Breaking News: ಡಿಕೆ ಶಿವಕುಮಾರ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ; ದೆಹಲಿ ಹೈಕೋರ್ಟ್ನಿಂದ ಇಡಿಗೆ ನೋಟಿಸ್ ಜಾರಿ
ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ರದ್ದುಗೊಳಿಸುವಂತೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನವಿ ಮೇರೆಗೆ ದೆಹಲಿ ಹೈಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ (ಇಡಿ) ನೋಟಿಸ್ ಜಾರಿ ಮಾಡಿದೆ.
ನವದೆಹಲಿ: ತನ್ನ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ರದ್ದುಗೊಳಿಸುವಂತೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಮನವಿಯನ್ನು ಮಾಡಿದ್ದರು. ಆ ಮನವಿ ಮೇರೆಗೆ ದೆಹಲಿ ಹೈಕೋರ್ಟ್ (Delhi High Court) ಜಾರಿ ನಿರ್ದೇಶನಾಲಯಕ್ಕೆ (ED) ನೋಟಿಸ್ ಜಾರಿ ಮಾಡಿದೆ. ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 7ರಂದು ದೆಹಲಿಯಲ್ಲಿ ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಡಿಕೆ ಶಿವಕುಮಾರ್ ಮಾಡಿದ್ದ ಮನವಿಯನ್ನು ಜಾರಿ ನಿರ್ದೇಶನಾಲಯ (ಇಡಿ) ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅವರು ಇಡಿ ವಿಚಾರಣೆಗೆ ಹಾಜರಾಗಿದ್ದರು.
ಕಾಂಗ್ರೆಸ್ ಪಕ್ಷದ ಒಡೆತನದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕಾರ್ಯಾಚರಣೆಗಳ ಬಗ್ಗೆ ನಡೆಯುತ್ತಿರುವ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಡಿಕೆ ಶಿವಕುಮಾರ್ ಮಾತ್ರವಲ್ಲದೆ ಅವರ ಸಹೋದರ ಹಾಗೂ ಸಂಸದ ಡಿ ಕೆ ಸುರೇಶ್ ಅವರಿಗೂ ಇಡಿ ಸಮನ್ಸ್ ನೀಡಿತ್ತು.
ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ 12 ಬಾಗಿಲುಗಳಿರುವ ತಮ್ಮ ಮನೆಯನ್ನು ಮೊದಲು ರಿಪೇರಿ ಮಾಡಿಸಿಕೊಳ್ಳಲಿ: ಡಿಕೆ ಶಿವಕುಮಾರ
ಈ ಹಿಂದೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಡಿಕೆ ಶಿವಕುಮಾರ್, ನನಗೆ ಕಾನೂನಿನ ಬಗ್ಗೆ ಗೌರವವಿದೆ. ನಾನು ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರಿದ್ದೆ. ಆದರೆ ಅವರು ನೀವು ಬರಬೇಕು ಎಂದು ಹೇಳಿದರು. ಹೀಗಾಗಿ, ವಿಚಾರಣೆಗೆ ಹಾಜರಾಗಿ, ನನಗೆ ಗೊತ್ತಿರುವ ಎಲ್ಲ ಉತ್ತರ ನೀಡಿದ್ದೇನೆ ಎಂದು ಹೇಳಿದ್ದರು.
ಶಿವಕುಮಾರ್ ಮತ್ತು ಸುರೇಶ್ ಈ ಹಿಂದೆ ಯಂಗ್ ಇಂಡಿಯನ್‌ಗೆ ಅನಿರ್ದಿಷ್ಟ ಮೊತ್ತದ ಹಣವನ್ನು ದೇಣಿಗೆ ನೀಡಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ನ್ಯಾಷನಲ್ ಹೆರಾಲ್ಡ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್ ಬನ್ಸಾಲ್ ಅವರನ್ನು ಕಳೆದ ಕೆಲವು ತಿಂಗಳುಗಳಿಂದ ಇಡಿ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ: Big News: ಸಿಬಿಐ ವಿಚಾರಣೆ ಬೆನ್ನಲ್ಲೇ ಇಡಿಯಿಂದ ಡಿಸಿಎಂ ಮನೀಶ್ ಸಿಸೋಡಿಯಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸ್ ದಾಖಲು ಸಾಧ್ಯತೆ
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಯಂಗ್ ಇಂಡಿಯನ್ನ ಬಹುಪಾಲು ಷೇರುದಾರರು. ಶಿವಕುಮಾರ್ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆ ಕ್ರಮದಿಂದ ಹೊರಹೊಮ್ಮಿದ ಪ್ರಕರಣದಲ್ಲಿ ಹಲವು ಸುತ್ತಿನ ವಿಚಾರಣೆಯ ನಂತರ 2019ರ ಸೆಪ್ಟೆಂಬರ್ 3ರಂದು ಇಡಿಯಿಂದ ಡಿಕೆ ಶಿವಕುಮಾರ್ ಬಂಧಿಸಲ್ಪಟ್ಟಿದ್ದರು. ಅದೇ ವರ್ಷ ಅಕ್ಟೋಬರ್‌ನಲ್ಲಿ ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಈ ವರ್ಷದ ಮೇ ತಿಂಗಳಲ್ಲಿ ಈ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಮತ್ತು ಅವರೊಂದಿಗೆ ನಂಟು ಹೊಂದಿರುವ ಕೆಲವರ ವಿರುದ್ಧ ಇಡಿ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಆದಾಯ ತೆರಿಗೆ ಇಲಾಖೆಯು 2018ರಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಕೋಟ್ಯಂತರ ಮೌಲ್ಯದ ತೆರಿಗೆ ವಂಚನೆ ಮತ್ತು ಹವಾಲಾ ವಹಿವಾಟು ನಡೆಸಿದ ಆರೋಪದ ಮೇಲೆ ಅವರ ವಿರುದ್ಧ ಸಲ್ಲಿಸಿದ್ದ ಆರೋಪಪಟ್ಟಿಯನ್ನು (ಪ್ರಾಸಿಕ್ಯೂಷನ್ ದೂರು) ವಿಚಾರಣೆಗೆ ಒಳಪಡಿಸಿ ಪ್ರಕರಣ ದಾಖಲಿಸಲಾಗಿತ್ತು.
ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:12 pm, Wed, 2 November 22