
Today Highlights in Kannada: ಕರ್ನಾಟಕದ ಪಶ್ಚಿಮ ಘಟ್ಟ ಹಾಗೂ ಕರಾವಳಿಯಲ್ಲಿ ಮುಂಗಾರು ತೀವ್ರಗೊಂಡಿದ್ದು, ಬೆಳಗಾವಿ, ಉಡುಪಿ, ಕೊಡಗು ಸೇರಿದಂತೆ 8 ಜಿಲ್ಲೆಗಳಿಗೆ ಐಎಂಡಿ (IMD) ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ತಗ್ಗು ಪ್ರದೇಶಗಳ ನಿವಾಸಿಗಳಿಗೆ ಜಾಗರೂಕರಾಗಿರಲು ಕೆಎಸ್‌ಎನ್‌ಡಿಎಂಸಿ ಸೂಚಿಸಿದೆ. ಮತ್ತೊಂದೆಡೆ, ನಗರದ ಸೌಂದರ್ಯೀಕರಣಕ್ಕಾಗಿ ಇಂದಿನಿಂದ ಬೆಂಗಳೂರಿನಲ್ಲಿ ಜಿಬಿಎ (GBA) ಮತ್ತು ಸಂಚಾರಿ ಪೊಲೀಸರು ಜಂಟಿಯಾಗಿ ಅನಾಥ ಬಿಡಾಡಿ ವಾಹನಗಳ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. 7 ದಿನಗಳಲ್ಲಿ ವಾಹನ ಸರಿಸದಿದ್ದರೆ ಜಪ್ತಿ ಮಾಡಿ ಹರಾಜು ಹಾಕಲಾಗುವುದು. ಇನ್ನು
ಬಳ್ಳಾರಿ ಬೈಪಾಸ್‌ನ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಬಳಿ ಕೃಷ್ಣಮೃಗದ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ಚಂದ್ರನಾಯ್ಕ್ ಎಂಬಾತನನ್ನು ಸಿಐಡಿ ಮತ್ತು ಅರಣ್ಯ ಸಂಚಾರಿ ದಳ ಬಂಧಿಸಿದೆ. ಪ್ಲಾಸ್ಟಿಕ್ ಚೀಲದಲ್ಲಿದ್ದ 700 ಗ್ರಾಂ ತೂಕದ ಚರ್ಮವನ್ನು ವಶಪಡಿಸಿಕೊಳ್ಳಲಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ರಾಮಮಂದಿರ ಬಳಿಕ ಪ್ರಖ್ಯಾತ ಬದ್ರಿನಾಥ್ ದೇಗುಲದಲ್ಲಿ ಹಣ ಕಳ್ಳತನ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಉತ್ತರಾಖಂಡ ಸರ್ಕಾರ ತನಿಖೆ ಆರಂಭಿಸಿದ್ದು, ಬದ್ರಿನಾಥ್ SHO ಮತ್ತು SIT ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ. ತನಿಖಾಧಿಕಾರಿಗಳು ದೇವಸ್ಥಾನದ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ.
