TV9 Kannada News Live: ಭಾರೀ ಮಳೆ ಎಚ್ಚರಿಕೆ, ಜು.8ರಂದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಶಾಲಾ -ಕಾಲೇಜುಗಳಿಗೆ ರಜೆ

Karnataka News Today Live Updates: ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆ ಹಿನ್ನೆಲೆ ಚಿಕ್ಕಮಗಳೂರಿನ 6 ತಾಲೂಕು ಹಾಗೂ ಶಿವಮೊಗ್ಗದ 3 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಆವರಿಸಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಇಂದಿನ ಪ್ರಮುಖ ಅಪ್ಡೇಟ್ಸ್ ಇಲ್ಲಿದೆ.

TV9 Kannada News Live: ಭಾರೀ ಮಳೆ ಎಚ್ಚರಿಕೆ, ಜು.8ರಂದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಶಾಲಾ -ಕಾಲೇಜುಗಳಿಗೆ ರಜೆ
ಪ್ರಾತಿನಿಧಿಕ ಚಿತ್ರ
Edited By:

Updated on: Jul 07, 2026 | 11:00 PM

Breaking News Today Live Updates in Kannada: ಕರ್ನಾಟಕ ರಾಜ್ಯದೆಲ್ಲೆಡೆ ವರುಣನ ಆರ್ಭಟ ಜೋರಾಗಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಮುಂಜಾಗ್ರತಾ ಕ್ರಮವಾಗಿ 6 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಹಾಗೂ ಚಿಕ್ಕಮಗಳೂರಿನ 5 ಹೋಬಳಿಗಳ ಶಾಲೆಗಳಿಗೆ, ಶೃಂಗೇರಿಯ ಶಾಲಾ-ಕಾಲೇಜುಗಳಿಗೆ ಮತ್ತು ಕಳಸದ ಪ್ರಾಥಮಿಕ ಶಾಲೆಗಳಿಗೆ ರಜೆ ನೀಡಲಾಗಿದೆ. ಇತ್ತ ಶಿವಮೊಗ್ಗ ಜಿಲ್ಲೆಯಲ್ಲೂ ಮಳೆಯ ಅಬ್ಬರ ಜೋರಾಗಿದ್ದು, ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕುಗಳ ಎಲ್ಲಾ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಮತ್ತೊಂದೆಡೆ, ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ದಟ್ಟವಾದ ಮಂಜು ಆವರಿಸಿದೆ. ಇದರಿಂದಾಗಿ NH 173 ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಯಿಂದಾಗಿ ಘಾಟಿಯಲ್ಲಿ ಸುಂದರ ಜಲಪಾತಗಳು ಸೃಷ್ಟಿಯಾಗಿವೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

YouTube video player

 

 

 

LIVE NEWS & UPDATES

The liveblog has ended.
  • 07 Jul 2026 09:57 PM (IST)

    ಚಿಕ್ಕಮಗಳೂರು ಜಿಲ್ಲೆಯ 6 ತಾಲೂಕಿನ ಶಾಲೆಗಳಿಗೆ ರಜೆ

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಾಳೆ (ಜುಲೈ 08) 6 ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ರಜೆ ನೀಡಲಾಗಿದೆ. ಇನ್ನು ಚಿಕ್ಕಮಗಳೂರು ತಾಲೂಕಿನ ಆಲ್ದೂರು, ಜಾಗರ, ಆವತಿ, ಖಾಂಡ್ಯ, ವಸ್ತಾರೆ ಹೋಬಳಿಯ ಅಂಗನವಾಡಿ ಕೇಂದ್ರಗಳಿಗೆ ಮಾತ್ರ ರಜೆ ನೀಡಿ ಡಿಸಿ ಭನ್ವರ್ ಸಿಂಗ್ ಮೀನಾ ಆದೇಶ ಹೊರಡಿಸಿದ್ದಾರೆ.

  • 07 Jul 2026 09:20 PM (IST)

    ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ

    ನಿರಂತರ ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜಿಗಳಿಗೆ ನಾಳೆ (ಜುಲೈ 08) ರಜೆ ಘೋಷಿಸಲಾಗಿದೆ. ಅಂಗನವಾಡಿಯಿಂದ ಪಿಯುಸಿ ಕಾಲೇಜಿನವರೆಗೂ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶಿಸಿದೆ.

