ಕಾಂತಾರ ಕಲರವದ ಮಧ್ಯೆ ರಿಯಲ್ ಕಾಂತಾರ ದೈವ ನರ್ತಕ ಗುಡ್ಡ ಪಾಣಾಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
Kannada Rajyotsava award: ಒಟ್ಟಿನಲ್ಲಿ ಕಾಂತಾರ ಚಿತ್ರ ಒಂದು ಕಡೆಯಿಂದ ಸದ್ದು ಮಾಡುವ ಮೂಲಕ ತುಳುನಾಡು ಜನರ ಭಕ್ತಿಯನ್ನು ಇಮ್ಮಡಿಗೊಳಿಸಿದ್ದರೆ, ಬಡ ದೈವ ನರ್ತಕನ್ನು ಗುರುತಿಸಿ ಗೌರವಿಸುವಂತಾಗಿದ್ದು ನಿಜಕ್ಕೂ ಶ್ಲಾಘನೀಯ.
ಎಲ್ಲಿ ನೋಡಿದರೂ ಈಗ ಕಾಂತಾರದ್ದೇ ಕಂಪು… ಕಾಂತಾರ ಕಾಂತಾರ ಕಾಂತಾರ… (Kantara) ಕನ್ನಡ ರಾಜ್ಯೋತ್ಸವ ಕಂಪಿನೊಳಗೂ ಕಾಂತಾರ ಕಂಪು ಸೇರಿ ಜಗದ ಉದ್ದಗಲಕ್ಕೂ ಪಸರಿಸುತ್ತಿದ್ದೆ. ತುಳುನಾಡಿನ ದೈವ ಆರಾಧನೆಯ ಕೀರ್ತಿ ಕನ್ನಡ ಚಿತ್ರ ಮೂಲಕ ಪ್ರತಿ ಮನೆ ಮನವನ್ನು ತಟ್ಟಿದೆ. ಇಂತಹ ಸಮಯದಲ್ಲಿ ಕರವಾಳಿ ರಿಯಲ್ ಕಾಂತಾರ ದೈವ ನರ್ತಕ ಗುಡ್ಡ ಪಾಣಾರ ಅವರಿಗೆ ನೀಡಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava award) ಮತ್ತಷ್ಟು ಸಂಭ್ರಮ ಮನೆಮಾಡುವಂತೆ ಮಾಡಿದೆ.
ತುಳುನಾಡಿನಲ್ಲಿ ದೈವಾರಾಧನೆ ಕ್ಷೇತ್ರದಲ್ಲಿ 48 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗುಡ್ಡ ಪಾಣಾರ ಕಾಪು ತಾಲೂಕಿನ ಮೂಳೂರು ನಿವಾಸಿ (Udupi Daiva Narthaka Pili Kola Gudda Panara). ಗುಡ್ಡ ಪಾಣಾರ ಅವರು 38 ವರ್ಷಗಳಿಂದ ಪಿಲಿಕೋಲ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧೆಡೆ ಪಂಜುರ್ಲಿ, ವರ್ತೆ, ಗುಳಿಗ, ಬಬ್ಬರ್ಯ, ತನ್ನಿಮಾನಿಗ ಸಹಿತ ಇತರ ದೈವಗಳ ಕೋಲ ಕಟ್ಟುತ್ತಾರೆ. ಗುಡ್ಡ ಪಾಣಾರ ಪಿಲಿ ಕೋಲ ನರ್ತನ ಸೇವೆ ಆರಂಭಿಸಿದ ಬಳಿಕ ಇತರ ದೈವಗಳ ನರ್ತನ ಸೇವೆಯನ್ನು ಸ್ಥಗಿತಗೊಳಿಸಿದ್ದರು.
ಶಾಲೆಗೆ ಹೋಗದ, ವಿದ್ಯಾಭ್ಯಾಸ ಇಲ್ಲದ ಗುಡ್ಡ ಪಾಣಾರ ಪ್ರಶಸ್ತಿಗಾಗಿ ಅರ್ಜಿ ಹಾಕಲಿಲ್ಲ. ಇಂತದೊಂದು ಗೌರವ ಸಲ್ಲುತ್ತದೆ ಎಂಬ ಆಸೆ ನೀರಿಕ್ಷೆಯನ್ನೂ ಇಟ್ಟವರಲ್ಲ. ರಾಜ್ಯೋತ್ಸವ ಪ್ರಶಸ್ತಿ ತನಗೆ ಒಲಿದು ಬಂದಿದಕ್ಕೆ ಅನಂದಭಾಷ್ಪ ಅವರ ಕಣ್ಣಿಂದ ಜಾರಿದೆ. 20ನೇ ವರ್ಷದಿಂದಲೇ ಮನೆ ದೈವಗಳ ನರ್ತಕನಾಗಿ ತಂದೆಯಿಂದ ಬಳುವಳಿಯಾಗಿ ಬಂದ ದೈವ ನರ್ತನ ಸೇವೆಯನ್ನು ಆರಂಭಿಸಿ, ಕಳೆದ 38 ವರ್ಷಗಳಿಂದ ಪಿಲಿಕೋಲ ದೈವ ನರ್ತನ ನಡೆಸಿ ಕೊಂಡು ಬಂದಿದ್ದಾರೆ.