ಮಂಗಳೂರಿನಲ್ಲಿ ಸುರತ್ಕಲ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ 8 ಬಾಂಗ್ಲಾ ಪ್ರಜೆಗಳನ್ನು ಸುರತ್ಕಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ಮುಕ್ಕ ಎಂಬಲ್ಲಿ ನಿರ್ಮಾಣ ಹಂತದ ಕಟ್ಟಡದ ಕೆಲಸದಲ್ಲಿ ತೊಡಗಿದ್ದ 54 ಕಾರ್ಮಿಕರ ದಾಖಲಾತಿಗಳ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ 8 ಮಂದಿ ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿ ಬಂದಿರುವುದು ಪತ್ತೆಯಾಗಿದೆ. ಬಂಧಿತರು ಬಾಂಗ್ಲಾದ ರಾಜ್‌ಶಾಹಿ ವಿಭಾಗದ ಗೊಡಾಗರಿ ನಿವಾಸಿಗಳು ಎಂಬುದು ಗೊತ್ತಾಗಿದೆ. ಮೊಹಮ್ಮದ್ ಮುಕ್ತಾರ್ ಅಲಿ(36), ಮೊಹಮ್ಮದ್ ರಕೀಬುರ್ ಹೊಸೈನ್(44), ಮೊಹಮ್ಮದ್ ಅಜರುಲ್ ಇಸ್ಲಾಂ(36), ಮೊಹಮ್ಮದ್ ಜಾಹಿದ್ ಹೊಸೈನ್(18), ಮೊಹಮ್ಮದ್ ಬೇಲಾಲ್ ಹೊಸೈನ್(36), ಹಸಿಬುಲ್ ಹಸನ್ ಶಾಂಟೋ(37), ಸಮೇವುಲ್ ಹಸನ್(23), ಮೊಹಮ್ಮದ್ ಸೈಬುರ್ ರೆಹಮಾನ್ ಬಂಧಿತರು. ಆರೋಪಿಗಳು ಮೂರು ತಿಂಗಳ ಹಿಂದೆ ಭಾರತ-ಬಾಂಗ್ಲಾ ಗಡಿ ದಾಟಿದ್ದರು. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲಕ ಭಾರತದೊಳಗೆ ನುಸುಳಿದ್ದರು ಎನ್ನಲಾಗಿದೆ. ಅಲ್ಲಿನ ಸ್ಥಳೀಯ ವಿಳಾಸ ಹೊಂದಿದ್ದ ಆಧಾರ್ ಕಾರ್ಡ್‌ಗಳಿಗೆ ತಮ್ಮ ಭಾವಚಿತ್ರಗಳನ್ನು ಆರೋಪಿಗಳು ಅಂಟಿಸಿದ್ದರು. ಕಲರ್ ಜೆರಾಕ್ಸ್ ಮೂಲಕ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡಿದ್ದರು. ಕಳೆದ ಎರಡು ತಿಂಗಳಿನಿಂದ ಮುಕ್ಕ ಭಾಗದಲ್ಲಿ ವಾಸಿಸುತ್ತಿದ್ದರು ಎಂಬುದು ಗೊತ್ತಾಗಿದೆ.
ಅಮೆರಿಕ, ಇರಾನ್ ನಡುವೆ ಸಂಘರ್ಷ ಮುಂದುವರಿದ ಹಿನ್ನೆಲೆ ಇರಾನ್ ನಾಯಕರು ಮಾತುಕತೆ ಮುಂದುವರಿಸಲು ಬಯಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದಾರೆ. ಇರಾನ್ನ ಪರಮೋಚ್ಛ ನಾಯಕ ಖಮನೈ ಅಂತ್ಯಕ್ರಿಯೆ ಬಳಿಕ ಟ್ರುತ್ ಸೋಷಿಯಲ್ ಮೀಡಿಯಾದಲ್ಲಿ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದು, ಶಾಂತಿ ಮಾತುಕತೆ ಮುಂದುವರಿಯಲಿದೆ ಎಂದು ಇರಾನ್ನವರಿಗೆ ಹೇಳಿದ್ದೇನೆ. ಆದರೆ ಕದನ ವಿರಾಮ ಮಾತ್ರ ಮುಗಿದ ಅಧ್ಯಾಯ ಎಂದು ಅಮೆರಿಕ ಸ್ಪಷ್ಟವಾಗಿ ಹೇಳಿದೆ ಎಂದು ತಿಳಿಸಿದ್ದಾರೆ. ಇನ್ನಷ್ಟು ಓದಿ.
ಉತ್ತರಾಖಂಡ್ನಲ್ಲಿ ಭಾರಿ ಮಳೆ ಹಿನ್ನೆಲೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸತತ ಮಳೆಯಿಂದ ಅಲಕಾನಂದ ನದಿ ತುಂಬಿ ಹರಿಯುತ್ತಿದೆ. ಪವಿತ್ರ ಬದರಿನಾಥ ಯಾತ್ರಾ ಸ್ಥಳದ ಪಕ್ಕವೇ ಈ ನದಿ ಹರಿಯುವ ಕಾರಣ ಯಾತ್ರಿಕರಲ್ಲಿ ಆತಂಕ ಹೆಚ್ಚಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಉತ್ತರಾಖಂಡ್ ಸರ್ಕಾರ ಜಾರಿಗೊಳಿಸಿದೆ.