  • 07 Jul 2026 09:12 PM (IST)

    ಸಾಗರ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ

    ಶಿವಮೊಗ್ಗ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಗರ ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ(ಜುಲೈ 08) ರಜೆ ಘೋಷಣೆ ಮಾಡಲಾಗಿದೆ.

  • 07 Jul 2026 09:11 PM (IST)

    ಕೊಡಗು ಜಿಲ್ಲೆಯ ಪ್ರಾಥಮಿಕ-ಪ್ರೌಢಶಾಲೆಗಳಿಗೆ ರಜೆ

    ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್​ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಾಳೆ (ಜುಲೈ 08) ರಜೆ ನೀಡಲಾಗಿದೆ. ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸೋಮಶೇಖರ್‌ ಆದೇಶ ಹೊರಡಿಸಿದ್ದಾರೆ.

  • 07 Jul 2026 09:10 PM (IST)

    ಬೆಳಗಾವಿಯ 3 ತಾಲೂಕಿನಲ್ಲಿ ಶಾಲೆಗಳಿಗೆ ರಜೆ

    ಭಾರೀ ಮಳೆ ಸುರಿಯುತ್ತಿರುವುದ ಕರ್ನಾಟಕ ಕೆಲ ಜಿಲ್ಲೆಗಳಲ್ಲಿ ನಾಳೆ (ಜುಲೈ 08) ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿಯ ನಿಪ್ಪಾಣಿ, ಖಾನಾಪುರ, ಬೆಳಗಾವಿ ತಾಲೂಕಿನಲ್ಲಿ ಅಂಗನವಾಡಿ ಮತ್ತು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

  • 07 Jul 2026 07:20 PM (IST)

    ಕನ್ನಡ ಭಾಷೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ,ಕಮಲ್ ಹಾಸನ್ ವಿರುದ್ಧ ದೂರು

    ಕನ್ನಡ ಭಾಷೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ, ನಟ ಕಮಲ್ ಹಾಸನ್ ವಿರುದ್ಧ ಕೋರ್ಟಿಗೆ ಖಾಸಗಿ ದೂರು
    ಕನ್ನಡ ಭಾಷೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಸಂಬಂಧಿಸಿದಂತೆ ನಟ ಕಮಲ್ ಹಾಸನ್ ವಿರುದ್ಧ ಕೋರ್ಟಿಗೆ ಖಾಸಗಿ ದೂರು ಸಲ್ಲಿಕೆಯಾಗಿದೆ. ಥಗ್ ಲೈಫ್ ಸಿನಿಮಾ‌ ಬಿಡುಗಡೆ ವೇಳೆ ತಮಿಳು ಭಾಷೆಯಿಂದ‌ ಕನ್ನಡ ಹುಟ್ಟಿದೆ ಎಂದು ಕಮಲ್ ಹಾಸನ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಿ.ಎಂ.ನಾಗಾರ್ಜುನ ಎಂಬುವರು ಕಮಲ್ ಹಾಸನ್ ವಿರುದ್ಧ ಇಂದು (ಜುಲೈ 07) ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್​ಗೆ ಖಾಸಗಿ ದೂರು ದಾಖಲಿಸಿದ್ದಾರೆ.

  • 07 Jul 2026 06:09 PM (IST)

    ಪ್ರದೀಪ್ ಈಶ್ವರ್ ವಿರುದ್ಧ ಘೋಷಣೆ ಕೂಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ

    ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಶಾಸಕರಿಗೆ ಅಪಮಾನವಾಗಿದ್ದರೆ ಮಾನನಷ್ಟ ಕೇಸ್ ದಾಖಲಿಸಬಹುದಿತ್ತು.800 ಜನರಲ್ಲಿ ಈ ನಾಲ್ವರ ವಿರುದ್ಧ ಕೇಸ್ ದಾಖಲಿಸಿದ್ದೇಕೆ? ಎಂದು ಚಿಕ್ಕಬಳ್ಳಾಪುರ ಪೊಲೀಸರಿಗೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠ ಪ್ರಶ್ನಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸೂಚಿಸಿ ತನಿಖೆಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

    ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ವೇಳೆ ಅಕ್ರಮ ಗುಂಪು ಸೇರಿ ಗಲಭೆ ನಡೆಸಿದ ಆರೋಪದ ಮೇಲೆ ಮೋಹನ್ ರಾಜ್, ಅಕ್ಕುಲ ರೆಡ್ಡಿ, ಟಿ.ಎಸ್​.ಮಹೇಂದ್ರ,‌ ಟಿ.ಎಸ್‌.ಪ್ರಕಾಶ್ ವಿರುದ್ಧದ ಕೇಸ್ ದಾಖಲಿಸಲಾಗಿತ್ತು. ಆದ್ರೆ, ಇದೀಗ ಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿದೆ.