ಯಾವುದೇ ಅರ್ಜಿ ಹಾಕದೇ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ: ಯಾವುದೇ ಅರ್ಜಿ ಹಾಕದೇ ಸರಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ದೈವ-ದೇವರ ಸನ್ನಿಧಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಮಾಡಿದ್ದಕ್ಕೆ ದೈವ ಕೃಪೆ ರೂಪದಲ್ಲಿ ಪ್ರಶಸ್ತಿ ಲಭಿಸಿದೆ. ಇದಕ್ಕಾಗಿ ಸರಕಾರ, ಜನಪ್ರತಿನಿದಿಗಳು, ಜಾನಪದ ಕಲಾಸಕ್ತರು ಮತ್ತು ಹತ್ತು ಸಮಸ್ತರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ತುಳುನಾಡು ಅಂದ್ರೆ ದೈವ ಆರಾಧನೆ ನಾಡು. ಸಾವಿರಾರು ದೈವಗಳು ಕರವಾಳಿಯಲ್ಲಿ ನಿತ್ಯ ಪೂಜಿಸಲ್ಪಡುತ್ತದೆ. ಪಂಜುರ್ಲಿ, ಕೊರಗಜ್ಜ, ಗುಳಿಗ, ಜೂಮಾಧಿ.. ಹೀಗೆ ಸಾವಿರಕ್ಕೂ ಅಧಿಕ ದೈವ ಆರಾಧನೆ ನಡೆಯುತ್ತದೆ. ಅದ್ರೆ ಉಡುಪಿಯ ಕಾಪು ತಾಲೂಕಿನ ಹಳೆ ಮಾರಿಗುಡಿಯಲ್ಲಿ ವಿಶಿಷ್ಟ ವಾದ ದೈವದ ಕೋಲ ನಡೆಯುತ್ತೆ. ಇದನ್ನು ಪಿಲಿಕೋಲ (ಹುಲಿ ಕೋಲ) ಎಂದು ಕರೆಯುತ್ತಾರೆ. ಹುಲಿ ಕೋಲ ನರ್ತಕ ಸಂಪ್ರದಾಯದಂತೆ ಒಂದು ವಾರ ನೇಮ ನಿಷ್ಠೆಯಿಂದ ದೇವಸ್ಥಾನದಲ್ಲಿದ್ದು, ನಂತರವಷ್ಟೇ ಹುಲಿಕೋಲ ಕಟ್ಟುವುದು.
ಪಿಲಿಕೋಲದ ವೇಳೆ ದೈವ ಮುಟ್ಟಿದ್ರೆ ಮುಟ್ಟಿಸಿಕೊಂಡವರಿಗೆ ಕೆಡುಕಾಗುತ್ತದೆ ಎಂಬ ನಂಬಿಕೆ ಈ ಭಾಗದಲ್ಲಿ ಇದೆ. ಅದ್ರೆ ಕೋಲ ಕೊನೆ ಹಂತದಲ್ಲಿ ಕುರಿಯನ್ನು ಮುಟ್ಟಿಸಿದ ನಂತ್ರ ಹುಲಿಕೋಲ ಕೊನೆಯಾಗುತ್ತದೆ. ಯಾವುದನ್ನೂ ಮುಟ್ಟದೆ ಕೋಲ ಕೊನೆಗೊಂಡರೆ ಪಿಲಿಕೋಲದ ನರ್ತಕನಿಗೂ ತೊಂದರೆಯಾಗುತ್ತದೆ ಎಂಬ ನಂಬಿಕೆ ಈ ಭಕ್ತ ಜನರದ್ದು.
ಅದೆ ಕಾರಣಕ್ಕೆ ಕುರಿಯನ್ನು ಮುಟ್ಟಿಸುವ ಮೂಲಕ ಕೋಲ ಮುಗಿಸಲಾಗುತ್ತದೆ. ಇಂತಹ ವಿಶಿಷ್ಟವಾದ ಕೋಲ ಕಟ್ಟು ನರ್ತಕ ಗುಡ್ಡ ಪಾಣಾರ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ದೈವ ಭಕ್ತರಿಗೆ ಹರ್ಷ ಮೂಡಿಸಿದೆ. ಈ ನಡುವೆ ಕಾಂತಾರ ಚಿತ್ರ ಪಾಡ್ದನ ಹಾಡಿನ ಮೂಲಕ ಸಂಚಲನ ಮೂಡಿಸಿದ ನಾಗರಾಜ್ ಪಾಣಾರ ಅವರಿಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಸಲ್ಲಿಕೆಯಾಗಿದೆ.
ಒಟ್ಟಿನಲ್ಲಿ ಕಾಂತಾರ ಚಿತ್ರ ಒಂದು ಕಡೆಯಿಂದ ಸದ್ದು ಮಾಡುವ ಮೂಲಕ ತುಳುನಾಡು ಜನರ ಭಕ್ತಿಯನ್ನು ಇಮ್ಮಡಿಗೊಳಿಸಿದ್ದರೆ, ಬಡ ದೈವ ನರ್ತಕನ್ನು ಗುರುತಿಸಿ ಗೌರವಿಸುವಂತಾಗಿದ್ದು ನಿಜಕ್ಕೂ ಶ್ಲಾಘನೀಯ.