ಕಾರಿಗೆ ಲಾರಿ ಡಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ಹೊರವಲಯದಲ್ಲಿರುವ ಹೈಕೋರ್ಟ್ ಕ್ರಾಸ್ ಬಳಿ ನಡೆದಿದೆ. ವೇಗವಾಗಿ ಬಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಡಿಸಿಪಿ ಶಾಲೂ ಸೇರಿ ಹಿರಿಯ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಸಂಬಂಧ ಕಲಬುರಗಿ ಟ್ರಾಫಿಕ್-01 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಡರ್ಗೆ ಕಾರು ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ತಾಯಿ ಸತ್ಯವೇಣಿ(38), ಪುತ್ರರಾದ ಹರಿವೆಂಕಟರಾಮ್(20) ಮತ್ತು ಜಶ್ವಂತ(18) ಮೃತಪಟ್ಟಿದ್ದಾರೆ. ರಾಘವೇಂದ್ರ(41)ಗೆ ಗಂಭೀರ ಗಾಯಗಳಾಗಿದ್ದು, ಮನಗೂಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇನ್ನಷ್ಟು ಓದಿ
ಹಿಂದೂ ಧರ್ಮ, ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ಸಂಬಂಧ ಪ್ರೊ.K.S.ಭಗವಾನ್ ಜಾಮೀನು ಅರ್ಜಿ ವಿಚಾರಣೆಯನ್ನು ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್ ಜುಲೈ 13ಕ್ಕೆ ಮುಂದೂಡಿದೆ. ತಕರಾರು ಅರ್ಜಿ ಸಲ್ಲಿಸಲು ಸರ್ಕಾರಿ ವಕೀಲರು ಕಾಲಾವಕಾಶ ಕೇಳಿದ ಹಿನ್ನೆಲೆ ಕೋರ್ಟ್ ಈ ತೀರ್ಮಾನ ಕೈಗೊಂಡಿದೆ. ಹರಿಹರದದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ಸಂಬಂಧ ಹಿಂದೂ ಜಾಗರಣ ವೇದಿಕೆಯ ದಿನೇಶ್ ಭಗವಾನ್ ವಿರುದ್ಧ ದೂರು ನೀಡಿದ್ದರು. ಹರಿಹರ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವಿಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಘೋಷಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ಪೋಸ್ಟ್ ಮಾಡಿದ್ದು, ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಫುಟ್‌ಪಾತ್ ಅತಿಕ್ರಮ ತೆರವು ಕಾರ್ಯಾಚರಣೆಗೆ ನಮ್ಮ ಬೆಂಬಲವಿದೆ, ಇದು ನಿರ್ದಿಷ್ಟ ವ್ಯಕ್ತಿ ಮತ್ತು ವ್ಯಾಪಾರಿಗಳ ವಿರುದ್ಧದ ಕ್ರಮವಲ್ಲ. ಬದಲಿಗೆ ಬೆಂಗಳೂರು ಜನರ ಸುರಕ್ಷತೆಗೆ ಮಾಡ್ತಿರುವ ಕೆಲಸ. ಬೆಂಗಳೂರು ನಗರವನ್ನು ಸುಂದರ, ಸುರಕ್ಷಿತ ಮತ್ತು ವಿಶ್ವಮಟ್ಟದ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ಮದುವೆಯಾಗಲು ಹೆಣ್ಣು ಸಿಗದಿದ್ದಕ್ಕೆ ಮನನೊಂದ ಯುವಕನೋರ್ವ ಮೊಬೈಲ್ ಟವರ್ ಏರಿ ಹುಚ್ಚಾಟ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. BSNL ಟವರ್ ಏರಿರುವ ಯುವಕನ ನೋಡಲು ಸಾರ್ವಜನಿಕರು ಮುಗಿಬಿದ್ದಿದ್ದು, ಸ್ಥಳಕ್ಕೆ ಇಂಡಿ ಶಹರ ಪೊಲೀಸರು ಹಾಗೂ ಆಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ.
ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಅಫಜಲಪುರ ತಾಲೂಕಿನ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಅವರಿಗೆ ಕಲಬುರಗಿ ಜಿಲ್ಲಾ ನ್ಯಾಯಾಲಯವು ಭಾರಿ ಶಾಕ್ ನೀಡಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಮಾಜಿ ತಹಶೀಲ್ದಾರ್‌ಗೆ 4 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 20,000 ರೂಪಾಯಿ ದಂಡ ವಿಧಿಸಿ ಇವತ್ತು (ಜುಲೈ 10) ಮಹತ್ವದ ಆದೇಶ ಹೊರಡಿಸಿದೆ.
ನಾಲ್ಕು ಬೇರೆ ಬೇರೆ ವೋಟರ್ ಐಡಿ (ಮತದಾರರ ಗುರುತಿನ ಚೀಟಿ) ಹೊಂದಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದಲ್ಲಿ ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರಿಗೆ ಬೆಂಗಳೂರಿನ ನ್ಯಾಯಾಲಯವು ಇಂದು ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ಈ ಹಿಂದೆ ವಾರಂಟ್ ಜಾರಿಯಾಗಿತ್ತು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಬಾರಿ ನಡೆಯಲಿರುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ (Mysuru Dasara 2026) ಅದ್ಧೂರಿ ಆಚರಣೆಗೆ ದಿನಾಂಕ ಮತ್ತು ಶುಭ ಮುಹೂರ್ತಗಳು ಅಧಿಕೃತವಾಗಿ ನಿಗದಿಯಾಗಿವೆ. ಗಜಪಡೆಯ ಆಗಮನದಿಂದ ಹಿಡಿದು ದಸರಾ ಉದ್ಘಾಟನೆ ಹಾಗೂ ಜಂಬೂಸವಾರಿಯವರೆಗಿನ ಸಂಪೂರ್ಣ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಮೈಸೂರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಆಗಸ್ಟ್ 26ರಂದು ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮೈಸೂರು ಅರಮನೆಯ ಪ್ರವೇಶ ದ್ವಾರದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲಾಗುವುದು. ಅಂದಿನಿಂದಲೇ ಆನೆಗಳಿಗೆ ತಾಲೀಮು ಮತ್ತು ವಿಶೇಷ ಪೌಷ್ಟಿಕ ಆಹಾರ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಅಕ್ಟೋಬರ್ 11ರ ಭಾನುವಾರ ಮುಂಜಾನೆ ಚಾಲನೆ ಸಿಗಲಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ
ಚೆಕ್ ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಲಿವುಡ್ ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್‌ಗೆ ದೆಹಲಿ ಹೈಕೋರ್ಟ್ 3 ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಟನಿಗೆ ನ್ಯಾಯಾಲಯವು 2 ತಿಂಗಳ ಕಾಲಾವಕಾಶ ನೀಡಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ
ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತದ ಖಡಕ್ ಐಪಿಎಸ್ ಅಧಿಕಾರಿ, ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್ ಅವರನ್ನು ಸರ್ಕಾರ ದಿಢೀರನೆ ವರ್ಗಾವಣೆ ಮಾಡಿದೆ. ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಯಾವುದೇ ಹೊಸ ಹುದ್ದೆಯನ್ನು ತೋರಿಸದೆ (Post ಇಲ್ಲದೆ) ಅವರನ್ನು ಎತ್ತಂಗಡಿ ಮಾಡಿರುವುದು ಈಗ ಸಾರ್ವಜನಿಕ ವಲಯದಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದು ಅವರ ವೃತ್ತಿಜೀವನದ 9ನೇ ವರ್ಗಾವಣೆಯಾಗಿದೆ.