  • 07 Jul 2026 05:32 PM (IST)

    ಜುಲೈ 15ರಂದು ಅತ್ತಿಬೆಲೆ ಗಡಿಭಾಗ ಬಂದ್

    ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿ ವಿಚಾರಕ್ಕೆ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿರುವುದುಕ್ಕೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸಿಡಿಮಿಡಿಗೊಂಡಿದ್ದು, ಜುಲೈ 15ರಂದು ಅತ್ತಿಬೆಲೆ ಗಡಿಭಾಗ ಬಂದ್ ಮಾಡಿ ವಿನೂತನ ಹೋರಾಟ ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಮೇಕೆದಾಟು ಯೋಜನೆಗೆ ತಮಿಳುನಾಡಿನವರು ಅಡ್ಡಿಪಡಿಸುತ್ತಿದ್ದಾರೆ. ಕರ್ನಾಟಕದ ರಾಜಕಾರಣಿಗಳು ಯೋಜನೆ ಜಾರಿಗೆ ಮುಂದಾಗುತ್ತಿಲ್ಲ. ಅಲ್ಲಿ ಕಾಂಗ್ರೆಸ್​ನವರು ಒಂದು ಇಟ್ಟಿಗೆ ಇಡಲು ಬಿಡಲ್ಲ ಅಂತಾರೆ. ಇಲ್ಲಿ ಮೇಕೆದಾಟು ಯೋಜನೆ ಬಗ್ಗೆ ಯಾರೊಬ್ಬರೂ ಮಾತಾಡುತ್ತಿಲ್ಲ. ವಿಜಯ್ ತಮಿಳುನಾಡು ಸಿಎಂ ಆದ್ರೂ ನಟ ಅಂದುಕೊಂಡಿದ್ದಾರೆ. ತಮಿಳುನಾಡು ಸಿಎಂ ವಿಜಯ್ ಮಾತಾಡೋದೆಲ್ಲ ಸಿನಿಮಾ ಡೈಲಾಗ್. ವಿಜಯ್ ನಿಂತ್ರೆ ಕುಂತ್ರೆ ಸಿನಿಮಾ ಸ್ಟೈಲ್​ನಲ್ಲೇ ಆ್ಯಕ್ಟಿಂಗ್ ಮಾಡುತ್ತಾರೆ. ಮೇಕೆದಾಟು ಯೋಜನೆಗೆ ಅಡ್ಡಿಪಡಿಸಿದ್ರೆ ಕರ್ನಾಟಕದಲ್ಲಿ ವಿಜಯ್ ಸಿನಿಮಾ ಪ್ರದರ್ಶನ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

  • 07 Jul 2026 03:35 PM (IST)

    ಕರ್ನಾಟಕದಲ್ಲಿನ SIR  ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು

    ಕರ್ನಾಟಕದಲ್ಲಿ ಎಸ್​ಐಆರ್ ಪ್ರಕ್ರಿಯೆ​ಯಲ್ಲಿ ಲೋಪವಾಗುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಹಲವು ದಾಖಲೆಗ ಸಮೇತ ಬಿಜೆಪಿ, ಜೆಡಿಎಸ್ ನಿಯೋಗ ಇಂದು (ಜುಲೈ 07) ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್​ ಅವರಿಗೆ ದೂರು ನೀಡಿದೆ. ಕೇಂದ್ರ ಸಚಿವರಾದ ಹೆಚ್​.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿಪಕ್ಷ ನಾಯಕರಾದ ಆರ್​.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಜೆಡಿಎಲ್​ಪಿ ನಾಯಕ ಸುರೇಶ್ ​ಬಾಬು, ನಿಖಿಲ್ ಕುಮಾರಸ್ವಾಮಿ, ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಇದ್ದರು.

