇಶ ಮಾಡಲಾಗಿದೆ. ಆದರೆ ಅದು ಬಹಿರಂಗವಾಗಿದ್ದು, ಕಳೆದ ರಾತ್ರಿ. ಇಲ್ಲಿ ಕೂಡ ಬಿಜೆಪಿ ಬೆಂಬಲಿತರ ಕೈವಾಡ ಇದೆ ಎಂದು ಆರೋಪಗಳು ಸದ್ಯ ಕೇಳಿ ಬರುತ್ತಿದೆ.
ಇನ್ನು ಮೂವರು ಅನರ್ಹಗೊಂಡಿದ್ದರಿಂದ 6 ಜನ ನಿರ್ದೇಶಕರು ಉಳಿದುಕೊಂಡಿದ್ದರು. ಆದರೆ ಇಂದು ಕಲಬುರಗಿ ನಗರದ ಡಿಸಿಸಿ ಬ್ಯಾಂಕ್ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಕೇವಲ 4 ಮತಗಳು ಚಲಾವಣೆಯಾಗಿವೆ.
ಆ ಮೂಲಕ 7ಜನರ ಬೆಂಬಲ ಹೊಂದಿದ್ದ ಬಿಜೆಪಿ ಬೆಂಬಲಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ 9 ಮತಗಳು ಚಲಾವಣೆಗೊಂಡಿವೆ. ಅಂದರೆ ಕಾಂಗ್ರೆಸ್ ಬೆಂಬಲಿತ ಇಬ್ಬರು ಬಿಜೆಪಿ ಬೆಂಬಲಿತರ ಪರವಾಗಿ ಮತ ಚಲಾಯಿಸಿದ್ದಾರೆ. ಹೀಗಾಗಿ ಇದ್ದ 6 ಜನರ ಪೈಕಿ ಬಿಜೆಪಿ ಬೆಂಬಲಿಸಿದವರು ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಹೌದು ಕಾಂಗ್ರೆಸ್ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಬಸವರಾಜ್ ಅಣ್ಣಾರಾವ್ ಪಾಟೀಲ್, ಉಪಾಧ್ಯಕ್ಷ ಸ್ಥಾನಕ್ಕೆ ಸಿದ್ದರಾಮರೆಡ್ಡಿ ಪಾಟೀಲ್ ಸ್ಪರ್ಧಿಸಿದ್ದರು. ಬಿಜೆಪಿ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಉಪಾಧ್ಯಕ್ಷ ಸ್ಥಾನಕ್ಕೆ ಶಿವರಾಜ್ ಸಜ್ಜನ ಸ್ಪರ್ಧಿಸಿದ್ದರು.
ಬಿಜೆಪಿಯ ನಾಲ್ವರು ಮಾತ್ರ ಈ ಹಿಂದೆ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ರಾಜ್ಯ ಸರ್ಕಾರ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ರನ್ನು ಸರ್ಕಾರದ ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಇನ್ನು ಬ್ಯಾಂಕ್ನ ಇಬ್ಬರು ಅಧಿಕಾರಿಗಳಿಗೆ ಮತ ಚಲಾಯಿಸುವ ಹಕ್ಕು ಇತ್ತು. ಹೀಗಾಗಿ ಬಿಜೆಪಿ ಬೆಂಬಲಿಗರು ಗೆಲುವಿನ ಮ್ಯಾಜಿಕ್ ನಂಬರ್ 7ನ್ನು ತಲುಪಿದ್ದರು.
9ಮತಗಳನ್ನು ಪಡೆದ ಶಾಸಕ ರಾಜಕಮಾರ್ ಪಾಟೀಲ್ ತೇಲ್ಕೂರ್ ಅದ್ಯಕ್ಷರಾಗಿ, 9 ಮತಗಳನ್ನು ಪಡೆದ ಶಿವರಾಜ್ ಸಜ್ಜನ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್ ಬೆಂಬಲಿಗರು ಬಹುಮತ ಹೊಂದಲು ವಿಫಲರಾಗಿದ್ದು ಒಂದು ಕಡೆಯಾದರೆ, ತಮ್ಮಲ್ಲಿಯೇ ಇದ್ದು, ತಮಗೆ ಮೋಸಮಾಡಿ ಬಿಜೆಪಿ ಬೆಂಬಲಿಸಿದವರು ಯಾರು ಎನ್ನುವುದು ಕಾಂಗ್ರೆಸ್ ನಾಯಕರ ತಲೆಬಿಸಿ ಹೆಚ್ಚಿಸಿದೆ.