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ಜಾಗ ಮಾಡಿಕೊಡ್ತೇವ, ನಮ್ಮ ರಾಜ್ಯದವರಿಗೆ ಮೊದಲ ಆದ್ಯತೆ ಕೊಡ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಹೊರ ರಾಜ್ಯದಿಂದಲೂ ಕೂಡ ತುಂಬಾ ಜನರು ಬಂದಿದ್ದಾರೆ. ಅವರಿಗೆ ಇಲ್ಲಿ ವೋಟ್ ಇಲ್ಲ ಏನೂ ಇಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಹೀಗಾಗಿ ನಮ್ಮ ರಾಜ್ಯದವರಿಗೆ ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ಬೆಂಗಳೂರಲ್ಲಿ ಬಿಡಾಡಿ ವಾಹನಗಳ ಕಾರ್ಯಾಚರಣೆ ಮಾಡ್ತಿದ್ದೇವೆ. ಒಂದು ವಾರ ವಾಹನಗಳಿಗೆ ನೋಟಿಸ್ ಕೊಟ್ಟು ಹೇಳುತ್ತೇವೆ. ತೆರವು ಮಾಡ್ಲಿಲ್ಲ ಅಂದ್ರೆ ಹರಾಜು ಹಾಕುವ ಕೆಲಸ ಮಾಡ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಕೇಂದ್ರ, ದಕ್ಷಿಣ ಹಾಗೂ ಆಗ್ನೇಯ ವಿಭಾಗಗಳಲ್ಲಿ 416 ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. 1,029 ವಾಹನ ಹಾಗೂ 154 ರೌಡಿಶೀಟರ್‌ಗಳ ಮನೆಗಳನ್ನು ತಪಾಸಣೆ ನಡೆಸಿ 151 ಬೈಕ್, 14 ಆಟೋ ವಶಪಡಿಸಿಕೊಂಡಿದ್ದಾರೆ. ಎನ್‌ಡಿಪಿಎಸ್ ಕಾಯ್ದೆಯಡಿ 16 ಹಾಗೂ ಕೋಟ್ಪಾ ಅಡಿ 171 ಪ್ರಕರಣಗಳು ದಾಖಲಾಗಿವೆ.
ಆಸ್ಟ್ರೇಲಿಯಾ ಪ್ರವಾಸ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಮೂರು ದೇಶಗಳ ಪ್ರವಾಸದ ಕೊನೆಯ ಹಂತವಾಗಿ ನ್ಯೂಜಿಲೆಂಡ್‌ನ ಆಕ್ಲೆಂಡ್ ತಲುಪಿದ್ದಾರೆ. ಆಕ್ಲೆಂಡ್ ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದ್ದು, ನಾಲ್ಕು ದಶಕಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಜುಲೈ 1ರಿಂದ 435 ಕಿ.ಮೀ. ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಜಯನಗರದ ಅಶೋಕ ಪಿಲ್ಲರ್ ಬಳಿ ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 9,800 ಜಾಗಗಳನ್ನು ಗುರುತಿಸಿ, ಶೆಡ್ ಹಾಗೂ ರ್ಯಾಂಪ್ಗಳನ್ನು ತೆರವುಗೊಳಿಸಲಾಗಿದ್ದು, ಪಾದಚಾರಿಗಳ ಸುರಕ್ಷತೆಗಾಗಿ ಈ ಮಾಫಿಯಾ ವಿರುದ್ಧ ಜಿಬಿಎ ಕಾರ್ಯಾಚರಣೆ ಮುಂದುವರಿಯಲಿದೆ ಎಂದಿದ್ದಾರೆ.
ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆ ನಡೆಸಲು ಡಿಸೆಂಬರ್ 31ರವರೆಗೆ ಕಾಲಾವಕಾಶ ವಿಸ್ತರಿಸುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವುದರಿಂದ ಆಡಳಿತಾತ್ಮಕ ನಿರ್ಬಂಧಗಳಿವೆ ಎಂದು ಸರ್ಕಾರ ಹೇಳಿದ್ದು, ಆಗಸ್ಟ್ 31ರ ಹಳೆಯ ಗಡುವನ್ನು ಮಾರ್ಪಡಿಸುವಂತೆ ಕೋರಿದೆ. ವೀಡಿಯೋ ನೋಡಿ
ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಬೆನ್ನುನೋವಿಗೆ ಚಿಕಿತ್ಸೆ ಪಡೆದ ಅಮ್ಮಿನಭಾವಿಯ ದಂಪತಿ, ಸೂಕ್ತ ಚಿಕಿತ್ಸೆ ಸಿಕ್ಕಿಲ್ಲವೆಂದು ಆರೋಪಿಸಿ 112 ಸಹಾಯವಾಣಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರೊಂದಿಗೆ, ತಮ್ಮನ್ನು ಸ್ವಗ್ರಾಮಕ್ಕೆ ಬಿಡುವಂತೆ ದಂಪತಿ ವಾಗ್ವಾದ ನಡೆಸಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.
ಅಯೋಧ್ಯೆ ರಾಮ ಮಂದಿರ ದೇಣಿಗೆ ಪ್ರಕರಣದ ಚರ್ಚೆ ಬೆನ್ನಲ್ಲೇ, ರಾಜ್ಯದ ಪ್ರಮುಖ ಮುಜರಾಯಿ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಧಾರ್ಮಿಕ ಭಾವನೆಗಳ ರಕ್ಷಣೆ ಹಾಗೂ ದೇವಸ್ಥಾನಗಳ ಆಸ್ತಿಪಾಸ್ತಿ ಸುರಕ್ಷತೆಗೆ ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮತ್ತಷ್ಟು ಓದಿ
ನಿತೇಶ್ ತಿವಾರಿ ನಿರ್ದೇಶನದ ಬಿಗ್ ಬಜೆಟ್ ಸಿನಿಮಾ ‘ರಾಮಾಯಣ’ದ ಫಸ್ಟ್ ಲುಕ್ ಜುಲೈ 23ರ ಕಾಮಿಕ್ ಕಾನ್‌ನಲ್ಲಿ ಬಿಡುಗಡೆಯಾಗಲಿದೆ. ಈ ಅಂತರರಾಷ್ಟ್ರೀಯ ವೇದಿಕೆಯಲ್ಲಿ ರಣಬೀರ್ ಕಪೂರ್ ಮತ್ತು ಯಶ್ ಭಾಗಿಯಾಗಲಿದ್ದಾರೆ. ಸುಮಾರು 4,000 ಕೋಟಿ ರೂ. ವೆಚ್ಚದ ಈ ಚಿತ್ರವು 2026ರ ದೀಪಾವಳಿಗೆ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಮತ್ತಷ್ಟು ಓದಿ
ಪ್ರಧಾನಿ ಮೋದಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿ, MCC ಜೊತೆ ಐತಿಹಾಸಿಕ ಕ್ರೀಡಾ ಒಪ್ಪಂದ ಮಾಡಿಕೊಂಡಿದ್ದಾರೆ. ಕ್ರಿಕೆಟ್, ಕಬಡ್ಡಿ ಸೇರಿದಂತೆ ವಿವಿಧ ಕ್ರೀಡಾ ಪ್ರತಿಭೆಗಳಿಗೆ ತರಬೇತಿ ನೀಡಲು ಹಾಗೂ ಕ್ರೀಡಾ ವಿಜ್ಞಾನ ವಿನಿಮಯದ ಮೂಲಕ ಉಭಯ ದೇಶಗಳ ಬಾಂಧವ್ಯ ಬಲಪಡಿಸಲು ಈ ಒಪ್ಪಂದ ಸಹಕಾರಿಯಾಗಿದೆ. ಮತ್ತಷ್ಟು ಓದಿ
ಕಾಂಗ್ರೆಸ್ ಸರ್ಕಾರದ “ಶಾಶ್ವತ ನಿವಾಸ ಪ್ರಮಾಣ ಪತ್ರ” ನಿರ್ಧಾರಕ್ಕೆ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ‘ಒಂದು ದೇಶ ಒಂದು ಪೌರತ್ವ’ಕ್ಕೆ ವಿರುದ್ಧವಾಗಿದ್ದು, ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುವ ಷಡ್ಯಂತ್ರ ಹಾಗೂ ದೇಶದ ಆಂತರಿಕ ಭದ್ರತೆಗೆ ದೊಡ್ಡ ಸವಾಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಮತ್ತಷ್ಟು ಓದಿ
ಜುಲೈ 16ರ ಗುರುವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಸರ್ಕಾರದ ಪ್ರಮುಖ ನಿರ್ಧಾರಗಳ ಕುರಿತು ಚರ್ಚಿಸಲು ಕರೆಯಲಾಗಿರುವ ಈ ಪ್ರಮುಖ ಕ್ಯಾಬಿನೆಟ್ ಮೀಟಿಂಗ್ ನೇತೃತ್ವವನ್ನು ಸಿಎಂ ಡಿ.ಕೆ. ಶಿವಕುಮಾರ್ ವಹಿಸಿಕೊಳ್ಳಲಿದ್ದಾರೆ.