  • 07 Jul 2026 03:20 PM (IST)

    ಮಾಜಿ ಶಾಸಕ ಬಸವರಾಜ ದಡೇಸೂಗೂರು ಕಾರಿನ ಮೇಲೆ ದಾಳಿ

    ಕನಕಗಿರಿ ಬಿಜೆಪಿ ಮಾಜಿ ಶಾಸಕ ಬಸವರಾಜ ದಡೇಸೂಗೂರು ಕಾರಿನ ಮೇಲೆ ದಾಳಿ ನಡೆದಿದೆ. ಕೊಪ್ಪಳ ಜಿಲ್ಲೆ ಗಂಗಾವತಿಯ ಶ್ರೀ ವಾರಿ ಹೋಟೆಲ್ ಬಳಿ ಘಟನೆ ನಡೆದಿದ್ದು, ಕಾರಿ ಗ್ಲಾಸ್ ಪುಡಿ ಮಾಡಿದ್ದಾರೆ. ಆಸ್ತಿ ವಿಚಾರವಾಗಿ ಗಲಾಟೆ ಹಿನ್ನಲೆ ಕಲ್ಲು ಎಸೆದಿರುವ ಶಂಕೆ ವ್ಯಕ್ತವಾಗಿದ್ದು ಸ್ಥಳಕ್ಕೆ ಗಂಗಾವತಿ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಆದ್ರೆ, ದಾಳಿ ಮಾಡಿದ್ಯಾರು? ಏಕೆ ಎನ್ನುವುದು ಈ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಹಾಗೇ ಘಟನೆ ಬಗ್ಗೆ ಇದುವರೆಗೂ ಯಾವುದೇ ದೂರೂ ದಾಖಲಾಗಿಲ್ಲ.

  • 07 Jul 2026 03:15 PM (IST)

    ಕೇರಳದ ವಯನಾಡು ಜಿಲ್ಲೆಯಲ್ಲಿ ಮತ್ತೆ ಭೂಕುಸಿತ

    ಧಾರಾಕಾರ ಮಳೆಯಿಂದ ಸುರಂಗ ಕಾಮಗಾರಿ ವೇಳೆ ಗುಡ್ಡ ಕುಸಿದಿದೆ. ಮೇಪ್ಪಾಡಿಯಿಂದ ಚೂರಲ್​ಮಲ ನಡುವೆ ಇರುವ ಗುಡ್ಡ ಕುಸಿದಿದೆ. ಗುಡ್ಡದ ಮಣ್ಣಿನಡಿ 15ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಈವರೆಗೆ ರಕ್ಷಣೆ ಮಾಡಿರುವ 6 ಜನರ ಪೈಕಿ ಇಬ್ಬರ ಸಾವನ್ನಪ್ಪಿದ್ದಾರೆ. ಗುಡ್ಡ ಕುಸಿದ ಸ್ಥಳದಲ್ಲಿ ಎನ್​​​ಡಿಆರ್​​ಎಫ್​​​ ಕಾರ್ಯಾಚರಣೆ ಮುಂದುವರೆದಿದ್ದು, ಘಟನೆ ಬಗ್ಗೆ ಕೇರಳ ಸಿಎಂ ಸತೀಷನ್ ಮಾಹಿತಿ ಪಡೆದುಕೊಂಡು ತುರ್ತು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೇ ಸ್ಥಳಕ್ಕೆ ತೆರಳುವಂತೆ ಇಬ್ಬರು ಸಚಿವರಿಗೆ ಸೂಚಿಸಿದ್ದಾರೆ.

  • 07 Jul 2026 03:11 PM (IST)

    ಶಿವಮೊಗ್ಗ ಜಿಲ್ಲಾಧ್ಯಂತ ಧಾರಾಕಾರ ಮಳೆ

    ಶಿವಮೊಗ್ಗ ಜಿಲ್ಲಾಧ್ಯಂತ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಸಾಗರ ಮತ್ತು ಶಿವಮೊಗ್ಗ ನಗರದಲ್ಲಿ ಒಂದು ಮನೆ ಕುಸಿತಗೊಂಡಿದ್ದರೆ, ಹೊಸನಗರ ಭಾಗದಲ್ಲಿ ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗೆ ಉರುಳಿವೆ. ಇನ್ನು ಶಿವಮೊಗ್ಗ ತುಂಗಾ , ಭದ್ರಾ ಶರಾವತಿ ಮತ್ತು ಲಿಂಗನಮಕ್ಕಿ ಡ್ಯಾಂಗಳಿಗೆ ಒಳಹರಿವು ಹೆಚ್ಚಳವಾಗಿದೆ.