ಆಪರೇಷನ್ ಕಮಲ ನಡೆಸಿದ್ದ ಬಿಜೆಪಿ ಮುಖಂಡರು: ಈ ಬಾರಿ ಹೇಗಾದರು ಕಲಬುರಗಿ ಡಿಸಿಸಿ ಬ್ಯಾಂಕ್ನ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎನ್ನುವುದು ಬಿಜೆಪಿ ನಾಯಕರ ಆಸೆಯಾಗಿತ್ತು. ಆದರೆ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದು ಕೇವಲ 4 ಸ್ಥಾನ. ಆದರು ಕೂಡ ನಾವೇ ಬ್ಯಾಂಕ್ನ ಚುಕ್ಕಾಣಿ ಹಿಡಿಯುತ್ತೇವೆ ಎನ್ನುವ ವಿಶ್ವಾಸವನ್ನು ಬಿಜೆಪಿ ಬೆಂಬಲಿತರು ವ್ಯಕ್ತಪಡಿಸಿದ್ದರು. ಅದರ ಭಾಗವಾಗಿ ಸಹಕಾರಿ ಕ್ಷೇತ್ರದಲ್ಲಿ ಕೂಡ ಆಪರೇಷನ್ ಕಮಲ ನಡೆಸಲು ತಯಾರಿ ಮಾಡಿಕೊಂಡಿದ್ದರು.
ಹೊರಗೆ ಕಾಂಗ್ರೆಸ್ ಬೆಂಬಲಿತರ ಜೊತೆ ಗುರುತಿಸಿಕೊಂಡಿದ್ದ ಕೆಲವರು ಒಳಗೊಳಗೆ ಬಿಜೆಪಿಗೆ ಜೈ ಅಂದಿದ್ದರು. ಇಂದು ಕೂಡ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಿಬ್ಬರೂ ಬಿಜೆಪಿಗೆ ಜೈ ಎಂದಿರುವುದು, ಆಪರೇಷನ್ ಕಮಲದ ಭಾಗ ಎಂದು ಹೇಳಲಾಗುತ್ತಿದೆ.
ಬಿಜೆಪಿ ಬೆಂಬಲಿತರು ತಮ್ಮ ಸರ್ಕಾರವನ್ನು ದುರುಪಯೋಗ ಮಾಡಿಕೊಂಡು ಇಂದು ಬ್ಯಾಂಕ್ನ ಚುಕ್ಕಾಣಿ ಹಿಡದಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಿಸಿ ತಮಗೆ ಬೇಕಾದ ಹಾಗೆ ಎಲ್ಲವನ್ನು ಮಾಡಿಕೊಂಡಿದ್ದಾರೆ. ಇನ್ನು ನಮ್ಮಲ್ಲಿಯೇ ಇದ್ದು ಬಿಜೆಪಿ ಬೆಂಬಲಿತರಿಗೆ ಬೆಂಬಲಿಸಿದವರು ಯಾರು ಎನ್ನುವುದು ಗೊತ್ತಾಗುತ್ತಿಲ್ಲಾ. ನಮ್ಮಲ್ಲಿಯೇ ಇದ್ದು ವಿಶ್ವಾಸದ್ರೋಹ ಕೆಲಸ ಮಾಡುವುದು ಸರಿಯಲ್ಲ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುನಾಥ ರೆಡ್ಡಿ ಪಾಟೀಲ್.
ನಾವು ಯಾವುದೇ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಎಲ್ಲವು ಕೂಡ ನಿಯಮದಂತೆಯೇ ನಡೆದಿದೆ. ನಮ್ಮ ಮೇಲೆ ವಿಶ್ವಾಸವಿಟ್ಟು ಬಹುಮತಕ್ಕಿಂತ ಹೆಚ್ಚು ಮತಗಳು ನಮಗೆ ಬಂದಿವೆ. ಕಾಂಗ್ರೆಸ್ ಬೆಂಬಲಿತರು ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನೂತನ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ್ ತಿಳಿಸಿದ್ದಾರೆ.