ಬೈಂದೂರಿನ ಆಜ್ರಿ ಗ್ರಾಮದ ಯಡ್ನಾಳ್‌ನಲ್ಲಿ ಮುಂಜಾನೆ ಬೀಸಿದ ಭೀಕರ ಸುಂಟರಗಾಳಿಗೆ 150ಕ್ಕೂ ಹೆಚ್ಚು ಅಡಿಕೆ ಮರಗಳು, ವಿದ್ಯುತ್ ಕಂಬಗಳು ಹಾಗೂ ಮನೆಗಳು ಧರಾಶಾಹಿಯಾಗಿವೆ. ದುರಂತದಲ್ಲಿ ಒಂದು ಕರು ಬಲಿಯಾಗಿದ್ದು, ತೀವ್ರ ನಷ್ಟ ಅನುಭವಿಸಿರುವ ರೈತರು ಸರ್ಕಾರದ ತುರ್ತು ಪರಿಹಾರ ಮತ್ತು ಸಾಂತ್ವನಕ್ಕಾಗಿ ಕಾಯುತ್ತಿದ್ದಾರೆ.
ಬನ್ನೇರುಘಟ್ಟ ರಸ್ತೆಯಲ್ಲಿ 1.79 ಕೋಟಿ ರೂ. ಹೊಂದಿದ್ದ ಎಟಿಎಂ ಕ್ಯಾಶ್ ವ್ಯಾನ್ ದರೋಡೆಗೆ ಕಿಡಿಗೇಡಿಗಳು ಸಂಚು ರೂಪಿಸಿದ್ದಾರೆ. “ಬೈಕ್‌ಗೆ ಟಚ್ ಆಗಿದೆ” ಎಂದು ಕಿರಿಕ್ ತೆಗೆದು, ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ವ್ಯಾನ್ ಕೀಲಿಕೈ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬನ್ನೇರುಘಟ್ಟ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವೀಡಿಯೋ ನೋಡಿ
2027ರಲ್ಲಿ ಅಫಜಲಪುರ ತಹಶೀಲ್ದಾರ್ ಆಗಿದ್ದ ಶಶಿಕಲಾ ಪಾದಗಟ್ಟಿ, ಕರಜಗಿ ನಾಡ ಕಚೇರಿಯಲ್ಲಿ ಕೆಲಸ ಮಾಡಿಕೊಡಲು 1 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಸಾರ್ವಜನಿಕರ ದೂರಿನನ್ವಯ ತನಿಖೆ ನಡೆಸಿದ್ದ ಕಲಬುರಗಿ ಜಿಲ್ಲಾ ನ್ಯಾಯಾಲಯವು ಇದೀಗ ಆರೋಪಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬಸ್ಥರು ಭೇಟಿಯಾಗಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಗೈರಾಗಿದ್ದರೂ, ತಾಯಿ ಗಿರಿಜಾ ಹಟ್ಟಿಹೊಳಿ ಹಾಗೂ ಸಹೋದರಿಯರು ಟಿಫಿನ್ ತಂದು ಸಿಎಂ ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಹತ್ವದ ಮಾತುಕತೆ ನಡೆಸಿದ್ದಾರೆ.