  • 07 Jul 2026 02:34 PM (IST)

    ಅಯೋಧ್ಯೆ ಶ್ರೀರಾಮ ದೇಗುಲ ದೇಣಿಗೆ ಲೆಕ್ಕ ಬಿಡುಗಡೆ

    ಅಯೋಧ್ಯೆಯ ಶ್ರೀರಾಮ ಮಂದಿರದ ಕಾಣಿಕೆ ಹಣ ಕಳ್ಳತನ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಸಂಬಂಧ ಎಸ್​​ಐಟಿ ತನಿಖೆ ನಡೆಸಿದೆ. ಇದರ ಮಧ್ಯೆ ದೇಣಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಇದರ ಬೆನ್ನಲ್ಲೇ ಬೆನ್ನಲ್ಲೇ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಆರ್ಥಿಕ ವ್ಯವಹಾರಗಳ ಸಂಪೂರ್ಣ ಲೆಕ್ಕವನ್ನು ಬಿಡುಗಡೆ ಮಾಡಿದೆ.2020ರಲ್ಲಿ ಟ್ರಸ್ಟ್ ಶುರುವಾದಗಿಂದ ನಿಧಿ ಸಮರ್ಪಣಾ ಅಭಿಯಾನ , ಕಾರ್ಪಸ್ ದೇಣಿಗೆಯ ಮೂಲಕ ಒಟ್ಟು 3,264 ಕೋಟಿ ರೂಪಾಯಿ ಹಣ ಸಂಗ್ರಹವಾಗಿದ್ದು, ಇದರಲ್ಲಿ ದೇವಾಲಯ ನಿರ್ಮಾಣಕ್ಕೆ 2,370 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆರಂಭದಿಂದ ಮಾರ್ಚ್ 31, 2026ರ ಅವಧಿಯಲ್ಲಿ ಭಕ್ತರಿಂದ ಒಟ್ಟು 582 ಕೋಟಿ ರೂಪಾಯಿ ಕಾಣಿಕೆ ಹರಿದುಬಂದಿದ್ದು, ಅದರಲ್ಲಿ 391 ಕೋಟಿ ರೂಪಾಯಿಯನ್ನು ದೈನಂದಿನ ಕಾರ್ಯಾಚರಣೆ ವೆಚ್ಚಗಳಿಗೆ ಬಳಕೆ ಮಾಡಲಾಗಿದ್ದು, ಉಳಿದ ಮೊತ್ತ ಬ್ಯಾಂಕ್ ಖಾತೆಗಳಲ್ಲಿದೆ ಎಂದು ಟ್ರಸ್ಟ್ ತಿಳಿಸಿದೆ. ಮತ್ತಷ್ಟು ನೋಡಿ

  • 07 Jul 2026 02:29 PM (IST)

    ಕಾಫಿ‌ತೋಟದಲ್ಲಿ ಕಾಡಾನೆ ಕಳೇಬರ ಪತ್ತೆ

    ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದ ಬಳಿಯ ಕಾಫಿ‌ತೋಟದಲ್ಲಿ ಕಾಡಾನೆ ಕಳೇಬರ ಪತ್ತೆಯಾಗಿದೆ. ಪಿ ಡಾಲಿ ಎಂಬುವರ ತೋಟದಲ್ಲಿ ಮಖ್ನಾ ಆನೆ ಸತ್ತು ಬಿದ್ದಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಕಾರಣ ತಿಳಿದುಬರಲಿದೆ.

  • 07 Jul 2026 02:19 PM (IST)

    ಶಿರಾಡಿಘಾಟ್‌ನಲ್ಲಿ ಭಾರೀ ಮಳೆ: ಹೆದ್ದಾರಿಗೆ ಕುಸಿದ ಮಣ್ಣು

    ಹಾಸನ ಜಿಲ್ಲೆಯ ಶಿರಾಡಿಘಾಟ್ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, NH 75ರ ಕಪ್ಪಳ್ಳಿ ಬಳಿ ಭೂಕುಸಿತ ಸಂಭವಿಸಿದೆ. ತಕ್ಷಣ ಜೆಸಿಬಿ ಬಳಸಿ ಮಣ್ಣು ತೆರವುಗೊಳಿಸಲಾಗಿದೆ. ಚತುಷ್ಪಥ ರಸ್ತೆಯಿರುವುದರಿಂದ ಹಾಗೂ ತಾಲ್ಲೂಕು ಆಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿರುವುದರಿಂದ ಸದ್ಯ ವಾಹನ ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ.

  • 07 Jul 2026 02:18 PM (IST)

    ರೇಣುಕಾಸ್ವಾಮಿ ಕೊಲೆ ಕೇಸ್: ಸಾಕ್ಷಿಗೆ ಬೆದರಿಕೆ ಹಾಕಿದ್ದ ಆರೋಪಿ ಪುನೀತ್ ಮತ್ತೆ ಪೊಲೀಸ್ ಕಸ್ಟಡಿಗೆ

    ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ವಾಟ್ಸಾಪ್ ಕಾನ್ಫರೆನ್ಸ್ ಕರೆ ಮೂಲಕ ಬೆದರಿಕೆ ಹಾಕಿದ್ದ ಆರೋಪಿ ಪುನೀತ್‌ನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಮತ್ತೆ 5 ದಿನಗಳ ಕಸ್ಟಡಿಗೆ ಪಡೆದಿದ್ದಾರೆ. ಮೊಬೈಲ್ ಬಚ್ಚಿಟ್ಟು, ಚಾಟ್ ಡಿಲೀಟ್ ಮಾಡಿದ್ದ ಆರೋಪಿಯ 5 ಫೋನ್‌ಗಳನ್ನು ಸೀಜ್ ಮಾಡಲಾಗಿದ್ದು, ಸುಪಾರಿ ಕೊಟ್ಟವರ ಪತ್ತೆಗೆ ವಿಚಾರಣೆ ಮುಂದುವರಿದಿದೆ.

  • 07 Jul 2026 02:18 PM (IST)

    ಬೇಡಿಕೆ ಈಡೇರದಿದ್ದರೆ ಆಗಸ್ಟ್ 1ರಿಂದ ಲಾರಿ ಮುಷ್ಕರ!

    ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಗಸ್ಟ್ 1ರಿಂದ ದಕ್ಷಿಣ ಭಾರತಾದ್ಯಂತ ಲಾರಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ. ಜುಲೈ 30ರೊಳಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಆ.1ರಿಂದ ಸಂಪೂರ್ಣ ಲಾರಿ ಸಂಚಾರ ಬಂದ್ ಮಾಡುವುದಾಗಿ ಗಡುವು ನೀಡಿದ್ದಾರೆ. ಮತ್ತಷ್ಟು ಓದಿ

  • 07 Jul 2026 12:57 PM (IST)

    ಬಂಡಾಜೆ ಜಲಪಾತದಲ್ಲಿ ಹುಚ್ಚಾಟ: ಪ್ರಾಣ ಪಣಕ್ಕಿಟ್ಟು ಪ್ರವಾಸಿಗರ ಕಸರತ್ತು!

    ಮೂಡಿಗೆರೆ-ಬೆಳ್ತಂಗಡಿ ಗಡಿಯ ಬಂಡಾಜೆ ಜಲಪಾತದಲ್ಲಿ ಪ್ರವಾಸಿಗರು ಪ್ರಾಣದ ಹಂಗು ತೊರೆದು ಅಪಾಯಕಾರಿ ಸಾಹಸಕ್ಕಿಳಿದಿದ್ದಾರೆ. ನೂರಾರು ಅಡಿ ಎತ್ತರದ ಜಾರುವ ಬಂಡೆಗಳ ಅಂಚಿನಲ್ಲಿ ನಿಂತು ರೀಲ್ಸ್ ಹಾಗೂ ಮೋಜು ಮಾಡುತ್ತಿದ್ದು, ಕ್ಷಣಿಕ ಸುಖಕ್ಕಾಗಿ ಜೀವವನ್ನೇ ಪಣಕ್ಕಿಡುತ್ತಿರುವ ಇಂತಹ ಬೇಜವಾಬ್ದಾರಿಯುತ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಡಿಯೋ ನೋಡಿ

  • 07 Jul 2026 12:39 PM (IST)

    ಸಚಿವ ಕೃಷ್ಣ ಭೈರೇಗೌಡ ಆಪ್ತನ ವಿರುದ್ಧ 100 ಕೋಟಿ ರೂ. ಭೂ ಕಬಳಿಕೆ ಆರೋಪ: ಲೋಕಾಯುಕ್ತಕ್ಕೆ ದೂರು

    ರಾಷ್ಟ್ರಪತಿಗಳ ಹೆಸರಿನಲ್ಲಿದ್ದ ಕೇಂದ್ರ ಇಂಧನ ಸಚಿವಾಲಯದ 100 ಕೋಟಿ ರೂ. ಮೌಲ್ಯದ 32 ಗುಂಟೆ ಜಾಗವನ್ನು ಸಚಿವ ಕೃಷ್ಣ ಭೈರೇಗೌಡರ ಸಹಕಾರದಿಂದ ಅವರ ಆಪ್ತ ಕೆ.ಎಂ. ಚೇತನ್ ಕಬಳಿಸಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