‘ಕರಾವಳಿ’ ಚಿತ್ರದ ಇವೆಂಟ್ ಗಲಾಟೆ ಪ್ರಕರಣದಲ್ಲಿ ಉಪ್ಪಾರಪೇಟೆ ಪೊಲೀಸರ ತನಿಖೆ ಚುರುಕಾಗಿದೆ. ಕೃತ್ಯ ಎಸಗಿದ ಆರೋಪಿಗಳಾದ ದಿಲೀಪ್ ಹಾಗೂ ಅವಿನಾಶ್, ನಟ ಪ್ರಜ್ವಲ್ ದೇವರಾಜ್ ಅವರ ಅಸಿಸ್ಟೆಂಟ್‌ಗಳಾಗಿದ್ದು, ಇವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಉದ್ದೇಶಪೂರ್ವಕವಾಗಿಯೇ ಗಲಾಟೆ ಮಾಡಿಸಲಾಗಿದೆಯೇ ಎಂಬ ಅನುಮಾನವಿದ್ದು, ಆರೋಪಿಗಳ ಬಂಧನದ ಬಳಿಕ ನಟನಿಗೂ ನೋಟಿಸ್ ನೀಡಲು ಪೊಲೀಸರು ಸಜ್ಜಾಗಿದ್ದಾರೆ. ಮತ್ತಷ್ಟು ಓದಿ
ಬಂಡೀಪುರ ಹುಲಿ ಸಂರಕ್ಷಣಾದಳದ ಅಧಿಕಾರಿಗಳು ಗುಂಡ್ಲುಪೇಟೆಯ ಚೌಡಹಳ್ಳಿ ಸಮೀಪ ಕಾರ್ಯಾಚರಣೆ ನಡೆಸಿ ಇಬ್ಬರು ಬೇಟೆಗಾರರನ್ನು ಬಂಧಿಸಿದ್ದಾರೆ. ಬಂದೂಕಿನಿಂದ ಜಿಂಕೆ ಬೇಟೆಯಾಡಿ ಬೈಕ್‌ನಲ್ಲಿ ಮಾಂಸ ಸಾಗಿಸುತ್ತಿದ್ದ ಮಣಿಕಂಠ ಮತ್ತು ಶಿವಯ್ಯ ಎಂಬುವವರಿಂದ 30 ಕೆಜಿ ಜಿಂಕೆ ಮಾಂಸ, ಬಂದೂಕು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಮಲೆನಾಡಿನಲ್ಲಿ ನಿರಂತರ ಮಳೆಯಿಂದಾಗಿ ಜಯಪುರ-ಶೃಂಗೇರಿ ಹೆದ್ದಾರಿಯ ಕುಂಚೆಬೈಲು ಬಳಿ ಅರ್ಧ ಕಿಲೋಮೀಟರ್‌ನಷ್ಟು ಭೂಕುಸಿತ ಸಂಭವಿಸಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಬಂಡೆ, ಮಣ್ಣು ರಸ್ತೆಗೆ ಬಿದ್ದಿದ್ದು, ಜಿಲ್ಲಾಡಳಿತದ ನಿರ್ಲಕ್ಷ್ಯದ ನಡುವೆಯೂ ಸಾರ್ವಜನಿಕರು ಆತಂಕದಲ್ಲೇ ಸಂಚರಿಸುತ್ತಿದ್ದಾರೆ. ಮಳೆ ಹೆಚ್ಚಾದರೆ ಹೆದ್ದಾರಿ ಸಂಪೂರ್ಣ ಬಂದ್ ಆಗುವ ಭೀತಿ ಎದುರಾಗಿದೆ.
Published On - 8:08 am, Fri, 10 July 26