  • 07 Jul 2026 12:37 PM (IST)

    ಅಹಮದಾಬಾದ್ ಸರಣಿ ಸ್ಫೋಟ: 38 ಉಗ್ರರ ಮರಣದಂಡನೆ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

    2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದ 38 ಉಗ್ರರ ಮರಣದಂಡನೆ ಹಾಗೂ 11 ಉಗ್ರರ ಜೀವಾವಧಿ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಎತ್ತಿಹಿಡಿದಿದೆ. ‘ಹುಜಿ’ ನಡೆಸಿದ್ದ ಈ ದಾಳಿಯಲ್ಲಿ 56 ಮಂದಿ ಮೃತಪಟ್ಟಿದ್ದು, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಹಾಗೂ ಗಾಯಾಳುಗಳಿಗೆ 1 ಲಕ್ಷ ರೂ. ಪರಿಹಾರಕ್ಕೆ ಆದೇಶಿಸಲಾಗಿದೆ.

  • 07 Jul 2026 12:36 PM (IST)

    SIR ಕೆಲಸಕ್ಕೆ ಶಾಲಾ ಮಕ್ಕಳ ಬಳಕೆ; ಬಿಎಲ್‌ಒಗಳ ಬೇಜವಾಬ್ದಾರಿ!

    ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮರಡಿಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಎಲ್‌ಒಗಳು ಎಸ್ಐಆರ್ (SIR) ಕಾರ್ಯಕ್ಕೆ ಶಾಲಾ ಮಕ್ಕಳನ್ನು ಬಳಸಿಕೊಂಡಿದ್ದಾರೆ. ಮನೆ ಮನೆಗೆ ತೆರಳುವ ಬದಲು ಗ್ರಾಮಸ್ಥರನ್ನು ಶಾಲೆಗೇ ಕರೆಸಿ, ಫಾರ್ಮ್ ತುಂಬಲು ಹಾಗೂ ಫೋಟೋ ಅಂಟಿಸಲು ವಿದ್ಯಾರ್ಥಿಗಳನ್ನು ದುಡಿಸಿಕೊಳ್ಳುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

  • 07 Jul 2026 12:28 PM (IST)

    Chikkamagaluru Rain Update: ಭಾರೀ ಮಳೆಗೆ ಮರ ಉರುಳಿ 60ಕ್ಕೂ ಹೆಚ್ಚು ಅಡಕೆ ಗಿಡ ನಾಶ

    ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಉತ್ತಮೇಶ್ವರದ ಅಗ್ರವಳ್ಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಬೃಹತ್ ಮರವೊಂದು ನೆಲಕಚ್ಚಿದೆ. ಮರ ಉರುಳಿಬಿದ್ದ ರಭಸಕ್ಕೆ ಸ್ಥಳೀಯ ರೈತ ಮಂಜುನಾಥ್ ಎಂಬುವವರಿಗೆ ಸೇರಿದ ತೋಟದ 60ಕ್ಕೂ ಹೆಚ್ಚು ಅಡಕೆ ಗಿಡಗಳು ಸಂಪೂರ್ಣ ನಾಶವಾಗಿದ್ದು, ಭಾರಿ ನಷ್ಟ ಸಂಭವಿಸಿದೆ.

  • 07 Jul 2026 12:25 PM (IST)

    ಶರಣಬಸವೇಶ್ವರ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ, ವಿಶೇಷ ಪೂಜೆ

    ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಠದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರನ್ನು ಭೇಟಿಯಾದರು. ಈ ವೇಳೆ ಸಚಿವರಾದ ಜಿ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್ ಸೇರಿದಂತೆ ಸ್ಥಳೀಯ ಶಾಸಕರು ಉಪಸ್ಥಿತರಿದ್ದರು. ವೀಡಿಯೋ ನೋಡಿ

  • 07 Jul 2026 11:14 AM (IST)

    ಜೆ.ಬಿ. ನಗರದಲ್ಲಿ ಡ್ರಗ್ಸ್ ಬೇಟೆ: ಇಬ್ಬರ ಬಂಧನ

    ಜೀವನ್ ಭೀಮಾ ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳದ ಜಾಸೀರ್ ಮತ್ತು ಅಭಿಷೇಕ್‌ನನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಆರೋಪಿಗಳಿಂದ 61 ಲಕ್ಷ ರೂ. ಮೌಲ್ಯದ 1.8 ಕೆಜಿ ಹೈಡ್ರೋ ಗಾಂಜಾ, ಬೈಕ್, 2 ಫೋನ್ ಹಾಗೂ 5.90 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.

  • 07 Jul 2026 11:09 AM (IST)

    ವಿದ್ಯಾರಣ್ಯಪುರ ಪೊಲೀಸರ ಭರ್ಜರಿ ಬೇಟೆ; 2 ಕೋಟಿಯ ಎಂಡಿಎಂಎ ವಶ

    ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಮಾದಕ ವಸ್ತು ಮಾರಾಟ ಮಾಡುತ್ತಿದ್ದ ತ್ರಿಪುರ ಮೂಲದ ಸಂದೀಪ್ ಮಲ್ಲಿಕ್ ಮತ್ತು ಶಾಂತನೂ ದೆರ್ಮಮಾ ಎಂಬಿಬ್ಬರನ್ನು ಬಂಧಿಸಿದ್ದಾರೆ. ನೈಜೀರಿಯಾ ಪ್ರಜೆಯ ಸಂಪರ್ಕದೊಂದಿಗೆ ಎಂಡಿಎಂಎ ದಂಧೆ ನಡೆಸುತ್ತಿದ್ದ ಇವರಿಂದ 2 ಕೋಟಿ ರೂ. ಮೌಲ್ಯದ 2 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.

  • 07 Jul 2026 10:10 AM (IST)

    ರಕ್ಷಣಾ ಒಪ್ಪಂದ: ಭಾರತದ ‘ಅಸ್ತ್ರ’ ಕ್ಷಿಪಣಿ ಖರೀದಿಸಲಿರುವ ಇಂಡೋನೇಷಿಯಾ

    ಭಾರತ ಮತ್ತು ಇಂಡೋನೇಷಿಯಾ ನಡುವೆ ಮಹತ್ವದ ರಕ್ಷಣಾ ಒಪ್ಪಂದ ಏರ್ಪಟ್ಟಿದೆ. DRDO ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ‘ಅಸ್ತ್ರ’ ವೈಮಾನಿಕ ಕ್ಷಿಪಣಿಗಳನ್ನು ಭಾರತದಿಂದ ಖರೀದಿಸಲು ಇಂಡೋನೇಷಿಯಾ ಸಹಿ ಹಾಕಿದೆ. ಇದು ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ಭಾರತದ ರಫ್ತು ಸಾಮರ್ಥ್ಯ ಹಾಗೂ ಸ್ವಾವಲಂಬನೆಗೆ ಸಂದ ದೊಡ್ಡ ಯಶಸ್ಸಾಗಿದೆ.

  • 07 Jul 2026 10:08 AM (IST)

    Shivamogga Rain update: ಸಾಗರದಲ್ಲಿ ರಣಮಳೆಗೆ ಆಟೋ ಚಾಲಕನ ಮನೆ ಚಾವಣಿ ಕುಸಿತ

    ಸಾಗರದ ಎಸ್.ಎನ್. ನಗರದಲ್ಲಿ ಭಾರೀ ಮಳೆಗೆ ಆಟೋ ಚಾಲಕ ಮಂಜುನಾಥ್ ಎಂಬುವವರ ಮನೆಯ ಚಾವಣಿ ಕುಸಿದಿದೆ. ಅದೃಷ್ಟವಶಾತ್ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಾಗೂ ಜೀವ ಭಯದಿಂದ ಇಡೀ ರಾತ್ರಿ ಆತಂಕದಲ್ಲಿ ಕಳೆದಿದ್ದು, ಸರ್ಕಾರದ ತುರ್ತು ನೆರವಿಗಾಗಿ ಸಂತ್ರಸ್ತ ಕುಟುಂಬ ಕಣ್ಣೀರು ಹಾಕುತ್ತಾ ಅಂಗಲಾಚುತ್ತಿದೆ.

Published On - 10:05 am, Tue, 7 July 26

Follow Us